ಮೈಸೂರು : ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾ ದಸರಾ ಆಚರಣಾ ಸಮಿತಿಯಿಂದ ದಸರಾ ಸಂಭ್ರಮಾಚರಣೆಗೆಂದು ಅನುಮತಿ ಕೇಳಿದಾಗ ಪೋಲೀಸರು ಅದನ್ನು ನಿರಾಕರಿಸಿದ್ದಾರೆ.
ಮಹಿಷಾ ದಸರಾ ಆಚರಣೆಯನ್ನು ಯಾರು ತಡೆಯಲು ಬಂದರೂ ನಮ್ಮ ನಿರ್ಧಾರ ಬದಲಾಗುವುದಿಲ್ಲ. ಈ ಆಚರಣೆ ಯಾರಿಗೂ ಅಪಮಾನ ಮಾಡುವ ಉದ್ದೇಶ ಹೊಂದಿಲ್ಲ. ಆದರೂ ಕಳೆದ ಮೂರು ವರ್ಷಗಳಿಂದ ಪೋಲೀಸ್ ಇಲಾಖೆ ಅಡ್ಡಿಪಡಿಸುತ್ತಿದೆ. ಈ ಬಾರಿ ಮಾಡೇ ಮಾಡುತ್ತೇವೆ ಎಂದು ಮಹಿಷ ದಸರಾ ಸಮಿತಿಯ ಮುಖಂಡರು ಮೂರು ದಿನಗಳ ಹಿಂದೆ ಹೇಳಿಕೆ ನೀಡಿದ್ದರು. ಈ ಹಿನ್ನೆಲೆ ಈಗ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ.
ಕಳೆದ ಮೂರು ವರ್ಷದಿಂದ ಮಹಿಷ ದಸರಾ ಆಚರಿಸಲು ಮುಂದಾದವರ ವಿರುದ್ಧ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದರು. ಇದಲ್ಲದೆ ಪೋಲೀಸರಿಗೆ ಇಲ್ಲಿ ಯಾವುದೇ ರೀತಿಯ ಆಚರಣೆಗೆ ಅವಕಾಶ ಕಲ್ಪಿಸದಂತೆ ಸೂಚನೆ ನೀಡಿದ್ದರು. ಅದರಂತೆ ಮೂರು ವರ್ಷಗಳ ಕಾಲ ಮಹಿಷ ದಸರಾಗೆ ಯಾವುದೇ ರೀತಿಯ ಅವಕಾಶ ನೀಡಿರಲಿಲ್ಲ. ಈ ಒಂದು ನಿಲುವಿಗೆ ಮಹಿಷಾ ಸಮಿತಿಯಲ್ಲದೇ ಅನೇಕ ದಲಿತಪರ ಸಂಘಟನೆಗಳು ಮತ್ತು ಬೌದ್ಧ ಸಮಾಜ ವಿರೋಧ ವ್ಯಕ್ತಪಡಿಸಿತ್ತು.
ಮೈಸೂರು ಎಂಬ ಹೆಸರು ಬಂದಿರುವುದೇ ಮಹಿಷನಿಂದ. ಕೆಟ್ಟ ವ್ಯಕ್ತಿ ಹೆಸರನ್ನು ಯಾರಾದರೂ ಒಂದು ರಾಜ್ಯಕ್ಕೆ, ಊರಿಗೆ ಇಡುತ್ತಾರಾ? ಆತ ಬೌದ್ಧ. ಅತ್ಯುತ್ತಮವಾದ ಕೆಲಸ ಮಾಡಿದವನು. ಅವನು ಅಸುರ ಆಗಿರುವುದಕ್ಕೆ ಸಾಧ್ಯವಾ? ಆ ಕಾರಣಕ್ಕೆ ಮಹಿಷ ದಸರಾ ಆಚರಿಸುತ್ತೇವೆ ಎಂದು ಅನೇಕ ಸಂಘಟನೆಗಳು ಕಳೆದ ಮೂರು ವರ್ಷಗಳಿಂದ ವಾದ ಮಂಡಿಸುತ್ತಲೇ ಇದ್ದಾರೆ. ಆದರೆ ಈ ವರ್ಷವೂ ಮಹಿಷ ದಸರಾ ಆಚರಣೆಗೆ ಅವಕಾಶ ಇಲ್ಲದಂತಾಗಿದೆ.
ಈ ಹಿನ್ನಲೆ ಪ್ರತಿಮೆಯ ಸುತ್ತ ಪೋಲೀಸರಿಂದ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಎಲ್ಲೆಡೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಪ್ರತಿಮೆಗೆ ಹೂವಿನಿಂದ ಅಲಂಕಾರಿಸಬಾರದೆಂದು ಅದನ್ನು ಬಟ್ಟೆಯಿಂದ ಮುಚ್ಚಲ್ಪಟ್ಟಿದೆ. ಚಾಮುಂಡಿ ಬೆಟ್ಟಕ್ಕೆ ತೆರಳುತ್ತಿರುವ ಎಲ್ಲಾ ವಾಹನಗಳನ್ನು ತಪಾಸಣೆ ಮಾಡಿಯೇ ಬಿಡಲಾಗುತ್ತಿದ್ದು ಅಲ್ಲಿನ ಪೋಲೀಸರು ಕಣ್ಗಾವಲಿನಂತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಚಂದ್ರಗುಪ್ತ ಅವರು “ಮಹಿಷಾ ದಸರಾ ಆಚರಿಸುವಂತೆ ಅನುಮತಿ ಕೋರಿ ನಮ್ಮ ಕಚೇರಿಗೆ ಈ ವರೆಗೂ ಯಾರೂ ಮನವಿ ಸಲ್ಲಿಸಿಲ್ಲ” ಎಂದು ಹೇಳಿದ್ದಾರೆ.