ಈ ದಿನದ ವಾಲ್ಮೀಕಿ ಜಯಂತಿ ವಿಶೇಷವಾಗಿದೆ. ಕಾರಣ
ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡುವಂತೆ ಆಗ್ರಹಿಸಿ ಪ್ರಸನ್ನಾನಂದ ಸ್ವಾಮೀಜಿ 240 ದಿನ ನಗರದ ಫ್ರೀಡಂ ಪಾರ್ಕ್ ನಲ್ಲಿ ಧರಣಿ ಸತ್ಯಾಗ್ರಹ ನಡೆಸಿದ್ದರು. ಪರಿಣಾಮವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ರಾಜ್ಯ ಸರಕಾರ ಹೆಚ್ಚಿಸುವ ಅಧಿಕೃತ ಘೋಷಣೆಯನ್ನು ಇಂದು ಮುಖ್ಯಮಂತ್ರಿಗಳು ಮಂಡಿಸುವ ಸಾಧ್ಯತೆ ಇದೆ. ರಾಜ್ಯ ಸರ್ಕಾರದ ಈ ನಿಲುವನ್ನು ಸ್ವಾಗತಿಸಿ ಪ್ರಸನ್ನಾಂದ ಸ್ವಾಮೀಜಿ ತಮ್ಮ ಬೇಡಿಕೆ ಈಡೇರಿದ ನಿಟ್ಟಿನಲ್ಲಿ ಧರಣಿ ಅಂತ್ಯಗೊಳಿಸುವ ಮಾತನಾಡಿದ್ದಾರೆ. ಹಾಗಾದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರುವ 54 ಬುಡಕಟ್ಟುಗಳು ಇಂದು ವಿಜಯದ ದಿವಸವನ್ನಾಗಿ ಆಚರಿಸಬೇಕಿದೆ.
________
ಕರ್ನಾಟಕದಲ್ಲಿ ಆಚರಿಸಲ್ಪಡುವ ವಾಲ್ಮೀಕಿ ಜಯಂತಿಗಳಲ್ಲಿ ಮಹರ್ಷಿ ವಾಲ್ಮೀಕಿಯ ಬಗೆಗೆ ಕಡ್ಡಾಯವಾಗಿ ಉಲ್ಲೇಖಿಸುವ ಕಟ್ಟುಕತೆಯೊಂದಿದೆ. ಅದೆಂದರೆ ವಾಲ್ಮೀಕಿ ಪೂರ್ವಾಶ್ರಮದಲ್ಲಿ ರತ್ನಾಕರ ಎಂಬ ದರೋಡೆಕೋರನಾಗಿದ್ದ. ನಾರದರು ಒಮ್ಮೆ ಎದುರಾಗಿ ನಿನ್ನ ಈ ಅಪರಾದದಲ್ಲಿ ಮನೆಯವರು ಪಾಲುದಾರರೇ? ಎನ್ನುತ್ತಾನೆ, ವಿಚಾರಿಸಲಾಗಿ ರತ್ನಾಕರನ ಕುಟುಂಬ ಆತನ ಅಪರಾಧದಲ್ಲಿ ಪಾಲು ಪಡೆಯಲು ನಿರಾಕರಿಸುತ್ತಾರೆ. ನಂತರ ಆತನಿಗೆ ಅರಿವಾಗಿ ದರೋಡೆಯನ್ನು ನಿಲ್ಲಿಸಿ ತಪಸ್ಸು ಮಾಡುತ್ತಾನೆ. ಬಹುದಿನಗಳ ನಂತರ ಜ್ಞಾನೋದಯವಾಗಿ ತಪಸ್ಸಿಗೆ ಕೂತಲ್ಲಿಯೇ ಬೆಳೆದಿದ್ದ ಹುತ್ತವನ್ನು ಒಡೆದು ವಾಲ್ಮೀಕಿಯಾಗಿ ಹೊರಬಂದು ನಾರದರ ನಿರ್ದೇಶನದಂತೆ ರಾಮಾಯಣ ರಚನೆ ಮಾಡಿದ ಎನ್ನುವ ಕತೆ ಹೇಳುತ್ತಾರೆ. ಇದನ್ನು ವಿಶ್ವವಿದ್ಯಾಲಯಗಳ ಅಧ್ಯಾಪಕರಿಂದ ಹಿಡಿದು, ರಾಜಕಾರಣಿ, ಸಾಮಾನ್ಯ ಜನರ ತನಕ ಈ ಕತೆಯನ್ನು ಹೇಳುತ್ತಲೇ ಬಂದಿದ್ದಾರೆ. ಹಾಗಾದರೆ ವಾಲ್ಮೀಕಿ ದರೋಡೆಕೋರನಾಗಿದ್ದ ಎನ್ನುವುದಕ್ಕೆ ಪುರಾವೆ ಏನು?
