ಅಕ್ಕ ಕೇಳವ್ವ – 1 ; ಅಕ್ಕಾ ಕೇಳವ್ವ ನಾನೊಂದ ಕನಸ ಕಂಡೆ

“..ತಾಯಿ ಅಕ್ಕಮಹಾದೇವಿ, ತಾನು ಕಂಡ ಕನಸನ್ನು ಯಾವ ಮುಚ್ಚುಮರೆಯಿಲ್ಲದೆ ಬಿತ್ತರಿಸಿದ್ದು ಈಗಲೂ ಚಿರಂತರವಾಗಿಯೇ ಉಳಿದಿದೆ..” ಅಂಕಣಕಾರರಾದ ಲಲಿತಾ ಹೊಸಪ್ಯಾಟಿ ಅವರ ಬರಹದಲ್ಲಿ

ಕಾಲ ನಿಲ್ಲುವುದಿಲ್ಲ ಅದು ಉರುಳುತ್ತಲೇ ಇರುತ್ತದೆ ಬದಲಾವಣೆ ಸಹಜವಾಗಿಯೇ ನಡೆಯುತ್ತದೆ. ಆದರೆ ಈ ಬದಲಾದ ಕಾಲಘಟ್ಟದಲ್ಲಿ 12ನೇ ಶತಮಾನದ, ಬಸವ ಯುಗದ ಶಿವಶರಣೆಯರ ಅನುಭಾವದ ಬದುಕು ಇಡೀ ಸರ್ವರ ಕಲ್ಯಾಣದ್ದು. ಅವರ ಕಾಯಕ ನಿಷ್ಠೆ, ಸಮಾಜಮುಖಿ ನಡಿಗೆ, ಸತ್ಯ ಶುದ್ಧ ಕಾಯಕ, ಅಜ್ಞಾನಿಗಳು ತಂದೊಡ್ಡಿದ ವಿಷಮ ಪರಿಸ್ಥಿತಿಯನ್ನು ಎದುರಿಸಿದ ಬಗೆ, ಅದನ್ನು ನಿರ್ಭಯದಲ್ಲಿಯೇ ವಚನಗಳಲ್ಲಿ ದಾಖಲಿಸಿದ ಪರಿಯೇ ಅನನ್ಯ. ಯಾವುದೇ ಕಾಲ. ಸಮಯ ಯುಗಮೀರಿಯೂ ಅನುಸರಿಸಬೇಕಾದ , ಸುಲಭವಾಗಿ ಪಾಲಿಸಬೇಕಾದ, ನಿಚ್ಛಳ ದಾರಿಯದು. ಹೀಗಾಗಿಯೇ ಶಿವಶರಣೆಯರ ಅರಿವಿನ ವಚನಗಳು ನಮ್ಮ ಬದುಕಿಗೆ ದಾರಿ ತೋರುತ್ತವೆ.

ಅಕ್ಕಮಹಾದೇವಿಯ ವಚನವೊಂದರಲ್ಲಿ ಮೊದಲು ಬರುವ ತಿಳಿ ನುಡಿ.
ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ
ಅಕ್ಕಿ ಅಡಕೆ ಓಲೆ ತೆಂಗಿನಕಾಯಿ ಕಂಡೆ
ಚಿಕ್ಕ ಚಿಕ್ಕ ಜಡೆಗಳ ಸುಳಿಪಲ್ಲ ಗೊರೆವನು
ಬಿಕ್ಷಕ್ಕೆ ಮನೆಗೆ ಬಂದುದ ಕಂಡೆನವ್ವಾ
ಮಿಕ್ಕು ಮೀರಿ ಹೋಹನ ಬೆಂಬತ್ತಿ ಕೈಪಿಡಿದೆ
ಚೆನ್ನಮಲ್ಲಿಕಾರ್ಜುನನ ಕಂಡು ನಾ ಕಣ್ತೆರೆದೆ
ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ

ಈ ವಚನದ ಪ್ರಸ್ತುತಿಗೆ ಕಾರಣ, ಹೆಣ್ಣುಮಕ್ಕಳು ಕನಸು ಕಾಣುವುದೇ ಸಲ್ಲ, ಅದರಲ್ಲೂ ಅವರು ತಮ್ಮ ಬಗೆಗೆ ಕನಸು ಕಾಣುವುದಂತೂ ದುಸ್ತರ ಎಂಬ ಕಾಲಘಟ್ಟದಲ್ಲಿ ಅಕ್ಕಮಹಾದೇವಿ ತಾನು ಅಲೌಕಿಕ ಲೋಕದ ಕನಸನ್ನು ಕಂಡದ್ದು, ತಾನು ಕಂಡ ಕನಸನ್ನು ನನಸು ಮಾಡಿಕೊಳ್ಳುವಲ್ಲಿ ತನ್ನ ದಾರಿಯನ್ನು ತಾನೇ ಸ್ಥಿರಗೊಳಿಸಿಕೊಂಡದ್ದು ಹಾಗೇನೇ ಮುಕ್ತ ಮನೋವೃತ್ತಿಯಲ್ಲಿ ಸಮರ್ಥವಾದ ಹಾದಿಯಲ್ಲಿ ಎಂತಹ ಕನಸನ್ನು ಕಂಡೆ ಎಂಬುದನ್ನು ಉಲ್ಲೇಖಿಸಿದ್ದು ಚರಿತ್ರಾರ್ಹ. ಕಾರಣ ವೀರ ವಿರಾಗಿಣಿ ಅಕ್ಕ ಅನುಭಾವಿ ಸತಿ, ಕವಿಯತ್ರಿ, “ಶರಣ ಸತಿ ಲಿಂಗಪತಿ ಯಾಗಿʼ ಶರಣ ಮಾರ್ಗದಲ್ಲಿ ನಡೆದು ಗುರಿ ತಲುಪಿದಳು. ತಾಯಿ ಅಕ್ಕಮಹಾದೇವಿ, ತಾನು ಕಂಡ ಕನಸನ್ನು ಯಾವ ಮುಚ್ಚುಮರೆಯಿಲ್ಲದೆ ಬಿತ್ತರಿಸಿದ್ದು ಈಗಲೂ ಚಿರಂತರವಾಗಿಯೇ ಉಳಿದಿದೆ. ಆದ್ಯಾತ್ಮ ಲೋಕದ ಸಾರ ಸಾಮರ್ಥ್ಯಗಳ ಪಾರಮಾರ್ಥ ತಿಳಿಯುವುದು ಜೀವನ ಸಾರವನ್ನೇ ತಿಳಿಯದ ನಮ್ಮಂತವರಿಗೆ ಕಡು ಕಷ್ಟ. ಆದರೆ ಈ ತಿಳಿವನ್ನು ಲೋಕದ ಹೆಣ್ಣುಮಕ್ಕಳಿಗೆ ತಿಳಿಯುವಂತೆ ತಿಳಿಸಿ ಹೇಳಿದ ಕಾರುಣ್ಯಮಯಿ ಅಕ್ಕ ತನ್ನ ವಚನಗಳ ಮೂಲಕ ನಮ್ಮ ಮನ ಮುಟ್ಟಿಸಿ, ನಮ್ಮನ್ನು ಎಚ್ಚರ ಗೊಳಿಸುವಲ್ಲಿ ಯಶಸ್ವಿಯಾಗಿದ್ದಾಳೆ.

