Home ಅಂಕಣ ಮಲ್ಲಣ್ಣನ ಇಂಗ್ಲಿಷ್ ವೈದ್ಯಕೀಯ ಪಜೀತಿ ಪುರಾಣ

ಮಲ್ಲಣ್ಣನ ಇಂಗ್ಲಿಷ್ ವೈದ್ಯಕೀಯ ಪಜೀತಿ ಪುರಾಣ

0

“..ಊರಾಗ ಮಲ್ಲಣ್ಣ ಅಂದ್ರೆ ಅರೆಬರೆ ಇಂಗ್ಲಿಷ್ ಮಾತಾಡೋ ಸಾಹೇಬ. ಅವನಿಗೆ ಇಂಗ್ಲಿಷ್ ಭಾಷೆ ಪೂರ್ತಿ ಬರಂಗಿಲ್ಲ, ಆದ್ರೆ ನಾಲ್ಕು ವರ್ಡ್ಸ್ ಕಲಿತು ಇಡೀ ಊರ ಮುಂದೆ ಜಂಭ ಕೊಚ್ಚಿಕೊಳ್ಳೋದು ಅವನಿಗೆ ಭಾಳ ಇಷ್ಟ..” ಮುಂದೆ ನೀವೇ ಓದಿ.. ನಾಮದೇವ ಕಾಗದಗಾರ ಅವರ ಬರಹದಲ್ಲಿ

ಊರಾಗ ಮಲ್ಲಣ್ಣ ಅಂದ್ರೆ ಅರೆಬರೆ ಇಂಗ್ಲಿಷ್ ಮಾತಾಡೋ ಸಾಹೇಬ. ಅವನಿಗೆ ಇಂಗ್ಲಿಷ್ ಭಾಷೆ ಪೂರ್ತಿ ಬರಂಗಿಲ್ಲ, ಆದ್ರೆ ನಾಲ್ಕು ವರ್ಡ್ಸ್ ಕಲಿತು ಇಡೀ ಊರ ಮುಂದೆ ಜಂಭ ಕೊಚ್ಚಿಕೊಳ್ಳೋದು ಅವನಿಗೆ ಭಾಳ ಇಷ್ಟ. “ನಮಗೆ ಎಲ್ಲಾ ಗೊತ್ತು” ಅನ್ನೋ ಅಹಂಕಾರ ಅವನ ತಲೆಯಲ್ಲಿ ತುಂಬಿತ್ತು.

ಒಂದು ದಿನ ಮಲ್ಲಣ್ಣನಿಗೆ ಜೋರಾಗಿ ಹೊಟ್ಟೆ ನೋವು ಬಂತು. ಊರಾಗ ಹೊಸದಾಗಿ ಬಂದಿದ್ದ ಇಂಗ್ಲಿಷ್ ಡಾಕ್ಟರ್ ಪ್ರಸನ್ ರವರ ಹತ್ತಿರ ಹೋದ. ಡಾಕ್ಟರ್ ಇವನನ್ನು ಚೆಕ್ ಮಾಡಿ, “ನೋಡಿ ಮಲ್ಲಣ್ಣನವರೇ, ನಿಮಗೇನೂ ದೊಡ್ಡ ಕಾಯಿಲೆ ಇಲ್ಲ. ಗ್ಯಾಸ್ಟ್ರಿಕ್ ಆಗಿದೆ ಅಷ್ಟೆ. ಒಂದು ಸಣ್ಣ ಸಿರಪ್ ಬರೆದುಕೊಡ್ತೀನಿ. ಅದನ್ನ ದಿನಾ ರಾತ್ರಿ ಮಲಗುವಾಗ ‘Two Tablespoon ಕುಡಿಯಿರಿ,” ಅಂತ ಇಂಗ್ಲಿಷ್ ನಲ್ಲೇ ಹೇಳಿ ಬಾಟಲಿ ಕೊಟ್ಟರು.

ನಮ್ಮ ಮಲ್ಲಣ್ಣನಿಗೆ ‘ಸ್ಪೂನ್’ ಅಂದ್ರೆ ಚಮಚ ಅಂತ ಗೊತ್ತು, ಆದ್ರೆ ಈ ‘ಟೇಬಲ್’ ಅನ್ನೋ ವರ್ಡ್ ಕೇಳಿ ಅವನ ಅರೆಬರೆ ಇಂಗ್ಲಿಷ್ ತಲೆ ಒಳಗ ಉಲ್ಟಾ ಆಲೋಚನೆ ಶುರುವಾತು ನೋಡಿ. “ಡಾಕ್ಟರ್ ಸಾಹೇಬ್ರು ಟೇಬಲ್ ಮ್ಯಾಲೆ ನಿಂತು ಎರಡು ಚಮಚ ಕುಡಿ ಅಂತ ಹೇಳಿದ್ದಾರೆ. ಇಂಗ್ಲಿಷ್ ಮೆಡಿಸಿನ್ ಅಂದ್ರೆ ಹಂಗೇ ಇರಬೇಕು” ಅಂತ ಅನ್ಕೊಂಡ.

ಮನೆಗೆ ಬಂದವನೇ, ರಾತ್ರಿ ಊಟ ಮುಗಿಸಿ, ಅಡುಗೆ ಮನೆಯಲ್ಲಿದ್ದ ದೊಡ್ಡದೊಂದು ಮರದ ‘ಊಟದ ಟೇಬಲ್’ ಮೇಲೆ ಹತ್ತಿ ನಿಂತ! ಹೆಂಡತಿ ಕಮಲವ್ವ ನೋಡಿ ಗಾಬರಿಯಾಗಿ, “ರೀ! ರಾತ್ರಿ ಹನ್ನೊಂದು ಗಂಟೆಗೆ ಟೇಬಲ್ ಮ್ಯಾಲೆ ಹತ್ತಿ ಯಾಕೆ ನಿಂತೀರಿ? ಕೆಳಗೆ ಇಳಿರಿ!” ಅಂದ್ಲು.

