Home ಬ್ರೇಕಿಂಗ್ ಸುದ್ದಿ ಬಿಜೆಪಿ ಪ್ರೀತಂ ಗೌಡರನ್ನು ಹಾಡಿ ಹೊಗಳಿದ – ಸಂಸದ ಶ್ರೇಯಸ್‌ ಪಟೇಲ್

ಬಿಜೆಪಿ ಪ್ರೀತಂ ಗೌಡರನ್ನು ಹಾಡಿ ಹೊಗಳಿದ – ಸಂಸದ ಶ್ರೇಯಸ್‌ ಪಟೇಲ್

ಹಾಸನ: ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಅವರನ್ನು ಹಾಸನ ಸಂಸದ ಶ್ರೇಯಸ್‌ ಪಟೇಲ್ ಹಾಡಿ ಹೊಗಳಿದ್ದಾರೆ. ಹಾಸನ ನಗರದ ಅಂಬೇಡ್ಕರ್ ಭವನದಲ್ಲಿ ಬಾಬು ಜಗಜೀವನ್‌ ರಾಂ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರೀತಂ ಗೌಡ ಅವರ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸಿದರು.

ನನಗೆ ಪಕ್ಷದ ಸಭೆ ಇತ್ತು. ನಾನು ಹೋಗಬೇಕಿತ್ತು. ಆದರೆ ಪ್ರೀತಂ ಅಣ್ಣ ಕರೆ ಮಾಡಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು, ನಾವೆಲ್ಲರೂ ಪಾಲ್ಗೊಳ್ಳಬೇಕು ಎಂದು ಹೇಳಿದ್ದರಿಂದ ಅತ್ಯಂತ ಸಂತೋಷದಿಂದ ಬಂದಿದ್ದೇನೆ ಎಂದು ಶ್ರೇಯಸ್‌ ಪಟೇಲ್ ಹೇಳಿದರು.ಹಾಸನವನ್ನು ಸುಂದರ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಪ್ರೀತಂ ಗೌಡ ಅವರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಮುಂದಾಲೋಚನೆಯೊಂದಿಗೆ ನಗರದ ಸ್ವಚ್ಛತೆ ಹಾಗೂ ಸೌಂದರ್ಯೀಕರಣಕ್ಕೆ ಒತ್ತು ನೀಡಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರೀತಂ ಗೌಡ ಅವರು ಕೇವಲ ಐದು ವರ್ಷ, ಒಂದು ಅವಧಿಗೆ ಮಾತ್ರ ಶಾಸಕರಾಗಿದ್ದರು. ಆದರೂ ಎಲ್ಲಾ ಸಮಾಜಗಳ ಅಭಿವೃದ್ಧಿಗೆ ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಒಳ್ಳೆಯದಾಗಲಿ. ಪಕ್ಷ ಯಾವುದೇ ಇರಲಿ, ಒಬ್ಬ ಸಹೋದರನಾಗಿ ಅವರಿಗೆ ಶುಭ ಹಾರೈಸುತ್ತೇನೆ” ಎಂದರು. ಪಕ್ಷಾತೀತವಾಗಿ ತಾನು ಹಾಗೂ ಪ್ರೀತಂ ಗೌಡ ಅವರು ಸಮಾಜದ ಏಳಿಗೆಗಾಗಿ ಶ್ರಮಿಸಿದ್ದೇವೆ. ಯಾವುದೇ ಸಮಸ್ಯೆಗಳಿದ್ದರೂ ತಮ್ಮ ಗಮನಕ್ಕೆ ತರುವಂತೆ ಶ್ರೇಯಸ್‌ ಪಟೇಲ್ ಮನವಿ ಮಾಡಿದರು.

ಜಂತರ್‌-ಮಂತರ್‌ನಲ್ಲಿ ನೀಟ್‌ ಅಕ್ರಮ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಬಡ ಹಾಗೂ ಅಮಾಯಕ ವಿದ್ಯಾರ್ಥಿಗಳ ಮೇಲೆ ಧಾರುಣವಾಗಿ ಹಲ್ಲೆ ಮಾಡಲಾಗಿದೆ ಎಂದು ಸಂಸದ ಶ್ರೇಯಸ್‌ ಪಟೇಲ್ ಆರೋಪಿಸಿದ್ದಾರೆ. ಈ ಘಟನೆಗೆ ಕಾರಣ ಯಾರು ಎಂಬುದರ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಸ್ಪಷ್ಟನೆ ನೀಡಬೇಕು ಎಂಬುದು ನಮ್ಮೆಲ್ಲರ ಒಕ್ಕೊರಲ ಆಗ್ರಹ ಎಂದು ಅವರು ಹೇಳಿದರು.

ಲೋಕಸಭೆಯ ಮಳೆಗಾಲದ ಅಧಿವೇಶನ ಮುಗಿಯುವ ಹಂತಕ್ಕೆ ಬಂದರೂ ಈ ವಿಚಾರದ ಕುರಿತು ಕನಿಷ್ಠ ಸೌಜನ್ಯಕ್ಕಾದರೂ ಯಾವುದೇ ಹೇಳಿಕೆ ನೀಡಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಲೋಕಸಭಾ ಅಧಿವೇಶನದಲ್ಲಿ ಕ್ಷೇತ್ರಗಳ ಸಮಸ್ಯೆಗಳ ಕುರಿತು ಚರ್ಚಿಸಲು ಸಾಧ್ಯವಾಗುತ್ತಿಲ್ಲ. ಸದನವನ್ನು ಸುಸೂತ್ರವಾಗಿ ನಡೆಸಬೇಕೆಂಬ ಯಾವುದೇ ಮನೋಭಾವ ಕೇಂದ್ರ ಸರ್ಕಾರಕ್ಕೆ ಇಲ್ಲ. ಅವರಿಗೆ ಅಧಿವೇಶನದ ದಿನಗಳನ್ನು ಪೂರ್ಣಗೊಳಿಸುವುದಷ್ಟೇ ಉದ್ದೇಶವಾಗಿದೆ ಎಂದು ಶ್ರೇಯಸ್‌ ಪಟೇಲ್ ಟೀಕಿಸಿದರು.

You cannot copy content of this page

Exit mobile version