ಸಾವಿಲ್ಲದ ಕೇಡಿಲ್ಲದ ಭವವಿಲ್ಲದ ಭಯವಿಲ್ಲದ
ನಿರ್ಭಯ ಚೆಲುವಂಗಾನೊಲಿದೆನವ್ವ

ಎನ್ನುತ್ತಾ ತಾನು ಚೆನ್ನಮಲ್ಲಿಕಾರ್ಜುನನ ಲೀಲೆಯನ್ನು ಕೊಂಡಾಡುತ್ತಾಳೆ. ಅಲೌಕಿಕದ ನಿಸ್ಸೀಮ ಪತಿಯನ್ನು ಲೌಕಿಕದಲ್ಲಿಯೇ ಆರಾಧಿಸುತ್ತಾ ತಾನು ಹೇಗೆ ಬಿಸಿಸುಯ್ದಳು ಎಂಬುದನ್ನು ಮತ್ತು ಶಿವಭಕ್ತಳಾಗಿ ಕನಸಲ್ಲಿ ಬಂದ ಅರಹುತ್ತಾಳೆ. ಆ ಚಿತ್ರಣವನ್ನು ಬಿಚ್ಚು ಮನಸ್ಸಿನಿಂದ ಮುಕ್ತವಾಗಿಸಿದ ಪರಿಯೇ ಧೀರೋದಾತ್ತವಾದದ್ದು. ಇಂತಹ ಶರಣೆ ಅಕ್ಕನ ಮಾರ್ಗ, ಸತ್ಯದ ಹಾದಿಯಲ್ಲಿ ಅಂಜಿಕೆಯನ್ನು ತಡೆಯುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ. ವಾಕ್ ಸ್ವಾತಂತ್ರ್ಯವನ್ನು, ವಿಚಾರ ಸ್ವಾತಂತ್ರ್ಯವನ್ನು, ತನ್ನ ಜೀವನದ ಗುರಿಯನ್ನು ತಾನೇ ನಿರ್ಧರಿಸಿಕೊಳ್ಳುವ ಸ್ವಾತಂತ್ರ್ಯವನ್ನು ಸಿದ್ಧಿಸಿಕೊಳ್ಳಲು ಸಾಧ್ಯವೆಂಬುದನ್ನು ತನ್ನ ಪ್ರಸಾದವಾಣಿಯಲ್ಲಿ ಅಕ್ಕ ತನ್ನ ನಿಲುವನ್ನು ಭದ್ರಪಡಿಸಿಯೇ ತೋರಿಸಿಕೊಟ್ಟಿದ್ದಾಳೆ.

ಕುಟುಂಬ, ಕುಟುಂಬದ ಚೌಕಟ್ಟು ಆ ಚೌಕಟ್ಟಿನಲ್ಲಿ ಹೆಣ್ಣುಮಕ್ಕಳು ಪಾಲಿಸಲೇ ಬೇಕಾದ ಕೆಲವು ನೀತಿ ನಿಯಮಗಳನ್ನು ಕುಟುಂಬ ಕಟ್ಟುನಿಟ್ಟಾಗಿ ನಿಯಮಿಸಿದೆ. ಅಕ್ಕನಿಗೂ ಕುಟುಂಬ ಇತ್ತು. ತಂದೆ ನಿರ್ಮಲ ಶೆಟ್ಟಿ ತಾಯಿ ಸುಮತಿ ಸಭ್ಯ ಗೃಹಸ್ತರು. ಬಸವಾದಿ ಪ್ರಮಥರ ಶರಣ ಮಾರ್ಗ ಅವಲಂಬಿಗಳು. ಅವರಿಗೂ ತಮ್ಮ ಮಗಳು ಕಾಣದ, ಕೂಡದ, ಕರೆದೊಡೆ ಬರದ, ಮಲ್ಲಿಕಾರ್ಜುನ ದೇವನೇ, ಹರನೇ ತನ್ನ ಪತಿಯಾಗಬೇಕೆಂದಾಗ ಕಳವಳ ಉಂಟಾಗಿರಬಹುದು. ವಿಚಿತ್ರ ಅನಿಸರಬಹುದು. ನೋಡಿ- ಅಕ್ಕನು ಲೌಕಿಕದ ಎಲ್ಲಾ ಜಂಜಡಗಳನ್ನು ಮೀರಿ ನಿಂತಳು, ತನ್ನ ಚಿಂತನೆಯಿಂದಲೇ ತನ್ನ ನಡೆ ನುಡಿಯಿಂದಲೇ ತಂದೆ ತಾಯಿಗಳನ್ನು,ಈ ಅಲೌಕಿವನ್ನೂ ಗೆದ್ದಳು.

