ಮಂಡ್ಯ: “ಧಾರವಾಡದ ಯೋಗೇಶ್ ಗೌಡ ಕೊಲೆ ಪ್ರಕರಣವನ್ನು ಮುಚ್ಚಿಹಾಕಲು ಕಾಂಗ್ರೆಸ್ ಪ್ರಯತ್ನಿಸಿತ್ತು. ಆದರೆ ಪ್ರಕರಣವನ್ನು ಸಿಬಿಐಗೆ ವಹಿಸಿದ ನಂತರ ಸತ್ಯ ಹೊರಬಂತು ಮತ್ತು ಶಾಸಕ ವಿನಯ್ ಕುಲಕರ್ಣಿ ಶಿಕ್ಷೆಗೆ ಗುರಿಯಾದರು. ರಾಜಕೀಯ ಕೊಲೆಗಳಿಗೆ ಅಂತ್ಯ ಹಾಡುವ ಅಗತ್ಯವಿದೆ,” ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಹೇಳಿದರು.
ಶುಕ್ರವಾರ ಮಂಡ್ಯದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, “ರಾಜಕೀಯ ಕೊಲೆಯ ಪರಿಣಾಮ ಏನಾಗುತ್ತದೆ ಎಂಬುದು ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಸಾಬೀತಾಗಿದೆ,” ಎಂದರು.
“ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ. ಆದರೆ ಕಾಂಗ್ರೆಸ್ ಇದರಲ್ಲಿ ತಪ್ಪುಗಳನ್ನು ಹುಡುಕಲು ಪ್ರಯತ್ನಿಸುತ್ತಿದೆ,” ಎಂದು ಅವರು ಟೀಕಿಸಿದರು.
“ಕ್ಷೇತ್ರಗಳ ಪುನರ್ ವಿಂಗಡಣೆಯಿಂದ ಯಾವುದೇ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗುವುದಿಲ್ಲ. ತಮಿಳುನಾಡು ಸಿಎಂ ಸ್ಟಾಲಿನ್ ಅವರಿಗೆ ಇದು ಅರ್ಥವಾಗುತ್ತಿಲ್ಲ. ಮೋದಿ ಮತ್ತೆ ಗೆದ್ದರೆ ತಾವು ಗಂಟುಮೂಟೆ ಕಟ್ಟಿಕೊಂಡು ಹೋಗಬೇಕಾಗುತ್ತದೆ ಎಂಬ ಭಯ ಅವರಿಗಿದೆ,” ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಒಳಗಿನ ಗೊಂದಲಗಳ ಬಗ್ಗೆ ಪ್ರತಿಕ್ರಿಯಿಸಿದ ಅಶೋಕ, “ದಾವಣಗೆರೆ ಉಪಚುನಾವಣೆಯ ನಂತರ ಮುಸ್ಲಿಮರನ್ನು ಗುರಿ ಮಾಡಲಾಗುತ್ತಿದೆ. ಜಮೀರ್ ಅಹಮದ್ ಅವರನ್ನೂ ಗುರಿಯಾಗಿಸಲಾಗುತ್ತಿದೆ. ಮುಖ್ಯಮಂತ್ರಿ ಸ್ಥಾನದ ಬಗ್ಗೆಯೂ ಪಕ್ಷದಲ್ಲಿ ಗೊಂದಲವಿದೆ. ಮುಂದಿನ ವಿಧಾನಸಭಾ ಚುನಾವಣೆ 2028ರಲ್ಲಿ ನಡೆಯಲಿದೆ. ಆದರೆ ಈಗಲೇ ಚುನಾವಣೆ ನಡೆದರೂ ಕರ್ನಾಟಕದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
