Home ಅಂಕಣ ಮ್ಯಾಗ್ಡೆಬರ್ಗ್ ಕ್ರಿಸ್ಮಸ್ ಮಾರ್ಕೆಟ್ ದಾಳಿ: ಮಾಧ್ಯಮಗಳಿಗೆ ಪಾಠ

ಮ್ಯಾಗ್ಡೆಬರ್ಗ್ ಕ್ರಿಸ್ಮಸ್ ಮಾರ್ಕೆಟ್ ದಾಳಿ: ಮಾಧ್ಯಮಗಳಿಗೆ ಪಾಠ

0
ಮಾಧ್ಯಮ ಸಾಕ್ಷರತೆ ಮತ್ತು ಮಾಧ್ಯಮಗಳನ್ನು ವಿಮರ್ಶೆ ಮಾಡುವ, ಪ್ರಶ್ನೆ ಮಾಡುವ ಅಗತ್ಯತೆ ಇರುವ ಸಂದರ್ಭದಲ್ಲಿ ನಾವಿದ್ದೇವೆ. ಈ ಎಲ್ಲಾ ಸಿದ್ದಾಂತಗಳೂ ಹೇಳುವುದು ಒಂದೇ, ಮಾಧ್ಯಮಗಳು ತಾವು ಏನನ್ನು ಜನರಿಗೆ ಕೊಡಬೇಕು ಎನ್ನುವುದನ್ನು ಜನರ ಅಭಿರುಚಿಯ ಅಧಾರದಲ್ಲಿ ನಿರ್ಧರಿಸುವುದಿಲ್ಲ, ಬದಲಾಗಿ ಜನರು ತಮಗೆ ಏನು ಬೇಕು ಎನ್ನುವುದನ್ನು ಮೊದಲು ಅವರ ತಲೆಗೆ ತುರುಕಿ ಆಮೇಲೆ ಅದಕ್ಕೆ ಪೂರಕವಾದ ಸುದ್ದಿಗಳನ್ನು ನೀಡುತ್ತವೆ

ಡಿಸೆಂಬರ್ 20, 2024 ರಂದು, ಜರ್ಮನಿಯ ಮ್ಯಾಗ್ಡೆಬರ್ಗ್‌ನಲ್ಲಿ ಕ್ರಿಸ್ಮಸ್ ಮಾರ್ಕೆಟ್‌ನಲ್ಲಿ ನಡೆದ ದುರಂತ ದಾಳಿಯಲ್ಲಿ ಐವರು ಸಾವನ್ನಪ್ಪಿದರು ಮತ್ತು 200 ಕ್ಕೂ ಹೆಚ್ಚು ಜನರು ಗಾಯಗೊಂಡರು. ಪಾಶ್ಚಿಮಾತ್ಯ ಮಾಧ್ಯಮಗಳು ಇಂತಹ ಘಟನೆಗಳನ್ನು, ಅದರಲ್ಲೂ ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದಂತೆ ಹೇಗೆ ರೂಪಿಸಬೇಕು ಎಂಬುದನ್ನು ತೋರಿಸಿಕೊಟ್ಟಿವೆ.

ದಾಳಿಕೋರ ಸೌದಿ ಅರೇಬಿಯಾ ಮೂಲದ ಮನೋವೈದ್ಯ ತಲೇಬ್ ಅಲ್-ಅಬ್ದುಲ್ಮೊಹ್ಸೆನ್, ಒಬ್ಬ ನಾಸ್ತಿಕ ಮತ್ತು ಇಸ್ಲಾಮಿಕ್ ವಿರೋಧಿ ನಿಲುವಿಗೆ ಹೆಸರಾಗಿದ್ದವನು. ಈ ಘಟನೆಯನ್ನು ಸಾಂಪ್ರದಾಯಿಕ ಮಾಧ್ಯಮಗಳು ಹೇಗೆ ವರದಿ ಮಾಡಿದವು ಎಂಬುದು ಮುಖ್ಯವಾಗುತ್ತದೆ.

ದಾಳಿಕೋರನ ಧರ್ಮ ಮತ್ತು ಸಿದ್ಧಾಂತ

ಸಾಮಾನ್ಯವಾಗಿ ಭಾರತೀಯ ಮಾಧ್ಯಮಗಳು ದಾಳಿಕೋರನ ಧರ್ಮ ಯಾವುದು ಎಂದು ನೋಡುತ್ತವೆ. ಅವನ ಸಿದ್ದಾಂತಗಳ ಮೂಲಕ ತಮ್ಮ ನಿರೂಪಣೆಗಳನ್ನು ಕಟ್ಟುತ್ತವೆ.

