ಹಾಸನ : ಹಾಸನ ವಿಶ್ವವಿದ್ಯಾಲಯದಲ್ಲಿ ಹೆಜ್ಜೇನು ದಾಳಿ – ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಡಿತ, ವಾಚ್‌ಮ್ಯಾನ್ ಗಂಭೀರ ಹಾಸನ ಹೊರವಲಯದ ಕೆಂಚಟ್ಟಹಳ್ಳಿ ಬಳಿಯ ಹಾಸನ ವಿಶ್ವವಿದ್ಯಾಲಯದಲ್ಲಿ ಇಂದು ಬೆಳಿಗ್ಗೆ ನಡೆದ ಅಪ್ರತೀಕ್ಷಿತ ಘಟನೆ ವಿದ್ಯಾರ್ಥಿಗಳನ್ನು ಭೀತಿಗೊಳಿಸಿದೆ. ಕ್ಯಾಂಪಸ್‌ನಲ್ಲಿ ನಡೆಯುತ್ತಿದ್ದ ಪದವಿ ವಿದ್ಯಾರ್ಥಿಗಳ ಕಬ್ಬಡಿ ಪಂದ್ಯಾವಳಿಯ ಆಯ್ಕೆ ಪ್ರಕ್ರಿಯೆ ವೇಳೆ ಏಕಾಏಕಿ ಹೆಜ್ಜೇನುಗಳ ಗುಂಪು ದಾಳಿ ನಡೆಸಿದೆ.
ಅಕಸ್ಮಾತ್ತಾಗಿ ದಾಳಿ ಮಾಡಿದ ಹೆಜ್ಜೇನುಗಳಿಂದ ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಡಿತಕ್ಕೆ ಒಳಗಾಗಿದ್ದು, ಗಾಯಗೊಂಡ ವಿದ್ಯಾರ್ಥಿಗಳು ಹೆದರಿಕೆಯಿಂದ ಎಲ್ಲೆಡೆ ಚಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಕ್ಯಾಂಪಸ್‌ನಲ್ಲಿ ಹಾಜರಿದ್ದ ನೂರಾರು ವಿದ್ಯಾರ್ಥಿಗಳು ಗಾಬರಿಗೊಂಡು ಸಿಕ್ಕ ಸಿಕ್ಕ ಕಡೆಗೆ ಓಡಾಟ ನಡೆಸಿದ್ದಾರೆ.
ಹೆಜ್ಜೇನು ಕಡಿತದಿಂದ ವಿಶ್ವವಿದ್ಯಾಲಯದ ವಾಚ್‌ಮ್ಯಾನ್ ಗಂಭೀರವಾಗಿ ಅಸ್ವಸ್ಥಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆ ಬಳಿಕ ವಿಶ್ವವಿದ್ಯಾಲಯದ ಆವರಣವನ್ನು ಖಾಲಿ ಮಾಡಲಾಗಿದ್ದು, ಅಗ್ನಿಶಾಮಕ ದಳ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಪರಿಸ್ಥಿತಿ ನಿಯಂತ್ರಣಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.