Home ಜನ-ಗಣ-ಮನ ಕಲೆ – ಸಾಹಿತ್ಯ ನಾಟಕೋತ್ಸವಕ್ಕೆ ಅಧಿಕಾರಿಗಳ ಅಸಹಕಾರ- ರಂಗಭೂಮಿಗೆ ಸಂಸ್ಕೃತಿ ಇಲಾಖೆಯೇ ಭಾರ

ನಾಟಕೋತ್ಸವಕ್ಕೆ ಅಧಿಕಾರಿಗಳ ಅಸಹಕಾರ- ರಂಗಭೂಮಿಗೆ ಸಂಸ್ಕೃತಿ ಇಲಾಖೆಯೇ ಭಾರ

0

ತಿಂಗಳ ಕೊನೆಯ ದಿನದ ರಾತ್ರಿ 12 ಗಂಟೆಯಿಂದ ಸಂಸ್ಕೃತಿ ಇಲಾಖೆಯ ನಿಯಂತ್ರಣದಲ್ಲಿರುವ ರಂಗಮಂದಿರಗಳನ್ನು ಮುಂದಿನ ಎರಡು ತಿಂಗಳ ಕಾಲಮಿತಿಯಲ್ಲಿ ಆನ್ ಲೈನ್ ಮೂಲಕ ಕಾಯ್ದಿರಿಸಲು ಅವಕಾಶವಿದೆ. ಕಾನೂನು, ರೂಲ್ಸು ಅಂತಾ ಹೇಳುವ ಅಧಿಕಾರಿಗಳ ಮೂಗಿನ ಕೆಳಗೇ ರೂಲ್ಸು ಉಲ್ಲಂಘನೆಯಾಗುತ್ತಿದೆ. ಹೀಗೆ ಕಲಾವಿದರಿಗೆ ತೊಂದರೆ ಕೊಡುವುದು ಮುಂದುವರೆದರೆ, ಬುಕ್ಕಿಂಗ್ ಮಾಫಿಯಾ ಜೊತೆಗೆ ಅಧಿಕಾರಿಗಳ ಶಾಮೀಲಾತಿ ನಿಲ್ಲದೇ ಹೋದರೆ, ರಂಗಕರ್ಮಿಗಳೆಲ್ಲಾ ಹೋರಾಟದ ಹಾದಿ ತುಳಿಯುವುದು ಅನಿವಾರ್ಯವಾಗುತ್ತದೆ. – ಶಶಿಕಾಂತ ಯಡಹಳ್ಳಿ, ರಂಗಕರ್ಮಿ

ಕನ್ನಡನಾಡಿನ ನುಡಿ, ಕಲೆ, ಸಾಹಿತ್ಯವನ್ನು ಉಳಿಸಿ ಪ್ರೋತ್ಸಾಹಿಸಿ ಬೆಳೆಸಲೆಂದೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಸ್ತಿತ್ವಕ್ಕೆ ಬಂದಿರುವುದು. ಅದಕ್ಕಾಗಿಯೇ ಒಂದು ಸಚಿವಾಲಯ, ಸಚಿವರು, ಕಾರ್ಯದರ್ಶಿಗಳು, ನಿರ್ದೇಶಕರು, ಜೆಡಿ, ಎಡಿ ಗಳೆಂಬ ಹಲವಾರು ಶ್ರೇಣಿಕೃತ ಅಧಿಕಾರಿ ವರ್ಗವೇ ಇದೆ. ಸರಕಾರ ನಿಗದಿ ಪಡಿಸುವ ವಾರ್ಷಿಕ ಬಜೆಟ್ಟಿನಲ್ಲಿ ಅರ್ಧದಷ್ಟು ಹಣ ಈ ಅಧಿಕಾರಿಗಳ ಸಾರಿಗೆ ಸಂಬಳ ಹಾಗೂ ಕಚೇರಿ ನಿರ್ವಹಣೆಗೇ ಖರ್ಚಾಗುತ್ತದೆ. ಇಷ್ಟೆಲ್ಲಾ ಇದ್ದರೂ ಈ ಇಲಾಖೆಯ ನಿಜವಾದ ಉದ್ದೇಶ ಈಡೇರಿದೆಯಾ? ಉತ್ತರ ನಿರುತ್ತರ.

ಯಾಕೆಂದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬಹುತೇಕ ಅಧಿಕಾರಿಗಳೇ ಸಾಂಸ್ಕೃತಿಕ ವಿರೋಧಿ ಧೋರಣೆಯನ್ನು ಹೊಂದಿದ್ದಾರೆ. ಕಲೆ, ಸಾಹಿತ್ಯದ ಅಗತ್ಯ ಮತ್ತು ಮಹತ್ವವನ್ನೇ ಅರಿಯದವರಾಗಿದ್ದಾರೆ. ಇಲಾಖೆಯ  ಅಧಿಕಾರಿಗಳು ರೂಲ್ಸು, ರೆಗ್ಯೂಲೇಶನ್ ಗಳ ಬಲೆಯಲ್ಲಿ ಕಲೆ ಹಾಗೂ ಕಲಾವಿದರನ್ನು ಕಟ್ಟಿಹಾಕುವ ಪ್ರಯತ್ನವನ್ನು ನಿತ್ಯವೂ ಮಾಡುತ್ತಲೇ ಇರುತ್ತಾರೆ. ತಮ್ಮ ಅನುಕೂಲಕ್ಕೆ ತಕ್ಕಂತೆ ಅದೇ ರೂಲ್ಸುಗಳನ್ನು ಬಳಸುವ ಹಾಗೂ ಅದರಿಂದ ಲಾಭ ಪಡೆಯುವ ಎಲ್ಲಾ ಅವಕಾಶಗಳನ್ನೂ ಉಪಯೋಗಿಸಿಕೊಳ್ಳುತ್ತಾರೆ.

ಇದಕ್ಕೆ ಲೇಟೆಸ್ಟ್ ಉದಾಹರಣೆ ಇಲ್ಲಿದೆ. ಬೆಂಗಳೂರಿನ ಕೆಲವು ರಂಗಕರ್ಮಿಗಳು ಕಳೆದ 18 ವರ್ಷದಿಂದ ‘ನಾಟಕ ಬೆಂಗಳೂರು’ ಎನ್ನುವ ನಾಟಕೋತ್ಸವವನ್ನು ಆಯೋಜಿಸುತ್ತಾ ಬರುತ್ತಿದ್ದಾರೆ. ಸರಿಸುಮಾರು 30 ರಷ್ಟು ವಿವಿಧ ರಂಗತಂಡಗಳು ಹೊಸದಾಗಿ ಕನ್ನಡ ನಾಟಕಗಳನ್ನು ನಿರ್ಮಿಸಿ, ಎರಡು ಕಂತುಗಳಲ್ಲಿ ಒಟ್ಟು 30 ದಿನಗಳ ಕಾಲ ನಿರಂತರವಾಗಿ ಈ ರಂಗೋತ್ಸವದಲ್ಲಿ ನಾಟಕಗಳನ್ನು ಪ್ರದರ್ಶನ ಮಾಡುತ್ತಾರೆ. ಇದರಲ್ಲಿ ಹಲವಾರು ಹೊಸ ನಾಟಕಗಳು ಕಟ್ಟಲ್ಪಡುತ್ತವೆ. ಹಲವಾರು ಹೊಸ ತಲೆಮಾರಿನ ಕಲಾವಿದರು ಹಾಗೂ ತಂತ್ರಜ್ಞರುಗಳು ಅವಕಾಶ ಪಡೆಯುತ್ತಾರೆ. ಈ ನಾಟಕೋತ್ಸವದ ನೆಪದಲ್ಲಿ ತಯಾರಾದ ನಾಟಕಗಳು ಮುಂದೆ ಅನೇಕ ಮರುಪ್ರದರ್ಶನಗಳನ್ನೂ ಕಾಣುತ್ತವೆ. ಹೀಗಾಗಿ, ಸಾಮೂಹಿಕ ಸಹಭಾಗಿತ್ವದ  ಈ ‘ನಾಟಕ ಬೆಂಗಳೂರು’ ನಾಟಕೋತ್ಸವವು ತನ್ನ ಇತಿಮಿತಿಗಳಲ್ಲಿ  ಕನ್ನಡ ರಂಗಭೂಮಿಯ ಅದರಲ್ಲೂ ಬೆಂಗಳೂರಿನ ರಂಗಭೂಮಿಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸುತ್ತಾ ಬಂದಿದೆ.

