Home ಅಂಕಣ ಕನ್ನಡಿಗರಿಗೆ ಕನ್ನಡ ಕಲಿಸುವ ಅನಿವಾರ್ಯತೆ ಮತ್ತು ಕಾರಣಗಳು (ಪಾಷಾಭಿಪ್ರಾಯ ಅಂಕಣ)

ಕನ್ನಡಿಗರಿಗೆ ಕನ್ನಡ ಕಲಿಸುವ ಅನಿವಾರ್ಯತೆ ಮತ್ತು ಕಾರಣಗಳು (ಪಾಷಾಭಿಪ್ರಾಯ ಅಂಕಣ)

0

– ಎಂ.ಅಬ್ದುಲ್ ರೆಹಮಾನ್ ಪಾಷ

‘ಕನ್ನಡಿಗರಿಗೇ ಕನ್ನಡ ಕಲಿಸಬೇಕಾದ ಸ್ಥಿತಿ’, ‘ಕನ್ನಡಿಗರಿಗೇ ಕನ್ನಡ ಭಾಷೆಯ ಬಗ್ಗೆ ನಿರಾಸಕ್ತ ಮನೋಭಾವ’- ಇವು, ಕನ್ನಡ ಅಭಿವೃದ್ಧಿ ಪ್ರಾಧಿಕಾರವು ‘ಕನ್ನಡೇತರರಿಗೆ ಕನ್ನಡ ಕಲಿಸುವವರಿಗಾಗಿ’ ಇತ್ತೀಚೆಗೆ ನಡೆಸಿದ ಕಾರ್ಯಶಿಬಿರದ ಉದ್ಘಾಟನೆಯಲ್ಲಿ ವಿದ್ವಾಂಸರಿಂದ ವ್ಯಕ್ತವಾದ ಅಭಿಪ್ರಾಯಗಳು. ಇಂತಹ ಮಾತುಗಳನ್ನು ದಶಕಗಳಿಂದ ಕೇಳುತ್ತಲೇ ಬಂದಿದ್ದೇವೆ, ಆದರೆ ಇವಕ್ಕೆ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ ಎಂಬುದೇ ಒಂದು ವಿಡಂಬನೆ.

ನಮ್ಮಂಥ ಸಾಮಾನ್ಯ ನಾಗರಿಕರು ಅಸಹಾಯಕತೆ, ಹತಾಶೆಯಿಂದ ಹೀಗೆ ಹೇಳಿದರೆ ಅದು ಅರ್ಥವಾದೀತು. ಆದರೆ, ಪ್ರಾಧಿಕಾರದ ಅಡಿಯಲ್ಲೇ ನಡೆದ ಶಿಬಿರದಲ್ಲಿ ಇದನ್ನು ಹೇಳಿದ್ದಾದರೆ ಪರಿಸ್ಥಿತಿ ಗಂಭೀರವಾಗಿದೆ ಎಂದೇ ಅರ್ಥ. ಮನೆಯಲ್ಲಿ ಮೊದಲ ಐದು ವರ್ಷಗಳಲ್ಲಿ ಕನ್ನಡವನ್ನು ಮನೆ ಮಾತಾಗಿ ಆಲಿಸುವ, ಮಾತಾಡುವ ಕೌಶಲಗಳನ್ನು ಕಲಿತೇ ಬರುವ ಮಕ್ಕಳನ್ನು ಉದಾಹರಣೆಯನ್ನಾಗಿ ತೆಗೆದುಕೊಳ್ಳಿ. ಈ ಎರಡು ಕೌಶಲಗಳನ್ನು ಬುನಾದಿಯಾಗಿ ಇಟ್ಟುಕೊಂಡರೆ, ಭಾಷೆಯ ಮುಂದಿನ ಎರಡು ಕೌಶಲಗಳಾದ ಓದು, ಬರಹವನ್ನು ಕಲಿಸುವುದು ಸುಲಭ ಎಂದು ಭಾಷಾ ವಿಜ್ಞಾನಿಗಳು ವಿಶ್ವಾಸದಿಂದ ಹೇಳುತ್ತಾರೆ.