ಒಂದೋ ಸ್ವತಃ ವಾಲ್ಮೀಕಿ ತಾನೇ ಬರೆದ ರಾಮಾಯಣದಲ್ಲಿ ದರೋಡೆಕೋರನಾಗಿರುವ ಬಗ್ಗೆ ಹೇಳಿಕೊಂಡಿರಬೇಕು. ಇಲ್ಲವೇ ವಾಲ್ಮೀಕಿಯ ಜತೆ ಬದುಕಿದ್ದ ಸಮಕಾಲೀನರು ಈತನ ಬದುಕನ್ನು ನೋಡಿ ಉಲ್ಲೇಖಿಸಿರಬೇಕು. ಸದ್ಯಕ್ಕೆ ಈ ಎರಡೂ ಪುರಾವೆಗಳು ಇಲ್ಲ. ಹಾಗಾದರೆ ವಾಲ್ಮೀಕಿ ದರೋಡೆಕೋರನಾಗಿದ್ದ ಎನ್ನುವ ಕಥೆ ಹುಟ್ಟಿದ್ದೆಲ್ಲಿ? ಚಾರಿತ್ರಿಕ ಅಧ್ಯಯನಗಳ ಕಡೆ ಹೊರಳೋಣ. ವಾಲ್ಮೀಕಿ ಮತ್ತು ರಾಮಾಯಣ ರಚನೆ ಕುರಿತಂತೆ ವ್ಯಾಪಕವಾದ ಅಧ್ಯಯನಗಳು ನಡೆದಿವೆ. ಇತಿಹಾಸ ತಜ್ಞ ಹೆಚ್.ಡಿ. ಸಾಂಕಾಲಿಯ ಉಲ್ಲೇಖಿಸುವಂತೆ, ಈ ಅಧ್ಯಯನ 1843 ರಿಂದ 1867 ರ ಅವಧಿಯಲ್ಲಿ ಗೊರೆಸ್ಯೋನ ಪ್ರಕಟಿಸಿದ ರಾಮಾಯಣದ ಆರು ಸಂಪುಟಗಳಿಂದ ಆರಂಭವಾಗಿದೆ. ಕಾಲನಿರ್ಣಯದ ಬಗ್ಗೆ ಎ.ವೆಬರ್ (1873) ಮೊದಲು ವಿಮರ್ಶೆ ಮಾಡಿರಬೇಕೆಂದು ಅಭಿಪ್ರಾಯ ತಾಳುತ್ತಾರೆ. ವಿಲಿಯಂ ಜೋನ್ಸ್, ರಾಮಸ್ವಾಮಿಶಾಸ್ತ್ರಿ, ಆರ್.ಸಿ.ಮುಜುಂದಾರ್, ಗೊರೇಸಿಯಾ, ಪುಲಸ್ಕರ್, ಪಿ.ವಿ ಕಾಣೆ, ಡಿ.ಡಿ.ಕೋಸಾಂಬಿ, ಎ.ಎಲ್.ಬಾಷಂ, ರೋಮಿಲಾ ಥಾಫರ್, ಇರ್ಫಾನ್ ಹಬೀಬ್, ಪೆರಿಯಾರ್, ಲೋಹಿಯಾ, ಅಂಬೇಡ್ಕರ್ ತನಕ ಹೀಗೆ ನೂರಾರು ಜನ ಇತಿಹಾಸ ತಜ್ಞರು, ಪುರಾತತ್ವಜ್ಞರು, ಹಲವು ಜ್ಞಾನಶಾಖೆಗಳ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿದ್ದಾರೆ.
