ವಾರಣಾಸಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ಪರ್ಧಿಸುತ್ತಿರುವ ವಾರಣಾಸಿಯಲ್ಲಿ ಬೇರೆ ಆಕಾಂಕ್ಷಿಗಳಿಗೆ ಸ್ಪರ್ಧಿಸಲಯ ಅವಕಾಶ ಕೊಡುತ್ತಿಲ್ಲ. ಮೋದಿ ವಿರುದ್ಧ ಕಣಕ್ಕಿಳಿಯಲು ಬಯಸಿದ್ದ ತನ್ನನ್ನು ನಾಮಪತ್ರ ಸಲ್ಲಿಸುವುದರಿಂದ ಮತ್ತೊಮ್ಮೆ ತಡೆಯಲಾಗಿದೆ ಎಂದು ಖ್ಯಾತ ಕಾಮಿಡಿಯನ್ ಶ್ಯಾಮ್ ರಂಗೀಲಾ ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿರುವ ಅವರು, ತಾನು ವಾರಣಾಸಿ ಚುನಾವಣಾ ಆಯೋಗದ ಕಚೇರಿಯನ್ನು ಮೇ 14ರಂದು ಬೆಳಿಗ್ಗೆ 9.15ಕ್ಕೆ ತಲುಪಿದ್ದೇನೆ. ಆದರೆ, ಕಚೇರಿಗೆ ಹೋಗುವ ದಾರಿಯಲ್ಲಿ ಪೊಲೀಸ್ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಬೇರೆ ಆಕಾಂಕ್ಷಿಗಳಿಗೆ ಒಳಗೆ ಬಿಡುತ್ತಿಲ್ಲ. ಕೇಳಿದರೆ ಭದ್ರತಾ ನೆಪ ಹೇಳುತ್ತಿದ್ದಾರೆ. ಪೋನ್, ಇಮೇಲ್ ಸೇರಿದಂತೆ ಎಲ್ಲಿಂದಲೂ ಉತ್ತರ ಬರುತ್ತಿಲ್ಲ. ನಾಮಪತ್ರ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಬರೆದಿದ್ದಾರೆ.
ಇನ್ನೊಂದು ಟ್ವೀಟ್‌ನಲ್ಲಿ ಅವರು ಚುನಾವಣಾ ಆಯೋಗವನ್ನು ಟ್ಯಾಗ್ ಮಾಡಿ ಪ್ರತಿಕ್ರಿಯಿಸುವಂತೆ ಅವರು ಕೋರಿದ್ದಾರೆ. ನಾನು ಇಮೇಲ್ ಮಾಡಿ, ಕರೆ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಅವರು ಹೇಳಿದ್ದಾರೆ.
ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ತಡೆಯುಂಟು ಮಾಡುತ್ತಿರುವ ಬಗ್ಗೆ ಈ ಹಿಂದೆ ಕೂಡ ಶ್ಯಾಮ್ ರಂಗೀಲಾ ವೀಡಿಯೋ ಹೇಳಿಕೆ ಮೂಲಕ ದೂರಿದ್ದರು. ಮೇ 10 ಹಾಗೂ 13ರಂದು ಬೆಳಿಗ್ಗೆಯಿಂದ ಕಾದರೂ ನಾಮಪತ್ರ ಅರ್ಜಿಗಳನ್ನು ಹಲವು ಮಂದಿಗೆ ನಿರಾಕರಿಸಲಾಗಿದೆ ಎಂದು ಅವರು ಹೇಳಿದ್ದರು.
ಪ್ರಜಾಪ್ರಭುತ್ವವನ್ನು ದಮನಿಸಲಾಗುತ್ತಿದೆ ಹಾಗೂ ಮೋದಿ ಅವರು ಅವಿರೋಧವಾಗಿ ಆಯ್ಕೆಯಾಗಬೇಕೆಂದು ಈ ರೀತಿ ಮಾಡಲಾಗುತ್ತಿದೆ ಎಂದು ಹೇಳಿರುವ ಅವರು ತಾನು ಚುನಾವಣೆ ಸ್ಪರ್ಧಿಸುವ ಬಗ್ಗೆ ದೃಢ ನಿರ್ಧಾರ ಹೊಂದಿರುವುದಾಗಿ ತಿಳಿಸಿದರು. ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿದರೂ ತಮಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಅವರು ದೂರಿದ್ದಾರೆ.