Home ಅಂಕಣ ಡಾಕ್ಟರ್ ಗಳನ್ನ ಡಾಕುಗಳನ್ನಾಗಿಸುತ್ತಿರುವ NEET : ಹುರಿದುಂಬಿಸುತ್ತಿರುವ ವ್ಯವಸ್ಥೆ

ಡಾಕ್ಟರ್ ಗಳನ್ನ ಡಾಕುಗಳನ್ನಾಗಿಸುತ್ತಿರುವ NEET : ಹುರಿದುಂಬಿಸುತ್ತಿರುವ ವ್ಯವಸ್ಥೆ

0

“..ಖಾಸಗಿಕರಣದ ಹಿನ್ನೆಲೆಯಲ್ಲಿ ಅಧಿಕಾರ ಹಿಡಿದ ವ್ಯಕ್ತಿಗಳು ಸಮಾಜಕ್ಕೆ ಮಾರಕವಾಗಿಯೇ ಕೆಲಸ ಮಾಡುತ್ತಾರೆ, ಸಮಾಜ ಲೂಟಿಯಾಗುವುದು ಸಹ ಅವರಿಂದಲೇ. ಖಾಸಗಿಕರಣ ಡಾಕ್ಟರ್ ಗಳು ಡಾಕುಗಳಾಗಲು ಪ್ರೇರೇಪಿಸುತ್ತದೆ..” ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ ದರ್ಶನ್ ಕುರುಬಾಸ್ ಅವರ ಬರಹದಲ್ಲಿ

ನಾವು ದಿನನಿತ್ಯ ನಮ್ಮ ಕನ್ನಡ ನಾಡು ಏಳಿಗೆ ಕಾಣುವುದನ್ನು ಬಯಸುತ್ತಾ ನಾವು ಸಂಘಟನೆಗಳಾದಿಯಾಗಿ, (ಯಾವುದೇ ಸರ್ಕಾರ ಮತ್ತು ರಾಜಕೀಯ ವ್ಯಕ್ತಿಗಳನ್ನು ನಿರೀಕ್ಷಿಸದೆ) ನಮ್ಮ ನಾಡಿಗೆ ಒಳಿತಾಗಲಿಕ್ಕೆ ಬಯಸಿ ಕೆಲಸ ಮಾಡುತ್ತೇವೆ. ನಾಡು ಏಳಿಗೆಯಾಗಬೇಕೆಂದು ಬಯಸುವಾಗ ಕೆಲವೊಂದು ಮಾದರಿಗಳು ನಮ್ಮ ಕಣ್ಣ ಮುಂದೆ ಬರುತ್ತದೆ, ಉದಾ: ಯುರೋಪಿಯನ್ ದೇಶಗಳು, ನುಡಿಯನ್ನಾಡುವ ಪ್ರದೇಶಕ್ಕೆ ಗಡಿಯನ್ನು ನಿರ್ಮಿಸಿ, ನುಡಿಯಾಧಾರಿತ ದೇಶಗಳಾಗಿರುವುದು. ಅಲ್ಲಿನ ಜನರ ಜೀವನ ಶೈಲಿ, ಅವರ ತಲಾದಾಯ, ಆದೇಶಗಳಲ್ಲಿರುವ ಸುಸ್ಥಿರ ವ್ಯವಸ್ಥೆ, ಕಾನೂನು ಭದ್ರತೆ, ಅಪರಾಧಗಳ ಸಂಖ್ಯೆ ತೀರಾ ಕಡಿಮೆ, ಇವುಗಳಿಂದ ಅಲ್ಲಿಯ ಜನರ ನೆಮ್ಮದಿಯ ಬದುಕು.

ನಮ್ಮ ಕನ್ನಡ ದೇಶಕ್ಕೆ ಮಾದರಿ ಯುರೋಪಿಯನ್ ದೇಶಗಳು, ಆದರೆ ಅಲ್ಪಮತಿ ಉಳ್ಳವರು ನಮಗೆ ಈ ಇಂಡಿಯಾ ಒಕ್ಕೂಟದಲ್ಲಿರುವ ಬೇರೊಂದು ರಾಜ್ಯವಾದ ಉತ್ತರ ಪ್ರದೇಶ ಮಾದರಿ, ರಾಮ ಮಂದಿರ, ಹಿಂದುತ್ವ, ಹಿಂದೂ ರಾಷ್ಟ್ರ, ಯುಪಿ ಮಾಡೆಲ್, ಅಲ್ಲಿನ ಡಬಲ್ ಇಂಜಿನ್ ಸರ್ಕಾರ, ಹೀಗೆಲ್ಲ ಬಾಯಿ ಬಡೆದುಕೊಳ್ಳುತ್ತಾ ತಿರುಗುವವರು ಸಾಕಷ್ಟು ಜನ ಇದ್ದಾರೆ.