ವಾಲ್ಮೀಕಿ ರಾಮಾಯಣದ ರಚನೆಯ ಕಾಲ ನಿರ್ಣಯದ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ, ಕ್ರಿ.ಪೂ. 3 ರಿಂದ 5 ನೇ ಶತಮಾನದ ಅಂತರದಲ್ಲಿ ವಾಲ್ಮೀಕಿ ಬದುಕಿದ್ದಿರಬೇಕು, ರಾಮಾಯಣ ರಚನೆಯಾಗಿದ್ದಿರಬೇಕು ಎಂಬ ನಿಲುವಿಗೆ ಹೆಚ್ಚು ಮಾನ್ಯತೆ ದೊರೆತಿದೆ. ಹೀಗೆ ವಾಲ್ಮೀಕಿ ಬದುಕಿದ್ದ ಕಾಲಘಟ್ಟವೇ ಮಸುಕಾಗಿರುವಾಗ ವಾಲ್ಮೀಕಿ ದರೋಡೆಕೋರನಾಗಿದ್ದನ್ನು ನೋಡಿದವರು ಯಾರು? ಮೇಲೆ ಉಲ್ಲೇಖಿಸಿದ ಅಧ್ಯಯನಗಳೂ ಸಹ ರಾಮಾಯಣದ ಕಣ್ಣೋಟದಲ್ಲಿ ವಾಲ್ಮೀಕಿಯ ಜೀವನ ವೃತ್ತಾಂತವನ್ನು ವಿವರಿಸಿದ್ದು ಬಿಟ್ಟರೆ, ಇತರೆ ಜೀವನ ವಿವರಗಳನ್ನು ದಾಖಲಿಸುವುದಿಲ್ಲ. ಹಾಗಾದರೆ ವಾಲ್ಮೀಕಿ ದರೋಡೆಕೋರನಾಗಿದ್ದ ಎನ್ನುವುದರ ನೆಲೆಗಟ್ಟೇನು? ಎನ್ನುವ ಪ್ರಶ್ನೆ ಎದುರು ನಿಲ್ಲುತ್ತದೆ.
ಕರ್ನಾಟಕದಲ್ಲಿ ಈ ತನಕ ವಾಲ್ಮೀಕಿ ದರೋಡೆಕೋರನಾಗಿದ್ದನು ಎನ್ನುವ ಕಟ್ಟುಕತೆಯನ್ನು ಬಹಿರಂಗವಾಗಿ ಪ್ರಶ್ನಿಸಿದ್ದಕ್ಕಿಂತ ಒಪ್ಪಿಕೊಂಡಿರುವುದೇ ಹೆಚ್ಚು. ಆದರೆ ಉತ್ತರ ಭಾರತದ ಪಂಜಾಬ್ ಒಳಗೊಂಡಂತೆ ಅಲ್ಲಿನ ವಾಲ್ಮೀಕಿ ಸಮುದಾಯದವರು ವಾಲ್ಮೀಕಿ ದರೋಡೆಕೋರನಾಗಿದ್ದ ಎನ್ನುವ ಉಲ್ಲೇಖ ಮತ್ತು ಕಟ್ಟುಕತೆಗಳ ವಿರುದ್ಧ ಬಂಡೆದ್ದಿದ್ದಾರೆ. ಉಲ್ಲೇಖಿಸಿದವರ ವಿರುದ್ಧ ಎಫ್.ಐ.ಆರ್ ದಾಖಲಿಸಿದ್ದಾರೆ. ಕೋರ್ಟಿನ ಕಟಕಟೆಗೆ ಎಳೆತಂದು ಸಾಕ್ಷಿ ಕೇಳಿದ್ದಾರೆ. 