ಬೆಂಗಳೂರು: ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಒಂದು ದಿನ ವೇತನ ಸಹಿತ ಮುಟ್ಟಿನ ರಜೆ ನೀಡುವ ಕುರಿತು ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆಗೆ ಹೈಕೋರ್ಟ್ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಬುಧವಾರ ಹಿಂತೆಗೆದುಕೊಳ್ಳಲಾಗಿದೆ. ಸರ್ಕಾರದ ಪರ ಅಡ್ವೊಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ ಮಂಡಿಸಿದ ವಾದಗಳನ್ನು ಪರಿಗಣಿಸಿದ ಏಕಸದಸ್ಯ ಪೀಠ (ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ) ತಡೆಯಾಜ್ಞೆಯನ್ನು ತೆರವುಗೊಳಿಸಿದೆ.
ರಾಜ್ಯ ಕಾರ್ಮಿಕ ಇಲಾಖೆ 2025ರ ನವೆಂಬರ್ 20ರಂದು ಜಾರಿಗೆ ತಂದಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಬೆಂಗಳೂರು ಹೋಟೆಲ್‌ಗಳ ಸಂಘ ಸೇರಿದಂತೆ ಅನೇಕ ಸಂಸ್ಥೆಗಳು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದವು. ಮಂಗಳವಾರ ಬೆಳಿಗ್ಗೆ ಈ ಅರ್ಜಿಗಳ ವಿಚಾರಣೆಯಲ್ಲಿ ನ್ಯಾಯಾಲಯ ಅಧಿಸೂಚನೆಗೆ ತಾತ್ಕಾಲಿಕ ತಡೆ ನೀಡಿತ್ತು. ಆದರೆ ಇದೇ ದಿನ ಮಧ್ಯಾಹ್ನ ಸರ್ಕಾರ ಮರುಪರಿಶೀಲನೆ ಕೋರಿ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ತಡೆಯಾಜ್ಞೆ ಹಿಂತೆಗೆದುಕೊಳ್ಳಲಾಯಿತು.
ಬುಧವಾರ ನಡೆದ ಮುಂದಿನ ವಿಚಾರಣೆಯಲ್ಲಿ ಸರ್ಕಾರದ ಪರ ವಾದ ಮಂಡಿಸಿದ ಎಜಿ ಶಶಿ ಕಿರಣ್ ಶೆಟ್ಟಿ, ಮಹಿಳೆಯರ ಕಾರ್ಯಸ್ಥಳದಲ್ಲಿ ಮಾನವೀಯ ಪರಿಸ್ಥಿತಿಗಳನ್ನು ಖಚಿತಪಡಿಸುವ ಉದ್ದೇಶದಿಂದ ಪ್ರಗತಿಪರ ನೀತಿಯನ್ನು ರೂಪಿಸಲಾಗಿದೆ ಎಂದು ಕೋರ್ಟ್‌ಗೆ ತಿಳಿಸಿದರು. ಸಂವಿಧಾನದ 42ನೇ ಪರಿಚ್ಛೇದ ಹಾಗೂ ಸುಪ್ರೀಂ ಕೋರ್ಟ್ ಸೂಚನೆಗಳು ನೀತಿಗೆ ಸಾಥ್ ನೀಡುತ್ತವೆ ಎಂದು ಅವರು ವಾದಿಸಿದರು. “ದೇಶದ ಬೇರೆ ಯಾವುದೇ ರಾಜ್ಯ ಜಾರಿಗೊಳಿಸದ ರೀತಿಯ ಮುಂದುವರದ ಕಾಯ್ದೆ ಇದು. 72 ಆಕ್ಷೇಪಗಳನ್ನು ಪರಿಶೀಲಿಸಿದ ಬಳಿಕವೇ ಅಧಿಸೂಚನೆ ಜಾರಿಗೊಂಡಿದೆ” ಎಂದು ಎಜಿ ತಿಳಿಸಿದರು.
ಅಧಿಸೂಚನೆ ಎಲ್ಲಾ ಕ್ಷೇತ್ರಗಳಿಗೂ ಅನ್ವಯವಾಗುತ್ತದೆಯೇ ಎಂಬ ನ್ಯಾಯಪೀಠದ ಪ್ರಶ್ನೆಗೆ ಎಜಿ “ಹೌದು” ಎಂದು ಸ್ಪಷ್ಟಪಡಿಸಿದರು. ಇದರತ್ತ ಗಮನ ಹರಿಸಿದ ಪೀಠ, ಪ್ರಕರಣ ಸಾರ್ವಜನಿಕ ಹಿತಕ್ಕೆ ಸಂಬಂಧಿಸಿದ ಮಹತ್ವದ ವಿಷಯವಾಗಿರುವುದರಿಂದ ವಿಸ್ತೃತ ವಿಚಾರಣೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.
ಅರ್ಜಿದಾರರ ಪರ ವಕೀಲ ಬಿ.ಕೆ. ಪ್ರಶಾಂತ್, ಅಂತಿಮ ವಿಚಾರಣೆಯವರೆಗೆ ಸರ್ಕಾರ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಜಿ, ಅಧಿಸೂಚನೆ ಈಗಾಗಲೇ ಎಲ್ಲ ಕ್ಷೇತ್ರಗಳಲ್ಲಿಯೂ ಜಾರಿಯಲ್ಲಿದೆ ಎಂದು ತಿಳಿಸಿದರು.
ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಜನವರಿ 20ಕ್ಕೆ ಮುಂದೂಡಿದೆ. ಅದರವರೆಗೆ ಸರ್ಕಾರ ಸಲ್ಲಿಸಿರುವ ಆಕ್ಷೇಪಗಳಿಗೆ ಅರ್ಜಿದಾರರಿಂದ ಪ್ರತಿಕ್ರಿಯೆಗಳನ್ನು ಆಹ್ವಾನಿಸಲಾಗಿದೆ. ಜೊತೆಗೆ ಹೊಸದಾಗಿ ಅರ್ಜಿ ಸಲ್ಲಿಸುವವರು ರಿಜಿಸ್ಟ್ರಾರ್‌ಗೆ ಸಲ್ಲಿಸಿ ಅದರ ಪ್ರತಿಯನ್ನು ಸರ್ಕಾರದ ವಕೀಲರಿಗೆ ಒದಗಿಸುವಂತೆ ಕೋರ್ಟ್ ಸೂಚಿಸಿದೆ.