ಬಹಳ ಮುಖ್ಯವಾಗಿ ರಾಜಕೀಯ ರಂಗದಲ್ಲಿ, ಇಂಡಿಯಾ ಒಕ್ಕೂಟದ ವ್ಯವಸ್ಥೆಯಲ್ಲಿ ಪರಮಾಧಿಕಾರ ಇರುವುದು ಲೋಕಸಭೆಯಲ್ಲಿ, ಲೋಕಸಭೆ ನಡೆಯುವುದು ಸಂಸದರಿಂದ. ಆ ವಿಷಯದಲ್ಲಿ ಉತ್ತರ ಪ್ರದೇಶ, ಭಾಗಶಃ ರಾಜಕಾರಣಿಗಳ ಮತ್ತು ಅವರ ಚೇಲಗಳಿಗೆ ಅದ್ವಿತೀಯವಾಗಿ ಕಾಣಿಸುತ್ತದೆ. ಕಾರಣ, ಲೋಕಸಭೆಗೆ ಉತ್ತರ ಪ್ರದೇಶದಿಂದ 80 ಸಂಸದರು ಮತ್ತು ರಾಜ್ಯಸಭೆಗೆ 31 ಸಂಸದರು ಆಯ್ಕೆಯಾಗುತ್ತಾರೆ, ಅದಕ್ಕೆ ತಕ್ಕಂತೆ ಇರುವ ಜನಸಂಖ್ಯೆ. ಒಟ್ಟಿನಲ್ಲಿ 111 ಸಂಸದರು, ಇಂಡಿಯಾ ಒಕ್ಕೂಟದಲ್ಲೇ ಅತಿ ಹೆಚ್ಚು ಸಂಸದರನ್ನು ಹೊಂದಿರುವ ರಾಜ್ಯ ಉತ್ತರ ಪ್ರದೇಶ ಒಂದೇ. ಉತ್ತರ ಪ್ರದೇಶದ ಮೇಲೆ ಹಿಡಿತ ಸಾಧಿಸಿದ ರಾಜಕೀಯ ಪಕ್ಷವು ಇಂಡಿಯಾ ಒಕ್ಕೂಟದ ಮೇಲೆ ಹಿಡಿತ ಸಾಧಿಸಬಹುದು ಎಂಬ ಮಾತೆ ಇದೆ. ಒಕ್ಕೂಟ ಸರ್ಕಾರ ಮುಂದಿಟ್ಟಿದ್ದ ಡಿ ಲಿಮಿಟೇಶನ್ ನಲ್ಲಿಯೂ ಉತ್ತರಪ್ರದೇಶಕ್ಕೆ ಅಗ್ರ ಪಾಲು ಸಿಗುತ್ತಿತ್ತು ಮತ್ತು ಅತಿ ಹೆಚ್ಚು ರಾಜಕೀಯವಾಗಿ ಲಾಭವಾಗುತ್ತಿತ್ತು.

ಇಂಡಿಯ ಒಕ್ಕೂಟದಲ್ಲಿರುವ ಉತ್ತರ ಪ್ರದೇಶ ಬಹಳಷ್ಟು ವಿಷಯಗಳಿಗೆ ಮತ್ತು ಘಟನೆಗಳಿಗೆ (ಒಳ್ಳೆಯದಕ್ಕಿಂತ ಕೆಟ್ಟದ್ದಕ್ಕೆ ಹೆಚ್ಚು) ಸುದ್ದಿಯಾಗುತ್ತದೆ ಮತ್ತು ಜನರ ಗಮನ ಸೆಳೆಯುತ್ತದೆ. ಏಕೆಂದರೆ ಉತ್ತರ ಪ್ರದೇಶವನ್ನು ರಾಜಕೀಯವಾಗಿ ಕಡೆಗಣಿಸುವ ಹಾಗಿಲ್ಲದ ಕಾರಣದಿಂದಾಗಿ. ಕೆಲವು ದಿನಗಳ ಹಿಂದೆ ವೈದ್ಯಕೀಯ ಕ್ಷೇತ್ರದಲ್ಲಿ ನಡೆದ ಅಮಾನವೀಯ, ಕ್ರೂರ ಕೃತ್ಯ ಘಟನೆಗಳಿಗೆ ಸುದ್ದಿಯಾಗಿತ್ತು.

