ಬೆಂಗಳೂರು: ʼಪಕ್ಷವನ್ನು ಕಟ್ಟಲು ಹಾಗೂ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ನಾನು ದೊಡ್ಡ ಪಾತ್ರ ನಿರ್ವಹಿಸಿದ್ದರಿಂದ ಬಿಜೆಪಿಯಿಂದ ಟೀಕೆಯನ್ನು ಎದುರು ನೋಡಿರಲಿಲ್ಲʼ ಎಂದು ಬಳ್ಳಾರಿಯಲ್ಲಿ ಮಾತನಾಡಿದ ಜನಾರ್ಧನ ರೆಡ್ಡಿಗೆ ರಾಜ್ಯ ಕಾಂಗ್ರೆಸ್ ಪ್ರಶ್ನೆಗಳ ಸುರಿಮಳೆ ಸುರಿಸಿದೆ,
ಮೊನ್ನೆ ಬಳ್ಳಾರಿಗೆ ಬಂದಾಗ ಮಾತನಾಡಿದ ಜನಾರ್ಧನ ರೆಡ್ಡಿಯವರು, “ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಗೆ ನನ್ನನ್ನು ಟೀಕಿಸುವ ಎಲ್ಲಾ ಹಕ್ಕಿದೆ, ಆದರೆ, ಪಕ್ಷವನ್ನು ಕಟ್ಟಲು ಹಾಗೂ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ನಾನು ದೊಡ್ಡ ಪಾತ್ರ ನಿರ್ವಹಿಸಿದ್ದರಿಂದ ಬಿಜೆಪಿಯಿಂದ ಟೀಕೆಯನ್ನು ಎದುರು ನೋಡಿರಲಿಲ್ಲ. ನನ್ನ ರಾಜಕೀಯ ಬದುಕಿನ ಕುರಿತು ನನಗೆ ತೃಪ್ತಿಯಿದೆ. ಶೀಘ್ರದಲ್ಲೇ, ನನ್ನ ಮುಂದಿನ ನಡೆಯನ್ನು ನಿರ್ಧರಿಸುತ್ತೇನೆ.” ಎಂದು ಮೊನ್ನೆ ಬಳ್ಳಾರಿಗೆ ಬಂದಾಗ ಹೇಳಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯಕಾಂಗ್ರೆಸ್ ಘಟಕ, ʼಬಿಜೆಪಿಯವರೇ ನನ್ನ ಬೆನ್ನಿಗೆ ಚೂರಿ ಹಾಕಿದರು ಎಂದು ಮಾಜಿ ಸಚಿವ ಜನಾರ್ಧನ ರೆಡ್ಡಿ ಗೋಳಾಡುತ್ತಿರುವುದು ಯಾರ ವಿರುದ್ಧ?ʼ ಗೆಳೆಯನನ್ನು ಬಿಟ್ಟಿರುವ ಶ್ರೀ ರಾಮುಲು ವಿರುದ್ಧವೇ? ಅಥವಾ ಋಣ ಮರೆತಿರುವ ಬಿ.ಎಸ್.ಯಡಿಯೂರಪ್ಪನವರ ವಿರುದ್ಧವೇ?ʼ ಎಂದು ಪ್ರಶ್ನೆ ಮಾಡಿದೆ.
ಆಪರೇಷನ್ ಕಮಲ ಎಂಬ ಕೊಳಕು ರಾಜಕೀಯಕ್ಕೆ ನಾಂದಿ ಹಾಡಿದವರನ್ನು ತುಳಿದು ಹಾಕಿದ ಬಿಜೆಪಿ ವಿರುದ್ಧವೇ? ಎಂದು ಪ್ರಶ್ನಿಸಿ ಕಾಂಗ್ರೆಸ್ ಕಿಡಿಕಾರಿದೆ.