ದಾಳಿ ಮಾಡಿದವನು ಮುಸಲ್ಮಾನನಾಗಿದ್ದರೆ, “ರ್ಯಾಡಿಕಲ್‌ ಇಸ್ಲಾಂ, ಜಿಹಾದ್”‌ ನಂತಹ ಪದಗಳನ್ನು ಬಳಸಿ ಹೆಡ್‌ಲೈನ್‌ ಮಾಡುತ್ತವೆ. ಇಡೀ ಘಟನೆ ಇಸ್ಲಾಮಿಗೆ ಸಂಬಂಧ ಹೊಂದದೇ ಇದ್ದರೂ “ಇಸ್ಲಾಮಿಸ್ಟ್‌ ಭಯೋತ್ಪಾದನಾ ದಾಳಿ”ಯಾಗಿ ಬ್ರಾಂಡ್‌ ಮಾಡುತ್ತವೆ. ಲಷ್ಕರ್‌ ಎ ತೊಯೇಬಾ, ತಾಲಿಬಾನ್‌ನಂತಹ ಸಂಘಟನೆಗಳ ದಾಳಿಗಳಿಗೆ ವೈಯಕ್ತಿಕ ಅಪರಾಧಗಳನ್ನು ಸಮೀಕರಿಸಿ ನೋಡುತ್ತವೆ.

ಆದರೆ ಮ್ಯಾಗ್ಡೆಬರ್ಗ್‌ನ ಈ ದಾಳಿ ಇವೆಲ್ಲಕ್ಕೂ ಭಿನ್ನ ನಿರೂಪಣೆಯಿಂದ ಪಾಶ್ಚಿಮಾತ್ಯ ದೇಶಗಳಲ್ಲಿ ವರದಿಯಾಗಿದೆ. ಧಾರ್ಮಿಕ ಗುರುತನ್ನು ಮುಂದಿಟ್ಟುಕೊಂಡು ಇಡೀ ಸಮಾಜವನ್ನು ಹೀಗಳೆಯುವ ಭಾರತೀಯ ಮಾಧ್ಯಮಗಳಿಗೆ ಭಿನ್ನವಾಗಿ ಇದರಲ್ಲಿ ಆಕ್ರಮಕಾರನ ವೈಯಕ್ತಿಕ ಮಾನಸಿಕ ಸಮಸ್ಯೆಗಳು, ಆತನ ನಾಸ್ತಿಕ ನಂಬಿಕೆ ಚರ್ಚೆಯ ಕೇಂದ್ರಬಿಂದುವಾಗಿದೆ.

ಪ್ರಾಬಲ್ಯ ಮತ್ತು ಮಾಧ್ಯಮ ನಿರೂಪಣೆಗಳು

ಆಂಟೋನಿಯೊ ಗ್ರಾಂಸ್ಕಿಯ ಅಧೀನತೆಯ ಸಿದ್ಧಾಂತ (theory of hegemony ) ಮಾಧ್ಯಮಗಳು ನಿರ್ದಿಷ್ಟ ಸಂದರ್ಭಗಳಲ್ಲಿ ನಡೆಯುವ ಘಟನೆಗಳನ್ನು ರೂಪಿಸುವ ರೀತಿಯ ಮೂಲಕ ಪ್ರಬಲ ಸಿದ್ಧಾಂತಗಳನ್ನು ಬಲಪಡಿಸುತ್ತದೆ ಎಂದು ಪ್ರತಿಪಾದಿಸುತ್ತದೆ. ಆದರೆ, ಮ್ಯಾಗ್ಡೆಬರ್ಗ್ ದಾಳಿಯು ಮಾದ್ಯಮಗಳು ಮುಸ್ಲಿಂ ಅಪರಾಧಿಗಳಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಕಟ್ಟಿರುವ ನಿರೂಪಣೆಗಳಿಂದ ಭಿನ್ನವಾಗಿ ನೋಡಿರುವುದನ್ನು ತೋರಿಸುತ್ತದೆ.

