Home ದೇಶ ಮುಂಬೈ: ಬಿಜೆಪಿ ಸಚಿವರ ಪ್ರತಿಭಟನಾ ಮೆರವಣಿಗೆಗೆ ಅಡ್ಡಿಪಡಿಸಿದ ಮಹಿಳೆಯ ವಿರುದ್ಧ ದೂರು ದಾಖಲು

ಮುಂಬೈ: ಬಿಜೆಪಿ ಸಚಿವರ ಪ್ರತಿಭಟನಾ ಮೆರವಣಿಗೆಗೆ ಅಡ್ಡಿಪಡಿಸಿದ ಮಹಿಳೆಯ ವಿರುದ್ಧ ದೂರು ದಾಖಲು

0

ಮುಂಬೈಯ ವರ್ಲಿಯಲ್ಲಿ ಮಹಾರಾಷ್ಟ್ರ ಸಚಿವ ಗಿರೀಶ್ ಮಹಾಜನ್ ಅವರ ಪ್ರತಿಭಟನಾ ಮೆರವಣಿಗೆ ಸಂದರ್ಭದಲ್ಲಿ ಉಂಟಾದ ಟ್ರಾಫಿಕ್ ಜಾಮ್ ಕುರಿತು ಸಚಿವರನ್ನು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದ ಮಹಿಳೆಯ ವಿರುದ್ಧ ಇದೀಗ ಪೊಲೀಸ್ ದೂರು ದಾಖಲಾಗಿದೆ. ರ್ಯಾಲಿಯ ವೇಳೆ ಸಚಿವರು ಮತ್ತು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ವಕೀಲ ಗುಣರತ್ನ ಸದಾಶಿವರ್ತೆ ಅವರ ಪುತ್ರಿ ಝೆನ್ ಸದಾಶಿವರ್ತೆ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಮಹಿಳೆಯು ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡಿ, ಅವಾಚ್ಯ ಶಬ್ದಗಳನ್ನು ಬಳಸಿ, ಸಾರ್ವಜನಿಕ ಸೇವಕರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 221, 132, 352, 195 ಮತ್ತು 353ರ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ದೂರುದಾರರು ಆಗ್ರಹಿಸಿದ್ದಾರೆ. ಜನಪ್ರತಿನಿಧಿಗಳು ಮತ್ತು ಪೊಲೀಸರಿಗೆ ಅವಮಾನ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಅವರು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.

ಸಂಸತ್ತಿನಲ್ಲಿ ಸಂವಿಧಾನ ತಿದ್ದುಪಡಿ ಮಸೂದೆ ಸೋಲಾದ ಹಿನ್ನೆಲೆಯಲ್ಲಿ ಬಿಜೆಪಿ ಈ ಪ್ರತಿಭಟನೆಯನ್ನು ಆಯೋಜಿಸಿತ್ತು. ಜಂಬೂರಿ ಮೈದಾನದಿಂದ ಎನ್‌ಎಸ್‌ಸಿಐ ಡೋಮ್ ಫೆಸಿಲಿಟಿವರೆಗೆ ನಡೆದ ಈ ಮೆರವಣಿಗೆಯಿಂದಾಗಿ ಸುಮಾರು ಒಂದು ಗಂಟೆ ಕಾಲ ವಾಹನ ದಟ್ಟಣೆಯಲ್ಲಿ ಸಿಲುಕಿದ್ದ ಮಹಿಳೆಯು, “ಇಲ್ಲಿಂದ ಹೊರಟು ಹೋಗಿ, ನೀವು ಟ್ರಾಫಿಕ್ ಜಾಮ್ ಉಂಟುಮಾಡುತ್ತಿದ್ದೀರಿ” ಎಂದು ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಮಧ್ಯೆ, ಪ್ರತಿಭಟನೆಯ ಆಯೋಜಕರು ನಿಯಮಗಳನ್ನು ಉಲ್ಲಂಘಿಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ್ದಾರೆ ಎಂಬ ಆರೋಪದ ಮೇರೆಗೆ ಪೊಲೀಸರು ರ್ಯಾಲಿಯ ಸಂಘಟಕರ ವಿರುದ್ಧವೂ ಪ್ರತ್ಯೇಕ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

You cannot copy content of this page

Exit mobile version