Home ಅಂಕಣ ನೆಲದ ತವಕ – 1 : ವಲಸೆ ಕನ್ನಡಿಗರ ಸಾಹಿತ್ಯ-ಸಾಂಸ್ಕೃತಿಕ ಕೊಡುಗೆಗಳು

ನೆಲದ ತವಕ – 1 : ವಲಸೆ ಕನ್ನಡಿಗರ ಸಾಹಿತ್ಯ-ಸಾಂಸ್ಕೃತಿಕ ಕೊಡುಗೆಗಳು

0

ಡಾ.ಶ್ರೀಪತಿ ಹಳಗುಂದ, ಸಹಾಯಕ ಪ್ರಾಧ್ಯಾಪಕರು

ಸಹಾಯಕ ಪ್ರಾಧ್ಯಾಪಕರಾದ ಡಾ.ಶ್ರೀಪತಿ ಹಳಗುಂದ ಕನ್ನಡದ ಹಲವು ಪ್ರಕಾರಗಳ ಸಾಹಿತ್ಯ ಕೃಷಿ ಮಾಡಿದವರು. “ನೆಲದ ತವಕ” ಅಂಕಣದ ಮೂಲಕ ಇಂದಿನಿಂದ ಅವರ ಬರಹ ಪೀಪಲ್ ಮೀಡಿಯಾದಲ್ಲಿ ಬರಲಿದೆ. ರಾಜ್ಯೋತ್ಸವದ ಈ ಸಂದರ್ಭದಲ್ಲಿ ವಲಸೆ ಕನ್ನಡಿಗರ ಕೊಡುಗೆಗಳ ಬಗ್ಗೆ ಸವಿವರವಾಗಿ ಇಲ್ಲಿ ಪ್ರಸ್ತಾಪಿಸಿದ್ದಾರೆ. ಒಂದು ಅಪರೂಪದ ಮಾಹಿತಿಯನ್ನು ತಪ್ಪದೇ ಓದಿ.

"..ನಿಮಗೆ ಆಶ್ಚರ್ಯವಾಗಬಹುದು. ಸುಮಾರು ಎರಡು ಕೋಟಿ ಕನ್ನಡಿಗರು ಕರ್ನಾಟಕದ ಹೊರಗೆ ನೆಲೆಸಿದ್ದಾರೆ. ಹೆಸರನ್ನು ಅಲ್ಲಿಯ ಪಡಿತರ ಚೀಟಿಯಲ್ಲೋ, ಮತ್ತೊಂದರಲ್ಲೋ ಸೇರಿಸಿದ್ದಾರೆ. ಉಸಿರು ಈ ಮಣ್ಣಿನಲ್ಲಿದೆ. ಈ ಕಾರಣಕ್ಕೆ ಕನ್ನಡ ಭಾಷೆಗೆ, ಕನ್ನಡಿಗರ ಭಾವನೆಗೆ ಸ್ಪಂದಿಸುತ್ತಾ ಆ ಮೂಲಕ ಇಲ್ಲಿಯ ಸಾಹಿತ್ಯ ಮತ್ತು ಸಂಸ್ಕೃತಿಯ ನಿಜವಾದ ವಾರಸುದಾರರಾಗಿದ್ದಾರೆ. ಇದು ಹೆಮ್ಮೆಯ ಸಂಗತಿ.."

ವಲಸೆಯು ಒಂದು ಸಾಮಾಜಿಕ ಪ್ರಕ್ರಿಯೆ. ಬಹುಶಃ ಈ ನೆಲದ ಮೇಲೆ ಜೀವಿಗಳು ಸೃಷ್ಟಿಯಾದಾಗಿನಿಂದ ಆರಂಭವಾಗಿರಬೇಕು. ಅದರಲ್ಲೂ ಪ್ರಾಣಿ, ಪಕ್ಷಿಗಳು ಇದರ ಆರಂಭದ ಸುಳಿವು ನೀಡುತ್ತವೆ. ಅನಂತರ ಮನುಷ್ಯ ಇವುಗಳ ಪಟ್ಟಿಗೆ ಸೇರುತ್ತಾನೆ.

ಹಕ್ಕಿಗಳು ಆಹಾರಕ್ಕಾಗಿ, ಋತುಮಾನ ವೈಪರೀತ್ಯದ ಪರಿಣಾಮವಾಗಿ ಪ್ರಾಕೃತಿಕವಾಗಿ ಕಂಡುಕೊಂಡ ದಾರಿಯಿದು. ಮುಖ್ಯವಾಗಿ ಆಹಾರದ ಅವಶ್ಯಕತೆಗಾಗಿ ಕೆಲವೊಮ್ಮೆ ಇದು ಆನಿವಾರ್ಯವೂ ಹೌದು, ಯಾವ ಜೀವಿಗಳು ಬದುಕನ್ನು ಪ್ರೀತಿಸುವುದಿಲ್ಲ ಹೇಳಿ! ಬದುಕಿಗೆ ಅಪಾಯವಾದಾಗ ಬದುಕುಳಿಯಲು ವಲಸೆಗೆ ಜೋತುಬೀಳುತ್ತಾರೆ.

ಮಾನವನ ವಲಸೆ, ಆಹಾರಕ್ಕಾಗಿ, ಅಧ್ಯಯನಕ್ಕಾಗಿ, ಅಧ್ಯಾಪನಕ್ಕಾಗಿ, ಆಕಸ್ಮಿಕವಾಗಿ ಒಟ್ಟಿನಲ್ಲಿ ಆತನ ಅನುಕೂಲಕ್ಕಾಗಿ ಈ ಪ್ರಕ್ರಿಯೆ ಆರಂಭವಾಗಿದೆ. ಈ ನೆಲದ ಪ್ರೀತಿಗಾಗಿ ಪ್ರತಿಯೊಂದು ಜೀವವು ತಾನು ಹುಟ್ಟಿ ಬೆಳೆದ ಮಣ್ಣಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿರುತ್ತದೆ. ಇದು ಸಹಜವೂ ಹೌದು. ಹೆಣ್ಣೊಬ್ಬಳ ತೌರು ಪ್ರೀತಿಯೂ ಈ ನೆಲೆಯದ್ದೆ ಎನ್ನಬಹುದು.

