Wednesday, June 26, 2024

ಸತ್ಯ | ನ್ಯಾಯ |ಧರ್ಮ

ವಯಸ್ಕರ ಪತ್ರಿಕೆ ಪ್ಲೇಬಾಯ್‌ನಲ್ಲಿ ಪ್ರಕಟವಾಗಿತ್ತೇ ನೆಹರೂ ಸಂದರ್ಶನ? ಸತ್ಯ ಏನು?

ಬೆಂಗಳೂರು: ಪ್ಲೇಬಾಯ್‌ ಪುರುಷರ ಮ್ಯಾಗಜೈನ್‌ನಲ್ಲಿ ಭಾರತದ ಮೊದಲ ಪ್ರಧಾನಮಂತ್ರಿ ಪಂಡಿತ್‌ ಜವಾಹರಲಾಲ್‌ ನೆಹರೂ ಅವರ ಇಂಟರ್ವ್ಯೂ ಪ್ರಕಟವಾಗಿದೆ ಎಂದು ಈ ವಿಡಿಯೋವೊಂದು ಸದ್ಯ ಟ್ವಿಟರ್‌ನಲ್ಲಿ ಓಡಾಡುತ್ತಿದೆ.

An exclusive interview with Nehru of India ಎಂಬ ಶೀರ್ಷಿಕೆಯ ಈ ಇಂಟರ್ವ್ಯೂ ಇರುವ ಈ ಮ್ಯಾಗಜೈನ್‌ನ ಪ್ರತಿಯನ್ನು ಇಟ್ಟುಕೊಂಟು 1962ರ ಇಂಡೋ-ಚೈನಾ ಯುದ್ಧದ ನಂತರ ಪೋರ್ನ್‌ ಮ್ಯಾಗಜೈನ್‌ನಲ್ಲಿ ನೆಹರೂ ಇಂಟರ್ವ್ಯೂ ಎಂದು ವಿಡಿಯೋವನ್ನು ಹಂಚುತ್ತಿದ್ದಾರೆ.

ಪ್ಲೇಬಾಯ್‌ ಎಂಬುದು ಲೈಫ್‌ ಸ್ಟೈಲ್‌ ಮ್ಯಾಗಜೈನ್. ಇದು ಬೆತ್ತಲೆ ಮತ್ತು ಅರೆ ಬೆತ್ತಲೆ ಪೋಟೋಗಳಿಂದ ಜನಪ್ರಿಯತೆ ಗಳಿಸಿತ್ತು. ಇದರಲ್ಲಿ 1962ರಲ್ಲಿ ಪ್ರಕಟವಾಗುತ್ತಿದ್ದ Playboy interview ಎಂಬ ಸರಣಿ ಸಂದರ್ಶನ ಪತ್ರಿಕೆಯ ಪ್ರಕಟಣೆಯನ್ನು ಹೆಚ್ಚಿಸಿತ್ತು. ಇದರಲ್ಲಿ ಅಧ್ಯಕ್ಷ ಜಿಮ್ಮಿ ಕಾರ್ಟರ್, ಮಾಲ್ಕಾಮ್ ಎಕ್ಸ್, ಫಿಡೆಲ್ ಕ್ಯಾಸ್ಟ್ರೋ, ದಿ ಬೀಟಲ್ಸ್, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಜಿಮ್ಮಿ ಹಾಫ್ಫಾ, ಜಾರ್ಜ್ ವ್ಯಾಲೇಸ್, ಹೆನ್ರಿ ಮಿಲ್ಲರ್ ಮತ್ತು ಕ್ಯಾಸಿಸಸ್ ಕ್ಲೇ ಸೇರಿದಂತೆ ವಿಶ್ವದ ಕೆಲವು ಪ್ರಮುಖ ವ್ಯಕ್ತಿಗಳೊಂದಿಗಿನ ಸಂದರ್ಶನವನ್ನು ಪ್ರಕಟಿಸಲಾಗಿತ್ತು. ಆದರೆ, ವಿಶ್ವ ನಾಯಕರ ಜೊತೆಗಿನ ಇದರ ಮೊದಲ ಸಂದರ್ಶನವೇ ಭಾರತದ ಆಗಿನ ಪ್ರಧಾನಿ ನೆಹರೂ ಅವರೊಂದಿಗೆ, ಅಕ್ಟೋಬರ್ 1963ರ ಸಂಚಿಕೆಯಲ್ಲಿ. ಈ ಬಗ್ಗೆ ಪೋರ್ಬ್ಸ್‌ ಪತ್ರಿಕೆಯಲ್ಲಿ ಈ ಬಗ್ಗೆ ಲೇಖನವೊಂದು ಪ್ರಕಟವಾಗಿದೆ.

