“ಸ್ವರ್ಗದಲ್ಲೂ ಸ್ತ್ರೀಗೆ ಒಂದು ಸ್ಥಾನವಿದೆ. ಭೂಲೋಕದ ಸ್ತ್ರೀಯರ ನೋವಿನ ಮಾತು ಬೇಗ ಅರ್ಥವಾಗುತ್ತದೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಸ್ತ್ರೀಯ ಅಂತರಾಳದ ಧನಿಗೆ ಓಗೊಡುವ ವ್ಯವಸ್ಥೆ ಕುವೆಂಪು ಕಂಡ ಕನಸು. ಆ ಹಿನ್ನೆಲೆಯಲ್ಲಿಯೇ ಅವರ ಹಲವು ಸ್ತ್ರೀ ಸಂವೇದನೆ, ವೇದನೆ, ನಿವೇದನೆ ಎಲ್ಲವೂ ಇವೆ.” ಲೇಖಕರಾದ ಶ್ರೀಪತಿ ಹಳಗುಂದ ಅವರ ಬರಹದಲ್ಲಿ
ಕುವೆಂಪು ಆಧುನಿಕ ಸಾಹಿತ್ಯದ ಪರ್ವತ. ಎಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕಂಡುಕೊಂಡವರು. ತಾತ್ವಿಕವಾಗಿ, ತಾರ್ಕಿಕವಾಗಿ ವಿವರಿಸಿದವರು, ವಿಶ್ಲೇಷಿಸಿದವರು, ವಿಮರ್ಶಿಸಿದವರು. ಪ್ರಕೃತಿ ಕವಿ ಎಂದೆ ಹೆಸರು ಪಡೆದು ಮಲೆನಾಡಿನ ಪ್ರಕೃತಿಯನ್ನು ವಿಶ್ವಕ್ಕೆ ಪರಿಚಯಿಸುತ್ತಲೆ ತಾವು ವಿಶ್ವಕ್ಕೆ ಪರಿಚಿತರಾದವರು.
ತಮ್ಮ ಕೃತಿಗಳ ಪ್ರತಿಯೊಂದು ಪಾತ್ರವನ್ನು ದರ್ಶಿಸಿದವರು. ಈ ಕಾರಣಕ್ಕೆ ‘ದಾರ್ಶನಿಕ ಕವಿ’ ಆದದ್ದು. ಒಂದು ಪಾತ್ರವನ್ನು ಎಲ್ಲಾ ವಿಮರ್ಶಕರು ಕಡೆಗಣಿಸಿದಾಗ ಆ ಪಾತ್ರದಲ್ಲಿ ಬೇರೆ ಬೇರೆ ಮಗ್ಗಲುಗಳಿವೆ ಎಂದು ತೋರಿಸಿದವರು.
ಹೆಣ್ಣನ್ನು ತಪಸ್ವಿ ಎಂದು ಕರೆದವರು. ಹಾಗೆ ಕಂಡವರು. ತಮ್ಮ ಪತ್ನಿ ಹೇಮಾವತಿ ಇವರಿಗಿಂತ ೧೫-೧೭ ವರ್ಷ ಕಿರಿಯವರಾದರೂ ಭಗವಂತ ನನಗೆ ಅವಳನ್ನು ದೀಕ್ಷೆ ಕೊಟ್ಟ ಹೆಣ್ಣು ಎಂದವರು. ಇದು ಕುವೆಂಪು ಅವರಿಗೆ ಹೆಣ್ಣಿನ ಮೇಲಿದ್ದ ಗೌರವದ ದ್ಯೋತಕ.
ಅವರ ಕೃತಿಗಳ ಶೀರ್ಷಿಕೆಯು ಅದನ್ನೆ ಹೇಳುತ್ತದೆ. ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ, ದೌಪದಿಯ ಶ್ರೀಮುಡಿ, ಚಿತ್ರಾಂಗದೆ ಇತ್ಯಾದಿ.
ರಾಮಾಯಣದ ಮಂಥರೆ, ಅನಲೆ, ಸೀತೆ, ಊರ್ಮಿಳೆ. ಮಹಾಭಾರತದ ದೌಪದಿ, ಕಾದಂಬರಿಯಲ್ಲಿ ಬರುವ ಹೂವಮ್ಮ, ಸೀತೆ, ತಿಮ್ಮಿ, ಮುಂತಾದವರ ಪಾತ್ರದಲ್ಲಿನ ಜೀವಪರವಾದ ಕಾಳಜಿಯನ್ನು ವಿವರಿಸುವುದರ ಮೂಲಕ ಹೆಣ್ಣು ಕೇವಲ ಭೋಗದ ವಸ್ತುವಲ್ಲ ಹೆಣ್ಣು ಭಾವನೆಗಳ ಭವನ ಎಂದವರು.
ಪುರುಷ ಪ್ರಧಾನ ಸಮಾಜದಲ್ಲಿ ಎಲ್ಲವೂ ಗಂಡು ಎನ್ನುತ್ತಿರುವಾಗ ಸ್ತ್ರೀ ತನಗೆ ಮೀಸಲಾತಿ ಕೊಡಿ ಎಂದು ಹಕ್ಕೊತ್ತಾಯ ಮಾಡುವ ಈ ಹೊತ್ತಿಗೆ ಸಾಹಿತ್ಯದ ಪಾತ್ರಗಳಲ್ಲಿನ ನಿಜವಾದ ಹೆಂಗರಳನ್ನು ವಿಶ್ವಕ್ಕೆ ಪರಿಚಯಿಸಿ ಆಕೆ ಯಾರೆಂದು ಪರಿಚಯಿಸಿದವರು ಕುವೆಂಪು.
