ವಾಸ್ತವದಲ್ಲಿ NTA ಯನ್ನು ಬಿಜೆಪಿ/ಆರ್‌ಎಸ್‌ಎಸ್‌ನ ವಂಚಕ ಹಿತಾಸಕ್ತಿಗಳನ್ನು ಪೂರೈಸಲು ಮಾಡಲಾಗಿದೆ. BJP ಸರ್ಕಾರ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸರು, ಮೋದಿ ಸರ್ಕಾರ ಈ ಗೊಂದಲಗಳ ಸಂಪೂರ್ಣ ಹೊಣೆಗಾರಿಕೆಯನ್ನು ಹೊರಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ದೂರಿದ್ದಾರೆ.
ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (NEET-PG) ಮುಂದೂಡಿಕೆ ನಂತರ ಕೇಂದ್ರದ ಮೇಲಿನ ದಾಳಿಯನ್ನು ಹೆಚ್ಚಿಸಿರುವ ಕಾಂಗ್ರೆಸ್, ಮತ್ತು ಇತರೆ ಪ್ರತಿಪಕ್ಷಗಳು, ವಿದ್ಯಾರ್ಥಿಗಳ ಭವಿಷ್ಯವನ್ನು ನರೇಂದ್ರ ಮೋದಿ ಸರ್ಕಾರ ಕರಾಳತೆಗೆ ನೂಕಿದೆ ಎಂಬ ಗಂಭೀರ ಆರೋಪ ಮಾಡಿವೆ.
NEET – PG ಪರೀಕ್ಷೆಯನ್ನು ಆರಂಭದಲ್ಲಿ ಮಾರ್ಚ್ 3 ರಂದು ನಿಗದಿಪಡಿಸಲಾಗಿತ್ತು. ಹಲವು ಗೊಂದಲಗಳ ನಂತರ ಜುಲೈ 7 ರಂದು ನಡೆಯಲಿದೆ ಎಂದು ಘೋಷಿಸಲಾಯಿತು. ಇದಕ್ಕೂ ಮೊದಲು ದಿನಾಂಕವನ್ನು ಜೂನ್ 23 ಕ್ಕೆ ಅಂದರೆ ಇಂದು ಪರಿಷ್ಕರಿಸಲಾಗಿದೆ. ಆದರೆ ಪರೀಕ್ಷೆಗೆ ಗಂಟೆಗಳ ಮುಂಚಿತವಾಗಿ, ಕೇಂದ್ರವು ಅದನ್ನು ಮುಂದೂಡುವುದಾಗಿ ಘೋಷಿಸಿದೆ.
ನಿನ್ನೆ ರಾತ್ರಿ 10 ಗಂಟೆಗೆ ಸರ್ಕಾರವು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, “ಕೆಲವು ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರತೆಯ ಬಗ್ಗೆ ಇತ್ತೀಚಿನ ಆರೋಪಗಳು ಮತ್ತು ಲೋಪಗಳನ್ನು ಪರಿಗಣಿಸಿ, ಆರೋಗ್ಯ ಸಚಿವಾಲಯವು NEET-PG ಪ್ರವೇಶದ ಪ್ರಕ್ರಿಯೆಗಳ ಸಂಪೂರ್ಣ ಮೌಲ್ಯಮಾಪನವನ್ನು ಕೈಗೊಳ್ಳಲು ನಿರ್ಧರಿಸಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಮಂಡಳಿಯು ನಡೆಸುವ ಪರೀಕ್ಷೆಯನ್ನು ನಾಳೆ ಅಂದರೆ 23ನೇ ಜೂನ್ 2024 ರಂದು ನಡೆಸಲು ಉದ್ದೇಶಿಸಿರುವ NEET-PG ಪ್ರವೇಶ ಪರೀಕ್ಷೆಯನ್ನು ಮುಂದೂಡಲು ನಿರ್ಧರಿಸಲಾಗಿದೆ. ಮುಂದಿನ ದಿನಾಂಕವನ್ನು ಆದಷ್ಟು ಬೇಗನೆ ತಿಳಿಸಲಾಗುವುದು” ಎಂದು ಕೇಂದ್ರದ ಆರೋಗ್ಯ ಸಚಿವಾಲಯ ತಿಳಿಸಿತ್ತು.
ವಿದ್ಯಾರ್ಥಿಗಳಿಗೆ ಉಂಟಾದ ಅನಾನುಕೂಲತೆಗಾಗಿ ಆರೋಗ್ಯ ಸಚಿವಾಲಯವು ಪ್ರಾಮಾಣಿಕವಾಗಿ ವಿಷಾದಿಸುತ್ತದೆ ಮತ್ತು ಅವರ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.
