Home ಕರ್ನಾಟಕ ಚುನಾವಣೆ - 2023 ಅಂದಿನ ಅನ್ನಭಾಗ್ಯ ಇಂದಿನ ಗ್ಯಾರಂಟಿ

ಅಂದಿನ ಅನ್ನಭಾಗ್ಯ ಇಂದಿನ ಗ್ಯಾರಂಟಿ

0

ಬಡವರು ಬೇರೆ ಧರ್ಮಕ್ಕೆ ಹೋಗುವುದು, ಜಾತಿಧರ್ಮಗಳ ಗಡಿಗಳನ್ನು ಮೀರಿ ಪ್ರೀತಿಸುವುದು, ಮದುವೆಯಾಗುವುದು, ಮಾಂಸಾಹಾರ ಸೇವಿಸುವುದು ಇತ್ಯಾದಿಗಳು ನಮ್ಮ ಸಂಸ್ಕೃತಿಯ ಹರಿಕಾರರಿಗೆ ದೊಡ್ಡ ಸಮಸ್ಯೆಗಳಾದವು. ಆದರೆ ನಮ್ಮದೇ ಸಮಾಜದ ಬಹುತೇಕರಿಗೆ ಊಟ, ವಸತಿ, ಶಿಕ್ಷಣ, ಆರೋಗ್ಯಗಳು ಇಲ್ಲದಿರುವುದು ಅವರನ್ನು ಕಾಡಲೇ ಇಲ್ಲ – ಎಂ.ಚಂದ್ರ ಪೂಜಾರಿ

2015ರಲ್ಲಿ ಅನ್ನಭಾಗ್ಯ ಯೋಜನೆ ಆರಂಭಿಸುವ ಸಂದರ್ಭದಲ್ಲೂ ಇಂದಿನ ಗ್ಯಾರಂಟಿಗಳ ವಿರುದ್ಧ ಕೇಳಿ ಬರುತ್ತಿರುವ ಟೀಕೆಗಳು ಬಂದಿದ್ದವು. ಈ ಯೋಜನೆ ಮಾತ್ರವಲ್ಲ ಬಡವರನ್ನು ಉದ್ದೇಶಿಸಿ ಸರಕಾರಗಳು ಜಾರಿಗೆ ತರುವ ಎಲ್ಲ ಯೋಜನೆಗಳ ವಿರುದ್ಧ ನಮ್ಮಲ್ಲಿ ಸಾಕಷ್ಟು ಅಸಮಾಧಾನ ವ್ಯಕ್ತವಾಗುತ್ತಿದೆ. ಆ ಸಂದರ್ಭದಲ್ಲಿ ಕೇಳಿ ಬರುತ್ತಿದ್ದ ಸಾಮಾನ್ಯ ಟೀಕೆಗಳು ಇಂತಿವೆ. ಇಂತಹ ಯೋಜನೆಗಳು ನಮ್ಮ ಸಂಪನ್ಮೂಲಗಳ ಬಹುಭಾಗವನ್ನು ತಿಂದು ಹಾಕುತ್ತಿವೆ. ಇವುಗಳ ಮೇಲೆ ಖರ್ಚು ಮಾಡುವುದು ವ್ಯರ್ಥ. ಏಕೆಂದರೆ ವ್ಯಾಪಕ ಲಂಚಗುಳಿತನ ಇರುವುದರಿಂದ ಇವೆಲ್ಲ ಬಡಜನರಿಗೆ ತಲುಪುವುದೇ ಇಲ್ಲ. ಯುಪಿಎ ಹೋಗಿ ಎನ್‍ಡಿಎ ಬಂದ ಕೂಡಲೇ ಇಂತಹ ಯೋಜನೆಗಳು ನಿಲ್ಲುತ್ತವೆ. ಏಕೆಂದರೆ ಲೋಕಸಭೆ ಚುನಾವಣೆಯಲ್ಲಿ ಜನ ಇಂತಹ ಕಾರ್ಯಕ್ರಮಗಳನ್ನು ತಿರಸ್ಕರಿಸಿದ್ದಾರೆ. ಹೀಗೆ ಹತ್ತು ಹಲವು ಟೀಕೆಗಳು ಬಡತನ ನಿವಾರಣ ಕಾರ್ಯಕ್ರಮಗಳ ವಿರುದ್ಧ ಬರುತ್ತಲೇ ಇವೆ.