ಕನ್ನಡ ಬರಹ ಎಲ್ಲೆಲ್ಲೂ ರಾರಾಜಿಸುವಂಥ ಕರ್ನಾಟಕದ ಪರಿಸರದಲ್ಲಿಯೂ, ಅತ್ಯಂತ ತಾರ್ಕಿಕವಾದ ವರ್ಣ, ಕಾಗುಣಿತ, ಒತ್ತಕ್ಷರ ವ್ಯವಸ್ಥೆಯನ್ನು ಹೊಂದಿರುವ ಕನ್ನಡ ಓದು, ಬರಹವನ್ನು ಕಲಿಸಲು ಆಗುವುದಿಲ್ಲ ಎನ್ನುವುದಾದರೆ, ನಮ್ಮ ಶಿಕ್ಷಣ ವ್ಯವಸ್ಥೆಯ ಸಾಮರ್ಥ್ಯದ ಕುರಿತು ಏನು ಹೇಳಬೇಕು? ಕನ್ನಡ ಮನೆ ಮಾತಿನ ಮಕ್ಕಳಿಗೇ ಹೀಗಾದರೆ, ಅನ್ಯ ಭಾಷಾ ಮನೆ ಮಾತಿನ ಕುಟುಂಬಗಳಿಂದ ಶಾಲೆಗೆ ಬರುವ ಮಕ್ಕಳ ಗತಿಯೇನು?

ಇನ್ನು ಆರಂಭದ ಒಂದು ಮತ್ತು ಎರಡನೇ ತರಗತಿಗಳಲ್ಲಿ ವರ್ಣ, ಕಾಗುಣಿತ, ಒತ್ತಕ್ಷರಗಳನ್ನು ಒಳಗೊಂಡ ಓದು ಮತ್ತು ಬರಹಗಳ ಮೇಲೆ ಮಕ್ಕಳು ಅಗತ್ಯ ಹಿಡಿತ ಸಾಧಿಸದಿದ್ದರೂ ಅವರನ್ನು ಮುಂದಕ್ಕೆ ಕಳಿಸಲಾಗುತ್ತದೆ. ಇಂಥ ದುರ್ಬಲ ಭಾಷಾ ಕೌಶಲಗಳನ್ನೇ ‘ಮಾಧ್ಯಮ’ವನ್ನಾಗಿ ಬಳಸಿಕೊಂಡು ಸಮಾಜವಿಜ್ಞಾನ, ವಿಜ್ಞಾನ, ಗಣಿತದಂಥ ವಿಷಯಗಳನ್ನು ಕಲಿಸುತ್ತೇವೆ ಎನ್ನುವುದು ಪವಾಡವೇ ಸರಿ. ಮುಂದುವರಿದ ಕನ್ನಡ ಭಾಷಾ ವಿಷಯದ ಪಠ್ಯದಲ್ಲಿ ಈ ವಿಷಯಗಳನ್ನು ಕಲಿಯುವುದಕ್ಕೆ ಪೂರಕವಾದ ಭಾಷಾ ಕೌಶಲಗಳನ್ನು ರೂಢಿಸುವ ಉದ್ದೇಶ, ಯೋಜನೆ ಇರುವುದಿಲ್ಲ. ಅದರ ಬದಲಿಗೆ ಕನ್ನಡ ಪಠ್ಯದಲ್ಲಿ ಕನ್ನಡ ವ್ಯಾಕರಣ, ಛಂದಸ್ಸು, ಹಲವು ಘಟ್ಟಗಳ ಸಾಹಿತ್ಯ, ಕಾವ್ಯದಂತಹವನ್ನು ಕಲಿಸಲಾಗುತ್ತಿದೆ. ಅವುಗಳಿಂದ ಮುಂದಿನ ಬದುಕಿಗಾಗಿ ಅನಿವಾರ್ಯವಾದ ಕನ್ನಡ ಭಾಷಾ ಕೌಶಲಗಳು ನಮ್ಮ ಮಕ್ಕಳಿಗೆ ದಕ್ಕುವುದೇ ಇಲ್ಲ. ಈ ಕುರಿತು ಗಂಭೀರವಾಗಿ ಚಿಂತನೆ ಮಾಡದೆ, ಇದನ್ನು ಹೀಗೇ ಮುಂದುವರಿಯುವುದಕ್ಕೆ ಬಿಟ್ಟು, ‘ಕನ್ನಡಿಗರಿಗೇ ಕನ್ನಡವನ್ನು ಕಲಿಸಬೇಕಾದ ಸ್ಥಿತಿ ಇದೆ’ ಎಂದು ದಶಕಗಟ್ಟಲೆ ಮರುಗುತ್ತಲೇ ಇದ್ದರೆ ಏನು ಪ್ರಯೋಜನ?