ಆರಂಭದಲ್ಲಿ ಮಾನವನಿಗೆ ಒಂದು ಶಾಶ್ವತವಾದ ನೆಲೆಯಿಲ್ಲದ, ಮನೆಯಿಲ್ಲದ ಕಾರಣ ಇದೊಂದು ಆತನ ಅವಿಭಾಜ್ಯ ಅಂಗವಾಗಿ ಹೋಯಿತು. ಕಾಲಕ್ರಮೇಣ ಆತ ಒಂದೆಡೆ ನೆಲೆ ನಿಂತು ತನ್ನದೇ ಆದ ಮಣ್ಣಿಗೆ, ಹೆಣ್ಣಿಗೆ, ಹೊನ್ನಿಗೆ ಒಡೆಯನಾದ. ಆಮೇಲೆ ಸಾಂಘಿಕವಾದ ಜೀವನಕ್ಕೆ ನಾಂದಿ ಹಾಡಿದ.

ತನ್ನ ಜಾಗ, ಜಾಗತೀಕರಣಕ್ಕೆ ಸಿಕ್ಕು ಜಗತ್ತೆ ಹಳ್ಳಿಯಾದಾಗ ಜನಸಂಖ್ಯಾ ಸ್ಫೋಟವಾಗಿ ಭೂಮಿ ಕಡಿಮೆಯಾದಾಗ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಪ್ರಬಲವಾಗಲು ವಲಸೆ ಹೋಗಿದ್ದು ಇತಿಹಾಸ. ಕೆಲವೊಮ್ಮೆ ದುರ್ಬಲರೂ ಆಗಿದ್ದಾರೆ.

ವಲಸೆ ವ್ಯಾಖ್ಯೆಗಳು

  • ವಿಶ್ವಸಂಸ್ಥೆಯ ಜನಸಂಖ್ಯಾ ಶಾಸ್ತ್ರೀಯ ಬಹುಭಾಷಾ ಶಬ್ದಕೋಶದಲ್ಲಿ ವಲಸೆಯನ್ನು ‘ಒಂದು ವಿಧವಾದ ಭೌಗೋಳಿಕ ಅಥವಾ ಪ್ರಾದೇಶಿಕ ಚಲನೆ, ಜನರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಚಲಿಸಿ ಮೂಲ ವಾಸ ಸ್ಥಳದಿಂದ ವಾಸಿಸಬೇಕೆಂಬ ಸ್ಥಳಕ್ಕೆ ನಿವಾಸವನ್ನು ಬದಲಾಯಿಸುವುದು’ ಎಂದು ವ್ಯಾಖ್ಯಾನಿಸಲಾಗಿದೆ.
  • ‘ಮೂಲ ವಾಸಸ್ಥಳದಿಂದ ನೂತನ ಸ್ಥಳಕ್ಕೆ ವಾಸಸ್ಥಾನವನ್ನು ಬದಲಾಯಿ ನೆಲೆಸುವುದಕ್ಕೆ ವಲಸೆ’ ಎನ್ನುವರು.
  • ಒಂದು ಭಾಗದಿಂದ ಅಥವಾ ಅದರ ಗಡಿಯಿಂದ ಮತ್ತೊಂದು ವಾಸಸ್ಥಾನವನ್ನು ಬದಲಾಯಿಸುವುದಕ್ಕೆ ವಲಸೆ’ ಎಂದು ತಿಳಿಸಲಾಗಿದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಇಲ್ಲಿಂದ ವಲಸೆ ಹೋಗಿರುವುದು ವಲಸೆ ಬಂದವರ ಪ್ರಮಾಣಕ್ಕಿಂತ ಕಡಿಮೆ ಎನ್ನಬಹುದು. ಅದೃಷ್ಟವಶಾತ್ ಈ ನಾಡು ಸಂಪದ್ಭರಿತವಾಗಿರುವುದು ಇದಕ್ಕೆ ಕಾರಣವಿರಬಹುದು.

ಒಮ್ಮೆ ಜಮ್ಮು ಕಾಶ್ಮೀರದಲ್ಲಿ ಗಲಭೆಯಾದಾಗ ಅಲ್ಲಿಯ ಜನರನ್ನು ಪ್ರಶ್ನಿಸುತ್ತಾರೆ. ಇದನ್ನು ಹೊರತುಪಡಿಸಿ ಭಾರತದ ಯಾವ ಭಾಗದಲ್ಲಿ ನೆಲಸಲು ಇಷ್ಟ ಪಡುತ್ತೀರಿ ಎಂಬ ಪ್ರಶ್ನೆಗೆ ೮೨% ಜನ ಕರ್ನಾಟಕ ಎಂದು ಹೇಳಿರುವುದೇ ಮೇಲಿನ ಮಾತಿಗೆ ಸಾಕ್ಷಿ.

ನಾನು 1999ರಲ್ಲಿ ತಮಿಳುನಾಡಿನ ಮಧುರೈ ಕಾಮರಾಜ ವಿ.ವಿ.ಯ ಕನ್ನಡ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದವನು. ಒಮ್ಮೆ ತಮಿಳುನಾಡಿನ ಚುನಾವಣಾ ಸಂದರ್ಭದಲ್ಲಿ ರಾಜಕಾರಣಿಯೊಬ್ಬರು ತಮ್ಮ ಉಗ್ರ ಭಾಷಣದಲ್ಲಿ “ಬೇರೆ ರಾಜ್ಯದವರು ನಮ್ಮಲ್ಲಿಗೆ ವಲಸೆ ಬರುತ್ತಾರೆ. ಹೇಗೆ ಅಧಿಕಾರಿಗಳಾಗಿ, ಅಜ್ಞೆ ಮಾಡುವವರಾಗಿ ನಮ್ಮನ್ನು ಆಳಲು ಬರುತ್ತಿದ್ದಾರೆ. ಆದರೆ ನಮ್ಮವರು ಕೂಲಿ ಕಾರ್ಮಿಕರಾಗಿ ಬೇರೆ ರಾಜ್ಯಕ್ಕೆ ವಲಸೆ ಹೋಗುತ್ತಿದ್ದಾರೆ. ಎಂತಹ ದುರಂತ ಎಂದು ಸಾವಿರಾರು ಜನ ಸೇರಿದ ಸಭೆಯಲ್ಲಿ ಹೇಳಿದರು. ಸಭೆಯಲ್ಲಿ ಚಪ್ಪಾಳೆ ಗಿಟ್ಟಿಸಿದರು. ಮುಂದುವರಿದು ‘ನಮ್ಮವರು ಉನ್ನತ ಮಟ್ಟಕ್ಕೆ ಏರಬೇಕು’ ಎಂದರು. ಆ ರಾಜಕಾರಣಿಗೆ ತಮಿಳರ ಮೇಲೆ ಪ್ರೀತಿ ಇತ್ತೋ ಇಲ್ಲೋ ಗೊತ್ತಿಲ್ಲ. ಆದರೆ ಅಲ್ಲಿದ್ದವರಿಗೆ ಆ ರಾಜಕಾರಣಿ ಬಗ್ಗೆ ಒಲವು ಮೂಡಿತು.