ವರ್ಲ್ಡ್ ಡೆವಲಪ್‍ಮೆಂಟ್ ರಿಪೋರ್ಟ್‍ನ ಕೆಲವು ಅಂಕಿಅಂಶಗಳನ್ನು ನೋಡಿದರೆ ಈ ಎಲ್ಲ ಟೀಕೆಗಳು ಸತ್ಯಕ್ಕೆ ಎಷ್ಟು ದೂರ ಎನ್ನುವುದು ಸುಲಭದಲ್ಲಿ ಅರ್ಥವಾಗಬಹುದು. ವರ್ಲ್ಡ್ ಡೆವಲಪ್‍ಮೆಂಟ್ ವರದಿ ಪ್ರಕಾರ ಶಿಕ್ಷಣ ಮತ್ತು ಆರೋಗ್ಯದ ಮೇಲೆ ಭಾರತ ತನ್ನ ಜಿಡಿಪಿಯ ಶೇ.4.7ರಷ್ಟನ್ನು ಮಾತ್ರ ಖರ್ಚು ಮಾಡುತ್ತಿದೆ. ನಮ್ಮ ನೆರೆಕರೆಯ (ಪೂರ್ವ ಏಶ್ಯಾದ) ದೇಶಗಳು ತಮ್ಮ ಜಿಡಿಪಿಯ ಶೇ.7.2ರಷ್ಟನ್ನು, ಸಬ್‍ಸಹರಾ ಆಫ್ರಿಕಾ ಶೇ.7ರಷ್ಟನ್ನು, ಲ್ಯಾಟೀನ್ ಆಮೇರಿಕಾ ದೇಶಗಳು ಶೇ.13.3ರಷ್ಟನ್ನು ಶಿಕ್ಷಣ ಮತ್ತು ಆರೋಗ್ಯದ ಮೇಲೆ ಖರ್ಚು ಮಾಡುತ್ತಿವೆ. ಪ್ರಪಂಚದ ಅತ್ಯಂತ ಹಿಂದುಳಿದ ದೇಶಗಳು ಕೂಡ ತಮ್ಮ ಜಿಡಿಪಿಯ ಶೇ.6.4ರಷ್ಟನ್ನು ಶಿಕ್ಷಣ ಮತ್ತು ಆರೋಗ್ಯಗಳ ಮೇಲೆ ವಿನಿಯೋಜಿಸುತ್ತವೆ (ಜೀನ್ ಡ್ರೀಜ್, 2014).