ಕಾರ್ಯೇಶು ದಾಸಿ ಕರಣೇಶು ಮಂತ್ರಿ.. ಎಂದು ಸಾರಿದವರು ಕುವೆಂಪು.
..ಎನ್ನುವಾಗಲೆ ಆಕೆ ಅದಲ್ಲ
‘ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ
……………………………….
ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ’
ಎಂಬುದು ವಿಶ್ವದಲ್ಲಿ ರಾಮಾಯಣದ ಬಗ್ಗೆ ಬಂದ ಕೃತಿಗಳ ಸಂಖ್ಯೆಯನ್ನು ಸಾರುತ್ತದೆ. ಆದರೆ ತಮ್ಮ ‘ಶ್ರೀ ರಾಮಾಯಣ ದರ್ಶನಂ’ನಲ್ಲಿ ವಿಶ್ವವೆ ಕುಂಡುಕೊಳ್ಳದ ಸತ್ಯವನ್ನು ಶೋಧಿಸಿದವರು.
ಅದೊಂದು ವನವಾಸದ ಕತೆ. ವನವಾಸಕ್ಕೆ ಒಳಗಾದವರ ಕತೆ ಎಂದು ಹೇಳುತ್ತಿರುವಾಗಲೆ ಅದು ಕೇವಲ ರಾಮನ, ಸೀತೆಯ ಕತೆಯಲ್ಲ. ಬದಲಿಗೆ ಊರ್ಮಿಳೆಯ, ಮಂಥರೆಯ, ಅನಲೆಯ ಕತೆಯೂ ಹೌದು ಎಂದವರು ಕುವೆಂಪು. ರಾಮಾಯಣ ಗಾತ್ರದ ಮಿತಿಯ ದೃಷ್ಟಿಯಿಂದಲೋ ಪುರುಷ ಪ್ರಧಾನ ವ್ಯವಸ್ಥೆಯ ಕೈಗನ್ನಡಿಯಾಗಿಯೊ ಕೆಲ ಪಾತ್ರಗಳನ್ನು ಅವುಗಳ ಮಹತ್ವವನ್ನು ಸಾರದಿರುವಾಗ ಅಂತಹ ಪಾತ್ರಗಳ ನಿಜದನಿಯನ್ನು ಬಿಂಬಿಸಿ ರಾಮಾಯಣದ ಮೌಲ್ಯವನ್ನು ಹೆಚ್ಚಿಸಿದವರು.
ಸಂಶೋಧನೆಗಾಗಿ ಸ್ತ್ರೀಯನ್ನು ವಿವಿಧ ಮಗ್ಗಲುಗಳು ಅಧ್ಯಯನ ಮಾಡಿ ಅಲ್ಲಿಗೆ ಕೈ ಬಿಡುವ ಈ ಹೊತ್ತಿನ ಸ್ತ್ರೀವಾದಿ ಚಿಂತಕರಿಗೆ ಅಂದೆ ಪಾಠ ಹೇಳಿದವರು ಕುವೆಂಪು.
ಓದುಗನಾಗಿ, ಅಧ್ಯಾಪಕನಾಗಿ ನಾವು ರಾಮಾಯಣದ ಒಂದೇ ಮಗ್ಗಲನ್ನು ಮಕ್ಕಳಿಗೆ ತಿಳಿಸುವುದು, ತಿಳಿಸುತ್ತಿರುವುದು ಅಪಾಯವೇ ಸರಿ. ರಾಮಾಯಣ ಎಂದರೆ ನಮ್ಮ ಕಣ್ಮುಂದೆ ನಿಲ್ಲುವ ಬೆರಳೆಣಿಕೆಯ ಪಾತ್ರಗಳು. ಅದೆ ರಾಮ, ಸೀತೆ, ರಾವಣ. ಆದರೆ ಅದರಾಚೆಗಿನ ಪಾತ್ರಗಳ ಒಳ ಬೇಗುದಿಗಳನ್ನು, ತಲ್ಲಣಗಳನ್ನು ಕಂಡುಕೊಳ್ಳದೆ ಸಾಗಿದ್ದೇವೆ. ಪೂರ್ಣರಾಮಾಯಣವನ್ನು ನಾವೇಕೆ ಪರಿಚಯಿಸುತ್ತಿಲ್ಲ ಎಂಬುದೆ ಈ ಹೊತ್ತಿನ ಪ್ರಶ್ನೆ.
ಮಂಥರೆ: ರಾಮಾಯಣವನ್ನು ಈವರೆಗೆ ಕೇಳಿದವರಿಗೆ ಅದೊಂದು ಮನುಷ್ಯತ್ವವಿಲ್ಲದ, ಭಾವನೆಗಳಿಲ್ಲದ ದುಷ್ಟ ರಾಕ್ಷಸಿ ಎಂದೇ ಬಿಂಬಿಸಿದ್ದೇವೆ. ಮಂಥರೆಯ ಮನಸ್ಸನ್ನೂ ಮಂಥನ ಮಾಡಲಿಲ್ಲ ಏಕೆ? ಇದನ್ನ ವಿಮರ್ಶೆ ಅನ್ನಬೇಕೊ, ವಿವರಣೆ ಅನ್ನಬೇಕೊ ತಿಳಿಯದು. ನಿಜವಾದ ವಿಮರ್ಶಕ ಒಂದು ಸಾಧಾರಣ ಪಾತ್ರವನ್ನು ಅದರ ಎಲ್ಲಾ ಆಯಾಮಗಳಲ್ಲಿ ನೋಡಬೇಕಾದ ತುರ್ತಿದೆ. ಇಲ್ಲದೆ ಹೋದರೆ ಅದು ಆಯಾ ಕೃತಿಗೆ ಮಾಡಿದ ಮೋಸವೆ ಸರಿ.