ಏನೇ ಇರಲಿ, ಪ್ರಪಂಚವೇ ವಿಶಾಲವಾಗಿದೆ. ಬದುಕುವ ಧೈರ್ಯ, ಛಲವಿದ್ದರೆ ವಲಸೆ ಒಂದು ಸಮಸ್ಯೆಯಲ್ಲ. ಆದರೆ ಪ್ರತಿ ರಾಜ್ಯಕ್ಕೂ, ರಾಷ್ಟ್ರಕ್ಕೂ ಒಂದು ಸಾಂಸ್ಕೃತಿಕ ಭಿನ್ನತೆ ಇದೆ; ತಾತ್ವಿಕ ವ್ಯತ್ಯಾಸವಿದೆ. ರಾಜಕೀಯವಾಗಿ ಬೇರೆ ಬೇರೆ ಆಲೋಚನೆಗಳಿವೆ. ಹೀಗಿರುವಾಗ ವಲಸೆ ಕನ್ನಡಿಗರು ತಮ್ಮ ನಿಜವಾದ ಸವಾಲುಗಳ ನಡುವೆಯೂ ಸಾಹಿತ್ಯಕವಾದ, ಸಾಂಸ್ಕೃತಿಕವಾದ ಕೊಡುಗೆ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ನಾವು ಡೆಲ್ಲಿಯಲ್ಲಿದ್ದಾಗ ಕರ್ನಾಟಕದ ಮೇಲೆ, ಬೆಂಗಳೂರಿಗೆ ಬಂದಾಗ ನಮ್ಮ ಜಿಲ್ಲೆಯ ಬಗ್ಗೆ, ಜಿಲ್ಲೆಗೆ ಬಂದಾಗ ತಾಲ್ಲೂಕು, ತಾಲ್ಲೂಕು ಕೇಂದ್ರಕ್ಕೆ ಬಂದಾಗ ಹಳ್ಳಿಯ ಬಗ್ಗೆ ಹೀಗೆ ನಮ್ಮೂರಿಂದ ದೂರ ಹೋದಾಗಲೇ ನಮ್ಮೂರಿನ ಮೇಲೆ ಉತ್ಕಟವಾದ ಪ್ರೇಮ ಜಾಗೃತವಾಗುತ್ತದೆ ಮತ್ತು ಜಾಗೃತವಾಗಬೇಕು. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ಹೇಳುವಂತೆ

ತೇರನ್ನೆಳೆಯುವವರು ನಾವು
ಎಲ್ಲಿದ್ದರೇನು
ಬೊಂಬಾಯಿ ಮದ್ರಾಸು ಕಲ್ಕತ್ತ
ಡೆಲ್ಲಿ ಎಲ್ಲೆಂದರೆಲ್ಲಿ
ಕನ್ನಡದ ಉಸಿರಾಟ
ಎದೆಗಳಿರುವಲ್ಲಿ

ನಿಮಗೆ ಆಶ್ಚರ್ಯವಾಗಬಹುದು. ಸುಮಾರು ಎರಡು ಕೋಟಿ ಕನ್ನಡಿಗರು ಕರ್ನಾಟಕದ ಹೊರಗೆ ನೆಲೆಸಿದ್ದಾರೆ. ಹೆಸರನ್ನು ಅಲ್ಲಿಯ ಪಡಿತರ ಚೀಟಿಯಲ್ಲೋ, ಮತ್ತೊಂದರಲ್ಲೋ ಸೇರಿಸಿದ್ದಾರೆ. ಉಸಿರು ಈ ಮಣ್ಣಿನಲ್ಲಿದೆ. ಈ ಕಾರಣಕ್ಕೆ ಕನ್ನಡ ಭಾಷೆಗೆ, ಕನ್ನಡಿಗರ ಭಾವನೆಗೆ ಸ್ಪಂದಿಸುತ್ತಾ ಆ ಮೂಲಕ ಇಲ್ಲಿಯ ಸಾಹಿತ್ಯ ಮತ್ತು ಸಂಸ್ಕೃತಿಯ ನಿಜವಾದ ವಾರಸುದಾರರಾಗಿದ್ದಾರೆ. ಇದು ಹೆಮ್ಮೆಯ ಸಂಗತಿ.

ನಾನು ಕನ್ನಡ ಎಂ.ಎ.ಯನ್ನು ಮಧುರೈನಲ್ಲಿ ಮುಗಿಸಿ ಬಂದು ಶಿವಮೊಗ್ಗದ ಒಂದು ಪ್ರತಿಷ್ಠಿತ ಕಾಲೇಜಿಗೆ ಸಂದರ್ಶನಕ್ಕೆ ಹೋದಾಗ ನನ್ನ ಅಂಕಪಟ್ಟಿ ನೋಡಿ ‘ತಮಿಳುನಾಡಿನಲ್ಲಿ ಕನ್ನಡ ಎಂ.ಎ. ಇದೆಯೇನ್ರಿ’ ಎಂದರು. ಅದಕ್ಕೆ ನಾನು, ‘ಸರ್ ೧೯೯೮ರಲ್ಲಿ ಅಲ್ಲಿಯ ಕನ್ನಡ ವಿಭಾಗ ಬೆಳ್ಳಿಹಬ್ಬವನ್ನು ಆಚರಿಸಿಕೊಂಡಿದೆ’ ಎಂದೆ. ಅದಕ್ಕೆ ಅವರು ತಬ್ಬಿಬ್ಬಾದರು. ಕನ್ನಡ ಎಂ.ಎ. ಚೆನ್ನೈ, ಮಧುರೈ, ಕುಪ್ಪಂ, ಕೇರಳ, ಉಸ್ಮಾನಿಯ ಬಹಳಷ್ಟು ಕಡೆ ಇದೆ.

ನಾವು ದೇಶವನ್ನು ತಿರುಗಬೇಕಷ್ಟೆ, ಡಾ.ಪಾ.ಶ. ಶ್ರೀನಿವಾಸ್, ಡಾ.ಪಿ.ವಿ. ಕುಲಕರ್ಣಿ, ಡಾ.ಹರಿಕೃಷ್ಣಭರಣ್ಯ, ಡಾ.ಕೃಷ್ಣಭಟ್ ಅರ್ತಿಕಜೆ, ಡಾ.ರಾಮಸ್ವಾಮಿ, ಡಾ.ಶಾರದ, ಡಾ.ಕೆ.ಕುಶಾಲಪ್ಪ ಗೌಡ, ಡಾ.ಕೇಶವ ಶರ್ಮ, ಡಾ.ಜಿ.ಎಸ್.ಎಸ್. ಡಾ.ಎಂ.ರಾಮ, ಡಾ.ಕೆ.ಜಿ. ನಾರಾಯಣ ಪ್ರಸಾದ್, ಡಾ.ಪುರುಷೋತ್ತಮ ಬಿಳಿಮಲೆ, ಡಾ.ವೆಂಕಟೇಶ್ ಹೀಗೆ ಎಷ್ಟೊಂದು ಜನ ಹೊರನಾಡಿನಲ್ಲಿ ಅಧ್ಯಯನ, ಅಧ್ಯಾಪನ ಮಾಡಿಲ್ಲ.

ನಿಜವಾಗಿಯೂ ಹೊರನಾಡಿನಲ್ಲಿರುವಾಗ ಬಲವಾದ ಅನಾಥಪ್ರಜ್ಞೆ ನಮ್ಮನ್ನು ಕಾಡುತ್ತದೆ. ಆರಂಭದಲ್ಲಿ ಭಾಷಿಕ ಬಿಕ್ಕಟ್ಟು, ಅನಂತರ ಸಾಂಸ್ಕೃತಿಕ ಬಿಕ್ಕಟ್ಟುಗಳ ನಡುವೆಯೂ ಈ ನೆಲದ ಸೇವೆಯನ್ನು ಮುಂದುವರೆಸಿಕೊಂಡು ಬರುವವನೆ ನಿಜವಾದ ಕನ್ನಡಿಗ ಎನಿಸಿಬಿಡುತ್ತಾನೆ. ವಿಶ್ವವಿದ್ಯಾನಿಲಯಗಳಿಗೆ ಮಾತ್ರ ಸೀಮಿತವಾಗದ ಕನ್ನಡ ಸಂಘ, ಕರ್ನಾಟಕ ಸಂಘ, ಕನ್ನಡ ಸಮ್ಮೇಳನ ಇವುಗಳ ಹೆಸರಿನಲ್ಲಿ ಒಂದುಗೂಡಿ ಸಂಸ್ಕೃತಿಯನ್ನು ಮೆರೆಯುತ್ತಿರುವುದನ್ನು ಇಲ್ಲಿಯವರು ಗಮನಿಸಬೇಕು.

ನಾವೇ ಸಂಸ್ಕೃತಿಯ ವಾರಸುದಾರರು, ನಾವೇ ಸಾಹಿತ್ಯದ ದಿಗ್ಗಜರು ಎಂದು ಬೀಗುವವರಿಗೆ ಇದು ಅರ್ಥವಾಗಬೇಕು. ಅನುವಾದಗಳ ಮೂಲಕ ಒಂದು ಸಾಹಿತ್ಯ ಕೃತಿಯನ್ನು ಪರಭಾಷೆಗೆ; ಪರಭಾಷೆಯ ಸಾಹಿತ್ಯವನ್ನು ನಮ್ಮ ಭಾಷೆಗೆ ಪರಿಚಯಿಸುವುದರ ಮೂಲಕ ಸಾಂಸ್ಕೃತಿಕ ಕೊಂಡಿಗಳನ್ನು ಕಳಚದ ಹಾಗೆ ನೋಡಿಕೊಂಡಿದ್ದಾರೆ.

ಭೌಗೋಳಿಕವಾಗಿ ಕನ್ನಡ ನಾಡಿನ ಹೊರಗಿದ್ದು ಕನ್ನಡವನ್ನು ಉಸಿರಾಗಿಸಿಕೊಂಡವರು. ಏಕೆಂದರೆ ಒಂದು ಭಾಷೆಗೆ ಸೀಮೆಗೆ ಎಲ್ಲೆ ಇದೆಯ ಹೊರತು ಸಂಸ್ಕೃತಿಗಿಲ್ಲ. ಗಡಿನಾಡು, ಹೊರನಾಡು, ಹೊರರಾಷ್ಟ್ರ ಎಂದೆಲ್ಲಾ ಹೇಳಿದರೂ ತುಡಿತ ಒಂದೇ!

ತಾಂತ್ರಿಕ ಕಾರಣಗಳಿಗಾಗಿ ಕರ್ನಾಟಕದ ಒಳಗಿರುವವರನ್ನು ಅದರಲ್ಲೂ ಖಾಯಂ ವಾಸಿಗಳನ್ನು ಕನ್ನಡಿಗರು ಎಂದಂತೆ ಮೂಲತಃ ಕನ್ನಡದವರಾಗಿದ್ದು ಸಧ್ಯಕ್ಕೆ ಹೊರನಾಡಿನಲ್ಲಿ ಇರುವವರು ಕನ್ನಡಿಗರಾಗುತ್ತಾರೆ ಎಂಬ ಬರಗೂರರ ಅಭಿಪ್ರಾಯ ಇಲ್ಲಿ ಗಮನಾರ್ಹ.

“ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು” ಎಂಬ ಕುವೆಂಪು ವಾಣಿಯನ್ನು ಮೈಗೂಡಿಸಿಕೊಂಡಿದ್ದಾರೆ. ಸಂಘಸಂಸ್ಥೆ ಕಟ್ಟಿಕೊಂಡು ತಮ್ಮ ಅಸ್ಥಿತೆಯನ್ನು ಉಳಿಸಿಕೊಂಡಿದ್ದಾರೆ. ಕಾಸರಗೋಡು, ಅಕ್ಕಲಕೋಟೆ, ಆದವಾನಿ, ಜತ್ತ, ಆಲೂರು, ರಾಯದುರ್ಗ, ಮಡಕಶಿರ ಮುಂತಾದ ಗಡಿಭಾಗಗಳಲ್ಲಿ, ಮುಂಬೈ, ಚೆನ್ನೈ, ದೆಹಲಿ, ಕಾಶಿ, ಲಖನೌ, ಪಣಜಿ, ಗೋವಾ, ಮಧುರೈ, ಭೂಪಾಲ್, ಹೈದರಬಾದ್, ಅಹಮದಾಬಾದ್, ವಾಡಿ, ಪುಣೆ, ಕಾಲಿಕಟ್, ಚಂಡೀಗಡ್, ನೈವೇಲಿ, ಭಿವಾಯಿ, ಗುಂತಕಲ್, ಕರ್ನೂಲ್, ಬರೋಡಾ, ಅಲಹಾಬಾದ್, ರಾಂಚಿ, ತ್ರಿವೇಂದ್ರಂ, ಇಂದೋರ್, ಪನ್ಸೆಲ್ ಇಲ್ಲೆಲ್ಲಾ ವಲಸೆ ಹೋಗಿ ನಿಂತಿದ್ದಾರೆ.

ಇಂಗ್ಲೆಂಡ್, ಸಿಂಗಾಪೂರ್, ಅಮೆರಿಕಾ, ದುಬೈ, ಕೆನಡಾ, ಜರ್ಮನಿ, ಬಹರೈನ್, ಅಬುದಾಬಿ, ಆಸ್ಟ್ರೇಲಿಯಾ ಮುಂತಾದ ಸ್ಥಳಗಳಲ್ಲೂ ಕನ್ನಡಿಗರು ಸಂಘಟಿತರಾಗಿ ನಿಂತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಾ ಕನ್ನಡದ ಕಂಪನ್ನು ವಿಶ್ವವ್ಯಾಪಿಯಾಗಿಸಿದ್ದಾರೆ.

ಇದಕ್ಕೆ ದೊಡ್ಡ ನಿದರ್ಶನವೆಂದರೆ ‘ಅಕ್ಕ’ ಸಮ್ಮೇಳನ. ವಲಸೆ ಕನ್ನಡಿಗರು ಕನ್ನಡಿಗರಾಗಿ ಉಳಿಯಲು ಕನ್ನಡ ಭಾಷೆಯ ಒಂದು ಪ್ರಮುಖ ಸಾಧನ ಎಂದು ಬಹುಕಾಲ ಹೊರನಾಡಿನಲ್ಲಿದ್ದು ಸಾಹಿತ್ಯ ಕ್ರಾಂತಿ ಮಾಡಿದ ಡಾ. ಬಿ.ಎ. ಸನದಿ ಹೇಳಿದ್ದಾರೆ. ಹೊರನಾಡಿನಲ್ಲಿರುವಾಗ ನಾವು ಮಾಡುವ ಕೆಲಸ ಯಾವುದೇ ಇರಲಿ. ಕನ್ನಡಕ್ಕೆ ಸಂಬಂಧಪಟ್ಟ ಯಾವುದೇ ಕಾರ್ಯಕ್ರಮ ಎಂದಾಗ ಹೊರನಾಡಿನಲ್ಲಿ ಕೆಲಸ ಮಾಡುವವರು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಕಾರಣ ಇಲ್ಲಿ ಕನ್ನಡದ ಕೆಲಸ ಮುಖ್ಯವೇ ಹೊರತು ನಮ್ಮ ವೃತ್ತಿ ಮುಖ್ಯವಲ್ಲ. ದಿನಾಂಕ ೬೧.೨೦೧೪ರ ವಿಜಯವಾಣಿಯಲ್ಲಿ ‘ಕನ್ನಡ ಪೀಠ ಸ್ಥಾಪನೆ’ ಸರ್ಕಾರಕ್ಕೆ ಹಣ ಹಿಂದಿರುಗಿಸಿದ ಜೆ.ಎನ್.ಯು. ಎಂಬ ಸುದ್ದಿ ಪ್ರಕಟವಾಗಿತ್ತು. ಹೌದು, ಎರಡು ಕೋಟಿಯನ್ನು ಕನ್ನಡ ಪೀಠ ಸ್ಥಾಪನೆಗೆ ಕೇಳಿದ್ದು. ಸರ್ಕಾರ ಬಿಡುಗಡೆ ಮಾಡಿದ್ದು ೧೦ ಲಕ್ಷ ಮಾತ್ರ. ಹೊರರಾಜ್ಯದಲ್ಲಿ ಕನ್ನಡ ಪೀಠವಿದ್ದರೆ ಅಲ್ಲಿಯ ವಲಸಿಗರನ್ನು ಮುಖ್ಯವಾಹಿನಿಗೆ ತಂದು ಅವರಲ್ಲಿ ಸಾಹಿತ್ಯಕ, ಸಾಂಸ್ಕೃತಿಕ ಆಸಕ್ತಿ ಮೂಡಿಸುವಲ್ಲಿ ಕನ್ನಡ ಪೀಠ ವಿಭಾಗಗಳು ಸಕ್ರಿಯವಾಗಿ ನೆರವಾಗಬಲ್ಲವು.

ಹೊರ ರಾಜ್ಯದ 7 ವಿ.ವಿ.ಗಳಲ್ಲಿ ಕನ್ನಡ ವಿಭಾಗಗಳಿವೆ. ಹೈದರಾಬಾದಿನ ಉಸ್ಮಾನಿಯ ವಿ.ವಿ.ಯಲ್ಲಿ 16, ಕುಪ್ಪಂನ ದ್ರಾವಿಡ ವಿ.ವಿ.ಯಲ್ಲಿ ೧೨, ಕಾಸರಗೋಡಿನ ಕನ್ನಡ ವಿಭಾಗದಲ್ಲಿ ೨೬, ಅಕ್ಕಲಕೋಟೆಯ ಸೊಲ್ಲಾಪುರ ವಿ.ವಿ.ಯಲ್ಲಿ ೩೨, ಮುಂಬೈನಲ್ಲಿ ೧೧. ಮಧುರೈ ಕಾಮರಾಜ ವಿ.ವಿ.ಯಲ್ಲಿ ೧೭, ಚೆನ್ನೈ ಮದ್ರಾಸ್ ವಿ.ವಿ.ಯಲ್ಲಿ ೪, ವಾರಣಾಸಿಯಲ್ಲಿ ಹಿಂದೆ ಇತ್ತು. ಪ್ರಾಧ್ಯಾಪಕರ ನಿಧನದಿಂದ ಅದು ಮುಚ್ಚಿ ಹೋಗಿದೆ. ಇದರ ಪ್ರಸ್ತಾಪಿಸಲು ಕಾರಣ ವಿಶ್ವವಿದ್ಯಾನಿಲಯವು ಸಹ ವಲಸೆ ಕನ್ನಡಿಗರಿಗೆ ಸಾಂಸ್ಕೃತಿಕವಾದ ಮತ್ತು ಸಾಹಿತ್ಯಕವಾದ ನೆಲೆಯಲ್ಲಿ ಬೆನ್ನೆಲುಬಾಗಿ ನಿಲ್ಲಬಹುದು ಎಂಬ ಕಾರಣಕ್ಕೆ ಮತ್ತು ಹೊರರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ವಿಭಾಗ ಮುಚ್ಚುವುದು ಎಂದರೆ ಅದು ಕನ್ನಡದ ಕೊಡುಗೆಗೂ ಪೆಟ್ಟು, ಇವರೆಲ್ಲಾ ವಲಸಿಗರಲ್ಲ; ಆದರೆ ಒಂದರ್ಥದಲ್ಲಿ ವಲಸಿಗರೂ ಹೌದು, ಎಷ್ಟು ಜನ ವಿದ್ಯಾರ್ಥಿಗಳು ಅಲ್ಲಿಯೇ ಬದುಕನ್ನು ಕಟ್ಟಿಕೊಂಡಿದ್ದಾರೆ. ಈಗಾಗಲೇ ವಲಸೆ ಹೋದವರಿಗೆ ಸಾಹಿತ್ಯ, ಸಂಸ್ಕೃತಿ ಎಂಬ ಗೀಳು ಹುಟ್ಟಿಸಿದ್ದಾರೆ. ಅಲ್ಲಿಯೂ ಬೆಳೆಯುತ್ತಿರುವ ಮತ್ತು ಬೆಳೆದ ಮನಸ್ಸುಗಳು ಸೇರಿಕೊಂಡು ದುಡಿಯುತ್ತಿದ್ದಾರೆ.

ಉದಾ: ಮುಂಬೈ ಒಂದರಲ್ಲೆ ಸುಮಾರು ೨೦ ಲಕ್ಷ ಕನ್ನಡಿಗರಿದ್ದಾರೆ. ಶೇ. ೮೦ ಹೋಟೆಲ್‌ಗಳು ಕನ್ನಡಿಗರದ್ದು. ನೂರಾರು ಕನ್ನಡ ಸಂಘ, ಸಂಸ್ಥೆಗಳಿಗೆ ಹೆಚ್ಚು ಕಡಿಮೆ ಪ್ರತಿದಿನವೂ ಕನ್ನಡ, ಕರ್ನಾಟಕಕ್ಕೆ ಸಂಬಂಧಿಸಿದ ಕಾರ್ಯಕ್ರಮ ನಡೆಯುತ್ತಿವೆ. ಕರ್ನಾಟಕದ ರಾಜಧಾನಿ ಬಿಟ್ಟರೆ ಅತಿ ಹೆಚ್ಚು ಕನ್ನಡಿಗರಿರುವ ಪ್ರದೇಶ ಮುಂಬೈ!

ಕರ್ನಾಟಕ ವಿದ್ಯಾವರ್ಧಕ ಸಂಘ ಹಲವು ರಾಜ್ಯಗಳಲ್ಲಿ ಕನ್ನಡ ಸಮ್ಮೇಳನ ನಡೆಸಿ ವಲಸೆ ಕನ್ನಡಿಗರ ಸಾಧನೆಯನ್ನು ಗುರುತಿಸುವುದು ಶ್ಲಾಘನೀಯ. ಸಂಸ್ಕೃತಿ, ಪರ್ಯಾಯ ಸಂಸ್ಕೃತಿ, ಪ್ರತಿ ಸಂಸ್ಕೃತಿ, ಉಪ ಸಂಸ್ಕೃತಿ ಎಂದೆಲ್ಲಾ ತಮ್ಮ ತಮ್ಮ ಅನನ್ಯತೆಯನ್ನು ಕಾಪಾಡಿಕೊಳ್ಳುವ ಸಂದರ್ಭದಲ್ಲಿ ಮಾತೃಭಾಷೆಯನ್ನು ಜೀವಂತವಾಗಿಸಿಕೊಳ್ಳುವ ಮೂಲಕ ಸಂಸ್ಕೃತಿಯನ್ನು ಜತನವಾಗಿ ಕಾಪಾಡಿಕೊಂಡಿದ್ದಾರೆ. ಭಾಷೆ ಕೇವಲ ಒಂದು ಸಂವಹನ ಕ್ರಿಯೆ ಮಾತ್ರವಲ್ಲ, ಅದೊಂದು ಸಂಸ್ಕೃತಿ.

ಭಾಷೆಯ ಪತನವೆಂದರೆ ಆ ಭಾಷೆಯನ್ನು ನಂಬಿಕೊಂಡವರ ಪತನವೂ ಹೌದು. ಈ ಕಾರಣಕ್ಕೆ ಭಾಷೆಯನ್ನು ಒಂದು ಸಂಸ್ಕೃತಿ ಎಂದು ಪರಿಭಾವಿಸುವ ಕ್ರಿಯೆ ಆರಂಭವಾಗಿದ್ದು ಜೊತೆಗೆ ಮುಂಬೈನ ಕನ್ನಡಿಗರು ಹೊರತಂದ ಕಾಳಿದಾಸನ ‘ಶಾಕುಂತಲಾ ನಾಟಕ’, ಕನ್ನಡದ ಮೊದಲ ನಾಟಕ ‘ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ’ ಪ್ರಕಟವಾದುದು ದೂರದ ಮುಂಬೈನಲ್ಲಿ. ಖ್ಯಾತ ಕಾದಂಬರಿಕಾರ ಚದುರಂಗ, ಅನುಪಮಾ ನಿರಂಜನ, ಡಾ. ಬಿ.ಎ. ಸನದಿಯವರ ಮೊದಲ ಕಥೆಗಳು ಬೆಳಕು ಕಂಡದ್ದು ರಂಗಸ್ವಾಮಿಯ ‘ಆದರ್ಶ’ ಪತ್ರಿಕೆಯಲ್ಲಿ.

ನವ್ಯ ಪಂಥ ಬಾಗಿಲು ತೆರೆದುಕೊಂಡಿದ್ದೇ ಮುಂಬಯಿಯಲ್ಲಿ. ವಿ.ಕೃ. ಗೋಕಾಕ್ ಅದರ ರೂವಾರಿ, ಪ್ರಸಾರ ಭಾರತೀಯ ಅಧ್ಯಕ್ಷರಾದ ಮೊದಲ ಕನ್ನಡಿಗ ಎಂ.ವಿ. ಕಾಮತ್ ಅವರೂ ಮುಂಬಯಿ ಕನ್ನಡಿಗರೇ.

೨೦೧೦ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಇವರು ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ ಮಹಾಮೇಳದಲ್ಲಿ ಮಂಡಿಸಿದ ಗೊತ್ತುವಳಿಗಳು ನಿಜಕ್ಕೂ ಪ್ರಶಂಸನೀಯ. ಕೆಲವನ್ನು ಇಲ್ಲಿ ಪ್ರಸ್ತಾವಿಸಿದ್ದೇನೆ.

೧. ಹೊರನಾಡಿನ ಶಿಕ್ಷಣ ಸಂಸ್ಥೆ, ವಿ.ವಿ. ಗಳಲ್ಲಿ ಕನ್ನಡ ಅಧ್ಯಯನಕ್ಕೆ ಅನುಕೂಲ ಮಾಡಿಕೊಡಬೇಕು.
೨. ಹೊರನಾಡಿನಲ್ಲಿರುವ ಕನ್ನಡ ಸಾಹಿತಿಗಳ ಕೃತಿ ಪ್ರಕಟಿಸಲು ನೆರವು.
೩. ಎಲ್ಲಾ ರಾಜ್ಯಗಳಲ್ಲಿ ಕನ್ನಡ ಭವನ, ಗ್ರಂಥಾಲಯ.
೪. ಕನ್ನಡಿಗರ ಪ್ರತಿಭಾ ಪ್ರದರ್ಶನ ಇತ್ಯಾದಿ.

ನಿಜಕ್ಕೂ ಈ ತೆರನಾದ ದಿಟ್ಟ ನಿಲುವುಗಳನ್ನು ಸರ್ಕಾರ ಕೈಗೆತ್ತಿಕೊಂಡರೆ ವಲಸೆ ಕನ್ನಡಿಗರಿಂದ ಇನ್ನಷ್ಟು ಸಾಹಿತ್ಯಕ, ಸಾಂಸ್ಕೃತಿಕ ಕೊಡುಗೆಯನ್ನು ನಿರೀಕ್ಷಿಸಬಹುದು.

ಮದ್ರಾಸು ವಿ.ವಿ.ಯ ಕನ್ನಡ ವಿಭಾಗ ಆರಂಭವಾದುದು ೧೯೨೭ರಲ್ಲಿ. ಶಬ್ದಮಣಿ ದರ್ಪಣ, ರಸರತ್ನಾಕರ ಅಭಿದಾನ ರತ್ನಮಾಲಾ, ಕರ್ನಾಟಕ ಟೀಕೆ. ನೇಮಿನಾಥ ಪುರಾಣಂ, ಪುಷ್ಪದಂತ ಪುರಾಣಂ, ಕರ್ನಾಟಕ ಕವಿರಾಜಮಾರ್ಗಂ ಇತ್ಯಾದಿ ನಮ್ಮಂತಹ ಎಷ್ಟೋ ಜನ ಅಧ್ಯಯನಕ್ಕೆ ಹೊರನಾಡಿಗೆ ಹೋಗಿದ್ದಾರೆ. ಬಹಳಷ್ಟು ಜನ ಅದನ್ನು ಅನುಮಾನದಿಂದಲೇ ನೋಡುತ್ತಾರೆ. ನಿಜ ಇಲ್ಲಿ ಅವಕಾಶ ಸಿಗದೆ, ಸಿಕ್ಕು ಬೇರೆ ಕಾರಣದಿಂದ ಅಲ್ಲಿ ಓದಿದವರೂ ಇದ್ದಾರೆ. ಹೀಗೆ ಓದುವಾಗ ಎರಡು ಭಾಷೆಯ ತುಲನೆ, ಎರಡು ಸಂಸ್ಕೃತಿಯ ಅಧ್ಯಯನ ಮಾಡುವುದು ಸಾಹಿತ್ಯಕ್ಕೆ, ಸಂಸ್ಕೃತಿಗೆ ಕೊಡುವ ಕಾಣಿಕೆಯೆ ಆಗಿದೆ ಎಂಬುದು ನನ್ನ ನಂಬಿಕೆ.

ಉದಾ: ನಾವು ‘ಪಂಪ ರಾಮಾಯಣ’ ಓದುವಾಗ ಪ್ರತಿಯಾಗಿ ತಮಿಳಿನ ‘ಕಂಬರಾಮಾಯಣ’ ಓದಿದ್ದೇವೆ. ‘ತುಳಸಿ ರಾಮಾಯಣ’ವನ್ನು ನಮ್ಮ ಗುರುಗಳು ಪರಿಚಯಿಸಿದ್ದಾರೆ. ವಲಸೆ ಒಂದರ್ಥದಲ್ಲಿ ವರವೂ ಹೌದು. ಭಾಷೆಯ ಮೇಲಿನ ಪ್ರೀತಿ ಕೆಲವೊಮ್ಮೆ ವಲಸಿಗರಲ್ಲಿ ಹೆಚ್ಚಾಗಿರುತ್ತದೆ.

ಭಾಷೆ ಪರವಾದ ಚಳುವಳಿಗಳು, ಚಟುವಟಿಕೆಗಳು ನಡೆಯುವುದು ಆಯಾ ಭಾಷೆಯ ವಾರಸುದಾರರಿಗೆ ಒಂದು ಸವಾಲೂ ಹೌದು.

ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಕನ್ನಡಕ್ಕೆ ಅವಕಾಶ/ವಿದ್ಯಾರ್ಥಿಗಳನ್ನು ಕನ್ನಡ ಚಟುವಟಿಕೆ/ಬರವಣಿಗೆ-ಪ್ರಕಟಣೆ/ಸಾಹಿತ್ಯಕ ಸ್ಪರ್ಧೆ/ಕನ್ನಡದ ಬಗ್ಗೆ ಜಾಗೃತಿ/ಕನ್ನಡ ಪ್ರಚಾರಕ್ಕೆ ಟೊಂಕ ಕಟ್ಟಿ ನಿಲ್ಲುವುದು/ಕನ್ನಡವನ್ನು ಪ್ರತಿನಿಧಿಸಿ ಇತರರಿಗೆ ಪರಿಚಯಿಸುವುದು/ಸಂಶೋಧನೆಯಲ್ಲಿ ತೊಡಗಿಕೊಳ್ಳುವುದು.ಈ ಮೇಲಿನ ಕಾರ್ಯಗಳ ಮೂಲಕ ಕನ್ನಡದ ಸೇವೆ ಮಾಡುತ್ತಿರುವುದು ಹೊರನಾಡಿನ ಕನ್ನಡಿಗರಲ್ಲಿ ಕಂಡಿದ್ದೇವೆ. ಕಾಣುತ್ತಿದ್ದೇವೆ. ಉದಾ: ಮಧುರೈನ ಕಾಮರಾಜ ವಿ.ವಿ.ಯ ಕನ್ನಡ ವಿಭಾಗದವರು ಹೊರತಂದ ‘ಚಿಗುರು’ ಉಸ್ಮಾನಿಯ ಕನ್ನಡ ವಿಭಾಗದಿಂದ ಹೊರಬಂದ ‘ತಾವರೆ’ ಎಂಬ ಪತ್ರಿಕೆಗಳು ಸಾಕ್ಷಿ. ಕನ್ನಡ ವಿಷ್ಣುಪುರಾಣ, ಶಾಂತಿಪುರಾಣ, ಪೆರಿಯಾ ಪುರಾಣಂ ಅನುವಾದದ ಎರಡು ಸಂಪುಟಗಳು ಇವೇ ವಿ.ವಿ.ಯ ಕನ್ನಡ ವಿಭಾಗದ ಪ್ರಕಟಣೆಯಲ್ಲಿ ಗಮನಾರ್ಹ ಕೃತಿಗಳಾಗಿವೆ.