ಶಿಕ್ಷಣ, ಆರೋಗ್ಯಗಳ ಮೇಲೆ ಮಾತ್ರ ಭಾರತ ಅತೀ ಕನಿಷ್ಠ ಮೊತ್ತವನ್ನು ಖರ್ಚುಮಾಡುತ್ತಿರುವುದಲ್ಲ; ಸಾಮಾಜಿಕ ಭದ್ರತೆ ಮೇಲೆ ಭಾರತ ಮಾಡುವ ಖರ್ಚು ಕೂಡ ಅತ್ಯಂತ ಕಡಿಮೆ ಇದೆ. ಏಶಿಯನ್ ಡೆವಲಪ್‍ಮೆಂಟ್ ಬ್ಯಾಂಕ್ ರಿಪೋರ್ಟ್ ಪ್ರಕಾರ ಭಾರತ ತನ್ನ ಜಿಡಿಪಿಯ ಶೇ.1.7ರಷ್ಟನ್ನು ಮಾತ್ರ ಸಾಮಾಜಿಕ ಭದ್ರತೆ ಮೇಲೆ ಖರ್ಚು ಮಾಡುತ್ತಿದೆ. ಭಾರತಕ್ಕೆ ಹೋಲಿಸಿದರೆ ಏಶಿಯಾದ ಕೆಲವು ಬಡದೇಶಗಳು ತಮ್ಮ ಜಿಡಿಪಿಯ ಶೇ.3.4ನ್ನು ಖರ್ಚು ಮಾಡುತ್ತಿವೆ. ಚೈನಾ ತನ್ನ ಜಿಡಿಪಿಯ ಶೇ.5.4ನ್ನು, ಜಪಾನ್ ತನ್ನ ಜಿಡಿಪಿಯ ಶೇ.19.2ನ್ನು ಮತ್ತು ಏಶಿಯಾದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಮ್ಮ ಜಿಡಿಪಿಯ ಶೇ.10ನ್ನು ಸಾಮಾಜಿಕ ಭದ್ರತೆ ಮೇಲೆ ವಿನಿಯೋಜಿಸುತ್ತಿವೆ. ಆದುದರಿಂದ ನಮ್ಮ ಸಂಪನ್ಮೂಲದ ಬಹುಭಾಗ ಬಡವರ ಉದ್ಧಾರಕ್ಕೆ ಖರ್ಚಾಗುತ್ತಿದೆ ಎನ್ನುವುದು ಆಧಾರರಹಿತ ಆರೋಪ (ಜೀನ್ ಡ್ರೀಜ್, 2014).

ಕರ್ನಾಟಕ ಸರಕಾರದ ಕಡಿಮೆ ಬೆಲೆಯ ಅಕ್ಕಿ ಯೋಜನೆಯ ವಿರುದ್ಧ ಬಂದ ಟೀಕೆಗಳನ್ನು ಗಮನಿಸೋಣ. ಕಡಿಮೆ ಬೆಲೆಗೆ ಅಕ್ಕಿ ದೊರೆಯುವುದರಿಂದ ಉಳಿತಾಯವಾಗುವ ಹಣವನ್ನು ಬಡವರು ಕುಡಿತ/ಇತರ ದುಶ್ಚಟಗಳಿಗೆ ಬಳಸಬಹುದು, ಬಡವರು ಈಗಾಗಲೇ ಸೋಮಾರಿಗಳಾಗಿದ್ದಾರೆ, ಈ ಕಾರ್ಯಕ್ರಮದಿಂದ ಇನ್ನೂ ಸೋಮಾರಿಗಳಾಗಬಹುದು, ಕೂಲಿ ಕಾರ್ಮಿಕರ ಕೊರತೆ ಸೃಷ್ಟಿಯಾಗಬಹುದು, ಈಗಾಗಲೇ ಅವಸಾನದ ಅಂಚಿನಲ್ಲಿರುವ ಕೃಷಿ ಈ ಕಡಿಮೆ ಬೆಲೆ ಅಕ್ಕಿ ಯೋಜನೆಯಿಂದ ಸಂಪೂರ್ಣ ನಾಶವಾಗ ಬಹುದು ಇತ್ಯಾದಿ ಟೀಕೆಗಳಿವೆ. ಕಡಿಮೆ ಬೆಲೆಗೆ ಅಕ್ಕಿ ಕೊಡುವ ಕಾರ್ಯಕ್ರಮದಿಂದ ಬಡತನ ನಿವಾರಣೆಯಾಗುತ್ತದೆ ಎನ್ನುವ ಭ್ರಮೆ ನನಗೂ ಇಲ್ಲ. ಆದರೂ ಬಡವರ ಸ್ಥಾನದಲ್ಲಿ ನಿಂತು ಆಲೋಚಿಸಿದರೆ ಬಡವರಲ್ಲದವರು ಮಾಡುವ ಟೀಕೆಗಳಲ್ಲಿರುವ ಸತ್ಯಾಂಶದ ಕೊರತೆ ಎದ್ದು ಕಾಣುತ್ತಿದೆ.

