ಕಾರ್ಕಳ: ಸಾಕಷ್ಟು ವಿವಾದದ ಮೂಲವಾಗಿದ್ದ ಕಾರ್ಕಳದ ಬೈಲೂರು ಬಳಿಯ ಪರಶುರಾಮನ ಮೂರ್ತಿಯ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಸ್ಥಳೀಯವಾಗಿ ಚುನಾವಣಾ ವಿಷಯವೂ ಆಗಿದ್ದ ಈ ಮೂರ್ತಿಯ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿರುವ ಕುರಿತು ವಿಪಕ್ಷಗಳು ಆರೋಪಗಳನ್ನು ಮಾಡಿದ್ದವು. ಶಾಸಕ ಸುನಿಲ್ ಕುಮಾರ್ ವಿರುದ್ಧ ಬಳಸಲಾಗಿದ್ದ ಅಸ್ತ್ರಗಳಲ್ಲಿ ಇದೂ ಒಂದಾಗಿತ್ತು.
ತರಾತುರಿಯಲ್ಲಿ ಪ್ರತಿಷ್ಟಾಪನೆಯಾಗಿದ್ದ ಈ ಮೂರ್ತಿಯನ್ನು ನಂತರದ ದಿನಗಳಲ್ಲಿ ಕೆಲವು ಕಾರಣಗಳನ್ನು ಮೂರ್ತಿಯ ಕಾಲಿನವರೆಗಿನ ಭಾಗವನ್ನು ಕತ್ತರಿಸಿ ಕೊಂಡು ಹೋಗಲಾಗಿತ್ತು. ಪ್ರಸ್ತುತ ಮೂರ್ತಿ ಇರುವ ಸ್ಥಳಕ್ಕೆ ಪ್ರವೇಶವನ್ನು ನಿಷೇಧಿಸಲಾಗಿದೆ.
ಈಗ ಈ ಮೂರ್ತಿಯನ್ನು ತಯಾರಿಸಿ ಕೊಟ್ಟಂತಹ ಕೃಷ್ಣ ಆರ್ಟ್ ವರ್ಲ್ಡ್ ನ ಕೃಷ್ಣ ಎನ್ನುವವರ ವಿರುದ್ಧ ಕಂಚಿನ ಪರಶುರಾಮನ ಮೂರ್ತಿ ಮಾಡಿಕೊಡಲು 1.25 ಕೋಟಿ ರೂಪಾಯಿ ಪಡೆದು ನಕಲಿ ಮೂರ್ತಿಯನ್ನು ಮಾಡಿ ಕೊಟ್ಟು ಮೋಸ ಮಾಡಿದ್ದಾರೆ ಎಂದು ದೂರು ದಾಖಲಿಸಲಾಗಿದೆ.
ಉಡುಪಿ ನಿರ್ಮಿತಿ ಕೇಂದ್ರದಿಂದ ಹಣ ಪಡೆದುಕೊಂಡು ಕೃಷ್ಣ ಅವರು ಸರ್ಕಾರಕ್ಕೆ ವಂಚಿಸಿದ್ದಾರೆ ಎಂದು ನಲ್ಲೂರು ಗ್ರಾಮದ ಕೃಷ್ಣ ಎಂಬುವರು ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.