ದೇಶದಲ್ಲಿ ಒಂದು ವಾರದಲ್ಲಿ ರದ್ದುಗೊಂಡ ಮೂರನೇ ದೊಡ್ಡ ಪರೀಕ್ಷೆ ಇದಾಗಿದೆ. ಇದಕ್ಕೂ ಮೊದಲು, ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಉಲ್ಲೇಖಿಸಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಪರೀಕ್ಷೆಗೆ ಒಂದು ದಿನ ಮೊದಲು UGC-NET ಅನ್ನು ರದ್ದುಗೊಳಿಸಿತ್ತು. ಇದರ ಜೊತೆ ಜೊತೆಗೇ CSIR-UGC NET ಅನ್ನು ಸಹ ಮುಂದೂಡಲಾಗಿದೆ. NEET-UG ಪರೀಕ್ಷೆಯಲ್ಲಿನ ಅಕ್ರಮಗಳ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳ ನಡುವೆ ಪರೀಕ್ಷೆಗೆ ಕೆಲವೇ ಗಂಟೆಗಳ ಮುಂಚೆ ಇದನ್ನೂ ಸರ್ಕಾರ ರದ್ದು ಮಾಡಿತ್ತು. ಈ ಮೂಲಕ ಅಂದಾಜು 24 ಲಕ್ಷ ವಿದ್ಯಾರ್ಥಿಗಳು ಅನಿಶ್ಚಿತತೆಯತ್ತ ಮುಖಮಾಡಿದ್ದಾರೆ.
NEET ವಿಚಾರವಾಗಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಬಿಜೆಪಿಯಿಂದ ಕೊಳೆತು ಹೋಗಿರುವ ಶಿಕ್ಷಣ ವ್ಯವಸ್ಥೆಯಲ್ಲಿನ ಸ್ಥಳೀಯ ಸಮಸ್ಯೆಗೆ ಅಧಿಕಾರಶಾಹಿಗಳನ್ನು ಬೆರೆಸುವುದು ಪರಿಹಾರವಲ್ಲ. ರಾಷ್ಟ್ರೀಯ ಪರೀಕ್ಷಾ ಮಂಡಳಿ (NTA)ಯನ್ನು ಸ್ವಾಯತ್ತ ಸಂಸ್ಥೆ ಎಂದು ಬಿಂಬಿಸಲಾಗಿತ್ತು, ಆದರೆ ವಾಸ್ತವದಲ್ಲಿ ಇದನ್ನು ಬಿಜೆಪಿ/ಆರ್‌ಎಸ್‌ಎಸ್‌ನ ವಂಚಕ ಹಿತಾಸಕ್ತಿಗಳನ್ನು ಪೂರೈಸಲು ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸರು, ಮೋದಿ ಸರ್ಕಾರ ಈ ಗೊಂದಲಗಳ ಸಂಪೂರ್ಣ ಹೊಣೆಗಾರಿಕೆಯನ್ನು ಹೊರಬೇಕು,” ಎಂದು ಮಲ್ಲಿಕಾರ್ಜುನ ಖರ್ಗೆಯವರು ಆರೋಪಿಸಿದ್ದಾರೆ.
ನೀಟ್ ಯುಜಿ ಅಕ್ರಮಗಳ ತನಿಖೆಯನ್ನು ಕೇಂದ್ರವು ಸಿಬಿಐಗೆ ವಹಿಸಿದೆ. “ಕೆಲವು ಅಕ್ರಮಗಳು / ವಂಚನೆ / ಸೋಗು ಹಾಕುವಿಕೆ / ದುಷ್ಕೃತ್ಯಗಳ ಆರೋಪದ ಪ್ರಕರಣಗಳು ವರದಿಯಾಗಿವೆ” ಎಂದು ಕೇಂದ್ರವು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇನ್ನೊಂದು ಹಂತಗಳಲ್ಲಿ, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಮಹಾನಿರ್ದೇಶಕ ಸುಬೋಧ್ ಸಿಂಗ್ ಅವರನ್ನು ವಜಾಗೊಳಿಸಲಾಗಿದೆ ಮತ್ತು ಪರೀಕ್ಷೆಯ ಸುಧಾರಣೆಗಳಿಗಾಗಿ ಏಳು ಸದಸ್ಯರ ಸಮಿತಿಯನ್ನು ಸ್ಥಾಪಿಸಲಾಗಿದೆ.
ಈ ನಡುವೆ ನರೇಂದ್ರ ಮೋದಿ ಸರ್ಕಾರದ ಆಡಳಿತದಲ್ಲಿ ದೇಶದ ಶಿಕ್ಷಣ ವ್ಯವಸ್ಥೆ ನಾಶವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೂರಿದ್ದಾರೆ. NEET – PG ರದ್ದುಗೊಳಿಸಿರುವುದು ಇದಕ್ಕೆ ಇನ್ನೊಂದು ಉದಾಹರಣೆ ಎಂದಿದ್ದಾರೆ. ‘ಬಿಜೆಪಿ ಆಡಳಿತದಲ್ಲಿ ವಿದ್ಯಾರ್ಥಿಗಳು ಓದಿನ ಕಡೆ ಗಮನ ಹರಿಸುವ ಬದಲು ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದ ರಾಹುಲ್ ಗಾಂಧಿ, ಪೇಪರ್ ಲೀಕ್ ದಂಧೆ ಹಾಗೂ ಶಿಕ್ಷಣ ಮಾಫಿಯಾ ಮುಂದೆ ಸರ್ಕಾರ ಅಸಹಾಯಕವಾಗಿದೆ. ನರೇಂದ್ರ ಮೋದಿಯವರ ಅಸಮರ್ಥ ಸರಕಾರ ವಿದ್ಯಾರ್ಥಿಗಳ ಭವಿಷ್ಯಕ್ಕೆ ದೊಡ್ಡ ಗಂಡಾಂತರವಾಗಿದ್ದು, ದೇಶದ ಭವಿಷ್ಯವನ್ನು ಉಳಿಸಬೇಕಿದೆ ಎಂದು ಆರೋಪಿಸಿದ್ದಾರೆ.