2003 ರಲ್ಲಿ ಪ್ರಸಾರವಾಗಿದ್ದ `ಕುಮ್ ಕುಮ್ ಏಕ್ ಪ್ಯಾರ್ ಬಂಧನ್’ ಎನ್ನುವ ಧಾರವಾಹಿಯಲ್ಲಿ ಮಹರ್ಷಿ ವಾಲ್ಮೀಕಿಯನ್ನು `ಡಾಕು’ ಎಂದು ಪದ ಬಳಸಿ ಪರಿಚಯಿಸಲಾಗಿತ್ತು. ಇದರ ವಿರುದ್ಧ ಎಫ್.ಐ.ಆರ್ ದಾಖಲಾಗಿತ್ತು. ಬ್ಯಾಗ್ ಫಿಲ್ಮ್ ಲಿಮಿಟೆಡ್ ನವರು ಪಂಜಾಬಿನ ವಾಲ್ಮೀಕಿ ಸಮುದಾಯವನ್ನು ಕ್ಷಮೆಕೋರಿದ್ದರು. ಟಿ.ವಿ ಮೂಲಕವೇ ಬಹಿರಂಗ ಕ್ಷಮೆಯಾಚಿಸಿ, ಸ್ಪಷ್ಟನೆಯ ಕಾರ್ಯಕ್ರಮ ಪ್ರಸಾರ ಮಾಡಿ ಕೇಸನ್ನು ವಾಪಾಸು ಪಡೆಯುವಂತೆ ಮನವಿ ಮಾಡಿದ್ದರು. ಇನ್ನು 2009 ರ `ಸ್ಟಾರ್ ಇಂಡಿಯಾ ಪ್ರವೇಟ್ ಲಿಮಿಟೆಡ್ ವರ್ಸಸ್ ಸ್ಟೇಟ್ ಆಫ್ ಪಂಜಾಬ್’ ಕೇಸಿನಲ್ಲಿ ವಾಲ್ಮೀಕಿ ದರೋಡೆಕೋರನಾಗಿರಲಿಲ್ಲ ಎನ್ನುವ ಜಸ್ಟೀಸ್ ರಾಜೀವ ಭಲ್ಲಾ ಅವರ ತೀರ್ಪಿನೊಂದಿಗೆ ತಾರ್ಕಿಕ ಅಂತ್ಯ ಕಂಡಿತು.
ಪಂಜಾಬ್‌ನ ಜಲಂಧರ್ ಜಿಲ್ಲೆಯ ಮಾಡೆಲ್ ಟೌನ್‌ನ ರಿಷಿನಗರದ ನಿವಾಸಿ ನವ್ವಿಕಾಸ್ ಎನ್ನುವವರು 6.10.2009 ರಲ್ಲಿ ಸ್ಟಾರ್ ಪ್ಲಸ್ ಟಿವಿಯಲ್ಲಿ `ಸಪ್ನ ಬಾಬುಲ್ ಕಾ ಬಿದಾಯಿ’ ಎನ್ನುವ ದಾರವಾಹಿ ನೋಡುತ್ತಿದ್ದರು. ಆ ದಾರವಾಹಿಯಲ್ಲಿ ವಾಲ್ಮೀಕಿಯ ಋಷಿಪೂರ್ವ ಜೀವನದಲ್ಲಿ ದರೋಡೆಕೋರನಾಗಿದ್ದ, ರೋಡ್ ರಾಬರ್ ಆಗಿದ್ದ ಎನ್ನುವ ಸಂಭಾಷಣೆ ಬರುತ್ತದೆ. ಸ್ವತಃ ವಾಲ್ಮೀಕಿ ಸಮುದಾಯದ ನವ್ವಿಕಾಸ್ ಅವರು ಈ ಸಂಭಾಷಣೆ ಮತ್ತು ದಾರವಾಹಿಯ ವಿರುದ್ಧ ಎಫ್.ಐ.ಆರ್ ದಾಖಲಿಸುತ್ತಾರೆ. ಈ ಕಟ್ಟುಕಥೆಗೆ ದಾಖಲೆ ಕೊಡಿ ಎಂದು ಕೇಳುತ್ತಾರೆ. ಸ್ಥಳೀಯ ಪೋಲೀಸರಿಂದ ನಿರೀಕ್ಷಿತ ಬೆಂಬಲ ಸಿಗದ ಕಾರಣ ನವ್ವಿಕಾಸ್ ಕೋರ್ಟ್ ಮೆಟ್ಟಿಲೇರುತ್ತಾರೆ.