ಮೊದಲಿಗೆ ಕಡಿಮೆ ಬೆಲೆಯ ಅಕ್ಕಿಯಿಂದ ಬಡವರು ಸೋಮಾರಿಗಳಾಗುತ್ತಿದ್ದಾರೆನ್ನುವ ವಾದವನ್ನು ಎತ್ತಿಕೊಳ್ಳುವ. ಈ ಯೋಜನೆಯಲ್ಲಿ ಐದು ಜನರಿರುವ ಒಂದು ಕುಟುಂಬಕ್ಕೆ ತಿಂಗಳಿಗೆ 30 ಕಿಲೋಗ್ರಾಂ ಅಕ್ಕಿ ಸಿಗುತ್ತದೆ. 30 ಕಿಲೋಗ್ರಾಂನ್ನು ಗ್ರಾಂ ಆಗಿ ಪರಿವರ್ತಿಸಿದರೆ ಐದು ಜನರಿರುವ ಒಂದು ಕುಟುಂಬಕ್ಕೆ ತಿಂಗಳಿಗೆ ಮೂವತ್ತು ಸಾವಿರ ಗ್ರಾಂ ಅಕ್ಕಿ ಸಿಗುತ್ತದೆ. ಮೂವತ್ತು ಸಾವಿರ ಗ್ರಾಂ ಅಕ್ಕಿಯನ್ನು ಐದು ಜನರಿಗೆ ಹಂಚಿದರೆ ಪ್ರತಿಯೊಬ್ಬರಿಗೆ ತಿಂಗಳಿಗೆ  ಆರು ಸಾವಿರ ಗ್ರಾಂ ಅಕ್ಕಿ ದೊರೆಯುತ್ತದೆ. ಆರು ಸಾವಿರ ಗ್ರಾಂನ್ನು ಮೂವತ್ತರಿಂದ ಭಾಗಿಸಿದರೆ ಪ್ರತಿಯೊಬ್ಬರಿಗೆ ದಿನಕ್ಕೆ ಇನ್ನೂರು ಗ್ರಾಂ ಅಕ್ಕಿ ಲಭ್ಯ (ರಾಮ್‍ಜೆಟ್‍ಮಲಾನಿ, 2014). ಇನ್ನೂರು ಗ್ರಾಂ ಅಕ್ಕಿಯಿಂದ ಮುನ್ನೂರು ಕ್ಯಾಲರಿ ಶಕ್ತಿ ಲಭ್ಯವಾಗುತ್ತದೆಯೆಂದು ಗ್ರಹಿಸಬಹುದು. ಸರಕಾರಿ ಲೆಕ್ಕಚಾರ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ದುಡಿದು ಗಳಿಸುವಷ್ಟು ಶಕ್ತಿ ಪಡೆಯಬೇಕಾದರೆ ದಿನವೊಂದಕ್ಕೆ ಕನಿಷ್ಠ 2400 ಕ್ಯಾಲರಿ ಶಕ್ತಿ ಗಳಿಸುವಷ್ಟು ಆಹಾರ ಸೇವಿಸಬೇಕು. ಅಂದರೆ ಸರಕಾರ ನೀಡುವ ಮೂವತ್ತು ಕಿಲೋಗ್ರಾಂ ಅಕ್ಕಿಯಿಂದ ಕುಟುಂಬದ ಆಹಾರದ ಎಂಟನೇ ಒಂದರಷ್ಟು ಮಾತ್ರ ಪೂರೈಕೆಯಾಗುತ್ತಿದೆ. ಕುಟುಂಬದ ಎಲ್ಲ ಸದಸ್ಯರಿಗೆ ಮೇಲಿನ ಕ್ಯಾಲರಿ ಅಗತ್ಯವಿಲ್ಲವೆಂದು ಊಹಿಸುವ. ಆದಾಗ್ಯೂ ಮೂವತ್ತು ಕಿಲೋಗ್ರಾಂ ಅಕ್ಕಿ ಕುಟುಂಬದ ಆಹಾರದ ಬೇಡಿಕೆಯನ್ನು ಸಂಪೂರ್ಣ ಪೂರೈಸುವುದಿಲ್ಲ ಎನ್ನುವುದು ಮೇಲಿನ ಅಂಕಿಅಂಶಗಳಿಂದ ಸ್ಪಷ್ಟವಾಗುತ್ತಿದೆ.