ಹ್ಯಾಂಡೆಲ್ಸ್‌ಬ್ಲಾಟ್ (Handelsblatt) ಎಂಬ ಮಾಧ್ಯಮ ದಾಳಿಕೋರ ಆಲ್ಟರ್ನೇಟಿವ್‌ ಫಾರ್‌ ಜರ್ಮನಿ  (AfD) ಪಕ್ಷಕ್ಕೆ ತೋರಿರುವ ಸಹಾನುಭೂತಿ ಮತ್ತು ಆತನ ಇಸ್ಲಾಮಿಕ್ ವಿರೋಧಿ ಸೈದ್ಧಾಂತಿಕತೆಯ ದೃಷ್ಟಿಕೋನದಿಂದ ಘಟನೆಯನ್ನು ನೋಡಿದೆ.

ಡೈ ವೆಲ್ಟ್ (Die Welt) ದ್ವೇಷ ಭಾಷಣದ ಕಾನೂನುಗಳ ಬಗ್ಗೆ ಅಪರಾಧಿ ತೋರಿರುವ ಟೀಕೆಗಳು ಮತ್ತು ಅವನ ಸಾಮಾಜಿಕ ಮಾಧ್ಯಮ ಚಟುವಟಿಕೆಯ ಮೇಲೆ ತನ್ನ ವರದಿಯನ್ನು ಕೇಂದ್ರೀಕರಿಸಿ, ಈ ದಾಳಿಯ ಹಿಂದಿನ ಪ್ರೇರಣೆಗಳನ್ನು ಸೈದ್ಧಾಂತಿಕ ಚೌಕಟ್ಟಿನೊಳಗೆ ಇಟ್ಟು ವರದಿ ಮಾಡಿದೆ.

ಸಾಂಸ್ಕೃತಿಕ ಸಂಕೇತಗಳು ಮತ್ತು ಸುದ್ದಿ ಮೌಲ್ಯಗಳು

ಸ್ಟುವರ್ಟ್ ಹಾಲ್ ಅವರ ಸಾಂಸ್ಕೃತಿಕ ಸಂಕೇತಗಳ ಸಿದ್ಧಾಂತವು (theory of cultural codes) ಮಾಧ್ಯಮವು ವರದಿಗಳನ್ನು ಮಾಡುವಾಗ ಪ್ರೇಕ್ಷಕರ ಮೌಲ್ಯಗಳು ಮತ್ತು ಗ್ರಹಿಕೆಗಳನ್ನು ಪ್ರತಿನಿಧಿಸುವ ರೀತಿಯಲ್ಲಿ ಮಾಡುತ್ತವೆ ಎಂದು ಹೇಳುತ್ತದೆ. ದಾಳಿ ಮಾಡಿದವನು ಮುಸ್ಲಿಂ ಆಗಿದ್ದರೆ, ಆತನ ದಾಳಿ ಆತನ ಧಾರ್ಮಿಕ ಕಾರಣಗಳಿಂದ ಅಲ್ಲದೇ ಇದ್ದರೂ ಅದನ್ನು ಧರ್ಮದ ಜೊತೆಗೆ ತಳುಕುಹಾಕಿ ವರದಿ ಮಾಡುವುದು ಇದೇ ಕಾರಣಕ್ಕೆ. ಮೊದಲು ಮಾಧ್ಯಮಗಳು ವೀಕ್ಷಕನ, ಓದುಗನ ಆಲೋಚನೆಯನ್ನು ಬದಲಿಸುವಂತಹ ನಿರೂಪಣೆಗಳನ್ನು ಕಟ್ಟುತ್ತವೆ, ಆ ಮೇಲೆ ವೀಕ್ಷಕ/ಓದುಗ ಮಾಧ್ಯಮಗಳು ಈಗಾಗಲೇ ನೀಡಿರುವ ಕನ್ನಡಕ ಹಾಕಿಕೊಂಡು ಎಲ್ಲಾ ಘಟನೆಗಳನ್ನು ನೋಡುತ್ತಾನೆ. ಆತನ ಗ್ರಹಿಕೆಯನ್ನು ತಾನೇ ನಿರ್ಮಿಸಿ, ಅದನ್ನು ಪೋಷಿಸಲು ಬೇಕಾದ ರೀತಿಯಲ್ಲಿ ವರದಿ ಮಾಡುತ್ತವೆ.

ಒಂದು ವೇಳೆ ಈ ಘಟನೆ ಭಾರತದಲ್ಲಿ ನಡೆದಿದ್ದರೆ, ನಾಸ್ತಿಕ ಮತ್ತು ಕಟ್ಟರ್‌ ಇಸ್ಲಾಂ ವಿರೋಧಿ ದಾಳಿಕೋರನೂ ʼಜಿಹಾದಿʼಯಾಗುತ್ತಾನೆ. ಅದೇ ರೀತಿಯ ದಾಳಿಯನ್ನು ಹಿಂದೂ ಮಾಡಿದ್ದರೆ, ಅದು ಹಿಂದೂ ಧರ್ಮದ ಜೊತೆಗೆ ಚರ್ಚೆಯಾಗುವುದಿಲ್ಲ.

ಭಾರತದಲ್ಲಿ ನಡೆದಿರುವ ಕೆಲವು ಘಟನೆಗಳನ್ನು ನಾವು ಈ ಹಿನ್ನಲೆಯಿಂದ ನೋಡಬೇಕು. ಮುಸಲ್ಮಾನ ವ್ಯಕ್ತಿ ತನ್ನ ಪ್ರೇಯಸಿಯನ್ನು ಕೊಂದು ಆಕೆಯ ದೇಹವನ್ನು ಕತ್ತರಿಸಿ ಫ್ರೀಜರ್‌ನಲ್ಲಿ ಇಟ್ಟಿದ್ದು ಇಸ್ಲಾಂ ಬಗೆಗಿನ ಚರ್ಚೆಗೆ ಕಾರಣವಾದರೆ, ಅದೇ ರೀತಿಯ ಕೃತ್ಯ ನಡೆಸಿದ ಹಿಂದೂವಿನ ಈ ಅಪರಾಧ ಧರ್ಮದ ಜೊತೆಗೆ ಚರ್ಚೆಯಾಗುವುದಿಲ್ಲ. ಈ ಪೂರ್ವಾಗ್ರಹಗಳನ್ನು ಮಾಧ್ಯಮಗಳು ನಮಗೆ ನೀಡಿವೆ.

ಫ್ರಾಂಕ್‌ಫರ್ಟರ್ ಆಲ್‌ಗೆಮೈನ್ ಝೈತುಂಗ್ (Frankfurter Allgemeine Zeitung) ಈ ದಾಳಿಯನ್ನು ನಡೆಸಿದವನು ತನ್ನನ್ನು ತಾನು ‘ಇಸ್ಲಾಂನ ಇತಿಹಾಸದಲ್ಲಿಯೇ ಅತ್ಯಂತ ಆಕ್ರಮಣಕಾರಿ ವಿಮರ್ಶಕ’ ಎಂದು ಕರೆಸಿಕೊಂಡಿರುವುದು, ಆತನ ವೈಯಕ್ತಿಕ ಗುಣಕ್ಕೆ ಒತ್ತು ನೀಡುವ ಮೂಲಕ ತಟಸ್ಥ ವರದಿಯನ್ನು ಮಾಡಿದೆ. ಬಿಬಿಸಿ ನ್ಯೂಸ್‌ ಕೂಡ ಇಸ್ಲಾಮೋಫೋಬಿಯಾದ ಬಗ್ಗೆ ಮರುಚರ್ಚೆಯನ್ನು ಮಾಡಿದರೂ, ಈ ಘಟನೆ ಸಾಮೂಹಿಕವಾಗಿ ನಡೆಯುವ ಇಸ್ಮಾಂನ ಬಗೆಗಿನ ಅಪಾದನೆಗಳಿಗೆ ಭಿನ್ನವಾಗಿ ಈ ಘಟನೆಯನ್ನು ನೋಡುವ ಬಗೆಯನ್ನು ತಿಳಿಸಿತು.

ಮ್ಯಾಗ್ಡೆಬರ್ಗ್‌ ದಾಳಿಯನ್ನು ಪಾಶ್ಚಿಮಾತ್ಯ ಮಾಧ್ಯಮಗಳು ವರದಿ ಮಾಡಿದ ಬಗೆಯನ್ನು ಕೆಲವು ಮಾಧ್ಯಮ ಸಿದ್ಧಾಂತಗಳ ಮೂಲಕ ನೋಡಬಹುದು.

