ಮಾನವೀಯ ಮೌಲ್ಯ, ಕೋಮು ಸೌಹಾರ್ದತೆ, ಹಿಂದೂ ಮುಸ್ಲಿಮರ ನಡುವೆ ಭಾವನಾತ್ಮಕ ಸಂಬಂಧಗಳನ್ನು ಬೆಸೆಯುವ ಪವಿತ್ರ ಮೊಹರಂ ಹಬ್ಬದ ಭಾವೈಕ್ಯದ ಸಂದೇಶಗಳು ಜಗತ್ತಿನೆಲ್ಲೆಡೆ ಭ್ರಾತೃತ್ವ-ಬಂಧುತ್ವ ಭಾವನೆಯನ್ನು ಮತ್ತಷ್ಟೂ ಗಟ್ಟಿಗೊಳಿಸಲಿ. ನಾಡಿನ ಸಮಸ್ತರಿಗೂ ಮೊಹರಂ ಹಬ್ಬದ ಶುಭಾಶಯಗಳು- ಪೀಪಲ್ ಮೀಡಿಯಾ.ಕಾಮ್
“ಸಬ ನೆರೆದು ಕುಂತೀರಿ ಸರ್ವರು ಚಂದ ದಯವಿರಲಿ ನಿಮುದ… ದಯವಿರಲಿ ನಿಮುದ…” ಎಂದು ಹಿರಿಯರ ಧ್ವನಿಯಲಿ ಊರಿಗೆ ಊರನ್ನೇ ಒಂದೆಡೆಗೆ ಕರೆತರುವ ಮೊಹರ್ಂಮಿನ ಪದಗಳು ನಿಜಕ್ಕೂ ಮೈ ಮನವನ್ನು ರೋಮಾಂಚನಗೊಳಿಸುತ್ತವೆ. ಊರೆಲ್ಲ ಸಂತಸ ಸಡಗರದ ಹಬ್ಬದ ವಾತಾವರಣ. ಭೇದವಿಲ್ಲದೆ ಮಂದಿರ-ಮಸೀದಿಗಳನ್ನು ಅಲಂಕರಿಸಿದ ವಿದ್ಯುತ್ ದೀಪಗಳು, ಲಯಬದ್ಧವಾಗಿ ಹೆಜ್ಜೆ ಹಾಕುವ ಮಕ್ಕಳು ಮತ್ತು ಯುವಕರು, ಸಂಭ್ರಮ ನೋಡಲು ಬಂದ ಹೆಣ್ಣು ಮಕ್ಕಳು-ಯುವತಿಯರ ದಂಡು, ತಲೆ ತುಂಬ ಸೆರಗು ಹೊದ್ದು ಹಾಡು ಹೆಜ್ಜೆಗಳಿಗೆ ತಲೆ ದೂಗುವ ಹಿರಿಯ ಹೆಣ್ಣು ಜೀವಗಳು- ಈ ಹೊತ್ತಿನಲ್ಲಿ ಸ್ವರ್ಗವು ನಾಚುವಂತೆ ನಳನಸುತ್ತದೆ ಉತ್ತರ ಕರ್ನಾಟಕ.
ಶಾಂತಿಗಾಗಿ ಹುತಾತ್ಮರಾದವರನ್ನು ಸ್ಮರಿಸುವ ಶೋಕದ ಹಬ್ಬ ಮೊಹರಂ ಎಂದರೆ ಮಹಮ್ಮದೀಯರ ಮೊದಲ ತಿಂಗಳು. ಇಲ್ಲಿಂದ ಇಸ್ಲಾಂ ಹೊಸ ಕ್ಯಾಲೆಂಡರ್ ಆರಂಭವಾಗುತ್ತದೆ. ಈ ಹಬ್ಬಕ್ಕೆ ಬಹುದೊಡ್ಡ ಚಾರಿತ್ರಿಕ ಮತ್ತು ಧಾರ್ಮಿಕ ಹಿನ್ನೆಲೆ ಇದೆ. ಜಗತ್ತಿನಲ್ಲಿ ಶಾಂತಿ ಸ್ಥಾಪನೆಗಾಗಿ ತಮ್ಮನ್ನೇ ಸಮರ್ಪಿಸಿಕೊಂಡ ಹಜರತ್ ಹಸನ್ ಮತ್ತು ಹುಸೇನರ ಪುಣ್ಯ ಸ್ಮರಣೆಯ ನಿಮಿತ್ತ ಮೊಹರಂ ಹಬ್ಬವನ್ನು ಆಚರಿಸಲಾಗುತ್ತದೆ.