ಉತ್ತರ ಪ್ರದೇಶದ ಮುಝಪ್ಫರ್ ನಗರದಲ್ಲಿ, ಕೆಲವು ದಿನಗಳ ಹಿಂದೆ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಮಾನಸಿಕವಾಗಿ ಅಸ್ವಸ್ಥವಾಗಿದ್ದ 14 ವರ್ಷದ ಹುಡುಗಿಯ ಕಾಲಿಗೆ ಚಿಕಿತ್ಸೆ ಕೊಡಿಸಲು ಹುಡುಗಿಯ ತಾಯಿ ಆಸ್ಪತ್ರೆಗೆ ಬಂದಿದ್ದರು. ಆ ಸಂದರ್ಭದಲ್ಲಿ ಡಾಕ್ಟರು ಹುಡುಗಿಯ ಕಾಲಿಗೆ ಸರ್ಜರಿ ಮಾಡುವುದಾಗಿ, ಅದಕ್ಕೆ 25000 ಲಂಚವನ್ನು ಕೊಡಬೇಕೆಂದು ಬೇಡಿಕೆ ಇಟ್ಟಿದ್ದರು, ಆ ಹುಡುಗಿಗೆ ತಂದೆ ಇಲ್ಲ, ವಿಧವೆಯಾದ ತಾಯಿ ಒಬ್ಬರೇ. ಆ ಹೆಂಗಸಿಗೆ ಅಷ್ಟು ಹಣವನ್ನು ಹೊಂದಿಸಲು ಸಾಧ್ಯವಾಗಲಿಲ್ಲದ ಕಾರಣ ಡಾಕ್ಟರು ಚಿಕಿತ್ಸೆ ಮಾಡುವುದಕ್ಕೆ ಒಪ್ಪಲಿಲ್ಲ. ಆಗ ನಿಶಕ್ತರಾದ ಆ ಹುಡುಗಿಯ ತಾಯಿ ರೇಷ್ಮಾ, ಜಿಲ್ಲಾ ವೈದ್ಯಕೀಯ ಅಧಿಕಾರಿಯ ಬಳಿ ಹೋಗಿ ಈ ವಿಷಯವನ್ನು ತಿಳಿಸಿದಾಗ, ಅಧಿಕಾರಿಯು ಉಚಿತವಾಗಿ ಚಿಕಿತ್ಸೆ ನೀಡಬೇಕೆಂದು ನಿರ್ದೇಶಿಸಿದರು. ಅವರ ಮಾತಿಗೆ ಮೇರೆಗೆ ಡಾಕ್ಟರ್ ಚಿಕಿತ್ಸೆ ಮಾಡಿದರು ಸಹ 8000 ಲಂಚವನ್ನು ಪಡೆದಿದ್ದರು. ಬಾಕಿ ಲಂಚಕ್ಕೆ ಒತ್ತಾಯಿಸಿದಾಗ ಆ ಹೆಂಗಸಿನ ಕೈಯಲ್ಲಿ ಹಣ ಹೊಂದಿಸಲು ಸಾಧ್ಯವಾಗದೆ ಇರುವ ಕಾರಣ ಲಂಚ ಕೊಡಲು ಆಗಲಿಲ್ಲ. ಆಗ ಕ್ರೂರ ಬುದ್ಧಿಯ ಡಾಕ್ಟರ್ ಮರು ತಪಾಸಣೆಗೆಂದು ಆ ಹುಡುಗಿಯನ್ನು ಕರೆದು ಬಲವಂತವಾಗಿ ಸರ್ಜರಿ ಆಗಿದ್ದ ಕಾಲನ್ನು ಬಗ್ಗಿಸಿದಾಗ, ಆ ಸಮಯದಲ್ಲಿ ಹುಡುಗಿಯು ನೋವು ತಳಲಾರದೆ ಕಿರುಚಿಕೊಂಡಿದ್ದು ತಾಯಿಗೆ ಕೇಳಿಸಿ ಬಂದು ನೋಡಿದಾಗ ಕಾಲು ಮುರಿದಿತ್ತು.