ಇದನ್ನೂ ಓದಿ-ಗ್ಯಾರಂಟಿಗಳು: ಜನರಿಗೆ ಖುಶಿ; ಪ್ರತಿಪಕ್ಷಕ್ಕೆ ಉರಿ!

ವಾಸ್ತವ ಹೀಗಿದ್ದರೂ ಬಡವರ ಮೇಲೆ ಸರಕಾರ ಮಾಡುವ ಅತ್ಯಲ್ಪ ಖರ್ಚಿನ ಬಗ್ಗೆ ಇಷ್ಟೊಂದು ಅಸಹನೆ ಏಕೆಂದು ಆಲೋಚಿಸಿದರೆ ಎರಡು ಕಾರಣಗಳು ಎದ್ದು ಕಾಣುತ್ತಿವೆ. ಒಂದು, ನಮ್ಮ ಅಭಿವೃದ್ಧಿ ಕಲ್ಪನೆ ಮತ್ತು ಆಚರಣೆ, ಎರಡು, ನಮ್ಮ ಸಂಸ್ಕೃತಿ. ತೊಂಬತ್ತರದ ನಂತರದ ಅಭಿವೃದ್ಧಿ ನೀತಿಗಳು ಬಡತನದ ಸೃಷ್ಟಿಯನ್ನು ವ್ಯಕ್ತಿವಾದದ ದೃಷ್ಟಿಯಿಂದ ನೋಡುತ್ತಿವೆ. ಅಂದರೆ ಬಡತನದ ಸೃಷ್ಟಿಯಲ್ಲಿ ಪರಿಸರಕ್ಕಿಂತ ವ್ಯಕ್ತಿಯ ಪಾತ್ರ ದೊಡ್ಡದಿದೆ ಎನ್ನುವ ನಿಲುವನ್ನು ಇಂದಿನ ಅಭಿವೃದ್ಧಿ ಧೋರಣೆಗಳು ಒಪ್ಪಿಕೊಂಡಿವೆ. ಆದುದರಿಂದ ಇಂದಿನ ಬಡತನ ನಿವಾರಣಾ ಕಾರ್ಯಕ್ರಮಗಳ ಪಟ್ಟಿಯಲ್ಲಿ ಭೂಸುಧಾರಣೆ, ಬ್ಯಾಂಕ್ ರಾಷ್ಟ್ರೀಕರಣ, ಉಚಿತ ಶಿಕ್ಷಣ ಅಥವಾ ಆರೋಗ್ಯ ಮುಂತಾದ ಕಾರ್ಯಕ್ರಮಗಳನ್ನು ನೋಡಲು ಸಾಧ್ಯವಿಲ್ಲ. ಇವುಗಳ ಜಾಗದಲ್ಲಿ ಇಂದು ಕಡಿಮೆ ಬೆಲೆಗೆ ಅಕ್ಕಿ ನೀಡುವುದು, ಅಕ್ಕಿ ಬೇಯಿಸಲು ಗ್ಯಾಸ್ ನೀಡುವುದು, ಕನಿಷ್ಠ ಕೆಲವು ದಿನಗಳ ಉದ್ಯೋಗ ನೀಡುವುದು, ಶಿಕ್ಷಣ ಸಂಸ್ಥೆಗಳಲ್ಲಿ ಕೆಲವು ಸೀಟುಗಳನ್ನು ಬಡ ಮಕ್ಕಳಿಗೆ ಮೀಸಲಿಡುವುದು ಮುಂತಾದ ಕಾರ್ಯಕ್ರಮಗಳು ಬಡತನ ನಿವಾರಣಾ ಕಾರ್ಯಕ್ರಮಗಳ ಪಟ್ಟಿಯಲ್ಲಿ ನೋಡಬಹುದು. ಕರ್ನಾಟಕ ಸರಕಾರದ ಕಡಿಮೆ ಬೆಲೆ ಅಕ್ಕಿ ಯೋಜನೆ ಕೂಡ ವ್ಯಕ್ತಿವಾದದ ದೃಷ್ಟಿಯಿಂದ ಬಡತನವನ್ನು ನೋಡುವ ಮತ್ತು ಪರಿಹರಿಸುವ ಒಂದು ಕಾರ್ಯಕ್ರಮ.