ಸತ್ಯ ಏನು?

ಅಸಲಿಗೆ ಇದೊಂದು ಡಮ್ಮಿ ಸಂದರ್ಶನವಾಗಿತ್ತು. ಅಕ್ಟೋಬರ್ 1963ರಂದು ಪ್ರಕಟವಾದ ನೆಹರೂ ಸಂದರ್ಶನಕ್ಕೆ a candid conversation with the architect of modern India ಟೈಟಲ್‌ ನೀಡಲಾಗಿತ್ತು.

ಇದರಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಕುರಿತಾದ ನೆಹರೂ ಅಭಿಪ್ರಾಯಗಳು, ಪ್ರಜಾಪ್ರಭುತ್ವದ ದೌರ್ಬಲ್ಯಗಳು, ಶೀತಲ ಸಮರದ ರಾಜಕೀಯ ಮತ್ತು ಅಂತರರಾಷ್ಟ್ರೀಯ ಸಂಬಂಧಗಳು, ಸಮಾಜ, ವಿಶ್ವ ಧರ್ಮದ ಮೇಲೆ materialismನ ವಿನಾಶಕಾರಿ ಪರಿಣಾಮ, ದೇಶದಲ್ಲಿ ಜನಸಂಖ್ಯಾ ಸ್ಪೋಟ, ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ಭಾರತದ ಭವಿಷ್ಯ, ಮೊದಲಾದ ವಿಚಾರಗಳ ಕುರಿತು ನೆಹರೂರವರ ಸಮಗ್ರ ದೃಷ್ಟಿಕೋನವನ್ನು ಪ್ರಕಟಿಸಲಾಗಿತ್ತು.

ಆದರೆ, ಅಸಲಿಗೂ ಈ ಸಂದರ್ಶನ ನಡೆದಿತ್ತೇ?

ಇದೇ ಸಂಚಿಕೆಯ ಪುಟ 3 ರಲ್ಲಿರುವ “ಸಂಪಾದಕೀಯದಲ್ಲಿ” “ನಿಯತಕಾಲಿಕದ ಉಳಿದ ಪ್ರತಿಗಳು ಮುದ್ರಣಕ್ಕೆ ಹೋದ ನಂತರ, ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಿಂದ ಇದು ಪಿಎಂ ನೆಹರೂ ಅವರೊಂದಿಗಿನ ನಮ್ಮ ವೈಯಕ್ತಿಕ ಸಂದರ್ಶನ ಅಲ್ಲ ಎಂಬ ಸುದ್ದಿ ಬಂದಿದೆ. ಆದರೆ ಕಳೆದ ಹಲವಾರು ವರ್ಷಗಳಿಂದ ಪ್ರಧಾನಿಯವರು ಮಾಡಿದ ವಿವಿಧ ಭಾಷಣಗಳು, ಅವರ ಹೇಳಿಕೆಗಳು,ಸಾರ್ವಜನಿಕ ಭಾಷಣಗಳನ್ನು ಒಟ್ಟುಗೂಡುಸಿ ತಯಾರಿಸಲಾಗಿದೆ,” ಎಂದು ಹೇಳಲಾಗಿದೆ.