ಅಕ್ಕ ತಾನು ಒಲಿದದ್ದು ಪೂಜಿಸಿದ್ದು, ಕನಸಿನಲ್ಲಿ ಕಂಡದ್ದು ಹರನನ್ನು. ಚಿಕ್ಕ ಚಿಕ್ಕ ಜಡೆಗಳ ಸುಳಿಪಲ್ಲ ಗೊರವನು ಭಿಕ್ಷೆಗೆ ಬಂದಿದ್ದಾನೆ, ಮಿಕ್ಕು ಮೀರಿ ಹೋಹನ ಬೆಂಬತ್ತಿ ಕೈಪಿಡಿದೆ ಎನ್ನುತ್ತಾಳೆ. ಅವನು ಕಣ್ಣು ಮುಚ್ಚಿ ತೆರೆಯುವುದರೊಳಗೆ ಮಾಯವಾಗುವವನು. ಅದರೂ ಅವನು. ಸರ್ವಂತರ್ಯಾಮಿ, ಅಲ್ಲಿದ್ದರೆ ಇಲ್ಲಿ, ಇಲ್ಲಿದ್ದರೆ ಅಲ್ಲಿ ಅವನ ನೆಲೆ. ಇಡೀ ಲೋಕವೇ ಅವನ ಸಂಚಾರ ಮಾರ್ಗ. ಅಂತವನನ್ನು ಭಕ್ತಿಯಲ್ಲಿ ಕಂಡು ಪಾರಮಾರ್ಥದ ಕನಸೊಂದನ್ನು ನನಸು ಮಾಡಿಕೊಳ್ಳುವಲ್ಲಿ ಅವಳದು ಹೋರಾಟದ ಹಾದಿಯೇ ಆಗಿದೆ. ಎದುರಾಗುವ ಅನೇಕ ಕಷ್ಟಗಳನ್ನು ಮೆಟ್ಟಿ ನಿಂತಳು. ಯೋಗಿನಿಯಾಗಿ ಅಕ್ಕಂದಿರೊಂದಿಗೆ, ತನ್ನ ಗೆಳೆತಿಯರೊಂದಿಗೆ ಹೇಳಿಕೊಂಡ ಕನಸು ಅಂತಿದ್ದದಲ್ಲ. ಕಾಮ, ಕ್ರೋಧ, ಮೋಹ, ಮದ, ಮತ್ಸರ ಲೋಭಗಳನ್ನು ವಿಮುಖಗೊಳಿಸಿಕೊಂಡದ್ದು. ವಿರತಿಯದ್ದು. ಆದರೆ ಭಾವನಾಲೋಕದಲ್ಲಿ ಮಾತ್ರ ಅಚ್ಚಳಿಯದೆ ಉಳಿಸಿಕೊಂಡು, ಕೊನೆಗೂ ಲೌಕಿಕ ಜೀವನವನ್ನು ಮೀರಿ ಮುನ್ನಡೆಯುತ್ತಾ, ಅವನನ್ನು ಕಾಣಲೆಂದೇ ಗಿಳಿಗೊರವಂಕಗಳನ್ನು ಮಾತಾನಾಡಿಸಿದವಳು. ಈ ನಡಿಗೆ ಅಂತಿಂಥ ನಡಿಗೆ ಅಲ್ಲ ಸುಡುವಂತದ್ದು ಎನ್ನುವುದಕ್ಕೆ

ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವ
ಏರಿಲ್ಲದ ಗಾಯದಲ್ಲಿ ನೊಂದೇನವ್ವ
ಸುಖವಿಲ್ಲದೆ ಧಾವತಿಗೊಂಡೆನವ್ವ
ಚೆನ್ನಮಲ್ಲಿಕಾರ್ಜುನನ ದೇವಂಗೊಲಿದು
ಬಾರದ ಭವಂಗಳಲಿ ಬಂದೆನವ್ವ

ಎನ್ನುತ್ತಾಳೆ. ಕಾಣದ ಕಿಚ್ಚು ಅವಳ ಒಡಲನ್ನು,ಸುಡುತಿದೆ. ಮಾಸದ ಗಾಯ, ಗಾಯದ ಆಳ ಅವಳನ್ನು ಹಿಂಡಿದೆ. ಸುಖವಿಲ್ಲದ ನಡಿಗೆಯಲ್ಲಿಯೂ ದೃಢ ನಿರ್ಧಾರವಿದೆ, ಅದು ಮಲ್ಲಿಕಾರ್ಜುನನ್ನು ಕಾಣುವುದು. ಎಷ್ಟೊಂದು ಭವಗಳನ್ನು ಹೊಕ್ಕು ಬಂದಿದ್ದಾಳೆ. ಹೀಗೆ ಆಧ್ಯಾತ್ಮದ ಹಾದಿಯಲ್ಲಿ ಅವಳು ಕದಳಿಯನ್ನು ಹೊಕ್ಕಳು. ಮಲ್ಲಿಕಾರ್ಜುನನನ್ನು ಕಾಣುವಲ್ಲಿ ಅದು ಅವಳ ಮಹಾ ಕನಸಾಗಿತ್ತು. ಮಹಾ ನಡಿಗೆಯಲ್ಲಿ ಎಂತದೆ ದುರ್ಧರ ಪ್ರಸಂಗಗಳು ಎದುರಾದರೂ, ನಡದೇ ನಡೆದಳು. ಕಲ್ಯಾಣದ ಶರಣರನ್ನು ಕಂಡಳು. ಅಣ್ಣ ಬಸವಣ್ಣನವರನ್ನು ಅಲ್ಲಮ ಪ್ರಭುಗಳನ್ನು ಕಣ್ತುಂಬಿಕೊಂಡು ಶರಣೆಂದಳು. ನಿಮ್ಮ ಮನೆಗೆ ಹುವ್ವ ತರುವೆನಲ್ಲದೆ ಹುಲ್ಲುತಾರೆನೆಂಬುದನ್ನು ಮನವರಿಕೆ ಮಾಡಿಯೇ ಅವರಿಂದ ಬೀಳ್ಕೊಂಡಳು. ಶರಣೆ ತಂದೆ ತಾಯಿಯರನ್ನು ಕಂಡು ಅಲ್ಲಿಂದ ಮುಂದೆ ಕದಳಿಯ ಪ್ರವೇಶಿಸಲು ಹೆದರದೆ ಒಂಟಿಯಾಗಿ ಹಸಿವು ತೃಷೆಗಳನ್ನು ಮೀರಿ ಹೋದಳು.
ಎನ್ನುತ್ತಾಳೆ. ಕಾಣದ ಕಿಚ್ಚು ಅವಳ ಒಡಲನ್ನು,ಸುಡುತಿದೆ.  ಮಾಸದ ಗಾಯ, ಗಾಯದ ಆಳ ಅವಳನ್ನು ಹಿಂಡಿದೆ.  ಸುಖವಿಲ್ಲದ ನಡಿಗೆಯಲ್ಲಿಯೂ ದೃಢ ನಿರ್ಧಾರವಿದೆ, ಅದು ಮಲ್ಲಿಕಾರ್ಜುನನ್ನು ಕಾಣುವುದು.  ಎಷ್ಟೊಂದು ಭವಗಳನ್ನು ಹೊಕ್ಕು ಬಂದಿದ್ದಾಳೆ. ಹೀಗೆ ಆಧ್ಯಾತ್ಮದ ಹಾದಿಯಲ್ಲಿ ಅವಳು ಕದಳಿಯನ್ನು ಹೊಕ್ಕಳು. ಮಲ್ಲಿಕಾರ್ಜುನನನ್ನು ಕಾಣುವಲ್ಲಿ ಅದು ಅವಳ ಮಹಾ ಕನಸಾಗಿತ್ತು. ಮಹಾ ನಡಿಗೆಯಲ್ಲಿ ಎಂತದೆ ದುರ್ಧರ ಪ್ರಸಂಗಗಳು ಎದುರಾದರೂ,  ನಡದೇ ನಡೆದಳು.  ಕಲ್ಯಾಣದ ಶರಣರನ್ನು ಕಂಡಳು.  ಅಣ್ಣ ಬಸವಣ್ಣನವರನ್ನು ಅಲ್ಲಮ ಪ್ರಭುಗಳನ್ನು ಕಣ್ತುಂಬಿಕೊಂಡು ಶರಣೆಂದಳು. ನಿಮ್ಮ ಮನೆಗೆ  ಹುವ್ವ ತರುವೆನಲ್ಲದೆ ಹುಲ್ಲುತಾರೆನೆಂಬುದನ್ನು ಮನವರಿಕೆ ಮಾಡಿಯೇ ಅವರಿಂದ ಬೀಳ್ಕೊಂಡಳು. ಶರಣೆ ತಂದೆ ತಾಯಿಯರನ್ನು ಕಂಡು ಅಲ್ಲಿಂದ ಮುಂದೆ ಕದಳಿಯ ಪ್ರವೇಶಿಸಲು ಹೆದರದೆ ಒಂಟಿಯಾಗಿ ಹಸಿವು ತೃಷೆಗಳನ್ನು ಮೀರಿ ಹೋದಳು.