ಅಭಿವೃದ್ಧಿ ಸಿದ್ಧಾಂತಗಳ ಜೊತೆಗೆ ನಮ್ಮ ಚರಿತ್ರೆಯಿಂದ ಬಂದ ಲಿಂಗ, ಜಾತಿ, ಧರ್ಮ ಬೇಧಗಳು ಕೂಡ ಬಡತನವನ್ನು ಸಹಜಗೊಳಿಸಿವೆ. ನಮ್ಮ ಸಮಾಜದ ವಿವಿಧ ಗುಂಪುಗಳನ್ನು ಗುರುತಿಸಲು ಜಾತಿ ಪದ್ಧತಿ ಸೃಷ್ಟಿಯಾಗಿದೆ. ಜಾತಿಗಳು ಒಂದು ಪಿರಮಿಡ್ ರೂಪದಲ್ಲಿ ಸಂಘಟಿಸಲ್ಪಟ್ಟಿವೆ. ಕೆಲವರು ಮೇಲೆ ಮತ್ತೆ ಕೆಲವರು ಮಧ್ಯದಲ್ಲಿ ಮತ್ತು ಹಲವರು ಪಿರಮಿಡ್ ಬುಡದಲ್ಲಿದ್ದಾರೆ. ಮೇಲಿದ್ದವರು ಹೆಚ್ಚಿನ ಅಧಿಕಾರ, ಆದಾಯ, ಸ್ಥಾನಮಾನ ಹೊಂದಿದ್ದರೆ ಮಧ್ಯದಲ್ಲಿರುವವರು ಮೇಲಿದ್ದವರಿಗಿಂತ ಕಡಿಮೆ ಮತ್ತು ಬುಡದಲ್ಲಿರುವವರು ಅತೀ ಕಡಿಮೆ ಪ್ರಮಾಣದ ಅಧಿಕಾರ, ಆದಾಯ, ಸ್ಥಾನಮಾನಗಳನ್ನು ಹೊಂದಿದ್ದಾರೆ. ಈ ಬಗೆಯ ವಿಂಗಡಣೆಯನ್ನು ಹುಟ್ಟಿನಿಂದಲೇ ನೋಡುತ್ತಿರುವುದರಿಂದ ಬಹುತೇಕರಿಗೆ ಆರ್ಥಿಕ ಅಸಮಾನತೆ ಅಥವಾ ಬಡತನ ಸಮಸ್ಯೆಯಾಗಿಲ್ಲ.

