ಹಾವೇರಿ: ಹಾವೇರಿ ವಿಶ್ವ ವಿದ್ಯಾಲಯವನ್ನು ಮುಚ್ಚದಂತೆ ಹಾಗೂ ವಿಲೀನಗೊಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಲು ಪ್ರಯತ್ನಿಸಲಾಗುವುದು ಎಂದು ಜವಳಿ, ಕಬ್ಬು ಅಭಿವೃದ್ಧಿ-ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರು ಮತ್ತು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಎಸ್ ಪಾಟೀಲ ಅವರು ಭರವಸೆ ನೀಡಿದರು.
ನಗರದ ನಗರಸಭೆ ಕಛೇರಿಯಲ್ಲಿ ಸೋಮವಾರ ಹಾವೇರಿ ವಿ.ವಿಯನ್ನು ವಿಲೀನ ಅಥವಾ ಮುಚ್ಚುವ ಪ್ರಕ್ರಿಯೆಯನ್ನು ರಾಜ್ಯ ಸರಕಾರ ಕೂಡಲೇ ರದ್ದುಪಡಿಸಬೇಕು ಹಾಗೂ ವಿ.ವಿ ಗೆ ಅಗತ್ಯ ಅನುದಾನ ಒದಗಿಸಬೇಕು ಎಂದು ಒತ್ತಾಯಿಸಿ, ಹಾವೇರಿ ವಿಶ್ವ ವಿದ್ಯಾಲಯ ಉಳಿಸಿ ಹೋರಾಟ ಸಮಿತಿ ಮುಖಂಡರು ಸಲ್ಲಿಸಿದ ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದರು.
ಮುಖ್ಯಮಂತ್ರಿಗಳು ಬಜೆಟ್ ಅಧಿವೇಶನದಲ್ಲಿ ವಿ.ವಿ ಗಳನ್ನು ಮುಚ್ಚುವುದಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ, ಹಾಗಾಗಿ ಹಾವೇರಿ ವಿ.ವಿ ಯನ್ನು ಮುಚ್ಚುವ ಪ್ರಶ್ನೆ ಬರುವುದಿಲ್ಲ ಎಂದರು.
ಆಗ ಹೋರಾಟ ಸಮಿತಿ ಸಂಚಾಲಕ ಬಸವರಾಜ ಪೂಜಾರ ಮಾತನಾಡಿ, ಸರಕಾರ ಬಜೆಟ್ ಅಧಿವೇಶನದಲ್ಲಿ ವಿಶ್ವ ವಿದ್ಯಾಲಯಗಳನ್ನು ಮುಚ್ಚುವುದಿಲ್ಲ ಎಂದು ಆದೇಶ ಮಾಡುತ್ತದೆ ಎಂದು ಜಿಲ್ಲೆಯ ಜನತೆ ಆಶಾಭಾವನೆ ಹೊಂದಿತ್ತು. ಬಜೆಟ್ ಅಧಿವೇಶನದಲ್ಲಿ ರಾಜ್ಯದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರ ವಿಭಿನ್ನ ಮತ್ತು ಗೊಂದಲಕಾರಿ ಹೇಳಿಕೆಗಳು ನಮಗೆ ಮತ್ತಷ್ಟು ಆತಂಕವನ್ನುಂಟು ಮಾಡಿವೆ ಎಂದರು.
ಸ್ವತಃ ಮುಖ್ಯಮಂತ್ರಿಗಳು ವಿ.ವಿ ಮುಚ್ಚುವ ಪ್ರಸ್ತಾವ ಸರಕಾರದ ಮುಂದೆ ಇಲ್ಲ, ಸಂಪುಟ ಉಪ ಸಮಿತಿಯ ತೀರ್ಮಾನವು ಸಂಪುಟ ಸಭೆಗೆ ಬಂದ್ಮೇಲೆ ಸೂಕ್ತ ಕ್ರಮ ಕೈಗೊಳ್ತಿವಿ ಅಂತ ಹೇಳಿದ್ದಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಉಪ ಮುಖ್ಯಮಂತ್ರಿಗಳು ನಾವು ವಿಶ್ವವಿದ್ಯಾಲಯಗಳನ್ನು ಮುಚ್ಚುವುದಿಲ್ಲ ಬದಲಾಗಿ ವಿಲೀನಗೊಳಿಸುತ್ತೇವೆ ಅಂತ ಹೇಳಿದ್ದಾರೆ. ಉನ್ನತ ಶಿಕ್ಷಣ ಮಂತ್ರಿಗಳು ಕೂಡ ಇದೇ ರೀತಿ ಹೇಳಿರುವುದು ಮಾಧ್ಯಮಗಳಲ್ಲಿ ಭಿತ್ತರಗೊಂಡಿರುವುದರ ಕುರಿತು ಸಚಿವರ ಗಮನ ಸೆಳೆದರು.