ಮಲ್ಲಣ್ಣ ಜಂಭದಿಂದ, “ನಿನಗೇನು ತಿಳೀತೈತೇ ಆಕಿ? ಇದು ಇಂಗ್ಲಿಷ್ ಟ್ರೀಟ್‌ಮೆಂಟ್! ಡಾಕ್ಟರ್ ಪ್ರಸನ್ ಹೇಳಿದ್ದಾರೆ ‘ಟೇಬಲ್ ಸ್ಪೂನ್’ ಅಂತ. ಅಂದ್ರೆ ಟೇಬಲ್ ಮ್ಯಾಲೆ ನಿಂತೇ ಔಷಧಿ ಕುಡಿಯಬೇಕು” ಅಂತ ಹೇಳಿ, ಬಾಟಲಿ ಮುಚ್ಚಳ ತೆಗೆದು ಎರಡು ಚಮಚ ಸಿರಪ್ ಬಾಯಿಗೆ ಹಾಕಿಕೊಂಡ.

ಆದ್ರೆ, ಆ ಸಿರಪ್ ಭಾಳ ಕಹಿ ಇತ್ತು. ಕಹಿ ತಡೆಯಲಾಗದೆ ಮಲ್ಲಣ್ಣನಿಗೆ ಒಮ್ಮೆಲೇ ಭೀಕರವಾಗಿ ಕೆಮ್ಮು ಬಂತು! ಕೆಮ್ಮುವ ರಭಸಕ್ಕೆ ಟೇಬಲ್ ಮ್ಯಾಲೆ ಅವನ ಬ್ಯಾಲೆನ್ಸ್ ತಪ್ಪಿತು. “ಧಪ್ಪಾ… ಧುಪ್. ಲಟಕ್.. ಕಟಕ್…” ಅಂತ ಮಲ್ಲಣ್ಣ ಟೇಬಲ್ ಮೇಲಿಂದ ಸೀದಾ ಕೆಳಗಿದ್ದ ಹಳೇ ಒರಳು ಕಲ್ಲಿನ ಮೇಲೆ ಬಿದ್ದ! ಟೇಬಲ್ ಕೂಡ ಮುರಿದು ಅವನ ಮೇಲೆಯೇ ಬಿತ್ತು.

ಬಿದ್ದ ರಭಸಕ್ಕೆ ಮಲ್ಲಣ್ಣನ ಸೊಂಟದ ಮೂಳೆ ಜರ್ರ್..‌. ಅಂತ ಸರಿದುಹೋಯ್ತು. “ಅಯ್ಯೋ… ಅಮ್ಮೋ… ಎಮ್ಮೋ… ನನ್ನ ಸೊಂಟ ಮುರಿತೋ ದೇವ್ರೇ…” ಅಂತ ನಡುರಾತ್ರಿಯಾಗ ಊರೆಲ್ಲಾ ಕೇಳುವಂತೆ ಒದರಲಿಕ್ಕೆ ಶುರು ಮಾಡಿದ.

ಮರುದಿನ ಬೆಳಗ್ಗೆ ಇಡೀ ಊರ ಜನ್ರು ಮಲ್ಲಣ್ಣನನ್ನ ನೋಡಾಕೆ ಬಂದಾಗ, ಅವನು ಮಂಚದ ಮೇಲೆ ಸೊಂಟಕ್ಕೆ ದಪ್ಪನೆಯ ಪಟ್ಟಿ ಕಟ್ಟಿಕೊಂಡು ಮಲಗಿದ್ದ. ಪಕ್ಕದಲ್ಲೇ ಪ್ರಸನ್ ಡಾಕ್ಟರ್ ನಿಂತು ಪ್ರಸಾಂತವಾಗಿ ನಗುತ್ತಾ ಇದ್ದರು.

ವಿಷಯ ತಿಳಿದು ಇದ ಹೊತ್ತಾಗ ಊರ ಗೌಡ್ರು ಬಂದ್ರು, ಮಲ್ಲಣ್ಣನ ಸ್ಥಿತಿ ನೋಡಿ ಅಂದ್ರು, “ಲೇ ಮಲ್ಲಣ್ಣಾ… ಅರೆಬರೆ ಇಂಗ್ಲಿಷ್ ಜ್ಞಾನ ಇಟ್ಕೊಂಡು ಹೊಟ್ಟೆನೋವಿಗೆ ಟೇಬಲ್ ಮ್ಯಾಲೆ ಹತ್ತಿ ಕುಳಿತೆ. ಇವತ್ತು ಹೊಟ್ಟೆನೋವು ಏನೋ ವಾಸಿ ಆತು, ಆದ್ರೆ ನಿನ್ನ ಅತಿಬುದ್ಧಿವಂತಿಕೆಗೆ ಸೊಂಟದ ಮೂಳೆ ಮಾತ್ರ ‘ಟೇಬಲ್’ ತರಹ ಫ್ಲಾಟ್ ಆಗಿಬಿಡ್ತಲ್ಲೋ ಮಂಗಾ!” ಹಳೆ ಮಂಗಾ..! ಅಂತ ನಕ್ಕರು. ಮಲ್ಲಣ್ಣ ನಾಚಿಕೆಯಿಂದ ತಲೆ ಮುಚ್ಚಿಕೊಂಡು ಹೊದ್ದು ಮಲಗಿದ.

You cannot copy content of this page

Exit mobile version