ಈ ವಿಷಯವಾಗಿ ಹುಡುಗಿಯ ತಾಯಿ ಜಿಲ್ಲಾ ಕಲೆಕ್ಟರ್ ಆಫೀಸಿನ ಮುಂದೆ ಆದ ಅನ್ಯಾಯಕ್ಕೆ ನ್ಯಾಯ ಸಿಗಲೆಂದು ಹೋರಾಟ ಮಾಡಿದ್ದರು. ನಂತರ ಈ ವಿಷಯ ಸುದ್ದಿಯಾಗಿ ಬಹಳ ಚರ್ಚೆಗೆ ಗ್ರಾಸವಾಯಿತು.

ಇದೇ ಮುಝಪ್ಫರ್ ನಗರದಲ್ಲಿ ಈ ಘಟನೆ ನಡೆಯುವ ಆಸುಪಾಸಿನಲ್ಲಿ ಕೌಸರ್ ಎಂಬ ಮಹಿಳೆಯು ತನ್ನ ಗಂಡ ಉಸ್ಮಾನ್ ಜೊತೆ ಹೆರಿಗೆಗೆ ಸರ್ಕಾರಿ ಆಸ್ಪತ್ರೆಗೆ ಬಂದಿದ್ದರು. ಅಲ್ಲಿನ ಸರ್ಕಾರಿ ವೈದ್ಯರು ಆ ಸಮಯದಲ್ಲಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದು, ಲಂಚವನ್ನು ಕೊಡಲು ಅವರು ಶಕ್ತವಾಗಿರಲಿಲ್ಲ. ಆಗ ಡಾಕ್ಟರ್ ಗಳು ಆ ಹೆಂಗಸಿಗೆ ಹೆರಿಗೆ ಮಾಡಿಸದೆ ಆಸ್ಪತ್ರೆಯಿಂದ ಹೊರಗೆ ಕಳಿಸಿದರು, ಆಸ್ಪತ್ರೆಯಿಂದ ಹೊರಗೆ ಬಂದ ಆ ಮಹಿಳೆಗೆ ರಸ್ತೆ ಮಧ್ಯದಲ್ಲಿಯೇ ಹೆರಿಗೆಯಾಯಿತು.

ಈ ತರಹದ ಘಟನೆಗಳು ಇಂಡಿಯಾ ಒಕ್ಕೂಟದಾದ್ಯಂತ ಸಾಕಷ್ಟು ಕಂಡುಬರುತ್ತದೆ, ಕೆಲವು-ಹಲವು ಸಂದರ್ಭಗಳಲ್ಲಿ ಈ ತರಹದ ಘಟನೆಗಳು ನಡೆದರೂ ಸಹ ಬೆಳಕಿಗೆ ಬರುವುದಿಲ್ಲ. ಇಂತಹ ಘಟನೆಗಳಿಗೆ ನಮ್ಮ ಕರ್ನಾಟಕವು ಸಹ ಹೊರತಾಗೆನಿಲ್ಲ. ಡಾಕ್ಟರ್ ಗಳು ಯಾವಾಗ ಇಂತಹ ನೀಚ ಮಟ್ಟಕ್ಕೆ ಇಳಿದು ಕ್ರೂರಿಗಳಾದರೆಂದು ಗಮನಿಸುತ್ತಾ ಹೋದರೆ, ನಮಗೆ ಸಿಗುವ ನೈಜ ಕಾರಣ ಶಿಕ್ಷಣ, ವೈದ್ಯಕೀಯ ಕ್ಷೇತ್ರಗಳಲ್ಲಿನ ಖಾಸಗಿಕರಣ ಮತ್ತು ಕಾನೂನು ಬಿಗಿ ಭದ್ರತೆ ಇಲ್ಲದಿರುವುದು.

