ಹೊಸ ದೆಹಲಿ: ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಮೋದಿ 2.0 ಸರ್ಕಾರದ 17 ಕೇಂದ್ರ ಸಚಿವರು ಸೋಲು ಕಂಡಿದ್ದು, ಸಚಿವರಿಗೆ ಬಂಗಲೆ ತೆರವು ಮಾಡಲು ಜುಲೈ 11ರವರೆಗೆ ಸಮಯಾವಕಾಶವಿದೆ.
ಲೋಕಸಭೆ ಚುನಾವಣೆಯಲ್ಲಿ ಸೋತ ಮಾಜಿ ಸಂಸದರು ಲುಟೆಯನ್ಸ್ ಬಂಗಲೆ ವಲಯದಿಂದ ತಮ್ಮ ಅಧಿಕೃತ ನಿವಾಸವನ್ನು ಖಾಲಿ ಮಾಡಬೇಕಾಗುತ್ತದೆ.
18ನೇ ಲೋಕಸಭೆಯ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗದ 17ನೇ ಲೋಕಸಭೆಯ ಮಾಜಿ ಸಂಸದರಿಗೆ ಲೋಕಸಭೆಯ ಸದನ ಸಮಿತಿ ನೋಟಿಸ್ ಜಾರಿ ಮಾಡಿದೆ. ಈ ಪಟ್ಟಿಯಲ್ಲಿ ಮಹೇಂದ್ರನಾಥ್ ಪಾಂಡೆ, ಸ್ಮೃತಿ ಇರಾನಿ, ಸಂಜೀವ್ ಬಲ್ಯಾನ್, ಭಾನುಪ್ರತಾಪ್ ವರ್ಮಾ, ಅಜಯ್ ಮಿಶ್ರಾ ಟೆನಿ, ಕೌಶಲ್ ಕಿಶೋರ್, ಸಾಧ್ವಿ ನಿರಂಜನ್ ಜ್ಯೋತಿ ಮುಂತಾದವರ ಹೆಸರಿದೆ.
ಒಂದು ತಿಂಗಳೊಳಗೆ ಸರ್ಕಾರಿ ವಸತಿ ಗೃಹಗಳನ್ನು ಖಾಲಿ ಮಾಡಬೇಕು ಎಂದು ಈ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಜುಲೈ 11ರೊಳಗೆ ಮಾಜಿ ಸಚಿವರಿಗೆ ಹಾಗೂ ಜುಲೈ 5ರೊಳಗೆ ಮಾಜಿ ಸಂಸದರಿಗೆ ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ನೋಟಿಸ್ ಜಾರಿ ಮಾಡಲಾಗಿದೆ.
ನಿಯಮಗಳ ಪ್ರಕಾರ, ಲೋಕಸಭೆ ವಿಸರ್ಜನೆಯಾದ ಒಂದು ತಿಂಗಳೊಳಗೆ ಸರ್ಕಾರಿ ನಿವಾಸವನ್ನು ಖಾಲಿ ಮಾಡಬೇಕು. ನಗರಾಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಈ ಸಚಿವರು ಹಾಗೂ ಸಂಸದರಿಗೆ ನೀಟಿಸ್ ನೀಡಲಾಗಿದೆ.