ರಾಮ, ಲಕ್ಷ್ಮಣ, ಸೀತೆಯರು ಕಾಡಿಗೆ ಹೋಗಲಿಕ್ಕೆ ಕಾರಣ ಮಂಥರೆ ನಿಜ. ಮಂಥರೆಯ ಈ ಮನಸ್ಥಿತಿಗೆ ಕಾರಣವಾದ ಸಂಗತಿ ಯಾವುದು? ಮಂಥರೆ ಮೂಲತಃ ದುಷ್ಟಳೆ? ಎಂಬೆಲ್ಲಾ ಪ್ರಶ್ನೆ ಕಾಡುತ್ತದೆ.
ಹಾಗಾದರೆ ಮಮತೆಯ ಸುಳಿ ಮಂಥರೆ ಎಂದು ಕುವೆಂಪು ಕರೆಯುವಾಗ ಇದುವರೆಗೂ ದೇಶದ ವಿಮರ್ಶಕರು ಕಾಣದ ಹೊಸಬಗೆಯು ಕುವೆಂಪುವಿಗೆ ಹೇಗೆ ಸಾಧ್ಯ? ರವಿ ಕಾಣದ್ದನ್ನು ಕವಿ ಕಾಣುತ್ತಾನೆ. ಕವಿಯೂ ಕಾಣದ್ದನ್ನು ಕುವೆಂಪು ಕಂಡುಕೊಂಡರು. ಅಂದರೆ ಸಾಮಾನ್ಯ ಕವಿಯಲ್ಲ. ಅದರಲ್ಲೂ ಅಸಾಮಾನ್ಯತೆ ಕಂಡವರು.
ಬಾಲ್ಯದಲ್ಲಿ ಕೈಕೇಯಿಯನ್ನು ಆಡಿಸಿದ ಮಂಥರೆ, ತನ್ನಲ್ಲಿಲ್ಲದ ರೂಪವನ್ನು ಕೈಕೇಯಿಯಲ್ಲಿ ಕಾಣುತ್ತಾಳೆ. ಕೈಕೇಯಿ ಮಂಥರೆಯನ್ನು ಎಷ್ಟು ಹಚ್ಚಿಕೊಂಡಿದ್ದಾಳೆ ಎಂದರೆ ದಶರಥನ ವಿವಾಹವಾಗಿ ಮಂಥರೆಯನ್ನು ಅಯೋಧ್ಯೆಗೆ ಕರೆತಂದಳು. ನಂತರ ಭರತನ ಬಾಲ್ಯದಲ್ಲಿ ಮಗ್ನಳಾದಳು. ಅಯೋಧ್ಯೆಯ ಜನ ಛೀ…ಥ…. ಎಂದರೂ ಕೈಕೇಯಿಗೋಸ್ಕರ ಎಲ್ಲವನ್ನೂ ಮರೆಯುತ್ತಾಳೆ. ಜಗತ್ತೆ ಮಂಥರೆಯನ್ನು ತಿರಸ್ಕರಿಸಿದರೆ ಪುರಸ್ಕರಿಸಿದ ಎರಡೆ ಜೀವ ಒಂದು ಕೈಕೇಯಿ ಮತ್ತೊಂದು ಭರತ. ಹಾಗಾಗಿಯೇ ಈ ಎರಡು ಜೀವಕ್ಕೋಸ್ಕರ ಏನನ್ನಾದರೂ ಮಾಡಿಯಾಳು. ಯಾರನ್ನಾದರೂ ಎದುರು ಹಾಕಿಕೊಳ್ಳಬಲ್ಲಳು. ಇದೇ ನಿಜವಾದ ಋಣ ಅಲ್ಲವೇ? ಈ ಋಣದ ಮುಲಾಜೇ ಮಂಥರೆಯನ್ನು ರಾಮಾಯಣದುದ್ದಕ್ಕೂ ಖಳನಾಯಕಿ ಎಂದು ನಾವು ಘೋಷಿಸಿಕೊಂಡಿದ್ದು. ಕೆಟ್ಟವರು ಹುಟ್ಟುತ್ತಲೆ ಕೆಟ್ಟವರಲ್ಲ. ಕೆಲವು ಸನ್ನಿವೇಶಗಳು, ಘಟನೆಗಳು ನಮ್ಮನ್ನು ಕೆಟ್ಟವರನ್ನಾಗಿಸಿಬಿಡುತ್ತವೆ ಎನ್ನುವುದಕ್ಕೆ ಮಂಥರೆಯೇ ಉತ್ತಮ ಉದಾಹರಣೆ.”
ಜೊತೆಗೆ ಚಂದಿರನ ಕಂಡು ಹಠ ಹಿಡಿದ ಬಾಲ ರಾಮನನ್ನು ಸಂತೈಸಿ ಮಗುವನ್ನು ಎತ್ತಿಕೊಳ್ಳಲು ಹೋದಾಗ ತುಂಬಿದ ಜನರೆದುರು ‘ಥ ಮುಟ್ಟಬೇಡ ಅಮಂಗಳೆ’ ಎಂದು ಕೌಸಲ್ಯ ಹೇಳಿದಾಗ ಹೋದ ಮಾನದ ಬಗ್ಗೆ ಯೋಚಿಸಿ. ಅದೆ ಮಂಥರೆಯಂತವರಲ್ಲೂ ದ್ವೇಷ ಸೃಷ್ಟಿಸಲಿಕ್ಕೆ ಕಾರಣವಾಯ್ತು. ಭರತ ಮತ್ತು ಕೈಕೇಯಿಗೋಸ್ಕರ ಏನನ್ನಾದರೂ ಮಾಡಲಿಕ್ಕೆ ಸಿದ್ಧಳಾದವಳು. ಅವಳಿಗೆ ಇದು ಪಾಪ ಪುಣ್ಯದ ಪ್ರಶ್ನೆಯಲ್ಲ. ಕೃತಜ್ಞತೆಯ ಋಣದ ಪ್ರಶ್ನೆ. ರಾಮನನ್ನು ಕಾಡಿಗೆ ಅಟ್ಟಿದ್ದು ರಾಮನ ಮೇಲಿನ ದ್ವೇಷದಿಂದಲ್ಲ; ಬದಲಾಗಿ ಭರತನ, ಕೈಕೇಯಿಯ ಮೇಲಿನ ಪ್ರೀತಿಯಿಂದ.