ಪಂಜಾಬ್ ಯುನಿವರ್ಸಿಟಿ ಪಾಟಿಯಾಲದ ಪ್ರೊಫೆಸರ್ ಮಂಜುಳಾ ಸಹದೆವ್ ಅವರ ವಾಲ್ಮೀಕಿ ಜೀವನ ವೃತ್ತಾಂತವನ್ನು ಕುರಿತ ಸಂಶೋಧನೆಯನ್ನು ಕೋರ್ಟ್ ಪರಿಶೀಲಿಸುತ್ತದೆ. ಮಂಜುಳ ಸಹದೆವ್ 1979 ರಿಂದ ಪಂಜಾಬ್ ಯುನಿವರ್ಸಿಟಿಯಲ್ಲಿ ಸಂಸ್ಕೃತ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. 1995 – 2004ರ ತನಕ ಮಹರ್ಷಿ ವಾಲ್ಮೀಕಿ ಚೇರ್ ಮುಖ್ಯಸ್ಥರಾಗಿದ್ದರು. ಸಂಸ್ಕೃತ ಶಾಸ್ತ್ರೀಯ ಭಾಷೆಯ ಖಾಯಂ ಸದಸ್ಯರೂ ಆಗಿದ್ದಂತವರು. ಎಂಬತ್ತರ ದಶಕದಿಂದಲೂ ವಿಶೇಷವಾಗಿ ರಾಮಾಯಣ ಮತ್ತು ವಾಲ್ಮೀಕಿ ಕುರಿತು ನಿರಂತರ ಅಧ್ಯಯನ ಸಂಶೋಧನೆಗಳನ್ನು ಪ್ರಕಟಿಸಿದವರು. `ಮಹರ್ಷಿ ವಾಲ್ಮೀಕಿ ಏಕ್ ಸಮೀಕ್ಷಾತ್ಮಕ ಅಧ್ಯಯನ’ ಇವರ ಮಹತ್ವದ ಸಂಶೋಧನೆ. ಈ ಕೃತಿಯಲ್ಲಿ ಮಹರ್ಷಿ ವಾಲ್ಮೀಕಿ ಋಷಿಪೂರ್ವದಲ್ಲಿ ಡಕಾಯಿತ್, ರೋಡ್ ರಾಬರ್ ಆಗಿರಲಿಲ್ಲ ಎನ್ನುವುದರ ತಾರ್ಕಿಕ ವಿಶ್ಲೇಷಣೆ ಮಾಡಿದ್ದಾರೆ.