ಚೌಕಟ್ಟಿನ ಸಿದ್ಧಾಂತFraming theory

ಮಾಧ್ಯಮಗಳು ವರದಿ ಮಾಡುವಾಗ ಒಂದು ಸಾರ್ವಜನಿಕ ಗ್ರಹಿಕೆಯನ್ನು ರೂಪಿಸುತ್ತವೆ. ಮಾಧ್ಯಮಗಳು ವಿಲನ್‌ ಎಂಬಂತೆ ಚಿತ್ರಿಸಿದ ವ್ಯಕ್ತಿ ಸಾರ್ವಜನಿಕರ ಗ್ರಹಿಕೆಯಲ್ಲಿಯೂ ವಿಲನ್‌ ಆಗುತ್ತಾನೆ. ಘಟನೆಯ ಹಿಂದೆ-ಮುಂದೆ ನೋಡಿ ಮಾಧ್ಯಮಗಳ ಸುದ್ದಿ ನಿರೂಪಣೆಯನ್ನು ಜನರು ಒಡೆದು ನೋಡುವುದಿಲ್ಲ ಎಂಬ ಧೈರ್ಯ ಕೂಡ ಮಾಧ್ಯಮಗಳಿಗೆ ಇರುತ್ತದೆ. ಮಾಧ್ಯಮಗಳ ದೃಷ್ಟಿಯಲ್ಲಿ ʼವೀಕ್ಷಕರು ಅವರು ಹೇಳಿದ್ದನ್ನು ಮಾತ್ರ ನಂಬುವ ಜೀವಿಗಳು.ʼ ಹೀಗಾಗಿ, ವೀಕ್ಷಕ ಏನನ್ನು ಯೋಚಿಸಬೇಕು ಎಂಬುದನ್ನು ಮಾಧ್ಯಮಗಳೇ ನಿಯಂತ್ರಿಸುತ್ತವೆ. ದಾಳಿಕೋರ ಮುಸ್ಲೀಂ ಆದರೆ ಆತನ ಅದು ಸಾಮೂಹಿಕ ಬೆದರಿಕೆ, ಮುಸ್ಲಿಮೇತರನಾದರೆ ಆತನ ಅಪರಾಧ ವೈಯಕ್ತಿಕ ಎಂಬಂತೆ ವರದಿ ಮಾಡುತ್ತವೆ.

ಇದರ ಪರಿಣಾಮವಾಗಿ ದಾಳಿ ನಡೆಸಿದವ, ಕಳ್ಳತನ ಮಾಡಿದವ, ಅತ್ಯಾಚಾರ ಮಾಡಿದವನು ಯಾವ ಧರ್ಮದವನು ಎಂದು ಮೊದಲು ನೋಡಿ ಈ ವರದಿಯನ್ನು ನೋಡುವ ಪರಿಪಾಠವನ್ನು ವೀಕ್ಷಕ ಬೆಳೆಸಿಕೊಳ್ಳುವಂತೆ ಮಾಧ್ಯಮಗಳು ಮಾಡಿವೆ.

ಸುದ್ದಿ ಮೌಲ್ಯಗಳ ಸಿದ್ಧಾಂತNews values theory

ದಾಳಿಕೋರನ ಧರ್ಮ ಯಾವುದು ಎಂಬುದರಿಂದ ಸುದ್ದಿಗೆ ಹೆಚ್ಚು ಮೌಲ್ಯ ಸಿಗುತ್ತಿದೆ. ಇಲ್ಲಿ ಸಾಂಪ್ರದಾಯಿಕ, ತಟಸ್ಠ ಸುದ್ದಿ ನಿರೂಪಣೆಗಳಿಗೆ ಬೆಲೆ ಇಲ್ಲ. ಪ್ರಕರಣದಲ್ಲಿ ಅಪರಾಧಿಯಾಗಿರುವ ವ್ಯಕ್ತಿಯ ಧರ್ಮದ ಮೇಲೆ ಆ ಸುದ್ದಿ ಹೆಚ್ಚು ಸಮಯ ಓಡುತ್ತದೆ. ಜನರು ಮತ್ತೆ ಮತ್ತೆ ತಮ್ಮ ಒಳಗೆ ಮಾಧ್ಯಮಗಳು ತುಂಬಿರುವ ಆಕ್ರೋಶವನ್ನು ಹೊರಗೆ ಹಾಕಲು ಈ ಸುದ್ದಿಯನ್ನು ಟಿವಿ, ಯೂಟ್ಯೂಬ್‌ಗಳಲ್ಲಿ ಹುಡುಕಿ ನೋಡುತ್ತಾರೆ.