ಊರ್ಮಿಳೆ: ರಾಮಾಯಣದ ಲಕ್ಷ್ಮಣನ ಧರ್ಮಪತ್ನಿ ಊರ್ಮಿಳೆ. ಜಗತ್ತಿನ ರಾಮಾಯಣದ ವಿಮರ್ಶಕರೆಲ್ಲ ರಾಮ ಲಕ್ಷ್ಮಣ ಸೀತೆ ಕಾಡಿಗೆ ಹೊರಟಾಗ ಇವರ ಬರವಣಿಗೆಯೂ ಅವರ ಹಿಂದೆ ಹೊರಟುಬಿಡುತ್ತದೆ. ಏಕೆಂದರೆ ಹೆಸರೆ ರಾಮಾಯಣ ರಾಮನ ಆಯನ.
ಸೀತೆಯ ಕಷ್ಟ, ರಾಮ ಸೀತೆಯರ ಪ್ರೀತಿ ಇತ್ಯಾದಿ ಕುವೆಂಪು ಅವರಂತಹ ದಾರ್ಶನಿಕಗೆ ರಾಮನೊಂದಿಗೆ ಇರುವ ಸೀತೆಯ ಕಷ್ಟಕ್ಕಿಂತ ಪತಿ ಇಲ್ಲದ ಊರ್ಮಿಳ ಪಡುವ ಕಷ್ಟ ಬಹಳ ಮುಖ್ಯ ಆಗುತ್ತದೆ. ಏಕೆಂದರೆ ದಂಪತಿಗಳು ಒಂದೆಡೆ ಇದ್ದಾಗ ಬರುವ ಕಷ್ಟಗಳನ್ನು ಇಲ್ಲವಾಗಿಸುವುದೆ ಈ ಒಟ್ಟಿಗಿನ ಇರುವಿಕೆ ಅವಳ ಮುಖ ಇವನು ಇವನ ಮುಖ ಅವಳು ನೋಡುವ ಸಂಭ್ರಮವಾದರೂ ಇರುತ್ತದಲ್ಲ.
ಕುವೆಂಪು ಅವರೆ ಒಂದೆಡೆ ಹೇಳುವಂತೆ ‘ನಮ್ಮ ಬಾಳಿಗೆ ಸಾಕ್ಷಿ ಹೋಳಿಗೆ.
ನಾನು ಕಣಕ ನೀನು ಹೂರ್ಣ, ನಿನ್ನನಪ್ಪೆ ನಾನು ಪೂರ್ಣ’. ಹೌದು, ಗಂಡ ಹೆಂಡತಿಯ ಮಧುರತೆಗೆ ಇದು ಸಾಕ್ಷಿ. ಗಂಡನಿಲ್ಲದ ಹೆಂಡತಿ ಹೆಂಡತಿಯಿಲ್ಲದ ಗಂಡ ಈ ಬಗೆಯ ನೋವೆ ಭಿನ್ನ.
ಈ ಕಾರಣಕ್ಕೆ ಊರ್ಮಿಳೆ ಕುವೆಂಪು ಅವರಿಗೆ ಮುಖ್ಯವಾಗುವುದು. ಗಂಡನಿಲ್ಲದ ಊರ್ಮಿಳೆಯ ತಲ್ಲಣಗಳು, ತಾಕಲಾಟಗಳು ಮುಖ್ಯವೆನಿಸುತ್ತವೆ. ಹದಿನಾಲ್ಕು ವರ್ಷ ಗಂಡನೊಂದಿಗೆ ಇದ್ದು ಸೀತೆ ಪಡುವ ಕಷ್ಟ ಮತ್ತು ಹದಿನಾಲ್ಕು ವರ್ಷ ಗಂಡನಿಲ್ಲದೆ ಊರ್ಮಿಳೆ ಪಡುವ ಕಷ್ಟ ಎರಡೂ ಬೇರೆ ಬೇರೆ.
ಅನಲೆ: ಈಕೆ ವಿಭೀಷಣನ ಮಗಳು. ರಾವಣ ಈಕೆಗೆ ದೊಡ್ಡಪ್ಪನಾಗಬೇಕು.
ಸಾಮಾನ್ಯ ಪಾತ್ರ! ಕುವೆಂಪು ಈ ಪಾತ್ರಕ್ಕೆ ಜೀವ ತುಂಬುತ್ತಾರೆ. ಉದಾ: ಕೊನೆಯಲ್ಲಿ ಅಂದರೆ ರಾವಣನ ಸಂಹಾರವಾದ ಮೇಲೆ ಲಂಕೆಯಲ್ಲಿ ರಾಮ ಸೀತೆಯನ್ನು ಭೇಟಿಯಾಗುತ್ತಾನೆ. ಇದನ್ನು ಕುವೆಂಪು ತಮ್ಮ ಶ್ರೀ ರಾಮಾಯಣದರ್ಶನಂನಲ್ಲಿ ‘ರಾಮಸೀತಾಪುನರ್ಮಿಲನೋತ್ಸವ” ಎನ್ನುತ್ತಾರೆ. ಉತ್ಸವ ಎಂದರೆ ಹಬ್ಬ ನಿಜ.