ಸರಕಾರ ಯಾವುದೇ ಸೌಕರ್ಯಗಳನ್ನು ಒದಗಿಸದಿರುವ ಸ್ಥಿತಿಯಲ್ಲಿಯೂ ಹಲವು ಪ್ರಮುಖ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಅಗತ್ಯವಿರುವ ಉನ್ನತ ಶಿಕ್ಷಣ ಪಡೆಯಲು ವಿವಿಧ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಹಾವೇರಿ ವಿ.ವಿ ಯು ಮುನ್ನಡೆಯುತ್ತಿದೆ. ಸರಕಾರದಿಂದ ಅನುದಾನವಿರದ ಪರಿಸ್ಥಿತಿಯಲ್ಲಿಯೂ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿರುವ ವಿಶ್ವವಿದ್ಯಾಲಯವನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ರಾಜ್ಯ ಸರಕಾರ ತೀರ್ಮಾನವನ್ನು ಹಿಂಪಡೆಯುವಂತೆ ಜಿಲ್ಲೆಯ ಎಲ್ಲ ಮಠಾಧೀಶರು, ಶಿಕ್ಷಣ ತಜ್ಞರು, ಜನಪರ ಸಂಘಟನೆಗಳು ಹಾಗೂ ಜಿಲ್ಲೆಯ ಜನರು ಈಗಾಗಲೇ ಪ್ರತಿಭಟಿಸಿದ್ದಾರೆ. ಸರಕಾರ ವಿ.ವಿ ವಿಲೀನ – ಮುಚ್ಚುವ ತೀರ್ಮಾನ ಹಿಂಪಡೆಯದಿದ್ದರೆ ಹಾವೇರಿ ವಿ.ವಿ ಉಳಿವಿಗಾಗಿ ಜಿಲ್ಲೆಯ ಎಲ್ಲ ಮಠಾಧೀಶರು ಹಾಗೂ ಸಂಘಟನೆಗಳು, ಜನತೆ ಬೀದಿಗಿಳಿಯುವುದು ಅನಿವಾರ್ಯವಾಗುತ್ತದೆಂಬುದನ್ನು ಕೂಡ ಸಚಿವರಿಗೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ವಿಶ್ವ ವಿದ್ಯಾಲಯಗಳಿಂದಲೂ ವರದಿ ತರಿಸಿಕೊಳ್ಳಲಾಗುವುದು. ಎರಡೂ ಕಡೆಯಿಂದ ಆಲೋಚಿಸಿ ಹಾವೇರಿ ವಿ.ವಿ ಅನ್ಯಾಯವಾಗದಂತೆ ಉಳಿಸಲು ಸರಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಪ್ರಯತ್ನ ಮಾಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಸತೀಶ ಕುಲಕರ್ಣಿ, ನಗರಸಭೆ ಅಧ್ಯಕ್ಷರಾದ ಶಶಿಕಲಾ ಆರ್ ಮಾಳಗಿ, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಸಾತೇನಹಳ್ಳಿ, ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಸಂಜೀವ ನೀರಲಗಿ, ಹಾವೇರಿ ವಿಶ್ವ ವಿದ್ಯಾಲಯ ಉಳಿಸಿ ಹೋರಾಟ ಸಮಿತಿ ಮುಖಂಡರಾದ ಹೊನ್ನಪ್ಪ ಮರೆಮ್ಮನವರ, ಉಡಚಪ್ಪ ಮಾಳಗಿ, ಎಂ. ಆಂಜನೇಯ, ಮಲ್ಲಿಕಾರ್ಜುನ ಬಳ್ಳಾರಿ, ವಿಭೂತಿ ಶೆಟ್ಟಿನಾಯಕ, ಬಸವರಾಜ ಎಸ್, ಪದ್ಮರಾಜ ಕಳಸೂರು, ಸಿದ್ದು ಮರೆಮ್ಮನವರ ಸೇರಿದಂತೆ ಇತರರು ಇದ್ದರು.