ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ ವೇ ಶುರುವಿನಿಂದಲೇ ಅದ್ವಾನಗಳ ಮೂಲಕವೇ ಸುದ್ದಿಯಾಗುತ್ತಿದ್ದು, ಇನ್ನೂ ಯಾವುದೇ ಸಮಸ್ಯೆಗಳು ಬಗೆ ಹರಿಯುವ ಮುನ್ನವೇ ವಿಪರೀತ ಟೋಲ್ ದರ ಏರಿಸಿ ಮತ್ತೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಶುರುವಿನಲ್ಲಿ ಫಾಸ್ಟ್ ಟ್ಯಾಗ್ ನ ರಗಳೆಯಿಂದ ವಾಹನ ಸವಾರರು ಆಕ್ರೋಶ ಹೊಂದಿದ್ದು ಈಗ ಆ ಸಮಸ್ಯೆ ಬಗೆಹರಿದ ನಂತರ ಶೇ.22 ರಷ್ಟು ಟೋಲ್ ದರವನ್ನು ಏರಿಕೆ ಮಾಡಲಾಗಿದೆ. ವಾಹನ ಸವಾರರಿಗೆ ಯಾವುದೇ ಮುನ್ಸೂಚನೆ ನೀಡದೇ ಏರಿಕೆ ಮಾಡಿರುವುದು ದೈನಂದಿನ ಸವಾರರಿಗೆ ಈ ದರ ಏರಿಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಈ ಬಗ್ಗೆ ಸಂಸದ ಪ್ರತಾಪ್ ಸಿಂಹ ಅವರನ್ನು ಮಾಧ್ಯಮಗಳು ಪ್ರಶ್ನಿಸಿದರೆ “ಕೆಇಆರ್ ಸಿ ವಿದ್ಯುತ್ ದರ ಏರಿಕೆ ಮಾಡಲು ಶಿಫಾರಸು ಮಾಡಿತ್ತು. ಅದನ್ನು ತಡೆಯುವ, ತಿರಸ್ಕರಿಸುವ ಹಕ್ಕು ರಾಜ್ಯ ಸರ್ಕಾರಕ್ಕೆ ಇದೆ. ಗುತ್ತಿಗೆದಾರರ ಅನುದಾನ ಬಿಡುಗಡೆ ಆದೇಶಕ್ಕೆ ತಡೆ ಹಿಡಿಯುತ್ತೀರಿ. ಆದರೆ, ವಿದ್ಯುತ್ ಬಿಲ್ ಆದೇಶಕ್ಕೆ ಏಕೆ ತಡೆ ನೀಡಲ್ಲ” ಎಂಬ ರೀತಿಯ ಅಸಂಬದ್ಧ ಸಮರ್ಥನೆಗೆ ಮುಂದಾಗಿದ್ದಾರೆ.
ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ ಸಂಪೂರ್ಣ ತನ್ನದೇ ಕೊಡುಗೆ ಎಂಬಂತೆ ಬಿಂಬಿಸಿಕೊಳ್ಳುತ್ತಿರುವ ಪ್ರತಾಪ್ ಸಿಂಹ ಟೋಲ್ ದರ ಏರಿಕೆ ಬಗ್ಗೆ ಬೇರೆಯದೇ ದಾರಿ ಹಿಡಿದಿರುವುದು ವಾಹನ ಸವಾರರು ಪರಿತಪಿಸುವಂತೆ ಮಾಡಿದೆ.
ಇಡೀ ದೇಶದಲ್ಲಿ ಆರ್ಥಿಕ ವರ್ಷ ಶುರುವಾದಾಗ ಟೋಲ್ ಹೆಚ್ಚಳ ಸಹಜ. ಈ ಹೈವೆಗೆ ಏಪ್ರಿಲ್ ನಲ್ಲಿ ಟೋಲ್ ಹೆಚ್ಚಳ ಆಗಬೇಕಿತ್ತು. ಆಗ ಆಗಿರಲಿಲ್ಲ. ಈಗ ಶೇ.22ರಷ್ಟು ಏರಿಕೆ ಆಗಿದೆ. ಹಾಗೂ ಟೋಲ್ ಸಂಗ್ರಹದ ಆರಂಭದಲ್ಲಿ ಫಾಸ್ಟ್ ಟ್ಯಾಗ್ ಸಮಸ್ಯೆ ಇತ್ತು, ಈಗ ಸಮಸ್ಯೆ ಇಲ್ಲ. ಫಾಸ್ಟ್ ಟ್ಯಾಗ್ ಇರದಿದ್ದರೆ ಡಬಲ್ ಚಾರ್ಜ್ ಕಟ್ಟುವುದು ಕಡ್ಡಾಯವಾಗಿದೆ ಎಂದು ಪ್ರತಾಪ್ ಸಿಂಹ ಟೋಲ್ ದರವನ್ನು ಸಮರ್ಥಿಸಿಕೊಂಡಿದ್ದಾರೆ.