ಈ ಪ್ರಮುಖ ನಾಟಕೋತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನುದಾನವನ್ನು ಕೊಡುವುದಿಲ್ಲ. ‘ನಾವು ನಾಟಕೋತ್ಸವ ಮಾಡುತ್ತೇವೆ, ರವೀಂದ್ರ ಕಲಾಕ್ಷೇತ್ರವನ್ನು ಬಿಟ್ಟುಕೊಡಿ’ ಎನ್ನುವುದಷ್ಟೇ ಈ ರಂಗೋತ್ಸವದ ಆಯೋಜಕರ ಏಕೈಕ ಬೇಡಿಕೆಯಾಗಿದೆ. ಅದೂ ಉಚಿತವಾಗಿಯೇನಲ್ಲ. ಬಾಡಿಗೆ ಕಟ್ಟಲು ಸಿದ್ದರಾಗಿಯೇ ರಂಗಮಂದಿರ ಕೇಳುತ್ತಿದ್ದಾರೆ. ರಂಗ ಕಲೆಗೆ ಹಾಗೂ ಕಲಾವಿದರಿಗೆ ಅನುಕೂಲ ಮಾಡಿಕೊಡಬೇಕಾದದ್ದು ಸಂಸ್ಕೃತಿ ಇಲಾಖೆಯ ಅಧಿಕಾರಿಗಳ ಕೆಲಸ. ಅದಕ್ಕಾಗಿಯೇ ಅವರು ಜನರ ತೆರಿಗೆ ಹಣದಿಂದ ಸಂಬಳ, ಸವಲತ್ತು ಪಡೆಯುತ್ತಿರುವುದು. ಆದರೆ ಆ ಋಣವನ್ನು ಮರೆತ ಈ ಅಧಿಕಾರಿಶಾಹಿಗಳು ನಾಟಕೋತ್ಸವಕ್ಕೆ ಅಡ್ಡಗಾಲು ಹಾಕುತ್ತಿರುವುದು ಖಂಡಿತಾ ಖಂಡನೀಯ. 