ಇನ್ನು, ಕನ್ನಡದ ಬಗೆಗಿನ ನಿರಾಸಕ್ತಿಯ ಪ್ರಶ್ನೆ. ನಾವು, ನಮ್ಮ ಮಕ್ಕಳು ಓದುವ ಹೊತ್ತಿಗೆ ಅತ್ಯುತ್ತಮ ಖಾಸಗಿ ಶಾಲೆಗಳಲ್ಲಿಯೂ ಕನ್ನಡ ಮಾಧ್ಯಮದ ಶಿಕ್ಷಣವಿತ್ತು. ಆದರೆ, ಇಂದು ಖಾಸಗಿ ಶಾಲಾ ವಲಯವು ಸರ್ಕಾರಿ ಶಾಲಾ ವಲಯಕ್ಕೆ ಪೂರಕವಾಗಿ ನಿಂತಿಲ್ಲ. ಅದು ಸರ್ಕಾರಿ ವಲಯಕ್ಕೆ ಸ್ಪರ್ಧಿಯಾಗಿದೆ. ಒಮ್ಮೆ ಈ ಸ್ಥಿತಿ ಅಂಗೀಕೃತವಾದ ನಂತರ ಇಂಗ್ಲಿಷ್ ಭಾಷೆಯೇ ನಮ್ಮ ಉದ್ಧಾರಕ ಎನ್ನುವಂತೆ ಭ್ರಮೆ ಹುಟ್ಟಿಸುವುದು ಆ ವಲಯದ ‘ವ್ಯಾಪಾರಿ ಧರ್ಮ’. ಈ ವ್ಯಾಮೋಹದ ಬಲೆಗೆ ಪೋಷಕರು ಸುಲಭವಾಗಿ ಬೀಳುತ್ತಿದ್ದಾರೆ. ಸರ್ಕಾರ ಏನೂ ಮಾಡಲಾರದ ನಿಸ್ಸಹಾಯಕ ಸ್ಥಿತಿಯನ್ನು ತಲುಪಿದೆ. ಈ ವ್ಯಾಮೋಹಕ್ಕೆ ಕ್ರಮೇಣ ಸರ್ಕಾರವೂ ಬಲಿಯಾಗಿದೆ.

2018ರ ಈಚೆಗೆ ಸರ್ಕಾರವೇ ಇಂಗ್ಲಿಷ್ ಮಾಧ್ಯಮದ ಪಬ್ಲಿಕ್ ಶಾಲೆಗಳನ್ನು ಆರಂಭಿಸಿದೆ. ವರ್ಷವರ್ಷ ಅವುಗಳ ಸಂಖ್ಯೆಯನ್ನು ಹೆಚ್ಚಿಸುವುದೇ ಪ್ರಗತಿಪರ ಹೆಜ್ಜೆ ಎಂದು ಭಾವಿಸಿದೆ. ಈ ಶಾಲೆಗಳಿಗೆ ಹೆಚ್ಚಿನ ಮೂಲ ಸೌಕರ್ಯ, ನುರಿತ ಶಿಕ್ಷಕರನ್ನು ಒದಗಿಸಲಾಗುತ್ತದೆ. ಇದೆಲ್ಲದರ ಪ್ರಭಾವದಲ್ಲಿ, ಈಗಾಗಲೇ ಬಡವಾಗಿರುವ ಕನ್ನಡ ಮಾಧ್ಯಮದ ಶಾಲೆಗಳ ಮಟ್ಟಿಗೆ, ‘ಸೋರುತಿಹುದು ಶಾಲೆ ಮಾಳಿಗೆ, ಅಜ್ಞಾನದಿಂದ…’ ಎನ್ನುವ ಸ್ಥಿತಿ ಒದಗಿದೆ. ಇಂಥ ಸ್ಥಿತಿಯಲ್ಲಿ ‘ಕನ್ನಡದ ಬಗ್ಗೆ ನಿರಾಸಕ್ತ ಮನೋಭಾವ’ ಎಂದು ವಿಕಾಸಸೌಧದಲ್ಲಿ ನಿಂತು ಹೇಳಿದರೆ ಏನು ಪ್ರಯೋಜನ?‌