ಒಂದು ಪ್ರಸಂಗದಲ್ಲಿ ತಾಯಿ ಸುಮತಿ ಹರೆಯದ ಮಗಳ ನಿರ್ಧಾರವನ್ನು ಕಂಡು ಹೇಗೆ ಒಂಟಿಯಾಗಿ ದಾರಿ ಸಾಗಿಸುವೆ ಮಗಳೇ ? ಎಂದು ತನ್ನ ಬೇಗುದಿಯಿಂದ,ಒಳಗಿನ ಸಂಕಟದಿಂದ ಮಗಳ ಕೇಳಿದಾಗ- ನೀಡಿದ ಉತ್ತರ ನಮ್ಮೆಲ್ಲರನ್ನು ದಿಗ್ಮೂಡರನ್ನಾಗಿಸುತ್ತದೆ.
ಅದಕ್ಕೆ ಅಕ್ಕ ಕೊಡುವ ಉತ್ತರ

ಹಸಿವಾದೊಡೆ ಭಿಕ್ಷಾನ್ನಗಳುಂಟು
ತೃಷೆಯಾದೊಡೆ ಕೆರೆ ಬಾವಿಗಳುಂಟು
ಶಯನಕ್ಕೆ ಹಾಳು ದೇಗುಲಗಳುಂಟು
ಆತ್ಮಸಂಗಾತಕ್ಕೆ ಚೆನ್ನಮಲ್ಲಿಕಾರ್ಜುನ ಉಂಟು

ಎನ್ನುತ್ತಾ ಸಾಧನೆಯ ಹಾದಿಯಲ್ಲಿ ತನ್ನ ಮಲ್ಲಿಕಾರ್ಜುನನನ್ನು ಕಾಣಲು ಹಂಬಲದಿಂದ ಹಸಿವೆ ತೃಷೆಗಳನ್ನು ಮೀರಿ ಪರಿಶ್ರಮಿಸಿದಳು. ಅದು ಸಚ್ಚರಿತ್ರೆಯ, ಸಾಮರ್ಥ್ಯವನ್ನು ಅನಾವರಣಗೊಳಿಸುತ್ತದೆ.