ಇದರ ಅರ್ಥ, ಪ್ಲೈಬಾಯ್‌ ಪತ್ರಿಕೆಯವರು ನೆಹರೂರೊಂದಿಗೆ ಸಂದರ್ಶನವನ್ನೇ ನಡೆಸಿಲ್ಲ ಎಂದು ರಾಯಭಾರಿ ಕಚೇರಿ ತಿಳಿಸಿದೆ. ಬದಲಿಗೆ, ನೆಹರೂರವರ ಅನೇಕ ಭಾಷಣಗಳನ್ನು ಒಗ್ಗೂಡಿಸಿ ಒಂದು ಡಮ್ಮಿ ಸಂದರ್ಶನವನ್ನು ಪ್ರಕಟಿಸಲಾಗಿದೆ. ಆದರೆ ಇದೇ ಸಂಪಾದಕೀಯದಲ್ಲಿ ಈ ಸಂದರ್ಶಕ ಜಗತ್ತಿನ ಬೇರೆ ನಾಯಕರನ್ನೂ ಸಂದರ್ಶಿಸಿದ್ದಾನೆ ಎಂದು ತಿಳಿಸಲಾಗಿದೆ.

ಮುಂದುವರಿದ ಸಂಪಾದಕೀಯದಲ್ಲಿ “ಭಾರತ ಸರ್ಕಾರ ನೀಡಿದ ಅಧಿಕೃತ ನಿರಾಕರಣೆಯನ್ನು ಗೌರವಿಸಬೇಕು ಮತ್ತು ಹೆಚ್ಚಿನ ಸ್ಪಷ್ಟೀಕರಣಕ್ಕಾಗಿ ಸಂದರ್ಶಕರನ್ನು ಸಂಪರ್ಕಿಸಲು ನಾವು ವಿಫಲವಾಗಿದ್ದೇವೆ. ಸಂಪಾದಕೀಯ ಸಮಗ್ರತೆಗಾಗಿ ನಾವು ಈ ಹೇಳಿಕೆಯನ್ನು ಮುದ್ರಿಸುವ ಅಗತ್ಯವಿದೆ,” ಎಂದು ಹೇಳಲಾಗಿದೆ.

ಭಾರತದಲ್ಲಿ ಪ್ಯೂರಿಟಾನಿಕಲ್ ಸೆನ್ಸಾರ್‌ಗಳು ಆಗಲೇ ಭಾರತದಲ್ಲಿ ಈ ಪುರುಷರ ಮ್ಯಾಗಜೈನ್‌ ಅನ್ನು ನಿಷೇಧಿಸಿತ್ತು. ಆದರೂ ಈ ಪತ್ರಿಕೆಯಲ್ಲಿ ನೆಹರೂ ಡಮ್ಮಿ ಸಂದರ್ಶನ ಪ್ರಕಟವಾದಾಗ ಬಿಸಿ ಬಿಸಿ ಮಸಾಲದೋಸೆಯಂತೆ ಪತ್ರಿಕೆ ಮಾರಾಟವಾಯಿತು. ಭಾರತಕ್ಕೆ ಈ ಪತ್ರಿಕೆಯ ಪ್ರತಿಗಳನ್ನು ಕಳ್ಳಸಾಗಾಟ ಮಾಡಲಾಗಿತ್ತು.

ಪತ್ರಿಕೆಯ ಅಸಲಿ ಬೆಲೆಗಿಂತ 30 ಪಟ್ಟು ಹೆಚ್ಚಿನ ಬೆಲೆಗೆ ಖರೀದಿ ಮಾಡುತ್ತಿದ್ದರು. ಪತ್ರಿಕೆಯ ಓರ್ವ ಸಂಪಾದಕ ಅಕ್ಟೋಬರ್‌ನ ಈ ಸಂಚಿಕೆಯ ಪ್ರತಿ “ಬ್ಲೆಂಡೆಟ್‌ ಸ್ಕಾಚ್‌ ವಿಸ್ಕಿ ಚೀವಾಸ್ ರೀಗಲ್ ಬಾಟಲಿಗಿಂತ ದುಬಾರಿ” ಎಂದು ಹೇಳಿದ್ದ.

ಅಚ್ಚರಿಯೇನಂದ್ರೆ, ಇಂತಹದ್ದೇ ಸಂಕಷ್ಟಕ್ಕೆ ರಾಜೀವ್‌ ಗಾಂಧೀ ಕೂಡ ಬಿದ್ದಿದ್ದರು. ದಿ ಸ್ಟೇಟ್ಸ್‌ಮನ್‌ನಲ್ಲಿ ಆಗಾಗ ಬರೆಯುತ್ತಿದ್ದ ರಸೆಲ್‌ ವಾರನ್‌ ಹೌವೇ ಎಂಬ ಪತ್ರಕರ್ತ ಜಾಗತಿಕ ರಾಜಕೀಯ ನಾಯಕರ ಬಗ್ಗೆ ಪುಸ್ತಕ ಬರೆಯುತ್ತಿರುವುದಾಗಿ, ರಾಜೀವ್‌ ಗಾಂಧಿಯವರ ಸಂದರ್ಶನವನ್ನು ಕೇಳಿದ್ದ. ಆದರೆ ಅಮೇರಿಕನ್‌ ಅಡಲ್ಟ್‌ ಮ್ಯಾಗಜೈನ್‌ ಪೆಂಟ್‌ಹೌಸ್‌ನ ಮುಂದಿನ ಸಂಚಿಕೆಯಲ್ಲಿ ರಾಜೀವ್‌ ಗಾಂಧಿಯವರ ಸಂದರ್ಶನ ಪ್ರಕಟಿಸಲಾಗುವುದು ಎಂದು ಪ್ರಕಟಣೆಯಾದಾಗ ರಾಜೀವ್‌ ಗಾಬರಿ ಬಿದ್ದಿದ್ದರು. ಭಾರತದಲ್ಲಿ ಬ್ಯಾನ್‌ ಆಗಿದ್ದ ವಯಸ್ಕರ ಮ್ಯಾಗಜೈನ್ ಪೆಂಟ್‌ಹೌಸ್‌ಗೆ ರಾಜೀವ್‌ ಸಂದರ್ಶನ ನೀಡಿಲ್ಲ, ಬದಲಾಗಿ ಈ ರೀತಿ ಸುಳ್ಳು ಹೇಳಿ ಸಂದರ್ಶನ ತೆಗೆದುಕೊಳ್ಳಲಾಗಿದೆ ಎಂದು ವಾಷಿಂಗ್‌ಟನ್‌ನಲ್ಲಿ ಇರುವ ಭಾರತೀಯ ರಾಯಭಾರಿ ಕಚೇರಿ ತಿಳಿಸಿತು ಮತ್ತು ಕಾನೂನಾತ್ಮಕ ಕ್ರಮವನ್ನೂ ತೆಗೆದುಕೊಂಡಿತ್ತು.

ಇಷ್ಟು ವರ್ಷಗಳಾದರೂ ಪ್ಲೈಬಾಯ್‌ ಪತ್ರಿಕೆ ನೆಹರೂರವರ ಜೊತೆಗೆ ಇರುವ ಸಂದರ್ಶಕನ ಫೋಟೋಗಳು ಹಾಗೂ ಆತನ ಬಗೆಗಿನ ವಿವರಗಳನ್ನು ಪ್ರಕಟಿಸಲು ನಿರಾಕರಿಸಿದೆ. ಅಸಲಿಗೆ ಅದರ ಸಂಪಾದಕೀಯ ಹೇಳುವಂತೆ ಪತ್ರಿಕೆ ಸಂಪರ್ಕಿಸಲು ಯತ್ನಿಸಿ ವಿಫಲವಾದ ಈ ಸಂದರ್ಶಕನ ಬಗ್ಗೆ ಅವರಿಗೇ ತಿಳಿದಿಲ್ಲ. ಇದೊಂದು ನಿಚ್ಚಲವಾಗಿ ಸುಳ್ಳು ಸಂದರ್ಶನವಾಗಿತ್ತು.

ಸದ್ಯ ಈ ಸುಳ್ಳು ಸಂದರ್ಶನದ ಪ್ಲೇಬಾಯ್‌ ಪತ್ರಿಕೆಯ ಪ್ರತಿಯನ್ನು ಇಟ್ಟುಕೊಂಡು ಅವಹೇಳನಕಾರಿ ವಿಡಿಯೋವೊಂದು ಟ್ವಿಟರ್‌ನಲ್ಲಿ ಓಡಾಡುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು