2016 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳ ತನಿಖೆಗೆ ಎಸಿಬಿ ರಚನೆ ಮಾಡಿ ಆದೇಶ ಹೊರಡಿಸಿತ್ತು. 2016 ರಲ್ಲೇ ಸರ್ಕಾರದ ಆದೇಶಗಳನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಇದರ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಇಂದು ಮಹತ್ವದ ಆದೇಶವನ್ನು ಹೊರಹಾಕಿದೆ. ಈಗ ಅಂದಿನ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದ ಹೈಕೋರ್ಟ್ ಎಸಿಬಿ ರಚನೆ ರದ್ದು ಮಾಡುವಂಥೆ ಸೂಚಿಸಿ ಮತ್ತೆ ಲೋಕಾಯುಕ್ತ ಪೊಲೀಸರ ಬಲವರ್ಧನೆಗೆ ಆದೇಶಿಸಿದೆ.
ಆ ಹಿನ್ನೆಲೆಯಲ್ಲಿ ಇಲ್ಲಿಯವರೆಗೆ ಎಸಿಬಿ ಈ ವರೆಗೂ ನಡೆಸಿರುವ ತನಿಖೆ, ವಿಚಾರಣೆ ಎಲ್ಲವನ್ನೂ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಬೇಕು ಮತ್ತು ಮುಂದಿನ ಯಾವುದೇ ಭ್ರಷ್ಟಾಚಾರ ಆರೋಪ ಪ್ರಕರಣವನ್ನು ಲೋಕಾಯುಕ್ತ ಇಲಾಖೆಯೇ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಆದೇಶ ನೀಡಿದೆ. ಇನ್ನು ಮುಂದೆ 2016 ಕ್ಕಿಂತ ಹಿಂದೆ ಲೋಕಾಯುಕ್ತ ಯಾವ ರೀತಿಯಲ್ಲಿ ತನ್ನ ಕಾರ್ಯ ನಿರ್ವಹಿಸಿತ್ತೋ ಅದೇ ಮಾದರಿಯಲ್ಲಿ ಮುಂದುವರೆಯಲಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ 15 ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳನ್ನು ಪರಿಶೀಲಿಸಿದ ಹೈಕೋರ್ಟ್ ನ್ಯಾಯಮೂರ್ತಿಗಳಾದ ಬಿ.ವೀರಪ್ಪ ಮತ್ತು ಕೆ.ಎಸ್ ಹೇಮಲೇಖಾ ಅವರ ನೇತೃತ್ವದ ವಿಭಾಗೀಯ ಪೀಠ ಎಸಿಬಿ ರಚನೆಯ ಆದೇಶವನ್ನು ರದ್ದುಗೊಳಿಸಿ ಈ ಆದೇಶವನ್ನು ಪ್ರಕಟಿಸಿದೆ. ಅದರಂತೆ ಎಸಿಬಿಗೆ ಪೊಲೀಸ್ ಠಾಣೆ ಸ್ಥಾನಮಾನವನ್ನು ರದ್ದು ಮಾಡಿದೆ. ಕನಿಷ್ಟ ಮೂರು ವರ್ಷಗಳ ಕಾಲ ಲೋಕಾಯುಕ್ತ ಅಧಿಕಾರಿಗಳು ನೇಮಕವಾಗಬೇಕು. ಲೋಕಾಯುಕ್ತ ಠಾಣೆಗಳ ಮರುಸ್ಥಾಪನೆ ಆಗಬೇಕು ಮತ್ತು ಒಟ್ಟಾರೆ ಲೋಕಾಯುಕ್ತ ಕಾನೂನಿಗೆ ತಿದ್ದುಪಡಿ ಮಾಡಬೇಕು ಎಂದು ಆದೇಶಿಸಿದೆ. ಲೋಕಾಯುಕ್ತ ಮತ್ತು ಉಪಲೋಕಾಯುಕ್ತರ ಆಯ್ಕೆ ನೇಮಕದಲ್ಲಿ ಅರ್ಹತೆಯನ್ನು ಪರಿಗಣಿಸಬೇಕಿದೆ. ಜೊತೆಗೆ ಜಾತಿ ಆಧರಿಸಿ ಲೋಕಾಯುಕ್ತರ ನೇಮಕ ಮಾಡಬಾರದು ಎಂಬುದಾಗಿ ಆದೇಶಿಸಿದೆ.
ಅದರಂತೆ ಎಲ್ಲಾ ಕಡೆ ಲೋಕಾಯುಕ್ತ ಠಾಣೆ ಸ್ಥಾಪಿಸುವ ಕೆಲಸಕ್ಕೆ ಇನ್ನು ಮುಂದೆ ಚಾಲನೆ ಸಿಗಲಿದೆ. ವಿಶೇಷ ಲೋಕಾಯುಕ್ತ ಪೊಲೀಸರು ಮತ್ತು ಹೆಚ್ಚುವರಿ ಲೋಕಾಯುಕ್ತ ಅಧಿಕಾರಿಗಳ ನಿಯೋಜನೆ ಆಗಲಿದೆ.