“ಅರಿದೊಡೆ ಮಾನವ ಮೆರೆದೊಡೆ ದಾನವ” ಎಂಬಂತೆ ಅರಿವಿನ ಹಾದಿಯಲ್ಲಿ ಸಿದ್ಧಿಸಿಕೊಳ್ಳಲು ತನಗೆ ತಾನೇ ಗುರುವಾಗಿ ಮಾರ್ಗದರ್ಶಕಳಾಗಿ ಯಾರಿರಲಿ ಬಿಡಲಿ ತನ್ನೊಂದಿಗೆ ಮಲ್ಲಿಕಾರ್ಜುನ ಇದ್ದಾನೆಂಬ ನಂಬಿಕೆ ಮತ್ತು ಧೈರ್ಯದಿಂದ ನಡೆದ ಅಕ್ಕ ಕೊನೆಗೂ ಕದಳಿ ತಲುಪಲು ಅಲ್ಲಮಪ್ರಭುಗಳ ಪ್ರಶ್ನೆಗಳನ್ನು ಎದುರಿಸಿ, ಜಂಜಡಗಳನ್ನು ಮೀರಿ, ಕಂಡ ಗುರಿ ಸಾಧನೆಯಲ್ಲಿ ಯಾವ ವಿಘ್ನಗಳಿಗೂ ಅಳುಕಲಿಲ್ಲ. ಒಬ್ಬಳೇ ಹೊರಟಳು. ಧೃತಿಗೆಡದೇ ಮುನ್ನಡೆದಳು. ಪ್ರಾಣವನ್ನು ಒಡಲನ್ನು ಲೆಕ್ಕಿಸಲಿಲ್ಲ.

ಆರು ಇಲ್ಲದವಳೆಂದು ಆಳಿಗೊಳಲು ಬೇಡ ಕಂಡಯ್ಯ
ಏನು ಮಾಡಿದರು ಆನಂಜುವವಳಲ್ಲ
ತರಗೆಲೆಯ ಮೆಲಿದು ಆನಿಹೆನು
ಸರಿಯ ಮೇಲೊರಗಿ ಆನಿಹೆನು
ಚೆನ್ನಮಲ್ಲಿಕಾರ್ಜುನಯ್ಯ ಕರ ಕೇಡನೊಡ್ಡಿದೊಡೆ
ಒಡಲನು ,ಪ್ರಾ ಣವನು ನಿಮಗರ್ಪಿಸಿ ಶುದ್ಧಳಹೆನು.