ಅದೆಷ್ಟೋ ದಿನಗಳ ನಂತರ ರಾಮ, ಸೀತೆ ಮತ್ತೆ ಸೇರುವುದೇ ಹಬ್ಬ. ಆದರೆ ಸೀತೆಯನ್ನು ಕರೆತರಲು ಅಂದರೆ ಪಲ್ಲಕ್ಕಿ ಮೇಲೆ ಆಕೆಯನ್ನು ಹೊತ್ತುಕೊಂಡು ಬಂದು ತೋರಿಸುವ ಸಂದರ್ಭ, ಆ ಸಂದರ್ಭದಲ್ಲಿ ಅನಲೆ ಪ್ರಧಾನ ಪಾತ್ರ ವಹಿಸುತ್ತಾಳೆ. ರಾಮ ಮತ್ತು ಸೀತೆಯ ನಡುವಿನ ಸಂಭಾಷಣೆಗೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಾಳೆ. ಅನಲೆ ಒಂದು ಹೆಣ್ಣಾಗಿ ಮತ್ತೊಂದು ಹೆಣ್ಣಿನ ಭಾವನೆಗೆ ಗೌರವ ಕೊಡುವ ಆಕೆಯನ್ನು ಅದಮ್ಯವಾಗಿ ಪ್ರೀತಿಸುವ ರಾಮನಿಂದ ಪ್ರಶ್ನೆಗಳು ಆರಂಭವಾದಾಗ ಅನಲೆ ಖಿನ್ನಳಾಗುತ್ತಾಳೆ, ಹೃದಯ ಸಂವೇದನೆಗೆ ಸಾಕ್ಷಿಯಾಗುತ್ತಾಳೆ.
ದ್ರೌಪದಿ: ಮಹಾಭಾರತದಲ್ಲಿ ಬರುವ ಮುಖ್ಯ ಪಾತ್ರ ಪಾಂಡವರ ಧರ್ಮಪತ್ನಿ. ದ್ರೌಪದಿ, ಕುವೆಂಪು ಅವರು ತಮ್ಮ ವಿಮರ್ಶೆ ಕೃತಿಗೆ ದೌಪದಿಯ ಶ್ರೀಮುಡಿ ಎಂದು ಕರೆಯುತ್ತಾರೆ. ಪಂಪನಿಗೆ ಅರ್ಜುನ, ರನ್ನನಿಗೆ ದುರ್ಯೋಧನ, ಕುಮಾರವ್ಯಾಸನಿಗೆ ಕೃಷ್ಣ ಮುಖ್ಯರಾದರೆ ಕುವೆಂಪು ಅವರಿಗೆ ಇಡೀ ಕಥೆಯಲ್ಲಿ ದೌಪದಿ ಮುಖ್ಯವಾಗುತ್ತಾಳೆ. ಅವರ ದೃಷ್ಟಿಯಲ್ಲಿ ಮಹಾಭಾರತ ನಿಜವಾಗಿ ಆರಂಭವಾಗುವುದು ದೌಪದಿಯನ್ನು ತುಂಬಿದ ಸಭೆಯಲ್ಲಿ ಅತಿರಥ, ಮಹಾರಥರ ಎದುರೆ ದುಶ್ಯಾಸನ ಆಕೆಯ ಜಡೆಯನ್ನು ಎಳೆದಾಗ ಅದು ಮುಕ್ತಾಯವಾಗುವುದು ಭೀಮ ಕೊನೆಯಲ್ಲಿ ದುಶ್ಯಾಸನನನ್ನು ಕೊಂದು ಆತನ ರಕ್ತ, ಕರುಳು, ದಂತಪಂಕ್ತಿಯಿಂದ ಕಟ್ಟಿದಾಗ. ಅಂದರೆ ಅದು ಶ್ರೀಮುಡಿ. ಆ ಮುಡಿಯಲ್ಲಿ ಒಂದು ಅದಮ್ಯವಾದ ಶಕ್ತಿಯಿದೆ. ತಪಃಶಕ್ತಿಯಿದೆ. ಈ ಕಾರಣಕ್ಕೆ ಕೌರವರು ನಾಶ ಹೊಂದಿದ್ದು. ಪಾಂಡವರು ಗೆದ್ದರು. ದೌಪದಿಯ ಶಕ್ತಿಯಿಂದಲೆ ಎಂದು ಹೇಳುವಾಗ ಕವಿಗೆ ಕಂಡ ಸ್ತ್ರೀಶಕ್ತಿ ವಿಶೇಷವಾದದ್ದು. ಜಡೆಯನ್ನು ಬಿಚ್ಚಿ ಜಡೆಯನ್ನು ಕಟ್ಟುವುದೆ ನಿಜವಾದ ಭಾರತ ಎನ್ನುತ್ತಾರೆ.
ಭೂಮಿಯನ್ನು ಹೆಣ್ಣೆಂದು ಗಟ್ಟಿಯಾಗಿ ಪರಿಭಾವಿಸುವ ಹೊತ್ತಿಗೆ, ಅವರ ಪ್ರತಿಯೊಂದು ಕೃತಿಯಲ್ಲಿಯೂ ಹೆಣ್ಣಿಗೊಂದು ವಿಶಿಷ್ಟ ಸ್ಥಾನವಿದೆ. ಕಾದಂಬರಿಗಳ ಹೂವಮ್ಮ, ಸೀತೆ, ಕಥನ ಕವನದ ನಾಗಿ ಎಷ್ಟು ಮುಖ್ಯವೊ ಪುರಾಣದ ಚಿತ್ರಾಂಗದೆಯೂ ಅಷ್ಟೆ ಮುಖ್ಯವಾಗುತ್ತಾರೆ.
