Home ವಿದೇಶ ನೇಪಾಳ-ಟಿಬೆಟ್ ಭೀಕರ ಪ್ರವಾಹ: ಸಾವಿನ ಸಂಖ್ಯೆ 392ಕ್ಕೆ ಏರಿಕೆ; 290 ಭಾರತೀಯರು ಸೇರಿ 1,468 ಮಂದಿ...

ನೇಪಾಳ-ಟಿಬೆಟ್ ಭೀಕರ ಪ್ರವಾಹ: ಸಾವಿನ ಸಂಖ್ಯೆ 392ಕ್ಕೆ ಏರಿಕೆ; 290 ಭಾರತೀಯರು ಸೇರಿ 1,468 ಮಂದಿ ನಾಪತ್ತೆ

0

ಕಠ್ಮಂಡು: ನೇಪಾಳ ಮತ್ತು ಟಿಬೆಟ್ ಗಡಿ ಭಾಗದಲ್ಲಿ ಸಂಭವಿಸಿದ ಭೀಕರ ಹಿಮಪಾತ ಹಾಗೂ ಹಠಾತ್ ಪ್ರವಾಹದಿಂದಾಗಿ (Flash Floods) ಮೃತಪಟ್ಟವರ ಸಂಖ್ಯೆ 392ಕ್ಕೆ ಏರಿಕೆಯಾಗಿದ್ದು, 290 ಭಾರತೀಯರು ಸೇರಿದಂತೆ ಸುಮಾರು 1,468 ಜನರು ನಾಪತ್ತೆಯಾಗಿದ್ದಾರೆ.

ಮೃತರ ಪೈಕಿ ನೇಪಾಳದಲ್ಲಿ 389 ಮಂದಿ ಮೃತಪಟ್ಟಿದ್ದರೆ, ನೆರೆಯ ಟಿಬೆಟ್‌ನಲ್ಲಿ ಮೂವರು ಸಾವನ್ನಪ್ಪಿದ್ದಾರೆ. ನೇಪಾಳ-ಟಿಬೆಟ್ ಗಡಿಯ ಸಮೀಪ ಸಂಭವಿಸಿದ ಹಿಮಪದರ ಕುಸಿತದಿಂದಾಗಿ (ice-rock avalanche) ಮಣ್ಣು, ಕಲ್ಲು-ಬಂಡೆಗಳ ಸಹಿತ ನೀರು ಹರಿದುಬಂದು ಮಧ್ಯ ನೇಪಾಳದ ಹಲವು ಪಟ್ಟಣ, ಹಳ್ಳಿಗಳು, ಸೇತುವೆಗಳು, ರಸ್ತೆಗಳು ಮತ್ತು ಜಲವಿದ್ಯುತ್ ಯೋಜನೆಗಳನ್ನು ಕೊಚ್ಚಿಕೊಂಡು ಹೋಗಿ ಭಾರಿ ವಿನಾಶ ಸೃಷ್ಟಿಸಿದೆ.

ನೇಪಾಳದಲ್ಲಿ 910 ಜನರು ನಾಪತ್ತೆಯಾಗಿದ್ದರೆ, ಟಿಬೆಟ್ ಗಡಿಯಲ್ಲಿ 558 ಮಂದಿ ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಿಂದ ಹೆಲಿಕಾಪ್ಟರ್ ಮೂಲಕ 50 ವಿದೇಶಿಯರು ಸೇರಿದಂತೆ 796 ಮಂದಿಯನ್ನು ಹಾಗೂ ರಸ್ತೆ ಮಾರ್ಗದ ಮೂಲಕ ಮತ್ತಷ್ಟು ಜನರನ್ನು ರಕ್ಷಿಸಲಾಗಿದೆ.

290 ಭಾರತೀಯರ ಪತ್ತೆಗೆ ಶೋಧ: ಪ್ರವಾಹದಲ್ಲಿ ಸಿಲುಕಿರುವ 290 ಭಾರತೀಯ ಪ್ರಜೆಗಳು ಸದ್ಯ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತಿಳಿಸಿದೆ. ಇವರ ಪತ್ತೆ ಮತ್ತು ರಕ್ಷಣೆಗಾಗಿ ಕೇಂದ್ರ ಸರ್ಕಾರ ತುರ್ತು ಕ್ರಮಗಳನ್ನು ಕೈಗೊಂಡಿದೆ. ನಿರ್ಮಾಣ ಹಂತದಲ್ಲಿದ್ದ ತ್ರಿಶೂಲಿ-I ಜಲವಿದ್ಯುತ್ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 63 ಕಾರ್ಮಿಕರು ಹಾಗೂ ತಮಿಳುನಾಡಿನ 21 ಮಂದಿ ಸೇರಿದಂತೆ ಒಟ್ಟು 84 ಭಾರತೀಯರನ್ನು ಇದುವರೆಗೆ ರಕ್ಷಿಸಲಾಗಿದೆ. ಟಿಬೆಟ್ ಭಾಗದಲ್ಲಿ ಸಿಲುಕಿರುವ ಸುಮಾರು 200 ಭಾರತೀಯರು ಸ್ಥಳಾಂತರಕ್ಕಾಗಿ ನೆರವು ಕೋರಿದ್ದಾರೆ.

ಭಾರತ ಸರ್ಕಾರವು ನೇಪಾಳಕ್ಕೆ ಒಟ್ಟು 47.5 ಟನ್ ಮಾನವೀಯ ನೆರವು, ವಿಪತ್ತು ಪರಿಹಾರ ಸಾಮಗ್ರಿಗಳು ಮತ್ತು ಔಷಧಿಗಳನ್ನು ರವಾನಿಸಿದೆ.

ಉತ್ತರ ಪ್ರದೇಶದಲ್ಲಿ ಹೈ ಅಲರ್ಟ್: ನೇಪಾಳದಲ್ಲಿ ಪ್ರವಾಹ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಗಂಡಕ್ ನದಿ ಪಾತ್ರದ ಗಡಿ ಜಿಲ್ಲೆಗಳಾದ ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಮತ್ತು ಕುಶಿನಗರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗಾಗಿ ಎಸ್‌ಡಿಆರ್‌ಎಫ್ (SDRF) ತುಕಡಿಗಳನ್ನು ನಿಯೋಜಿಸಲಾಗಿದ್ದು, ಸಂತ್ರಸ್ತ ಕುಟುಂಬಗಳಿಗಾಗಿ ‘1070’ ಸಹಾಯವಾಣಿಯನ್ನು ತೆರೆಯಲಾಗಿದೆ.

You cannot copy content of this page

Exit mobile version