ಒಡಲನು ಪ್ರಾಣವನ್ನು ನಿಮಗೆ ಅರ್ಪಿಸಿ ಶುದ್ದಳು ಎನ್ನುವ ಅನುಭಾವದ ವಚನ ನಮಗೆ ಅನುಪಮ ಧೈರ್ಯ ತುಂಬುತ್ತದೆ. ಹೇಗೆಂದರೆ , ಏನೋ ಸಾಧಿಸಲು ಹೊರಟ ನನ್ನಂತವರಿಗೆ ಒಮ್ಮೊಮ್ಮೆ ಅನಿಸುವುದಿದೆ ಸಾಕಪ್ಪ ಈ ಪಯಣ ಇಲ್ಲಿಗೆ. ನನ್ನಿಂದಾಗದು ಎಂಬ ಸೋಲಿಗೆ ತಗ್ಗಿ ಬಿಡುತ್ತೇವೆ. ಆದರೆ ನಮ್ಮ ಹಿಂದೆ ಅಕ್ಕನ ವಚನವಿದೆ. ಯಾರ ಬಲವು ಇನ್ಯಾವುದೇ ದಯವೂ ಸಾಧಿಸಲು ಹೊರಟವರಿಗೆ ಸಲ್ಲವೆಂದು, ಅಕ್ಕ ತುಂಬುವ ಧೈರ್ಯ ನಮ್ಮನ್ನು ಬಡಿದೆಚ್ಚರಿಸುತ್ತದೆ. ಒಂಟಿಯಾಗಿಯೇ ಕಲ್ಯಾಣವನ್ನು ಪ್ರವೇಶಿಸಿ, ಒಂಟಿಯಾಗಿಯೇ ಕದಳಿಯನ್ನು ಹೊಕ್ಕು ಸ್ಥಿತಪ್ರಜ್ಞೆಯಲ್ಲಿಯೇ ಮಲ್ಲಿಕಾರ್ಜುನನನ್ನು ಅರಸಿ ಹೊರಟಳು. ನಮ್ಮೆಲ್ಲರಿಗೂ ಅಕ್ಕ ತೋರುವ ದಾರಿಯೇ ಸಾತ್ವಿಕದ್ದು.

ಶಿವಭಕ್ತೆಯಾಗಿ ಸದಾ ಶಿವನ ಆರಾಧನೆಯಲ್ಲಿಯೇ ಇರುತ್ತಿದ್ದ ಅಕ್ಕ ಅಯ್ಯಾ ನೀ ಕೇಳಿದಡೆ ಕೇಳು ಕೇಳದಿದ್ದಡೆ ಮಾಣು
ನಾನಿನ್ನ ಹಾಡಿದುದಲ್ಲದೇ ಸೈರಿಸಲಾರೆನಯ್ಯಾ,,——
ನೀ ಒಲಿದಡೆ ಒಲಿ ಒಲಿಯದಡೆ ಮಾಣು,
ನಾ ನಿನ್ನ ಪೂಜಿಸಿದಲ್ಲದೆ ಸೈರಿಸಲಾರನಯ್ಯ
ನೆಂದು ಧ್ಯಾನಿಸುತ್ತಲೇ ಇದ್ದವಳು, ಸ್ವಪ್ನದಲ್ಲಿಯೂ ಆ ಗೊರವವನನ್ನೇ ಕಂಡಿದ್ದಾಳೆ. ಅದೇ ಧ್ಯಾನದಲ್ಲಿದ್ದ ಅವಳ . ಕನಸಲಿ ಚೆನ್ನಮಲ್ಲಿಕಾರ್ಜುನ ಯಾವ ರೂಪದಲ್ಲಿ ಬಂದನೆಂಬುದನ್ನೂ ಮನ ಮುಟ್ಟುವಂತೆ ವಾಸ್ತವವೇ ಎನ್ನುವಂತೆ ವಚನಗಳ ಮೂಲಕ ವೇದ್ಯ ಗೊಳಿಸಿದಾಳೆ.

ಯಾವುದೇ ಭವದ ಸಂಗತಿಗಳಿಗೆ ಅಲುಗಾಡದಂತೆ ಮುನ್ನಡೆಸಿದ ಅವಳ ಆರಾಧನೆಯ ಮನೋಭಾವ ಮತ್ತು ಅವಳ ಪಯಣ ಸಾಮರ್ಥ್ಯ ಸ್ವಾರ್ಥವನ್ನು ಮೀರಿದ್ದು, ಹೀಗಾಗಿಯೇ ಅಕ್ಕನ ಪ್ರತಿ ವಚನಗಳು , ನಮ್ಮ ನಡಿಗೆಗೆ ವೇಗವನ್ನು, ದಾರಿಗೆ ಬೆಳಕನ್ನೂ ನೀಡಿ ಮುನ್ನಡೆಸುತ್ತವೆ.

Related Articles

ಇತ್ತೀಚಿನ ಸುದ್ದಿಗಳು