ಉಡುಪಿ : ಕೋಟ ಡಾ.ಕಾರಂತ ಹುಟ್ಟೂರ ಪ್ರಶಸ್ತಿ ಮತ್ತು ಕೋಟ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಕೊಡಲಾಗುವ “ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ”ಗೆ ನಟ ಡಾ. ರಮೇಶ್ ಅರವಿಂದ್ ಆಯ್ಕೆಯಾಗಿದ್ದಾರೆ ಎಂದು ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ. ಕುಂದರ್ ಮಾಹಿತಿ ನೀಡಿದ್ದಾರೆ.
ಅ.10 ರಂದು ಕೋಟ ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ನಡೆಯಲಾಗುವ ಕಾರ್ಯಕ್ರಮದ ಕುರಿತು ಇಂದು ಸುದ್ದಿಗೊಷ್ಠಿ ಏರ್ಪಡಿಸಲಾಗಿತ್ತು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆನಂದ್ ಸಿ ಕುಂದರ್ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು “ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ” ಗೆ ಆಯ್ಕೆ ಮಾಡಲಾಗುವುದು ಹಾಗೆಯೇ ಈ ಬಾರಿ ನಡೆಯಲಿರುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ನಟ ಹಾಗೂ ನಿರ್ದೇಶಕರಾದ ಡಾ.ರಮೇಶ್ ಅರವಿಂದ್ ಅವರು ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಈ ವರೆಗೂ ಈ ಪ್ರಶಸ್ತಿಯನ್ನು ನಾನಾ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ವೀರಪ್ಪ ಮೊಯ್ಲಿ, ಎಂ ಎನ್ ವೆಂಕಟಾಚಲ, ಕೆ ರಾಮಕೃಷ್ಣ ಹಂದೆ, ರವಿ ಬೆಳಗೆರೆ, ಗಿರೀಶ್ ಕಾಸರವಳ್ಳಿ, ಬಿ.ಜಯಶ್ರೀ, ಡಾ.ಮೋಹನ್ ಆಳ್ವ, ಸಾಲುಮರದ ತಿಮ್ಮಕ್ಕ, ಚಿಟ್ಟಾಣಿ, ರಾಮಚಂದ್ರ ಹೆಗ್ಗಡೆ, ಜಯಂತ್ ಕಾಯ್ಕಿಣಿ, ಸದಾನಂದ ಸುವರ್ಣ, ಡಾ.ಬಿ ಎಂ ಹೆಗ್ಡೆ, ಪ್ರಕಾಶ್ ರೈ, ಶ್ರೀ ಪಡ್ರೆ, ಕವಿತಾ ಮಿಶ್ರಾ, ಡಾ.ಎಸ್ ಎಲ್ ಭೈರಪ್ಪ, ಗಿರೀಶ್ ಭಾರದ್ವಾಜ್ ಇವರುಗಳು ಧಕ್ಕಿಸಿಕೊಂಡಿದ್ದಾರೆ.