Home ದೇಶ 18 ವರ್ಷದೊಳಗಿನವರ ಸಾಮಾಜಿಕ ಜಾಲತಾಣ ಬಳಕೆಗೆ ನಿರ್ಬಂಧ ಹೇರುವುದಿಲ್ಲ: ಸರ್ಕಾರದ ಸ್ಪಷ್ಟನೆ

18 ವರ್ಷದೊಳಗಿನವರ ಸಾಮಾಜಿಕ ಜಾಲತಾಣ ಬಳಕೆಗೆ ನಿರ್ಬಂಧ ಹೇರುವುದಿಲ್ಲ: ಸರ್ಕಾರದ ಸ್ಪಷ್ಟನೆ

0

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು (ಸೋಷಿಯಲ್ ಮೀಡಿಯಾ) ಬಳಸುವುದರ ಮೇಲೆ ನಿರ್ಬಂಧ ಹೇರಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ ಎಂಬ ವರದಿಗಳನ್ನು ಸರ್ಕಾರವು ತಳ್ಳಿಹಾಕಿದ್ದು, ಅಂತಹ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ವರದಿಗಳು ಸಂಪೂರ್ಣ “ಸುಳ್ಳು” ಮತ್ತು ಆಧಾರರಹಿತ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಮಕ್ಕಳ ಸೋಷಿಯಲ್ ಮೀಡಿಯಾ ಖಾತೆಗಳ ಮೇಲ್ವಿಚಾರಣೆ, ಪೋಷಕರ ಒಪ್ಪಿಗೆ ಹಾಗೂ ಜಾಲತಾಣಗಳ ನಿಯಮಾವಳಿಗಳಿಗೆ ಸಂಬಂಧಿಸಿದಂತೆ ನಿಯಮಗಳನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದ ಬೆನ್ನಲ್ಲೇ ಈ ಸ್ಪಷ್ಟನೆ ಹೊರಬಿದ್ದಿದೆ.

ಡಿಜಿಟಲ್ ವೇದಿಕೆಗಳಲ್ಲಿ ಅಪ್ರಾಪ್ತರ ಖಾತೆಗಳಿಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಸುರಕ್ಷತಾ ಕ್ರಮಗಳಿಗೆ ಶಾಸನಬದ್ಧ ರೂಪ ನೀಡಬಹುದೇ ಎಂಬುದನ್ನು ಪರಿಶೀಲಿಸಲು ನ್ಯಾಯಾಲಯವು ಸರ್ಕಾರಕ್ಕೆ ತಿಳಿಸಿತ್ತೇ ವಿನಃ, 18 ವರ್ಷದೊಳಗಿನವರ ಬಳಕೆಯ ಮೇಲೆ ಯಾವುದೇ ಸಾರಾಸಗಟು ನಿಷೇಧವನ್ನು ಹೇರಿರಲಿಲ್ಲ.

‘ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ ಅಲೈಯನ್ಸ್’ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯಿಮಾಲ್ಯ ಬಾಗ್ಚಿ ಹಾಗೂ ನ್ಯಾಯಮೂರ್ತಿ ವಿ. ಮೋಹನ ಅವರನ್ನೊಳಗೊಂಡ ತ್ರಿಪೀಠವು, ಭಾರತೀಯ ಒಪ್ಪಂದ ಕಾಯ್ದೆಯಡಿ ಅಪ್ರಾಪ್ತರು ಸ್ವತಂತ್ರವಾಗಿ ಒಪ್ಪಂದ ಮಾಡಿಕೊಳ್ಳಲು ಅರ್ಹರಲ್ಲದಿರುವಾಗ, ಅವರು ಸಾಮಾಜಿಕ ಜಾಲತಾಣಗಳ ನಿಯಮಾವಳಿಗಳನ್ನು ಒಪ್ಪಿಕೊಂಡು ಖಾತೆಗಳನ್ನು ತೆರೆಯಲು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಪ್ರಸ್ತಾಪಿಸಿತು.

ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು) ನಿಯಮಗಳ ಅಡಿಯಲ್ಲಿ ಇಂತಹ ಕಾನೂನುಗಳನ್ನು ಜಾರಿಗೊಳಿಸುವ ಸಾಧ್ಯತೆಗಳನ್ನು ಮತ್ತು ಅಪ್ರಾಪ್ತರ ಖಾತೆಗಳಿಗೆ ಪೋಷಕರ ಒಪ್ಪಿಗೆಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಬಗ್ಗೆ ಸರ್ಕಾರ ಪರಿಶೀಲಿಸಲಿದೆ ಎಂದು ತಿಳಿಸಿದರು. ಮಕ್ಕಳ ಆನ್‌ಲೈನ್ ಸುರಕ್ಷತೆ ಮತ್ತು ವಯಸ್ಸಿಗೆ ಮೀರಿದ ಆಕ್ಷೇಪಾರ್ಹ ವಿಷಯಗಳಿಂದ ಅವರನ್ನು ರಕ್ಷಿಸುವ ಕುರಿತು ಕಾನೂನು ಚೌಕಟ್ಟನ್ನು ಬಲಪಡಿಸುವ ಚರ್ಚೆಗಳು ನಡೆಯುತ್ತಿದ್ದರೂ, 18 ವರ್ಷದೊಳಗಿನವರ ಮೇಲೆ ಯಾವುದೇ ಸಾಮಾಜಿಕ ಜಾಲತಾಣ ನಿರ್ಬಂಧವನ್ನು ಹೇರುವ ನಿರ್ಧಾರವಾಗಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

You cannot copy content of this page

Exit mobile version