ಈ ತೆರನಾದ ಸಾಹಿತ್ಯಕ ಬೆಳವಣಿಗೆಯೊಂದು ಅಲ್ಲಿಯ ವಲಸಿಗರಿಗೆ ನಮ್ಮ ನೆಲದಲ್ಲಿ ನಾವು ಇಲ್ಲ ಎಂಬ ಅನಾಥ ಪ್ರಜ್ಞೆಯನ್ನು ಹೋಗಲಾಡಿಸುವಲ್ಲಿ ಸಹಕಾರಿಯಾಗಿವೆ.

ತಮಿಳುನಾಡಿನ ಮಧುರೈನಲ್ಲೂ ಇತ್ತೀಚಿಗೆ ಡಾ. ಹರಿಕೃಷ್ಣ ಧರಣ್ಯರು ನಿವೃತ್ತಿಯಾಗುವವರೆಗೂ ಕನ್ನಡದ ಕೈಂಕರ್ಯ ಸುಸೂತ್ರವಾಗಿ ನಡೆಸಿಕೊಂಡು ಬಂದಿರುತ್ತಾರೆ. ಈಗ ನನ್ನ ಗೆಳೆಯ ಡಾ. ಮಹೇಶ್ ಹೆಗಲಿಗೆ ಜವಾಬ್ದಾರಿ ಬಿದ್ದಿದೆ. ಮಧುರೈನ ಕರ್ನಾಟಕ ಸಂಘ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬೆಳಗಿಸುವ ನಿಟ್ಟಿನಲ್ಲಿ ಮಂಚೂಣಿಯಲ್ಲಿದೆ. ಚೆನ್ನೈನಲ್ಲಿ ಟಿ. ನಗರದ ಕರ್ನಾಟಕ ಸಂಘ ಅಸೋಸಿಯೇಷನ್ ಆಫ್ ಮೈಸೂರು ಇಂಜಿನಿಯರ್ಸ್ ಅಯನಾವರಂ ಕನ್ನಡ ಸಂಘ, ಬೆಸೆಂಟ್ ನಗರದ ಕನ್ನಡಿಗರ ಸಂಘ, ಐಐಟಿಯ ಕನ್ನಡ ಸಾಂಸ್ಕೃತಿಕ ಸಂಘ, ಅವಡಿ ಕನ್ನಡ ಸಂಘ, ಮನವಾಳ ನಗರದ ಕನ್ನಡ ಸಂಘ, ಬಂಬರ ಸಂಘ, ಚೆನ್ನೈ, ಹವ್ಯಕ ಸಭಾ ಮುಂತಾದ ಸಂಘಗಳು ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿಗಾಗಿ ದುಡಿಯುತ್ತಿವೆ. ಶಾಲಾ ಕಾಲೇಜುಗಳಿವೆ. ರಾಜ್ಯೋತ್ಸವವನ್ನು ಒಂದು ಹಬ್ಬವಾಗಿ ಆಚರಿಸುತ್ತಿದ್ದಾರೆ. ಶ್ರೀ ಕೃಷ್ಣವೇಷ, ದಾಸರ ಪದಗಳ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದಾರೆ. ಹೀಗೆ ಹಲವು ರಾಜ್ಯಕ್ಕೆ ವಲಸೆ ಹೋದ ಕನ್ನಡಿಗರು ತಮ್ಮ ಹೊಟ್ಟೆ ಪಾಡಿಗೆ ಅಲ್ಲಿ ನೆಲೆಸಿದರೂ ವೈಯಕ್ತಿಕ ನೆಲೆ ಕಂಡುಕೊಂಡು ಕೌಟುಂಬಿಕ ಜೀವನ ಕಟ್ಟಿಕೊಂಡ ಸಾಮಾಜಿಕ ಜೀವನಕ್ಕೆ ಮುಡಿಪಾಗಿಸಿಕೊಂಡವರು.

ಕರ್ನಾಟಕ ಏಕೀಕರಣಗೊಂಡು ಹತ್ತಿರ ಹತ್ತಿರ ೬ ದಶಕಗಳೇ ಅವರೂ ಕರ್ನಾಟಕದಲ್ಲಿಯೇ ಕನ್ನಡಕ್ಕೆ ಸಿಗಬೇಕಾದ ಸ್ಥಾನಮಾನ ಸಿಗಲಿಲ್ಲ! ಆದರೂ ವಲಸೆ ಹೋದವರು ಸಂಸ್ಕೃತಿಯನ್ನು ಗಟ್ಟಿಗೊಳಿಸಲು ಶ್ರಮಿಸುತ್ತಿರುವುದು ಶ್ಲಾಘನೀಯ. ನಾವಿಂದು ವಿಶಾಲವಾದ ನೆಲೆಯಲ್ಲಿ ಬೃಹತ್ ಕರ್ನಾಟಕ- ಸಾಂಸ್ಕೃತಿಕ ಕರ್ನಾಟಕವನ್ನು ಸಿದ್ದಗೊಳಿಸಬೇಕು. ಕನ್ನಡವನ್ನು ಕಲಿಸುವುದು ಬೇಡ, ಬೆಳೆಸುವುದು ಬೇಡ ಬಳಸಿದರೆ ಸಾಕು. ಆ ಮೂಲಕ ನುಡಿನಮನ ಸಲ್ಲಿಸುವ ತುರ್ತಿದೆ.

ವಲಸೆ ಎಂಬುವುದು ಆರ್ಥಿಕ ಸಂಕಷ್ಟಕ್ಕಾಗಿ ಗುಳೆ ಹೊರಡುವ ಎಂಬ ಸೀಮಿತ ಅರ್ಥದಲ್ಲಿ ಬಳಸುವುದು ಬೇಡ. ಒಂದರ್ಥದಲ್ಲಿ ಇಲ್ಲಿಂದ ಬೇರೆ ಬೇರೆ ಕಾರಣಕ್ಕೆ ವಿಶ್ವದ ಯಾವುದೇ ಮೂಲೆಯಲ್ಲಿ ನೆಲೆಸಿದರೂ ವಲಸೆ ಕನ್ನಡಿಗರೇ ಆಗಿಬಿಡುತ್ತಾರೆ ಎಂಬ ಸಂಕೀರ್ಣವಾದ ಅರ್ಥದಲ್ಲಿ ನೋಡಬೇಕಾದ ಜರೂರಿದೆ ಮತ್ತು ಅವರ ಕೊಡುಗೆಗೆ ಮೌಲ್ಯ ನೀಡುವ ಅವಶ್ಯಕತೆಯೂ ಇದೆ.

You cannot copy content of this page

Exit mobile version