ಹೆಣ್ಣಿಗೂ ಭಾವನೆಗೂ ಅದೊಂದು ಚೈತನ್ಯಪೂರ್ಣವಾದ ಸಂಬಂಧವಿದೆ ಎಂದು ಪರಿಭಾವಿಸುವ ಕುವೆಂಪು ಪ್ರತಿ ಪಾತ್ರಕ್ಕೂ ಒಂದು ಸಾಮಾಜಿಕ ನ್ಯಾಯ ನೀಡಿದ್ದಾರೆ.
ನಾಗಿ: ಇದೊಂದು ಕಥನ ಕವನದ ಹೆಸರು. ಇಲ್ಲಿ ಬರುವ ಮಾದ, ಮಾದಿ, ನಾಗಿ, ಸಿಂಗ ಈ ನಾಲ್ವರೂ ಸಾವನ್ನಪ್ಪುವ ದುರಂತ ಕತೆ. ಮಾದ ಒಬ್ಬ ಬೇಟೆಗಾರ. ಮಾದಿ ಅವನ ಎರಡನೆಯ ಹೆಂಡತಿ. ನಾಗಿ ಈ ಮಾದನ ಮೊದಲನೆಯ ಹೆಂಡತಿಯ ಮಗಳು. ಹೀಗಾಗಿ ಮಾದಿಗೆ ನಾಗಿ ಮಲಮಗಳು. ಮುಂದೆ ಮಾದ, ನಾಗಿ ಇಬ್ಬರು ಸತ್ತ ಬಳಿಕ ಸಿಂಗ ಮಾದಿಯನ್ನು ಮದುವೆಯಾಗುತ್ತಾನೆ.
ಕಳೆದು ಹೋದ ತುಂಗೆ(ದನ)ಯನ್ನು ಹುಡುಕಿ ತರಲು ಹೋದ ನಾಗಿ ಒಂದು ಕಡೆ, ಆಗತಾನೆ ಹೊಸದಾಗಿ ಮದುವೆಯಾದ ಹೆಂಡತಿಯನ್ನು ಸಂತೋಷಪಡಿಸಲು ಜೊತೆಗೆ ಹೋದ ಮಾದ ಮತ್ತೊಂದು ಕಡೆ, ಹೊಸ ಹೆಂಡತಿಯನ್ನು ಖುಷಿಪಡಿಸಲು ಬೇಟೆ ಮಾಡಲೇಬೇಕು. ಆ ಮೂಲಕ ತನ್ನ ಗಂಡಸತ್ವವನ್ನು ಸಾಬೀತುಪಡಿಸಬೇಕೆಂದು ಪಣ ತೊಟ್ಟಂತಿರುವ ಮಾದ ಕಡುರಾತ್ರಿ ದಟ್ಟ ಕಾನನಕ್ಕೆ ದನ ಹುಡುಕಿ ಬಂದ ಮಗಳನ್ನು ಪ್ರಾಣಿ ಎಂದು ಭಾವಿಸಿ ಕೊಲ್ಲುತ್ತಾನೆ. ಹತ್ತಿರ ಬಂದು ನೋಡಿ ಮಗಳೆಂಬ ಸತ್ಯ ಗೊತ್ತಾದಾಗ ಆಕೆಯ ಶವವನ್ನು ಮುದ್ದಾಡಿ ಆತನು ಸಾಯುತ್ತಾನೆ. ಸದಾ ಮಲಮಗಳನ್ನು ಮುಂಡೆ ಎಂದು ಕರೆಯುತ್ತಿದ್ದ ಮಾದಿಯ ಬಾಯಿಯಂತೆ ಮಾದಿಯನ್ನು ಮುಂಡೆ ಮಾಡಿದ ದೇವರು ‘ಅವ್ವಗೆ ಅಪ್ಪ ಹೊಡೆದ್ರೆ ಅಪ್ಪಗೆ ದೆವ್ವ ಹೊಡಿತಂತೆ’ ಎನ್ನುವಂತೆ ಆಗಿತ್ತು ಮಾದಿಯ ಸ್ಥಿತಿ. ಸವತಿಗಿಂತ ಕಾಡೇ ಲೇಸು ಎಂದುಕೊಂಡಿದ್ದ ನಾಗಿಗೆ ವಿಧಿ ಕಾಡಿಗಿಂತ ಸಾವೆ ಲೇಸು ಎಂಬ ತೀರ್ಮಾನಕ್ಕೆ ಬಂದಿತ್ತು. ಹೆಣ್ಣಿಗೆ ಹೆಣ್ಣೆ ಶತ್ರು ಎಂಬುದು ಇಲ್ಲಿ ಸಾಬೀತಾಗಿದೆ.