ನಮ್ಮ ಇಂಡಿಯಾ ಒಕ್ಕೂಟದಲ್ಲಿ ಅಳವಡಿಸಿಕೊಂಡಿರುವ ಸಂವಿಧಾನವು ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರಗಳನ್ನು ಖಾಸಗಿಕರಣ ಮಾಡಲು ಅವಕಾಶ ಕೊಟ್ಟಿದ್ದರಿಂದ. ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದರೂ ಸಹ ಶಿಕ್ಷಣ ಖಾಸಗಿಕರಣವಾದ ಕಾರಣ ಒಂದನೇ ತರಗತಿ, ಎರಡನೇ ತರಗತಿಗೆ, ಕನಿಷ್ಠ ಪಕ್ಷ ಮೂರು ವರ್ಷದ ಮಗುವನ್ನು ಬೇಬಿ ಸಿಟ್ಟಿಂಗ್ ಗೆ ದಾಖಲಿಸಲು ಸಹ ಲಕ್ಷಾಂತರ ರೂಪಾಯಿಗಳನ್ನು ಶಾಲಾ ಶುಲ್ಕವಾಗಿ ಕಟ್ಟಬೇಕಾದ ಸಂದರ್ಭ ಇದಾಗಿದೆ. ಇನ್ನು ಆ ಮಗು ಬೆಳೆದು ವೈದಕೀಯವನ್ನು ಅಧ್ಯಯನ ಮಾಡಬೇಕೆಂದರೆ ಅದು ಕೋಟಿ ರುಪಾಯಿಯ ಮಾತು. ವೈದ್ಯಕೀಯ ಶಿಕ್ಷಣಕ್ಕೆ ದಾಖಲಾಗಬೇಕೆಂದರೆ ನೀಟ್ ಪರೀಕ್ಷೆ ಕಡ್ಡಾಯವಾಗಿದೆ, ಆ ನೀಟ್ ಪರೀಕ್ಷೆ ಪಾಸ್ ಆಗಲಿಕ್ಕೆ ಲಕ್ಷಾಂತರ ರೂಪಾಯಿ ತೆತ್ತು ಕೋಚಿಂಗ್ ಸೆಂಟರ್ ಗಳಿಗೆ ಸೇರಬೇಕು. ಇಲ್ಲ ಮ್ಯಾನೇಜ್ಮೆಂಟ್ ಕೋಟದಲ್ಲಿ ಕೋಟ್ಯಾಂತರ ರೂಪಾಯಿಯನ್ನು ದಾಖಲಾತಿಗಾಗಿ ಸುರಿಯಬೇಕು. ಯಾವ ಕೋಚಿಂಗ್ ಸೆಂಟರ್ಗೆ ಸೇರದೆ ಮನೆಯಲ್ಲೇ ಕುಳಿತು ನೀಟ್ ಪಾಸ್ ಮಾಡಿದವರ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟು ಮಾತ್ರ, ಒಂದಂಕಿ ದಾಟಿ ಎರಡು ಅಂಕಿಗಳಿಗೆ ಹೋಗುವುದು ಸಹ ಅಸಾಧ್ಯ. ನೀಟ್ ಪರೀಕ್ಷೆ 2013ರಲ್ಲಿ ಜಾರಿಯಾದರೂ, ಪರೀಕ್ಷೆ ಕಡ್ಡಾಯವಾಗಿ ನಡೆಯಲು ಶುರುವಾದದ್ದು 2017 ರಿಂದ. ಈ ಲಂಚ ಗುಳಿತನ ಡಾಕ್ಟರ್ ಗಳು ಉತ್ಪತ್ತಿಯಾದದ್ದು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಕೋಟ್ಯಾಂತರ ರೂಪಾಯಿ ತೆತ್ತು ವೈದ್ಯಕೀಯ ಶಿಕ್ಷಣವನ್ನು ಅಧ್ಯಯನ ಮಾಡಿದ್ದರಿಂದ ಮತ್ತು ಈ ನೀಟ್ ಪರೀಕ್ಷೆಯಿಂದ. ಕಾನೂನು ಬಿಗಿ ಭದ್ರತೆ ಇಲ್ಲದೆ ಇರುವುದು. ಶಾಸಕಾಂಗ ಕಾರ್ಯಂಗ ನ್ಯಾಯಾಂಗ ತಮ್ಮ ಕರ್ತವ್ಯ ನಿರ್ವಹಿಸದೆ ಮೈ ಮರೆತಿರುವುದು ಸಹ ಕಾರಣ.