ಆಗಿದ್ದಾದರೂ ಏನೆಂದರೆ- ಡಿಸೆಂಬರ್ 15 ರಿಂದ 15 ದಿನಗಳ ಕಾಲ ಹಾಗೂ ಜನವರಿಯಲ್ಲಿ 15 ದಿನಗಳ ಕಾಲ ‘ನಾಟಕ ಬೆಂಗಳೂರು’ ನಾಟಕೋತ್ಸವವನ್ನು ಹಮ್ಮಿಕೊಳ್ಳಲು ಆಯೋಜಕರು ನಿರ್ಧರಿಸಿ, ರವೀಂದ್ರ ಕಲಾಕ್ಷೇತ್ರವನ್ನು  ಕಾಯ್ದಿರಿಸಲು ಕಲಾಕ್ಷೇತ್ರದ ಮ್ಯಾನೇಜರ್  ಹಾಗೂ ಜಂಟಿ ನಿರ್ದೇಶಕಿಯನ್ನು ಸಂಪರ್ಕಿಸಲಾಯ್ತು.  ಹೊಸದಾಗಿ ನಿರ್ದೇಶಕಿಯಾಗಿ ಬಂದ ಡಾ. ಧರಣಿದೇವಿಯವರನ್ನು ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಜೆ.ಲೋಕೇಶರವರ ನೇತೃತ್ವದ ತಂಡವು ಭೇಟಿಯಾಗಿ ಎಲ್ಲವನ್ನು ವಿವರಿಸಿ ಹೇಳಿ 15+15 ದಿನ ಕಲಾಕ್ಷೇತ್ರವನ್ನು ನಾಟಕೋತ್ಸವಕ್ಕಾಗಿ ಕಾಯ್ದಿರಿಸಲು ಕೇಳಿಕೊಳ್ಳಲಾಯ್ತು. ಅವರೂ ಸಹ ‘ಆಯ್ತು, ಆಗಬಹುದು’ ಎಂದು ಭರವಸೆ ಕೊಟ್ಟರು. ಆದರೆ, ಆನಂತರ ಕೋರಿಕೆಯ ಅರ್ಜಿ ಫೈಲನ್ನು  ನಿರ್ದೇಶಕರು ಸಹಿ ಮಾಡದೇ ವಾಪಸ್ ಕಳುಹಿಸಿದರು. ಯಾವ ಅಧಿಕಾರಿ ನಿರ್ದೇಶಕಿಗೆ ಅದೇನು ಹೇಳಿದರೋ ಗೊತ್ತಿಲ್ಲ. “ರಂಗ ತಂಡಗಳು ಪ್ರತ್ಯೇಕವಾಗಿ ಸೇವಾ ಸಿಂಧು ಮೂಲಕ ಅಪ್ಲೈ ಮಾಡಿ ಬುಕ್ ಮಾಡಬಹುದು” ಎಂಬುದು ನಿರ್ದೇಶಕಿಯ ಧೋರಣೆಯಾಗಿತ್ತು. ಇದು ಗೊತ್ತಾದ ಕೂಡಲೇ ಈ ನಾಟಕೋತ್ಸವದಲ್ಲಿ ಭಾಗವಹಿಸುತ್ತಿರುವ ಎಲ್ಲಾ ರಂಗತಂಡಗಳನ್ನೂ ಸಂಪರ್ಕಿಸಿದ ಆಯೋಜಕರು ಸೆಪ್ಟಂಬರ್ 30ರ ಮಧ್ಯರಾತ್ರಿ 12 ಗಂಟೆಗೆ ಆನ್ ಲೈನ್ ಬುಕ್ಕಿಂಗ್ ಮಾಡಲು ತಿಳಿಸಿದರು. ಆ ಪ್ರಯತ್ನವನ್ನೂ ಮಾಡಲಾಯ್ತು. ಆದರೆ ಅಂದುಕೊಂಡಂತೆ ಎರಡು ಕಂತಿನಲ್ಲಿ 15+15 ದಿನ ನಿರಂತರವಾಗಿ ರಂಗಮಂದಿರದ ಡೇಟ್ಸ್ ಸಿಗಲಿಲ್ಲ. ಅಷ್ಟರಲ್ಲೇ ಈ ಕಲಾಕ್ಷೇತ್ರ ಬುಕ್ಕಿಂಗ್ ಲಾಬಿ ತನ್ನ ಕೆಲಸ ಶುರು ಮಾಡಿಯಾಗಿತ್ತು.

ತಿಂಗಳ ಕೊನೆಯ ದಿನದ ರಾತ್ರಿ 12 ಗಂಟೆಯಿಂದ ಸಂಸ್ಕೃತಿ ಇಲಾಖೆಯ ನಿಯಂತ್ರಣದಲ್ಲಿರುವ ರಂಗಮಂದಿರಗಳನ್ನು ಮುಂದಿನ ಎರಡು ತಿಂಗಳ ಕಾಲಮಿತಿಯಲ್ಲಿ ಆನ್ ಲೈನ್ ಮೂಲಕ ಕಾಯ್ದಿರಿಸಲು ಅವಕಾಶವಿದೆ. ಕಾನೂನು, ರೂಲ್ಸು ಅಂತಾ ಹೇಳುವ ಅಧಿಕಾರಿಗಳ ಮೂಗಿನ ಕೆಳಗೇ ರೂಲ್ಸು ಉಲ್ಲಂಘನೆಯಾಗುತ್ತಿದೆ, ಹಾಗೂ ಅವರೇ ಈ ಬುಕ್ಕಿಂಗ್ ಲಾಬಿ ಜೊತೆಗೆ ಶಾಮೀಲಾಗಿರುವ ರೂಮರ್ ಕೂಡಾ ಹರಿದಾಡುತ್ತಿದೆ. ಕಲಾಕ್ಷೇತ್ರದ ಮ್ಯಾನೇಜರ್ ಹಾಗೂ ಅಧಿಕಾರಿಗಳ ಸಹಕಾರ ಇಲ್ಲದೇ ಈ ಬುಕ್ಕಿಂಗ್ ಮಾಫಿಯಾ ಕೆಲಸ ಮಾಡಲು ಸಾಧ್ಯವೇ ಇಲ್ಲ. ಹೀಗಾಗಿ.. ಎಲ್ಲಾ 30 ರಂಗತಂಡಗಳು ರಾತ್ರಿ ನಿದ್ದೆಗೆಟ್ಟು 12 ಗಂಟೆಗೆ ಆನ್ ಲೈನಲ್ಲಿ ಕಲಾಕ್ಷೇತ್ರ ಬುಕ್ಕಿಂಗ್ ಮಾಡಲು ಪ್ರಯತ್ನಿಸಿದರೂ ಕಂಟಿನ್ಯೂ ಡೇಟ್ಸ್ ಸಿಗುವುದು ಅಸಾಧ್ಯವಾಯ್ತು. ಆದರೂ, ಗಮನಿಸಿದಾಗ 12 ಗಂಟೆಗೆ ಮೊದಲೇ ಬೇರೆಯವರು ಬುಕಿಂಗ್ ಮಾಡಿದ್ದೂ ಗೊತ್ತಾಯ್ತು. ಅಲೆಲೆಲೇ ಈ ಪವಾಡ ಹೇಗೆ ಸಾಧ್ಯವಾಯ್ತು? ಭರತ್ ಆರ್ ಪ್ರಭಾತ್ ಎನ್ನುವವರ ಹೆಸರಲ್ಲಿ 12 ಗಂಟೆಗೆ ಮೊದಲೇ ಶನಿವಾರ ಭಾನುವಾರಗಳಂದು ಕಲಾಕ್ಷೇತ್ರ ಬುಕ್ ಮಾಡಲಾಗಿದೆ. ಇಲಾಖೆಯ ಕಂಪ್ಯೂಟರ್ ನ್ನೇ ಮ್ಯಾನುಪಲೇಟ್ ಮಾಡಿ, ಇಲಾಖೆಯ ರೂಲ್ಸನ್ನೇ ಬ್ರೇಕ್ ಮಾಡಿ ಬುಕ್ಕಿಂಗ್ ಮಾಡಲಾಗಿರುವ ಪ್ರಮಾದಕ್ಕೆ ಹೊಣೆ ಯಾರು?  ಹೇಗೆ ನಿಗದಿತ ಸಮಯಕ್ಕೂ ಮುನ್ನ ಆನ್ ಲೈನ್ ಬುಕ್ಕಿಂಗ್ ಓಪನ್ ಆಯ್ತು? ಬೇರೆಯವರಿಗೆ ಬ್ಲಾಕ್ ಮಾಡಲು ಅವಕಾಶ ಮಾಡಿಕೊಟ್ಟಿದ್ದರೆ, ಒಂದು ಉತ್ತಮ ನಾಟಕೋತ್ಸವಕ್ಕೆ ಯಾಕೆ ಅದೇ ರೀತಿ ಅಡ್ವಾನ್ಸ್ ಬ್ಲಾಕಿಂಗ್ ಮಾಡಲು ಅವಕಾಶ ಮಾಡಿಕೊಡಬಾರದು?

ಹೌದು! ಎಲ್ಲಾ ಇಲಾಖೆಗಳೂ ಸರಕಾರದ ರೂಲ್ಸ್ ಗಳ‌ ಗೈಡ್‌ಲೈನ್ಸ್‌ ನಲ್ಲೇ ಕೆಲಸ ಮಾಡುತ್ತವೆ ಹಾಗೂ ಅಧಿಕಾರಿಗಳು ಅದನ್ನು ಫಾಲೋ ಮಾಡಲೇಬೇಕು. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅದರ ರೂಲ್ಸು ಗೈಡ್ ಲೈನ್ಸುಗಳು ಕಲೆ ಮತ್ತು ಸಂಸ್ಕೃತಿಗೆ ಪೂರಕವಾಗಿ ಲಿಬರಲ್ ಆಗಿರಬೇಕು. ಪ್ರಾಮಾಣಿಕವಾಗಿ ರಂಗಭೂಮಿಯ ಕೆಲಸ ಮಾಡುವವರನ್ನು ರೂಲ್ಸುಗಳ ಇಕ್ಕಳದಲ್ಲಿ ಸಿಕ್ಕಿಸದೇ, ಕೆಲವೊಮ್ಮೆ ಇತಿಮಿತಿಗಳನ್ನು ಮೀರಿ ಪ್ರೋತ್ಸಾಹಿಸಬೇಕು. ಅದಕ್ಕೆ ಕಲೆಯ ಬಗ್ಗೆ ಅಧಿಕಾರಿಗಳಿಗೆ ಅರಿವು ಪ್ರೀತಿ ಕಾಳಜಿ ಇರಬೇಕು. ಕೆಟ್ಟ ಕೆಲಸಕ್ಕೆ ಕಾನೂನು ಬಾಹಿರವಾಗಿ ಈ ಅಧಿಕಾರಿಗಳು ಹೇಗೆ ತೀವ್ರವಾಗಿ ಸ್ಪಂದಿಸಿ ಲಾಭ ಮಾಡಿಕೊಳ್ಳುತ್ತಾರೋ, ಅದೇ ರೀತಿ ಉತ್ತಮ ಕೆಲಸಕ್ಕೆ ರೂಲ್ಸುಗಳನ್ನು ಸಡಿಲಿಸಿ ಅನುಕೂಲ ಮಾಡಿಕೊಡಬೇಕು. ಆದರೆ ಇಂತಹ ಸಾಂಸ್ಕೃತಿಕ ಸೂಕ್ಷ್ಮಗಳು ಜಡ್ಡುಗಟ್ಟಿರುವ ಈ ಸ್ವಾರ್ಥ ಸಾಧಕ ಅಧಿಕಾರಿಗಳಿಗೆ ಅರ್ಥ ಆಗುವುದಿಲ್ಲ. ಅರ್ಥವಾದರೂ ಅಧಿಕಾರದ ಮದ ಮತ್ತು ಸ್ವಾರ್ಥ ಹಾಗೆ ಮಾಡಲು ಬಿಡುವುದಿಲ್ಲ. 

ಸಂಸ್ಕೃತಿ ಇಲಾಖೆಗೆ ಹೊಸದಾಗಿ ನಿರ್ದೇಶಕಿಯಾಗಿ ಬಂದ ಡಾ.ಧರಣಿದೇವಿಯವರ ಬಗ್ಗೆ ರಂಗಭೂಮಿ ಭರವಸೆ ಇಟ್ಟುಕೊಂಡಿದೆ. ಸ್ವತಃ ಸಾಹಿತಿಗಳೂ ಆಗಿರುವ ಅವರು ಸಾಂಸ್ಕೃತಿಕ ತಲ್ಲಣಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆಂಬ ನಂಬಿಕೆ ಇದೆ. ಅವರು ಈ ಕೂಡಲೇ ರಂಗಮಂದಿರದ ಕಾಯ್ದಿರಿಸುವಿಕೆಯಲ್ಲಿ ಆಗುತ್ತಿರುವ ಮ್ಯಾನ್ಯೂಪಲೇಶನ್ ಕುರಿತು ಇಂಟರ್ನಲ್ ವಿಚಾರಣೆಗೆ ