Home ಇನ್ನಷ್ಟು ಕೋರ್ಟು - ಕಾನೂನು ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ಹಿನ್ನಡೆ, ನಿರೀಕ್ಷಣಾ ಜಾಮೀನು ತಿರಸ್ಕರಿಸಿದ ಹೈಕೋರ್ಟ್

ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ಹಿನ್ನಡೆ, ನಿರೀಕ್ಷಣಾ ಜಾಮೀನು ತಿರಸ್ಕರಿಸಿದ ಹೈಕೋರ್ಟ್

0

ಗುವಾಹಟಿ: ಕಾಂಗ್ರೆಸ್‌ನ ಹಿರಿಯ ನಾಯಕ ಪವನ್ ಖೇರಾ ಅವರಿಗೆ ಗುವಾಹಟಿ ಹೈಕೋರ್ಟ್‌ನಲ್ಲಿ ಭಾರಿ ಹಿನ್ನಡೆಯಾಗಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಪತ್ನಿಯ ವಿರುದ್ಧ ಮಾಡಿದ್ದ ವಿವಾದಾತ್ಮಕ ಹೇಳಿಕೆಗಳ ಹಿನ್ನೆಲೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ, ಪವನ್ ಖೇರಾ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಗುವಾಹಟಿ ಹೈಕೋರ್ಟ್ ತಿರಸ್ಕರಿಸಿದೆ. ಏಪ್ರಿಲ್ 21 ರಂದು ನ್ಯಾಯಮೂರ್ತಿ ಪಾರ್ಥಿವಜ್ಯೋತಿ ಸೈಕಿಯಾ ಅವರ ನೇತೃತ್ವದ ನ್ಯಾಯಪೀಠವು ತನ್ನ ತೀರ್ಪನ್ನು ಕಾಯ್ದಿರಿಸಿದ್ದು, ಇಂದು ಅದನ್ನು ಪ್ರಕಟಿಸುವ ಮೂಲಕ ಜಾಮೀನು ನೀಡಲು ನಿರಾಕರಿಸಿದೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ವಿದೇಶಗಳಲ್ಲಿ ಆಸ್ತಿ ಹೊಂದಿದ್ದಾರೆ ಮತ್ತು ವಿವಿಧ ದೇಶಗಳ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ ಎಂದು ಪವನ್ ಖೇರಾ ಅವರು ಮಾಧ್ಯಮಗೋಷ್ಟಿಯೊಂದರಲ್ಲಿ ಆರೋಪಿಸಿದ್ದರು. ಈ ಆರೋಪಗಳು ರಾಜ್ಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಈ ಹಿನ್ನೆಲೆಯಲ್ಲಿ ಅಸ್ಸಾಂ ಕ್ರೈಮ್ ಬ್ರಾಂಚ್ ಪೊಲೀಸರು ಖೇರಾ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣದಲ್ಲಿ ಬಂಧನದಿಂದ ತಪ್ಪಿಸಿಕೊಳ್ಳಲು ಪವನ್ ಖೇರಾ ಅವರು ಮೊದಲಿಗೆ ತೆಲಂಗಾಣ ಹೈಕೋರ್ಟ್ ಸಂಪರ್ಕಿಸಿದ್ದರು. ಅಲ್ಲಿ ಅವರಿಗೆ ಒಂದು ವಾರದ ಕಾಲ ಮಧ್ಯಂತರ ರಕ್ಷಣೆ ದೊರೆತಿತ್ತು. ಆದರೆ, ಆ ತೀರ್ಪಿನ ವಿರುದ್ಧ ಅಸ್ಸಾಂ ಸರ್ಕಾರವು ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿದ ನಂತರ, ಏಪ್ರಿಲ್ 15 ರಂದು ಸುಪ್ರೀಂ ಕೋರ್ಟ್ ತೆಲಂಗಾಣ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ತಡೆ ನೀಡಿತ್ತು.

ಇದೀಗ ಗುವಾಹಟಿ ಹೈಕೋರ್ಟ್ ಕೂಡ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವುದರಿಂದ, ಪವನ್ ಖೇರಾ ಅವರಿಗೆ ಕಾನೂನು ತೊಡಕುಗಳು ಹೆಚ್ಚಾಗುವ ಸಾಧ್ಯತೆಯಿದೆ.

You cannot copy content of this page

Exit mobile version