ಅಧಿಕಾರ ಮತ್ತು ಸಿದ್ಧಾಂತHegemony and ideology

ಮಾಧ್ಯಮಗಳು ಸುದ್ದಿಯ ಯಾವ ಅಂಶವನ್ನು ಹೆಚ್ಚು ಹೈಲೈಟ್‌ ಮಾಡಬೇಕು, ಯಾವುದನ್ನು ಮಾಡಬಾರದು ಎಂಬುದರ ಮೂಲಕ ತಾವು ಈಗಾಗಲೇ ಬಿತ್ತಿರುವ ಪ್ರಬಲ ಸಿದ್ದಾಂತವನ್ನು ಬಲಪಡಿಸುತ್ತವೆ. ಮ್ಯಾಗ್ಡೆಬರ್ಗ್‌ ದಾಳಿಯನ್ನು ಭಾರತೀಯ ಮಾಧ್ಯಮಗಳು ವರದಿ ಮಾಡಿದರೆ, ಆತ ಹುಟ್ಟಿದ ಧರ್ಮ ಇಸ್ಲಾಂಗೆ ಹೆಚ್ಚು ಒತ್ತು ನೀಡಿ ವರದಿ ಮಾಡುತ್ತವೆ, ಆತ ನಾಸ್ತಿಕ ಎಂಬುದನ್ನು ಕಡಿಮೆ ಚರ್ಚೆ ಮಾಡುತ್ತವೆ. ಏಕೆಂದರೆ, ಇಸ್ಲಾಮೋಫೋಬಿಯಾದಿಂದ ಸುದ್ದಿಗೆ ಮೌಲ್ಯ ಹೆಚ್ಚಾಗುತ್ತದೆ, ಸುದ್ದಿ ಚೆನ್ನಾಗಿ ಮಾರಾಟವಾಗುತ್ತದೆ ಮತ್ತು ಒಳ್ಳೆಯ ಆದಾಯ ಬರುತ್ತದೆ.

ಸಾಂಸ್ಕೃತಿಕ ಸಂಕೇತಗಳುCultural codes

ಮತ್ತೆ ಇಲ್ಲೂ ದಾಳಿಕೋರನ ಧರ್ಮದ ಮೂಲಕ ಘಟನೆಯನ್ನು ನೋಡಲಾಗುತ್ತದೆ. ಮುಸಲ್ಮಾನ ನಾಸ್ತಿಕ ಮಾಡಿದ ದಾಳಿಯೂ ʼಇಸ್ಲಾಂನಿಂದ ಸಾಮೂಹಿಕ ಬೆದರಿಕೆʼ ಎಂಬುದಾಗಿ ಚಿತ್ರಿಸಲಾಗುತ್ತದೆ, ಮುಸ್ಲಿಮೇತರ ಮಾಡಿದ ದಾಳಿ ವೈಯಕ್ತಿಕವಾಗುತ್ತದೆ. ಮಂಗಳೂರಿನ ಏರ್‌ಪೋರ್ಟ್‌ನಲ್ಲಿ ಬಾಂಬು ಇಟ್ಟಿದ್ದಾನೆ ಎಂದು ಆದಿತ್ಯ ರಾವ್‌ ಎಂಬಾತನನ್ನು ಬಂಧಿಸುವಾಗ, ಆತನನ್ನು ಮಾಧ್ಯಮಗಳು ʼಮಾನಸಿಕ ರೋಗಿʼ ಎಂದು ಕರೆಯುತ್ತವೆ ಎಂದು ಕೆಲವು ಜನರು ಟೀಕೆ ಮಾಡಿದ್ದರು. ಈ ಟೀಕೆಯೇ ಸದ್ಯದ ಮಾಧ್ಯಮಗಳ ನಿಜವಾದ ನಡವಳಿಕೆ.

ಸಾಮಾಜಿಕ ನಿರ್ಮಾಣವಾದSocial constructionism

ಮಾಧ್ಯಮ ಸುದ್ದಿ ನಿರೂಪಣೆಗಳು ಒಂದು ಸಮುದಾಯವನ್ನು ಮತ್ತು ಇತತರನ್ನು ಹೇಗೆ ನೋಡಬೇಕು ಎಂಬುದನ್ನು ರೂಪಿಸುತ್ತವೆ. ಆದರೆ ಜರ್ಮನಿಯ ಈ ಘಟನೆಯಲ್ಲಿ ಪಾಶ್ಚಿಮಾತ್ಯ ಮಾಧ್ಯಮಗಳು ದಾಳಿ ನಡೆಸಿದವನ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿವೆ. ಇಲ್ಲಿ ಸಾಮೂಹಿಕ ಅಭಿಪ್ರಾಯವನ್ನು ಕಟ್ಟಲು ಹೋಗಲಿಲ್ಲ.