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡೇತರರಿಗೆ ಕನ್ನಡ ಕಲಿಸುತ್ತಿದೆ, ಸಂತೋಷ. ಆದರೆ ಅದರ ಹೊಣೆಗಾರಿಕೆಯಲ್ಲಿ ಇದು ಅತ್ಯಂತ ಕಡಿಮೆ ಆದ್ಯತೆಯ ಕೆಲಸ. ಇದನ್ನು ನಮ್ಮಂಥವರೂ ಮಾಡಬಹುದು. ಆದರೆ, ವಿಧಾನಸೌಧದಲ್ಲಿಯೇ ಕಚೇರಿಯನ್ನು ಹೊಂದಿರುವ, ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ಹೊಂದಿರುವ ಅಧ್ಯಕ್ಷರು ಮತ್ತು ನಾಡಿನ ವಿದ್ವಜ್ಜನರನ್ನು ಸದಸ್ಯರು, ಸಹವರ್ತಿಗಳನ್ನಾಗಿ ಹೊಂದಿರುವ ಪ್ರಾಧಿಕಾರವು ಕನ್ನಡ ಭಾಷೆಯ ಮಟ್ಟಿಗೆ ಸಂಬಂಧಪಟ್ಟ ಇಲಾಖೆಗಳಿಗೆ, ಸರ್ಕಾರಕ್ಕೆ ಸಲಹೆ, ಸೂಚನೆ, ಶಿಫಾರಸು, ನಿರ್ದೇಶನವನ್ನು ನೀಡುವ ಅತ್ಯುನ್ನತ ಅಧಿಕಾರವನ್ನು ಹೊಂದಿದೆ.

ಶಿಕ್ಷಣ, ಆಡಳಿತ, ನ್ಯಾಯಾಂಗ, ವಾಣಿಜ್ಯದಂತಹ ಕ್ಷೇತ್ರಗಳಲ್ಲಿ ಇಂದಿಗೂ ಇರುವ ಕನ್ನಡದ ಪ್ರಾಧಾನ್ಯ, ಅನಿವಾರ್ಯದ ಕುರಿತು ಸಮೀಕ್ಷೆ, ದತ್ತಾಂಶ, ಸಿದ್ಧಾಂತ, ವಸ್ತುನಿಷ್ಠ ಯೋಜನೆಗಳ ಸಹಿತ ಸರ್ಕಾರವು ಸರಿಯಾದ ದಾರಿಯಲ್ಲಿ ನಡೆಯುವಂತೆ ಮಾಡಬೇಕಾದ ಜವಾಬ್ದಾರಿ ಪ್ರಾಧಿಕಾರಕ್ಕಿದೆ. ಹಾಗೆಯೇ, ಏನೋ ಒಂದಷ್ಟು ಕಾರ್ಯಕ್ರಮಗಳನ್ನು ಮಾಡುತ್ತಾ ಕಾಲ ಕಳೆಯುವ ಮಟ್ಟಕ್ಕೆ ಪ್ರಾಧಿಕಾರವನ್ನು ತರದ ಹಾಗೆ, ಅದರ ಘನತೆ, ಅಗತ್ಯಗಳನ್ನು ಪೋಷಿಸಿಕೊಂಡು ಹೋಗುವ ಬದ್ಧತೆ ಸರ್ಕಾರಕ್ಕಿರಲಿ ಎಂದು ಹಾರೈಸೋಣ.

You cannot copy content of this page

Exit mobile version