Home ದೇಶ ಮಹಾರಾಷ್ಟ್ರ: ರಾಯಗಢದ ದಿವೆಗರ್ ಸಮುದ್ರದಲ್ಲಿ ಈಜಲು ತೆರಳಿದ್ದ 8 ಕಾಲೇಜು ವಿದ್ಯಾರ್ಥಿಗಳು ನೀರುಪಾಲು

ಮಹಾರಾಷ್ಟ್ರ: ರಾಯಗಢದ ದಿವೆಗರ್ ಸಮುದ್ರದಲ್ಲಿ ಈಜಲು ತೆರಳಿದ್ದ 8 ಕಾಲೇಜು ವಿದ್ಯಾರ್ಥಿಗಳು ನೀರುಪಾಲು

0

ಮುಂಬೈ: ಪ್ರವಾಸಕ್ಕೆಂದು ಸಮುದ್ರ ತೀರಕ್ಕೆ ಬಂದಿದ್ದ ಕಾಲೇಜು ವಿದ್ಯಾರ್ಥಿಗಳ ಗುಂಪೊಂದು ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ 8 ಮಂದಿ ದುರ್ಮರಣಕ್ಕೀಡಾದ ಮನಕಲಕುವ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ದಿವೆಗರ್ ಬೀಚ್‌ನಲ್ಲಿ ಗುರುವಾರ ಸಂಜೆ ನಡೆದಿದೆ.

ಪುಣೆ ಜಿಲ್ಲೆಯ ಆಳಂದಿಯ ಖಾಸಗಿ ಕೋಚಿಂಗ್ ಸೆಂಟರ್ ಒಂದಕ್ಕೆ ಸೇರಿದ 11 ಮತ್ತು 12 ನೇ ತರಗತಿಯ ಒಟ್ಟು 48 ಮಂದಿ (25 ವಿದ್ಯಾರ್ಥಿಗಳು, 17 ವಿದ್ಯಾರ್ಥಿನಿಯರು ಹಾಗೂ 6 ಮಂದಿ ಶಿಕ್ಷಕರು) ಶ್ರೀವರ್ಧನ್ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ದಿವೆಗರ್ ಬೀಚ್‌ಗೆ ಪಿಕ್ನಿಕ್‌‌ಗೆಂದು ಬಂದಿದ್ದರು.

ಬೀಚ್ ತಲುಪಿದ ಬಳಿಕ ಕೆಲ ವಿದ್ಯಾರ್ಥಿಗಳು ಸಮುದ್ರದ ನೀರಿಗೆ ಇಳಿದು ಆಟವಾಡುತ್ತಿದ್ದರು. ಈ ಸಂದರ್ಭದಲ್ಲಿ ನೀರಿನ ಆಳ ಹಾಗೂ ಬಲವಾದ ಅಲೆಗಳ ವೇಗವನ್ನು ಅಂದಾಜಿಸಲು ಸಾಧ್ಯವಾಗದೆ 8 ಮಂದಿ ವಿದ್ಯಾರ್ಥಿಗಳು ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಇದನ್ನು ಗಮನಿಸಿದ ಶಿಕ್ಷಕರು ಮತ್ತು ಸಹಪಾಠಿಗಳು ತಕ್ಷಣವೇ ಸ್ಥಳೀಯರು ಹಾಗೂ ರಕ್ಷಣಾ ತಂಡಗಳಿಗೆ ಮಾಹಿತಿ ನೀಡಿದ್ದಾರೆ.

ಸ್ಥಳೀಯ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿ, ಪ್ರವಾಸಿಗರು ಮತ್ತು ರಕ್ಷಣಾ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಕೊಚ್ಚಿಹೋಗಿದ್ದ ಎಂಟೂ ಮಂದಿ ವಿದ್ಯಾರ್ಥಿಗಳ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮೃತದೇಹಗಳನ್ನು ಬೋರ್ಲಿ ಪಂಚತನ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ. ಸಮುದ್ರದ ಆಳ ಮತ್ತು ಅಲೆಗಳ ಅಪಾಯದ ಅರಿವಿಲ್ಲದೆ ನೀರಿಗಿಳಿದಿದ್ದೇ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ದುರಂತಕ್ಕೆ ಮಹಾರಾಷ್ಟ್ರ ಸಚಿವ ನಿತೀಶ್ ರಾಣೆ ತೀವ್ರ ಸಂತಾಪ ಸೂಚಿಸಿದ್ದಾರೆ.

You cannot copy content of this page

Exit mobile version