ಈ ಸಂಶೋಧನೆಯ ಮುಖ್ಯಾಂಶಗಳೆಂದರೆ, ವೇದಗಳ ಕಾಲದಿಂದ ಕ್ರಿ.ಶ 9 ನೇ ಶತಮಾನದ ತನಕ ವಾಲ್ಮೀಕಿ ಪೂರ್ವಾಶ್ರಮದಲ್ಲಿ ದರೋಡೆಕೋರನಾಗಿದ್ದ ಎನ್ನುವುದಕ್ಕೆ ಎಲ್ಲಿಯೂ ಉಲ್ಲೇಖಗಳಿಲ್ಲ. ಅಂತೆಯೇ ವಾಲ್ಮೀಕಿ ಅಂದರೆ ಹುತ್ತದಿಂದ ಎದ್ದು ಬಂದವ ಎನ್ನುವ ಪವಾಡ ಸದೃಶ್ಯ ಕಥನದ ಬಳಕೆಯೂ ಇಲ್ಲ. ವಾಲ್ಮೀಕಿ ಸ್ವರಚಿತ ರಾಮಾಯಣದಲ್ಲಿಯೇ ಎಲ್ಲಿಯೂ ತಾನು ಪೂರ್ವಾಶ್ರಮದಲ್ಲಿ ದರೋಡೆಕೋರನಾಗಿದ್ದ ಬಗ್ಗೆ ಪ್ರಸ್ತಾಪಿಸುವುದಿಲ್ಲ. ಬದಲಾಗಿ ತನ್ನನ್ನು ಭಗವಾನ್, ಮುನಿ, ರಿಷಿ, ಮಹರ್ಷಿ ಎಂದು ಕರೆದುಕೊಂಡದ್ದಕ್ಕೆ ಸಾಕ್ಷ್ಯಗಳಿವೆ. ಮೊಟ್ಟಮೊದಲ ಬಾರಿಗೆ ವಾಲ್ಮೀಕಿ ಋಷಿಪೂರ್ವದಲ್ಲಿ ದರೋಡೆಕೋರನಾಗಿದ್ದ ಎನ್ನುವುದನ್ನು ಹತ್ತನೆ ಶತಮಾನದ ಸ್ಕಂದ ಪುರಾಣ ಉಲ್ಲೇಖಿಸುತ್ತದೆ. ಇದು ಎಲ್ಲವನ್ನೂ ಪುರಾಣೀಕರಿಸುವ ಕಾಲಘಟ್ಟ. ಬಹುಶಃ ಸ್ಕಂದ ಪುರಾಣದ ಉಲ್ಲೇಖದ ನಂತರ ವಾಲ್ಮೀಕಿ ದರೋಡೆಕೋರನಾಗಿದ್ದ ಎನ್ನುವ ಕತೆಯನ್ನು ಹೆಣೆಯಲಾಗಿದೆ.
`ಮರ ಮರ’ ಎನ್ನುವ ಮಂತ್ರದ ಉಲ್ಲೇಖ 15 ಶತಮಾನದ `ಆದ್ಯಾತ್ಮ ರಾಮಾಯಣ’ ಮತ್ತು 16 ನೇ ಶತಮಾನದ `ಆನಂದ ರಾಮಾಯಣ’ ದಲ್ಲಿ ಸಿಗುತ್ತದೆ. ಅಂದರೆ `ಮರ ಮರ’ ಮಂತ್ರದಿಂದಲೆ ವಾಲ್ಮೀಕಿ ರಾಮಾಯಣ ರಚಿಸಿದ ಎನ್ನುವುದೂ ಕಟ್ಟುಕತೆ. 13 ಮತ್ತು 16 ನೇ ಶತಮಾನದಲ್ಲಿ ರಾಮನನ್ನು ವಿಷ್ಣುವಿನ ಅವತಾರ ಎಂದು ದೈವೀಕರಿಸಿದ ಮೇಲೆ ವಾಲ್ಮೀಕಿಯ ಬಗೆಗೆ ಇಂತಹ ಕತೆಗಳು ಹೆಣೆಯಲ್ಪಟ್ಟಿವೆ. ಹೆಚ್.ಡಿ.ಸಾಂಕಾಲಿಯ ಅವರ ಪ್ರಕಾರ ವಾಲ್ಮೀಕಿಯ ಕಾಲದಲ್ಲಿಯೇ ಬಿಡಿಬಿಡಿ ಜನಪದ ಕತೆಗಳಲ್ಲಿದ್ದ ರಾಮಕತೆಯನ್ನು ಜೋಡಿಸಿ ಮಹಾಕಾವ್ಯದ ರೂಪಕೊಟ್ಟು ರಾಮನನ್ನು ಶ್ರೀರಾಮನನ್ನಾಗಿಸಿ ಪುನರ್‌ಸೃಷ್ಠಿಸಿದ್ದು ವಾಲ್ಮೀಕಿ. ಆದರೆ ರಾಮನಾಮದ ಬಲದಿಂದಲೇ ವಾಲ್ಮೀಕಿ ರಾಮಾಯಣವನ್ನು ರಚಿಸಿದ ಎಂದು ವಾಲ್ಮೀಕಿಯನ್ನು ಆಧೀನ ಮಾಡಲಾಯಿತು. ಈ ಉದ್ದೇಶಕ್ಕಾಗಿ ವಾಲ್ಮೀಕಿಯ ಬಗೆಗೆ ಇಂತಹ ಕಟ್ಟುಕತೆಗಳನ್ನು ಕಟ್ಟಲಾಯಿತು. ಇದನ್ನು ಪರಿಶೀಲಿಸಿದಾಗ ವಾಲ್ಮೀಕಿ ಬದುಕಿದ್ದ 1500 ವರ್ಷಗಳ ನಂತರ ಆತ `ದರೋಡೆಕೋರನಾಗಿದ್ದ’ ಎನ್ನುವ ಕತೆ ಸಿಗುತ್ತದೆ. ಹೀಗಾಗಿ ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಪುರಾಣವನ್ನು ಉಲ್ಲೇಖಿಸುವುದು ಅಪರಾಧವಾಗುತ್ತದೆ ಎಂದು, 2009 ರ `ಸ್ಟಾರ್ ಇಂಡಿಯಾ ಪ್ರವೇಟ್ ಲಿಮಿಟೆಡ್ ವರ್ಸಸ್ ಸ್ಟೇಟ್ ಆಫ್ ಪಂಜಾಬ್’ ಕೇಸಿನಲ್ಲಿ ಜಸ್ಟೀಸ್ ರಾಜೀವ ಭಲ್ಲಾ `ವಾಲ್ಮೀಕಿ ಋಷಿಪೂರ್ವದಲ್ಲಿ ದರೋಡೆಕೋರನಾಗಿರಲಿಲ್ಲ’ ಎನ್ನುವ ತೀರ್ಪು ನೀಡುತ್ತಾರೆ. 2019 ರಲ್ಲಿ ಪ್ರೊ.ಮಂಜುಳ ಸಹದೇವ್ ವಿರುದ್ಧದ ಕೇಸಿನಲ್ಲಿ ಜಸ್ಟೀಸ್ ಅರವಿಂದ್ ಸಿಂಗ್ ಸಾಂಗ್ವಾನ್ ಅವರು ಕೂಡ ರಾಜೀವ ಭಲ್ಲಾ ಅವರ ತೀರ್ಪನ್ನು ಎತ್ತಿಹಿಡಿದಿದ್ದಾರೆ.
ಪಂಜಾಬ್ ಹೈಕೋರ್ಟಿನ ಜಸ್ಟೀಸ್ ರಾಜೀವ ಭಲ್ಲಾ ಅವರು ಮಂಜುಳ ಸಹದೇವ್ ಅವರ ಸಂಶೋಧನೆಯನ್ನು ಅಮೂಲಾಗ್ರವಾಗಿ ಅಧ್ಯಯನ ಮಾಡಿ, ಮೇಲಿನ ಮುಖ್ಯಾಂಶಗಳನ್ನು ಉಲ್ಲೇಖಿಸಿ ಮಹರ್ಷಿ ವಾಲ್ಮೀಕಿ ದರೋಡೆಕೋರನಾಗಿರಲಿಲ್ಲ. ಕಾಲಾನಂತರದಲ್ಲಿ ಆದ ಸೇರ್ಪಡೆಗಳಲ್ಲಿ ಈ ಬಗೆಯ ಕತೆಯನ್ನು ಕಟ್ಟಲಾಗಿದೆ. ಒಂದು ಸಮುದಾಯದ ಧರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ತೀರ್ಪು ನೀಡುತ್ತಾರೆ. ಈ ತೀರ್ಪಿನ ತರುವಾಯ ಬಹುತೇಕ ಉತ್ತರ ಭಾರತದ ರಾಜ್ಯಗಳಲ್ಲಿ ಸಾರ್ವಜನಿಕವಾಗಿ ವಾಲ್ಮೀಕಿಯು ದರೋಡೆಕೋರನಾಗಿದ್ದ ಎನ್ನುವ ಕಥೆಯ ಉಲ್ಲೇಖ ನಿಷೇಧವಾಗಿದೆ. ಅಕಸ್ಮಾತ್ ಈ ಕಥೆಯನ್ನು ಉಲ್ಲೇಖಿಸಿದರೆ ಎಫ್.ಐ.ಆರ್ ದಾಖಲಾಗುತ್ತದೆ.