ಪ್ರವಾದಿ ಮುಹಮ್ಮದ್ (ಸ) ಅವರ ಮೊಮ್ಮಕ್ಕಳಾದ ಇಮಾಮ್ ಹಸನ್ ಮತ್ತು ಇಮಾಮ್ ಹುಸೇನರ ತ್ಯಾಗ ಬಲಿದಾನದ ನೆನಪಿಗಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ಧರ್ಮ-ನ್ಯಾಯ ಇಸ್ಲಾಮಿನ ಅಸ್ಮಿತೆಗಾಗಿ ದುಷ್ಟ-ಸ್ವಾರ್ಥಿ ದುರಾಡಳಿತದ ರಾಜ ಯಜೀದನ ವಿರುದ್ಧ ಹೋರಾಡಿದ ಹಸನ್ ಮತ್ತು ಹುಸೇನರ ಶೌರ್ಯ ನೆನಪಿಸುವ ಹಬ್ಬ ಇದು. ಯಜೀದನ ಮೋಸದ ಜಾಲಕ್ಕೆ ಹಸನರು ಸಾವನ್ನಪ್ಪುತ್ತಾರೆ. ಹುಸೇನರೊಂದಿಗೆ ಒಪ್ಪಂದಕ್ಕೆ ಯಜೀದ್ ಬಂದಾಗ ಅದನ್ನು ಒಪ್ಪದ ಹುಸೇನರು ಅದನ್ನು ವಿರೋಧಿಸಿ ಧರ್ಮ ರಕ್ಷಣೆಗಾಗಿ ಇಸ್ಲಾಂನ ಸಂದೇಶ ಹೊತ್ತು ತಮ್ಮ ೭೨ ಅನುಯಾಯಿಗಳನ್ನು ಕರೆದುಕೊಂಡು ಮೆಕ್ಕಾದ ಕಡೆಗೆ ಹೊರಡುತ್ತಾರೆ. ಪವಿತ್ರ ಮೆಕ್ಕಾದಲ್ಲಿ ರಕ್ತ ಹರಿಸುವುದು ಬೇಡವೆಂದು ಬಯಸಿ ಅವರು ಕರ್ಬಲಾದ ಮರಭೂಮಿಯ ಕಡೆಗೆ ಹೋಗುತ್ತಾರೆ. ಅಲ್ಲಿ ಹುಸೇನರು ಮತ್ತು ಅವರ ಅನುಯಾಯಿಗಳು ಯಜೀದ್ ನ ಸೈನ್ಯದೊಟ್ಟಿಗೆ 10 ದಿನಗಳ ಕಾಲ ಯುದ್ಧ ನಡೆಸುತ್ತಾರೆ. ಹತ್ತನೆಯ ದಿನ ಹುಸೇನರು ಮತ್ತು ಅವರ ಅನುಯಾಯಿಗಳು ನಮಾಜ್ ಮಾಡುವ ಹೊತ್ತಲ್ಲಿ ಯಜೀದನ ಸೈನ್ಯ ಪಡೆಯು ಇಮಾಮ್ ಹುಸೇನ್ ಮತ್ತು ಅವರ ಅನುಯಾಯಿಗಳ ಶಿರಚ್ಛೇದನಮಾಡುತ್ತಾರೆ. ಈ ಸಂದರ್ಭದಲ್ಲಿ ಇಮಾಮ್ ಹುಸೇನರು ವೀರ ಮರಣ ಹೊಂದುತ್ತಾರೆ. ಆ ಒಂದು ಶೋಕದ ದಿನ ಮತ್ತು ಒಟ್ಟಾರೆ ಅವರ ಹೋರಾಟದ ಹತ್ತು ದಿನಗಳ ಸ್ಮರಣೆಗಾಗಿ ಉಪವಾಸ ಮಾಡಿ ಹುಸೇನರಿಗೆ ತಮ್ಮ ಭಕ್ತಿಯನ್ನು ಸಮರ್ಪಿಸಿ ಮೊಹರಂ ಆಚರಿಸುವ ರೂಢಿ ನಮ್ಮ ಭಾಗದಲ್ಲಿ ಇಂದಿಗೂ ಜೀವಂತವಾಗಿದೆ. ಇದು ಇಸ್ಲಾಮಿನೊಟ್ಟಿಗೆ ಬದುಕುತ್ತಿರುವ ಉತ್ತರ ಕರ್ನಾಟಕದ ಪ್ರತಿಯೊಬ್ಬರ ಜೀವನದ ಹಬ್ಬದುತ್ಸಾಹದ ಕ್ಷಣಗಳು. ಎಲ್ಲರ ಮನೆಗಳಲ್ಲಿ ಮಾಲದಿ ಬಿರಿಯಾನಿ ಮಾಡಿ ಪಿರ್ ಗಳಿಗೆ ಫಾಥೆ ಕೂಡುವುದು, ಮುಲ್ಲಾ ಮೌಲ್ವಿ, ಫಕೀರ್ ಗಳಿಗೆ ಮನೆಗೆ ಕರೆದು ಬಿನ್ನ ಮಾಡಿಸುವುದು ಹಬ್ಬದ ವಿಶೇಷವಾಗಿದೆ.

ಸಾಂದರ್ಭಿಕ ಚಿತ್ರ
ದ ಆಚರಣೆ ಕೊನೆಗೊಂಡು ಹತ್ತನೆಯ ದಿನದಂದು ಹಸನ್ ಮತ್ತು ಹುಸೇನರ ಪಂಜಾ ಗಳನ್ನು ದಪನ್ ಮಾಡಿ “ಅಲ್ ಬಿದಾಯೋ ಅಲ್ ಬಿದಾಷ ಹೇ ಶಹಿದ ಅಲ್ ಬಿದಾ…” ಎಂದು ವಿದಾಯ ಗೀತೆ ಹೇಳುತ್ತಾ ಎದೆ ತುಂಬಾ ದುಃಖ ತುಂಬಿಕೊಂಡು ಮನೆ ಮಸ್ಜಿದ್ದಿಗೆ ತೆರಳುವ ವಾಡಿಕೆ ಇದೆ. ಪ್ರತಿ ಹಳ್ಳಿ ಹಳ್ಳಿಗಳಲ್ಲಿಯು ಹಸನ್, ಹುಸೇನ್, ಮೌಲಾಲಿ ಮತ್ತು ಫಾತೀಮಾರ ಹೆಸರಿನಲ್ಲಿ ಪಂಜಾಗಳನ್ನು ಕೂರಿಸಿ ಕರಬಲ ಯುದ್ಧದ ಹಾಗೂ ಹಸನ್, ಹುಸೇನರ ಹೋರಾಟ ಶೌರ್ಯದ ಬಗ್ಗೆ ಪದ ಕಟ್ಟಿ ಹಾಡುವ ಜನಪದ ಗಾಯಕರು ಉತ್ತರ ಕರ್ನಾಟಕದ ಪ್ರತಿ ಮನೆ ಮನೆಯಲ್ಲಿ ಬೆಳೆದು ನಿಂತಿದ್ದಾರೆ. ಅಷ್ಟೇ ಅಲ್ಲದೆ ಮಾನವನ ಜೀವನಕ್ಕೆ ಅತಿ ಮುಖ್ಯವಾದ ನೈತಿಕತೆ, ಧರ್ಮನಿಷ್ಠೆ, ತಾತ್ವಿಕತೆ, ವೈಚಾರಿಕತೆ ಇತ್ಯಾದಿಗಳನ್ನು ಹೇಳುವ ಒಂದಿಷ್ಟು ಘಟನೆಗಳನ್ನು ಪದ ಕಟ್ಟಿ ಹಾಡುತ್ತಾರೆ. ಅದರೊಟ್ಟಿಗೆ ತಮ್ಮದೇ ಜೀವನದ ಅನುಭವದ ಪದಗಳು. ಹೀಗೆ, ಒಂದಿಷ್ಟು ಆಧ್ಯಾತ್ಮದ ಅರಿವು, ಒಳಿತು ಕೆಡಕಿನ ಸಂದರ್ಭದಲ್ಲಿ ಎದುರಿಸುವ ಸವಾಲುಗಳು, ಧರ್ಮದ ದಾರಿಯಲ್ಲಿ ಮತ್ತು ನ್ಯಾಯ ಮತ್ತು ಸತ್ಯದ ದಾರಿಯಲ್ಲಿ ನಡೆಯುವ ಮಾರ್ಗದರ್ಶನವನ್ನು ಈ ಮೊಹರಂ ತಿಂಗಳ ಸಂದರ್ಭದಲ್ಲಿ ಹಾಡಿ ಆ ಮೂಲಕ ಎಲ್ಲರನ್ನು ಎಚ್ಚರದಿಂದ ಜೀವಿಸಲು ನಡೆಸುವ ಒಂದು ಬಗೆಯ ಅನುಭವ ಕೂಟವೆಂದರೆ ತಪ್ಪಾಗದು.
ಇದಕ್ಕೂ ಮೀರಿದ ಒಂದಿಷ್ಟು ಆಚರಣೆಗಳು, ದೇವರು ತುಂಬಿಸುವುದು, ದೆವ್ವ ಬಿಡಿಸುವುದು, ಆರೋಗ್ಯ, ವರ್ತಮಾನ ಹಾಗೂ ಭವಿಷ್ಯ ನುಡಿಯುವುದು ಇವೆಲ್ಲವೂ ಇನ್ನೊಂದು ಬಗೆಯಲ್ಲಿರುತ್ತವೆ.
ಇದೆಲ್ಲದರೊಟ್ಟಿಗೆ ತಮ್ಮ ತಮ್ಮ ಒಳಜಗಳ, ಕೋಪ-ತಾಪ, ಮುನಿಸುಗಳನ್ನು, ಹಾಡಿ-ಕುಣಿದು ಮುರಿದು ಹಾಕುವ, ಮೊಹರ್ಂನ ನೆಪದಲ್ಲಿ ಒಂದಾಗಿ ಅಣ್ಣತಮ್ಮಂದಿರಂತೆ ಬದುಕುವ ಒಂದು ಅಮೂಲ್ಯ ಪದ್ಧತಿಯನ್ನು ಕಾಣಲು ನನ್ನ ಈ ನೆಲದಲ್ಲಿಯೇ ಸಾಧ್ಯ ಎನ್ನುವುದು ನನಗೆ ಹೆಮ್ಮೆ ಮತ್ತು ಗರ್ವದ ವಿಷಯ.