ಎಸ್.ವಿ. ಪರಮೇಶ್ವರ ಭಟ್ಟರು ಹೇಳುವಂತೆ ಯಾವುದು ದೊಡ್ಡ ದುರಂತ, ಮಗಳು ಹಾಗೆ ಸತ್ತದ್ದೋ, ತಂದೆ ಹೀಗೆ ಸತ್ತದ್ದೋ ಒಟ್ಟಿನಲ್ಲಿ ಇಡೀ ಕತೆ ದುರಂತಮಯವಾಗಿದೆ. ಅಥವಾ ಮಾದ ಈ ಮೊದಲೆ ಸತ್ತ ಹೆಂಡತಿಯನ್ನು ಮಗಳ ಸಮೇತ ನೋಡಲು ಹೊರಟನೆ ಎಂಬೆಲ್ಲಾ ಪ್ರಶ್ನೆ ಕಾಡುತ್ತದೆ. ಕುವೆಂಪು ಅವರ ಬರಹಗಳಲ್ಲಿ ಕಾಣುವ ಸ್ತ್ರೀ ಪಾತ್ರಗಳಲ್ಲಿ ನಾಗಿ ಮನಮಿಡುಕುವ ಪಾತ್ರವಾಗಿದೆ.
ಸಾಯಬಾರದೇಕೆ ಮುಂಡೆ ನಿನ್ನ ಋಣವು ತೀರಲಿ! ದಾರಿಗಡ್ಡ ಮರವು ಬಿದ್ದು, ಹಾವು ಗೀವು ಬಂದು ಕಚ್ಚಿ ಮುಗಿಸಬಾರದೇಕೆ ನಿನ್ನ ಎಂದು ಹರಸುತ್ತಿದ್ದಳು ಹೊಡೆಯಬೇಡ. ತುಂಗೆಯನ್ನು ಹುಡುಕಿ ತರುತ್ತೇನೆ
ಎನ್ನುವ ನಾಗಿ ಪಾಪ ತಾಯಿಯಿಲ್ಲದ ಹೆಣ್ಣು ಮಗಳೊಬ್ಬಳ ನಿಜವಾದ ಸಂಕಟವನ್ನು ಕುವೆಂಪು ತೆರೆದಿಟ್ಟ ರೀತಿ ಕಣ್ಣಿಗೆ ಕಟ್ಟಿದಂತಿದೆ.
ನಿಂಗಿ: ಮಂಜಣ್ಣ ಹೇಳಿದ ಸ್ಥಳಗತೆ ಕಥನ ಕವನದಲ್ಲಿ ಬರುವ ಪಾತ್ರವಿದು. ಕರಿಸಿದ್ದನ ಹೆಂಡತಿ, ಕರಿಸಿದ್ದ-ನಿಂಗಿಯ ದಾಂಪತ್ಯದ ಗಟ್ಟಿತನವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾನೆ.
ತವರೂರಿನಲ್ಲಿದ್ದ ಹೆಂಡತಿ ನಿಂಗಿಯ
ಕರೆತರೆ ಹೋಗಿದ್ದ ಕರಿಸಿದ್ದನು
ಗಂಡ ಬಂದನು ಎಂಬ ಹೆಮ್ಮೆಯಲಾಕೆಯು
ಹೊರಟಳು ಅವನಿದ್ದ ಚಿಕ್ಕೂರಿಗೆ
ದಾಂಪತ್ಯ ಜೀವನದಲ್ಲಿ ಹೆಣ್ಣೂಬ್ಬಳ ಪಾತ್ರದ ಮಹತ್ವ ಎಂತದ್ದು ಎಂದು ಸಾರುತ್ತಾರೆ. ನಾಗಿ ಕತೆಯಂತೆ ಇದು ದುರಂತ ಕತೆ. ಚಿಕ್ಕೂರಿಗೆ ಹೊರಟ ದಂಪತಿಗಳು ಕತ್ತಲೆಗೆ ಸಿಗುತ್ತಾರೆ. ಮಳೆ ಬರುತ್ತದೆ. ಹೊಳೆ ದಾಟಲು ಮುಂದಾಗುತ್ತಾರೆ. ಮೊಣಕಾಲಿನಿಂದ ಮೂಗಿನ ಮಟ್ಟಕ್ಕೆ ಬಂದ ನೀರು ಅಸಹಾಯಕರಾದ ಕರಿಸಿದ್ದ-ನಿಂಗಿ ಒಬ್ಬರನೊಬ್ಬರು ಅಪ್ಪಿಕೊಳ್ಳುತ್ತಾರೆ. ಸಿದ್ದನ ಕಂಬಳಿ ನೀರಿಗೆ ಬಿತ್ತು. ಆದರೇನು ಮಾಡುವುದು? ಇವರನ್ನು ಮುಳುಗಿಸಲು ಸಿದ್ಧವಾದ ಹೊಳೆಗೆ ಕಂಬಳಿ ಗೊರಬು ಯಾವ ಲೆಕ್ಕ!
ಸಾವನೆ ಕಾರುವ ಕಾರದು ಸುರಿಯಿತು ಮತ್ತಷ್ಟು ಬಲವಾಗಿಯಪ್ಪಿದರು । ನಿಂತಂತೆ ಅವರಿಗೆ ಕಂಡಿತ್ತು
ಮಕ್ಕಳ ನೆನಪಾಗಿ ಗುಡಿಸಲೆ ಕಣ್ಮುಂದೆ
ಅಬ್ಬಾ ಮಲೆನಾಡು ಶಾಪವೂ ಹೌದು ಅನ್ನುವಂತಿದೆ ಈ ಕತೆ. ಅಲ್ಲಿಯ ನಾಗಿ ಇಲ್ಲಿಯ ನಿಂಗಿ ದುರಂತ ಕಾಣುವುದು ವಿಪರ್ಯಾಸ.