ಖಾಸಗಿಕರಣದ ಹಿನ್ನೆಲೆಯಲ್ಲಿ ಅಧಿಕಾರ ಹಿಡಿದ ವ್ಯಕ್ತಿಗಳು ಸಮಾಜಕ್ಕೆ ಮಾರಕವಾಗಿಯೇ ಕೆಲಸ ಮಾಡುತ್ತಾರೆ, ಸಮಾಜ ಲೂಟಿಯಾಗುವುದು ಸಹ ಅವರಿಂದಲೇ. ಖಾಸಗಿಕರಣ ಡಾಕ್ಟರ್ ಗಳು ಡಾಕುಗಳಾಗಲು – ಡಾಕುಗಳು ಡಾಕ್ಟರ್ ಗಳಾಗಲು ಪ್ರೇರಣೆಯನ್ನು ಮತ್ತು ಪ್ರೋತ್ಸಾಹವನ್ನು ನೀಡುತ್ತದೆ.

ಒಂದು ಉತ್ತಮವಾದ ಸಮಾಜಕ್ಕೆ, ಹಲವಾರು ವಲಯಗಳಿಂದ ಸೇವೆಗಳ ಅವಶ್ಯಕತೆ ಇದೆ. ಡಾಕ್ಟರಗಳ ಹುದ್ದೆ ಇರುವುದು ಸೇವೆ ಮಾಡಲಿಕ್ಕಾಗಿ ಹೊರತು ಡಕಾಯಿತಿತನ ಮಾಡಲಿಕ್ಕಲ್ಲ. ಕರ್ನಾಟಕ ಸ್ವಯತತೆ ಪಡೆದು ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರವನ್ನು ನೂರರಷ್ಟು ಸರ್ಕಾರಿಕರಣ ಗೊಳಿಸುವುದರಿಂದ ಕರ್ನಾಟಕದಲ್ಲಿ ಈ ತರದ ಘಟನೆಗಳು ಆಗುವುದನ್ನು ಖಂಡಿತವಾಗಿ ಶೇಕಡ 100ರಷ್ಟು ತಪ್ಪಿಸಬಹುದು. ಇಲ್ಲದಿದ್ದರೆ ಕೋಟಿ ಖರ್ಚು ಮಾಡಿ ಡಾಕ್ಟರ್ ಆದ ವ್ಯಕ್ತಿ ಕೋಟಿ ಕೋಟಿ ಲೂಟಿ ಮಾಡಲು ಕೆಲಸ ಮಾಡುತ್ತಾನೆ ಹೊರತು ಸೇವೆ ಮಾಡುವುದಿಲ್ಲ. ಖಾಸಗೀಕರಣ ಸಮಾಜಕ್ಕೆ ಮಾರಕ. ರಾಜಕೀಯ ಪಕ್ಷಗಳು ಬದಲಾಗುವುದರಿಂದ ಅಧಿಕಾರ ವಹಿಸುವ ವ್ಯಕ್ತಿಗಳು ಬದಲಾಗುತ್ತಾರೆ ಹೊರತು ವ್ಯವಸ್ಥೆ ಬದಲಾಗುವುದಿಲ್ಲ, ಬದಲಾವಣೆ ಜನರಿಂದ, ಜನ ಸಂಘಟನೆಗಳಿಂದ ಮಾತ್ರ ಸಾಧ್ಯ.

ಕನ್ನಡ ನಾಡು ಕೇಂದ್ರದ ಕಪಿಮುಷ್ಠಿಯಿಂದ ಹೊರಬಂದು ಸ್ವಯತತೆ ಪಡೆಯಬೇಕು ಆಗ ಕನ್ನಡ ವಿಶ್ವಮಟ್ಟದಲ್ಲಿ ಬೆಳೆಯುತ್ತದೆ ಮತ್ತು ಕನ್ನಡಿಗರ ಜೀವನ ಸುಖಮಯವಾಗಿರುತ್ತದೆ. ಅಕ್ರಮ, ಲೂಟಿಗೆ ಕಡಿವಾಣ ಹಾಕಬಹುದು.

You cannot copy content of this page

Exit mobile version