ಖ್ಯಾತ ಫ್ಯಾಕ್ಟ್ ಚೆಕ್ಕರ್ ಹಾಗೂ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹ್ಮಮದ್ ಜುಬೇರ್ ತನ್ನನ್ನೂ ಈ ಹಿಂದೆ ಬಿಜೆಪಿಗೆ ಆಹ್ವಾನಿಸಲಾಗಿತ್ತು ಎಂದು ಹೇಳಿದ್ದಾರೆ.
ಈ ಹಿಂದೆ ಪೊಲೀಸರು ಜುಬೇರ್ ವಿರುದ್ಧ ಕೇಸು ದಾಖಲಿಸಿ ಅವರನ್ನು ಜೈಲಿನಲ್ಲಿ ಇರಿಸಿದ್ದರು. ಆ ಸಂದರ್ಭದಲ್ಲಿ ಜೈಲಿನೊಳಗಿದ್ದ ವ್ಯಕ್ತಿಯೊಬ್ಬ ಜುಬೇರ್ ಅವರನ್ನು ಬಿಜೆಪಿಗೆ ಬರುವಂತೆ ಆಹ್ವಾಹಿನಿಸಿದ್ದ ಎಂದು ನೆನಪಿಸಿಕೊಂಡಿದ್ದಾರೆ.
ಆ ಸಂದರ್ಭದಲ್ಲಿ ಆ ವ್ಯಕ್ತಿಯು “ಜುಬೇರ್ ಬಾಯ್ ನೀವೇಕೆ ನಮ್ಮ ಪಾರ್ಟಿ ಸೇರಬಾರದು? ನಗಬೇಡಿ, ನಾನು ಸೀರಿಯಸ್ ಆಗಿ ಹೇಳ್ತಿದ್ದೀನಿ. ನೀವು ನಮ್ಮ ಪಕ್ಷ ಸೇರಿದರೆ ನಿಮ್ಮ ಮೇಲಿನ ಬೋಗಸ್ ಕೇಸುಗಳನ್ನೆಲ್ಲ ಕೈ ಬಿಡುತ್ತೇವೆ. ಪಕ್ಷದ ನಾಯಕತ್ವದ ಸಮ್ಮುಖದಲ್ಲಿ ನಿಮ್ಮನ್ನು ಪಕ್ಷಕ್ಕೆ ಸ್ವಾಗತಿಸಲಾಗುತ್ತದೆ. ನಮ್ಮ ಪಕ್ಷದ ಬೆಂಬಲಿಗರು ನಿಮ್ಮನ್ನು ಟಾರ್ಗೆಟ್ ಮಾಡುವುದನ್ನು ನಿಲ್ಲಿಸುತ್ತಾರೆ. ನಿಮ್ಮನ್ನು ಹೊಗಳುತ್ತಾರೆ. ಹಣ ಮತ್ತೆ ಮರ್ಯಾದೆ ಕೂಡಾ ಬಹಳಷ್ಟು ಸಿಗುತ್ತೆ. ನಿಮ್ಮ ಕುಟುಂಬದ ಒಳಿತಿಗೆ ಯೋಚಿಸಿ. ನಿಮ್ಮ ಭವಿಷ್ಯದ ಬಗ್ಗೆ ಯೋಚಿಸಿ” ಎಂದು ಹೇಳಿದ್ದ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಅವರಿಗೆ ಬಿಜೆಪಿ ಸೇರುವಂತೆ ಪುಸಲಾಯಿಸಿದ್ದ ವ್ಯಕ್ತಿಯು ಈ ಹಿಂದೆ ಶಿವಸೇನೆಯಲ್ಲಿದ್ದ, ಆದರೆ ಈಗ ಅವನೂ ಬಿಜೆಪಿಯಲ್ಲಿದ್ದಾನೆ ಎಂದು ಅವರು ಬರೆದಿದ್ದಾರೆ.
ಶೆಹ್ಲಾ ರಶೀದ್ ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ಗೃಹ ಮಂತ್ರಿ ಹಾಗೂ ಪ್ರಧಾನ ಮಂತ್ರಿಯವರನ್ನು ಸ್ಮಿತಾ ಪ್ರಕಾಶ್ ಅವರ ಪಾಡ್‌ಕಾಸ್ಟ್ ಸಂದರ್ಶನದಲ್ಲಿ ಹೊಗಳಿದ ಸಂದರ್ಭದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿರುವುದು ಕುತೂಹಲ ಕೆರಳಿಸಿದೆ.