ಪವರ್ ಡೈನಾಮಿಕ್ಸ್ ಮತ್ತು ಸಾರ್ವಜನಿಕ ಗ್ರಹಿಕೆPower dynamics and public perception

ಮೈಕೆಲ್ ಫೌಕಾಲ್ಟ್ ಅವರ ಶಕ್ತಿ ಮತ್ತು ಜ್ಞಾನದ ಸಿದ್ಧಾಂತವು (theory of power and knowledge) ಮಾಧ್ಯಮವು ತನ್ನ ವರದಿಯ ಮೂಲಕ ಸಾಮಾಜಿಕ ನಿಯಂತ್ರಣವನ್ನು ಮಾಡುತ್ತದೆ ಎಂದು ಹೇಳುತ್ತದೆ. ಮ್ಯಾಗ್ಡೆಬರ್ಗ್ ಪ್ರಕರಣದಲ್ಲಿ, ಆಕ್ರಮಣಕಾರನ ಇಸ್ಲಾಮೋಫೋಬಿಕ್ ಚಿಂತನೆಯನ್ನು ನಿರ್ಲಕ್ಷಿಸುವುದು ಅಸ್ತಿತ್ವದಲ್ಲಿರುವ ಪವರ್‌ ಡೈನಾಮಿಕ್ಸ್ ಅನ್ನು ತೋರಿಸುತ್ತದೆ.

ಮಾಧ್ಯಮ ಸಾಕ್ಷರತೆ ಮತ್ತು ಮಾಧ್ಯಮಗಳನ್ನು ವಿಮರ್ಶೆ ಮಾಡುವ, ಪ್ರಶ್ನೆ ಮಾಡುವ ಅಗತ್ಯತೆ ಇರುವ ಸಂದರರ್ಭದಲ್ಲಿ ನಾವಿದ್ದೇವೆ. ಈ ಎಲ್ಲಾ ಸಿದ್ದಾಂತಗಳೂ ಹೇಳುವುದು ಒಂದೇ, ಮಾಧ್ಯಮಗಳು ತಾವು ಏನನ್ನು ಜನರಿಗೆ ಕೊಡಬೇಕು ಎನ್ನುವುದನ್ನು ಜನರ ಅಭಿರುಚಿಯ ಅಧಾರದಲ್ಲಿ ನಿರ್ಧರಿಸುವುದಿಲ್ಲ, ಬದಲಾಗಿ ಜನರು ತಮಗೆ ಏನು ಬೇಕು ಎನ್ನುವುದನ್ನು ಮೊದಲು ಅವರ ತಲೆಗೆ ತುರುಕಿ ಆಮೇಲೆ ಅದಕ್ಕೆ ಪೂರಕವಾದ ಸುದ್ದಿಗಳನ್ನು ನೀಡುತ್ತವೆ.

ಉದಾಹರಣೆಗೆ: ಆರಂಭದಲ್ಲಿ ರೀಲ್ಸ್‌ಗಳಲ್ಲಿ ಬರುವ ಜನರ ವೈಯಕ್ತಿಕ ಬದುಕಿನ ಬಗ್ಗೆ ಸಾಮಾನ್ಯ ಜನರಿಗೆ ಆಸಕ್ತಿ ಇರಲಿಲ್ಲ. ಆ ಆಸಕ್ತಿನ್ನು ಮಾಧ್ಯಮಗಳು ಆರಂಭದಲ್ಲಿ ಹುಟ್ಟಿಸಿದವು. ಆ ನಂತರ ಜನರು ಅದನ್ನು ಪದೇ ಪದೇ ಬಯಸುವಂತೆ ಮಾಡಿ, ಅಂತಹ ಕಳಪೆ ಸುದ್ದಿಗಳನ್ನೇ ಜನರಿಗೆ ನೀಡಲು ಆರಂಭಿಸಿದವು.

ಮಾಧ್ಯಮಗಳು ನೀಡುವ ಸುದ್ದಿಗಳ ಬಗ್ಗೆ ಎಚ್ಚರವಾಗಿರೋಣ..

You cannot copy content of this page

Exit mobile version