Home ಬ್ರೇಕಿಂಗ್ ಸುದ್ದಿ ಕಸ್ತೂರಿರಂಗನ್ ವರದಿ ಜಾರಿ ಆಗಬಾರದು – ಬೆಳೆಗಾರರ ಒತ್ತಾಯ

ಕಸ್ತೂರಿರಂಗನ್ ವರದಿ ಜಾರಿ ಆಗಬಾರದು – ಬೆಳೆಗಾರರ ಒತ್ತಾಯ

ಹಾಸನ : ಪಶ್ಚಿಮಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸುವ ಸಂಬಂಧ ಕೇಂದ್ರ ಸರ್ಕಾರ ಮರುಬಿಡುಗಡೆ ಮಾಡಿರುವ 7ನೇ ಕರಡು ಅಧಿಸೂಚನೆಯನ್ನು ಸಂಪೂರ್ಣವಾಗಿ ವಿರೋಧಿಸಿರುವ ರೈತರು ಹಾಗೂ ಬೆಳೆಗಾರರು, ಕಸ್ತೂರಿರಂಗನ್ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಬಾರದು ಎಂದು ಆಗ್ರಹಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಜಿ.ಎಫ್ ಅಧ್ಯಕ್ಷ ಹಳಸೆ ಶಿವಣ್ಣ, ಪ್ರಧಾನ ಕಾರ್ಯದರ್ಶಿ ಟಿ.ಪಿ. ಸುರೇಂದ್ರ ಹಾಗೂ ಎಚ್.ಡಿ.ಪಿ.ಎ ಅಧ್ಯಕ್ಷ ಮಂಜುನಾಥ್ ಶೆಟ್ಟಿ, ವರದಿ ಸಿದ್ಧಪಡಿಸುವ ಸಂದರ್ಭದಲ್ಲಿ ಪಶ್ಚಿಮಘಟ್ಟ ಪ್ರದೇಶದ ರೈತರು, ಬೆಳೆಗಾರರು ಹಾಗೂ ಮೂಲನಿವಾಸಿಗಳ ಅಭಿಪ್ರಾಯಗಳನ್ನು ಸಮರ್ಪಕವಾಗಿ ಪಡೆಯಲಾಗಿಲ್ಲ. ಹೀಗಾಗಿ ವರದಿಯು ಸ್ಥಳೀಯರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು. ಕಾಫಿ, ಟೀ ಹಾಗೂ ರಬ್ಬರ್ ಬೆಳೆಗಾರರ ಅಭಿಪ್ರಾಯಗಳನ್ನು ಸಂಬಂಧಪಟ್ಟ ಬೋರ್ಡ್‌ಗಳಿಂದ ಪಡೆಯದೆ ವರದಿ ಸಿದ್ಧಪಡಿಸಿರುವುದು ಸ್ವಾಭಾವಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಕಾಫಿ ಬೆಳೆಗಾರರು ದಶಕಗಳಿಂದ ನೆರಳಿನಾಶ್ರಿತವಾಗಿ ಕಾಫಿ ಬೆಳೆಯುವ ಮೂಲಕ ಕೋಟ್ಯಂತರ ಮರಗಳನ್ನು ಸಂರಕ್ಷಿಸಿದ್ದು, ಪರಿಸರ ಹಾಗೂ ಜಲಮೂಲಗಳ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ವರದಿಯಲ್ಲಿ ಶೇ.20ರಷ್ಟು ಹಸಿರು ಹೊದಿಕೆಯನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಉಪಗ್ರಹ ಆಧಾರಿತ ಚಿತ್ರಗಳ ಮೂಲಕ ನೆರಳಿನಾಶ್ರಿತ ಕಾಫಿ ತೋಟಗಳು ಹಾಗೂ ನೈಸರ್ಗಿಕ ಅರಣ್ಯ ಪ್ರದೇಶಗಳ ನಡುವಿನ ವ್ಯತ್ಯಾಸವನ್ನು ನಿಖರವಾಗಿ ಗುರುತಿಸಲು ಸಾಧ್ಯವಿಲ್ಲ. ಆದ್ದರಿಂದ ಸ್ಥಳ ಪರಿಶೀಲನೆ ಹಾಗೂ ಮಾನವ ನಿರ್ವಹಿತ ಭೂಮಾಪನದ ಮೂಲಕ ಪ್ರದೇಶವನ್ನು ಗುರುತಿಸಬೇಕು ಎಂದು ಒತ್ತಾಯಿಸಿದರು. ಪಶ್ಚಿಮಘಟ್ಟದ ಅರಣ್ಯದಂಚಿನ ಹಲವು ಗ್ರಾಮಗಳು ಇಂದಿಗೂ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ. ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿದರೆ ರಸ್ತೆ, ಮನೆ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ಅಭಿವೃದ್ಧಿಗೂ ತೊಂದರೆಯಾಗುವ ಸಾಧ್ಯತೆ ಇದೆ. ಹೀಗಾಗಿ ಗ್ರಾಮಗಳ ಅಭಿವೃದ್ಧಿಗೆ ಯಾವುದೇ ನಿರ್ಬಂಧ ವಿಧಿಸಬಾರದು ಎಂದು ಆಗ್ರಹಿಸಿದರು.
ಪರಿಸರ ಸಂರಕ್ಷಣೆಯೊಂದಿಗೆ ಸ್ಥಳೀಯರ ಜೀವನೋಪಾಯ ಹಾಗೂ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಕೇಂದ್ರದ ಪರಿಸರ, ವಾಣಿಜ್ಯ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವಾಲಯಗಳು ರೈತರು, ಬೆಳೆಗಾರರು ಮತ್ತು ಸಾರ್ವಜನಿಕರೊಂದಿಗೆ ಮುಕ್ತ ಚರ್ಚೆ ನಡೆಸಬೇಕು. ಕಾಫಿ, ಟೀ ಹಾಗೂ ರಬ್ಬರ್ ಬೋರ್ಡ್‌ಗಳೊಂದಿಗೆ ಸಮಗ್ರವಾಗಿ ಚರ್ಚಿಸಿ ವರದಿಯ ಸಾಧಕ-ಬಾಧಕಗಳನ್ನು ಜನರಿಗೆ ತಿಳಿಸಬೇಕು ಎಂದು ಹೇಳಿದರು.

You cannot copy content of this page

Exit mobile version