ಕುಮುದಿನಿ: ಈ ಕವನ ವರ್ಡ್ಸ್ವರ್ತ್ ಕವಿಯ ಲೊದೇಮಿಯಾ ಎಂಬ ಕವಿತೆಯ ಭಾವವನ್ನು ಗ್ರಹಿಸಿ ರಚಿತವಾದದ್ದು. ಇದು ಮುನ್ನೂರ ಹತ್ತು ಪಂಕ್ತಿಗಳಲ್ಲಿ ಭಾಮಿನಿ ಷಟ್ಟದಿಯಲ್ಲಿ ರಚಿತವಾಗಿದೆ. ಹನ್ನೊಂದು ಭಾಗಗಳಲ್ಲಿದೆ. ಕುಮುದಿನ ಈ ಕತೆಯ ನಾಯಕಿ. ಈಕೆ ವೀರ ಯೋಧನೊಬ್ಬನ ಪತ್ನಿ. ಆತ ಸ್ವರ್ಗಸ್ಥನಾಗುತ್ತಾನೆ. ಈಕೆ ಹಗಲು ರಾತ್ರಿ ಆತನ ಆಗಮನದ ನಿರೀಕ್ಷೆಯಲ್ಲಿರುತ್ತಾಳೆ. ಪರಮಾತ್ಮನಿಗೆ ಆಕೆಯ ವಿರಹವೇದನೆ ನೋಡಲಾರದೆ ದೂತನೊಂದಿಗೆ ಸ್ವರ್ಗದಲ್ಲಿರುವ ಆಕೆಯ ಗಂಡನನ್ನು ಮೂರು ಗಳಿಗೆಯ ಮಟ್ಟಿಗೆ ಕಳುಹಿಸುತ್ತಾನೆ. ಹರ್ಷದಿಂದ ಮುಟ್ಟಲಿಕ್ಕೆ ಹೋದಾಗ ನೀನು ಕರ್ಮ ಸವೆಸಿ, ಸತ್ತು ನನ್ನನ್ನು ಸೇರು ಎಂದು ನಿರ್ಬಂಧ ವಿಧಿಸುತ್ತಾನೆ. ಆಕೆ ಸತ್ತು ಅವನೊಂದಿಗೆ ಪರಧಾಮದಲ್ಲಿ ಕೂಡುತ್ತಾಳೆ.
ವಿರಹಿಣಿಯ ಚಿತ್ರವನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ. ಕುಮುದಿನಿಯು ತನ್ನ ಗಂಡ ಎರಡು ವರ್ಷವಾದರೂ ಬಾರದೆ ಇದ್ದಾಗ ಆಕೆ ಪಡುವ ವೇದನೆ, ನಿರಾಸೆ, ಆತಂಕ, ಹಪಹಪಿಸುವಿಕೆ, ಸಂಕಟ, ಅಗಲಿಕೆ, ಬೇಗುದಿ ಹದಿನಾಲ್ಕು ವರ್ಷ ಲಕ್ಷ್ಮಣನಿಲ್ಲದ ಊರ್ಮಿಳೆ, ಗಂಡನಿಲ್ಲದ ಸಾವಿತ್ರಿ ನೆನಪಾಗುತ್ತಾರೆ.
ಕುಮುದಿನಿ ತನ್ನ ಇನಿಯನು ಎಲ್ಲಿದ್ದಾನೆ ತೋರಿಸಿಕೊಡಿ ಎಂದು ಚಂದ್ರನನ್ನು, ಆಕಾಶವನ್ನು, ನಕ್ಷತ್ರಗಳನ್ನು ಕೇಳಿಕೊಳ್ಳುತ್ತಾಳೆ. ವಚನಕಾರ್ತಿ ಅಕ್ಕಮಹಾದೇವಿ ನವಿಲುಗಳನ್ನು, ಹಂಸಗಳನ್ನು ಕೇಳಿದಂತೆ ಇಲ್ಲಿಯೂ ಸಹ ಹೆಣ್ಣಿಗೂ ಪ್ರಕೃತಿಗೂ ಒಂದು ಅವಿನಾಭಾವ ಸಂಬಂಧವಿರುವುದನ್ನು ಕಾಣಬಹುದು. ಅಷ್ಟೇ ಅಲ್ಲ; ಹೆಣ್ಣಿನ ಭಕ್ತಿಗೆ ದೇವರು ಬೇಗ ಒಲಿದುದನ್ನು ನಾವು ಪುರಾಣದಲ್ಲಿ, ಇತಿಹಾಸದಲ್ಲಿ ಕಂಡಿದ್ದೇವೆ.
ರಾಮ ಗೆದ್ದಿದ್ದು ರಾಮನ ಶಕ್ತಿಯಿಂದಲ್ಲ. ಸೀತೆಯ ಚಾರಿತ್ರ್ಯದಿಂದ. ಹಾಗೆ ಕುಮುದಿನಿಯ ವೇದನೆಯ ಪರಿ ದೇವರಿಗೆ ಗೊತ್ತಾದ ಪರಿ ಗಮನಾರ್ಹ.
ಸ್ವರ್ಗದಲ್ಲೂ ಸ್ತ್ರೀಗೆ ಒಂದು ಸ್ಥಾನವಿದೆ. ಭೂಲೋಕದ ಸ್ತ್ರೀಯರ ನೋವಿನ ಮಾತು ಬೇಗ ಅರ್ಥವಾಗುತ್ತದೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಸ್ತ್ರೀಯ ಅಂತರಾಳದ ಧನಿಗೆ ಓಗೊಡುವ ವ್ಯವಸ್ಥೆ ಕುವೆಂಪು ಕಂಡ ಕನಸು. ಆ ಹಿನ್ನೆಲೆಯಲ್ಲಿಯೇ ಅವರ ಹಲವು ಬರಹಗಳಲ್ಲಿ ಸ್ತ್ರೀ ಸಂವೇದನೆ, ವೇದನೆ, ನಿವೇದನೆ ಎಲ್ಲವೂ ಇವೆ.