ಮಹರ್ಷಿ ವಾಲ್ಮೀಕಿಯ ಬಗೆಗಿನ ಅಧ್ಯಯನಗಳು ಮತ್ತು ಸ್ವರಚಿತ ರಾಮಾಯಣವನ್ನು ಆಧರಿಸಿ ನೋಡುವುದಾದರೆ ವಾಲ್ಮೀಕಿ ರಾಮನೆಂಬ ಕಾಲ್ಪನಿಕ ಪಾತ್ರವನ್ನು ಸಶಕ್ತವಾಗಿ ಕಟ್ಟಿದ ಭರತಖಂಡದ ಆದಿಕವಿ, ಬೇಡ ಸಮುದಾಯದ ಮೊದಲ ಸಾಕ್ಷರ. ಸಂಸ್ಕೃತವನ್ನು ಕೆಳಜಾತಿ ದಮನಿತ ಸಮುದಾಯಗಳಿಗೆ ನಿಶೇಧಿಸಿದ್ದ ಕಾಲಘಟ್ಟದಲ್ಲಿ ಸಂಸ್ಕೃತವನ್ನು ಕಲಿತು ಮೇರು ಕಾವ್ಯವನ್ನು ರಚನೆ ಮಾಡಿದ್ದು ಈ ಸಮುದಾಯಗಳಿಗೆ ಒಂದು ಸ್ಪೂರ್ತಿದಾಯಕ ಸಂಗತಿ. ಕೆಳಜಾತಿ ಜನರು ಯಾವುದೇ ಮಹತ್ಸಾಧನೆಯನ್ನು ಮಾಡಿದಾಗ ಮೇಲ್ಜಾತಿಗಳು ಅವರ ಹುಟ್ಟನ್ನೆ ಅನುಮಾನಿಸುವ, ಅವರ ಚಾರಿತ್ರ್ಯವನ್ನು ತಿರುಚುವ ಯತ್ನ ನಡದೇ ಇದೆ. ವಾಲ್ಮೀಕಿ ಋಷಿಪೂರ್ವದಲ್ಲಿ ದರೋಡೆಕೋರನಾಗಿದ್ದ ಎನ್ನುವ ಕಟ್ಟುಕಥೆ ಕೂಡ ಇಂತಹದ್ದೇ ಒಂದು ಪ್ರಯತ್ನ. ಹಾಗಾಗಿ ವಾಲ್ಮೀಕಿಯನ್ನು ಅಕ್ಷರ, ಶಿಕ್ಷಣ, ಜ್ಞಾನ, ಹೋರಾಟದ ಸಂಕೇತವಾಗಿ ಪರಿಭಾವಿಸಬೇಕಿದೆ. ಇನ್ನಾದರೂ ವಾಲ್ಮೀಕಿ ಋಷಿಪೂರ್ವದಲ್ಲಿ ದರೋಡೆಕೋರನಾಗಿದ್ದ ಎನ್ನುವ ಕಟ್ಟುಕತೆಯನ್ನು ಹೇಳುವುದನ್ನು ನಿಲ್ಲಿಸಬೇಕು.
-ಡಾ. ಅರುಣ್ ಜೋಳದಕೂಡ್ಲಿಗಿ