ಪರದೇಶಿ ಸಂಸ್ಕೃತಿಗಳ (ಕ್ರಿಶ್ಚಿಯನ್, ಮುಸ್ಲಿಮ್) ಸಂಪರ್ಕಕ್ಕೆ ಬಂದ ನಂತರ ನಮ್ಮಲ್ಲೂ ಜಾತಿ ಪರಿಧಿಯನ್ನು ಮೀರಿ ಬಡತನವನ್ನು ಕಲ್ಪಿಸಿಕೊಳ್ಳುವ ಪ್ರಯತ್ನಗಳು ಆರಂಭವಾದವು. ಆದರೆ ಈ ಕಾಳಜಿಯ ಹಿಂದೆ ಬಡವರ ಮೇಲಿನ ಪ್ರೀತಿಗಿಂತ ಎಲ್ಲಿ ಬಡವರು ಮತ್ತೊಂದು ಧರ್ಮದ ಪ್ರಭಾವಕ್ಕೆ ಒಳಗಾಗಿ ನಾವು (ಅನುಕೂಲಸ್ಥರು) ಅಲ್ಪಸಂಖ್ಯಾತರಾಗುತ್ತೇವೆ ಎನ್ನುವ ಭೀತಿಯ ಪಾತ್ರ ಹೆಚ್ಚಿದೆ. ಸ್ವಾತಂತ್ರ್ಯಾನಂತರದ ಪ್ರಜಾಪ್ರಭುತ್ವದಲ್ಲಿ ಸಂಖ್ಯಾಬಲದ ಮಹತ್ವ ಹೆಚ್ಚಾಯಿತು. ಇದರೊಂದಿಗೆ ನಾವೆಲ್ಲ ಒಂದೇ ಸಂಸ್ಕೃತಿಗೆ ಸೇರಿದವರು ಎನ್ನುವ ಕೂಗು ಇನ್ನೂ ಹೆಚ್ಚಾಯಿತು. ಬಡವರು ಬೇರೆ ಧರ್ಮಕ್ಕೆ ಹೋಗುವುದು, ಜಾತಿಧರ್ಮಗಳ ಗಡಿಗಳನ್ನು ಮೀರಿ ಪ್ರೀತಿಸುವುದು, ಮದುವೆಯಾಗುವುದು, ಮಾಂಸಾಹಾರ ಸೇವಿಸುವುದು ಇತ್ಯಾದಿಗಳು ನಮ್ಮ ಸಂಸ್ಕೃತಿಯ ಹರಿಕಾರರಿಗೆ ದೊಡ್ಡ ಸಮಸ್ಯೆಗಳಾದವು. ಆದರೆ ನಮ್ಮದೇ ಸಮಾಜದ ಬಹುತೇಕರಿಗೆ ಊಟ, ವಸತಿ, ಶಿಕ್ಷಣ, ಆರೋಗ್ಯಗಳು ಇಲ್ಲದಿರುವುದು ಅವರನ್ನು ಕಾಡಲೇ ಇಲ್ಲ. ಈ ಬಗೆಯ ‘ನಮ್ಮ ಸಂಸ್ಕೃತಿಯ’ ಕಲ್ಪನೆ ಬಡತನದ ಸೃಷ್ಟಿ ಮತ್ತು ಮುಂದುವರಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಎಲ್ಲರನ್ನೂ ಮತ್ತು ಎಲ್ಲ ಸಂಪನ್ಮೂಲಗಳನ್ನು (ಭೌದ್ಧಿಕ ಹಾಗು ಭೌತಿಕ ಸಂಪನ್ಮೂಲಗಳನ್ನು) ಒಳಗೊಳ್ಳುವ ಸಂಸ್ಕೃತಿ ಕಲ್ಪನೆ ಮತ್ತು ಆಚರಣೆ ಮಾತ್ರ ಬಡತನಕ್ಕೆ ಶಾಶ್ವತ ಪರಿಹಾರ ಒದಗಿಸಬಹುದು.

ಎಂ.ಚಂದ್ರ ಪೂಜಾರಿ

ರಾಜಕೀಯ ಹಾಗೂ ಅಭಿವೃದ್ಧಿ ಚಿಂತಕರು

ಇದನ್ನೂ ಓದಿ-ಉಚಿತಗಳು | ಮಹಿಳೆಯರ ಬೆವರಿನಲ್ಲಿ ಬೆಳೆಯುವ ಆರ್ಥಿಕತೆಯಲ್ಲಿ ಅವರ ಹಕ್ಕಿನ ಪಾಲು

You cannot copy content of this page

Exit mobile version