ಸೂಫಿ, ಶರಣ, ಸಾಧು, ಸಿದ್ದ, ಶರೀಫ, ಸಂತ, ನಾಥ, ಆರೋಡ, ಪಂಥ ಎಲ್ಲವೂ ಒಂದಕ್ಕೊಂದು ತಳಕು ಹಾಕಿಕೊಂಡಿರುವುದಕ್ಕೆ ನಮ್ಮ ನೆಲದ ಇಂಚಿಂಚೂ ಸಾಕ್ಷಿಯಾಗಿದೆ. ತಿಂಥಣಿಯ ಮೌನಪ್ಪ, ಕೊಡೆ ಕಲ್ಲದ ಬಸವಣ್ಣ, ಗೋಗಿಯ ಚಾಂದ ಹುಸೇನಿ, ಖ್ವಾಜಾ ಬಂದೇನವಾಜರು, ಶರಣಬಸವೇಶ್ವರ, ಹರ್ಜಾತ್ ಶಾ ರುಕ್ನುದ್ದೀನ್ ತೋಲಾ, ಹಜರತ್ ಕಟ್ಟ ನವಾಜ್, ಮಹಾಗಾಂವನ ವಾಹಿದ್ ಹುಸೇನಿ ಇಂಥ ಮಹಾತ್ಮರ ಜೀವನ ಇಲ್ಲಿನ ಬಂಧುತ್ವ, ಭಾವೈಕ್ಯತೆಗೆ ಸಾಕ್ಷಿಯಾಗಿದೆ.
‘ಓಂ ಏಕ್ ಲಾಕ್ ಐಂಸಿ ಹಜಾರ್ ಪಾಚೋಪೀರ ಪೈಗಂಬರ್ ಮೌನದೀನ್ ಜಿತಾಪೀರ್ ಪೈಗಂಬರ್ ಮೌನದೀನ್ ಕಾಶಿಫಾತಿ ಗಂಗಾಧರ ಹರ ಹರ ಮಹಾದೇವ’ ಎಂದು ಜೈಕಾರ ಕೂಗುವುದು ಕೇಳುವುದು ಈ ನೆಲದ ಗರಿಮೆ.
“ಗಡಿ ಭಾಗವೆಂದರೂ ಕಡಿಮೆ ಇಲ್ಲ ಕನ್ನಡಕ್ಕೆ ಉಡಿಯ ತುಂಬುವೆ ಕನ್ನಡ ತಾಯಿಗೆ ಒಡವೆಯ ಇಳಿಸುವೆ ಪದಗಳ” ಎಂಬ ಜಯದೇವಿ ತಾಯಿ ಲಿಗಾಡೆಯವರ ಮಾತು ಇಂದಿಗೂ ಹಸಿರಿನ ಜೀವಂತಿಕೆ ತುಂಬಿಕೊಂಡಿದೆ.
ಕನ್ನಡ ಸಾಹಿತ್ಯದ ಒಂದು ಭಾಗವಾಗಿ ಈ ನೆಲದ ಜನಪದರ ಧ್ವನಿಯಾದ ಚೌಡಕಿ ಪದಗಳು, ಡೊಳ್ಳಿನ ಪದಗಳು, ಸೋಬಾನೆ ಪದಗಳು, ವಚನ ಸಾಹಿತ್ಯ, ಸೂಫಿ-ಶರೀಫರ ಶಾಯರಿಗಳು, ತತ್ವಪದಕಾರರ ತತ್ವಪದಗಳು, ಮೊಹರಂ ಪದಗಳು ಈ ನೆಲದ ಶ್ರೀಮಂತ ಸಂಸ್ಕೃತಿಯ ಪ್ರತೀಕಗಳು. ನಮ್ಮ ನಾಡಿನಂತೆ ದೇಶ-ಜಗತ್ತಿನಲ್ಲಿ ಭ್ರಾತೃತ್ವ-ಬಂಧುತ್ವ ಭಾವನೆ ಬೆಳೆಯಲಿ. ಸ್ನೇಹ ಪ್ರೀತಿಯ ಮೈತ್ರಿಯಾಗಿ ಈ ಧರೆ ಸ್ವರ್ಗವಾಗಲಿ. ಎಲ್ಲರಿಗೂ ಭಾವೈಕ್ಯತೆಯ ಪವಿತ್ರ ಮೊಹರಂ ಹಬ್ಬದ ಶುಭಾಶಯಗಳು .
ಕಾಶಿನಾಥ ಮುದ್ದಾಗೋಳ, ಕಲಬುರ್ಗಿ
ಯುವ ಲೇಖಕ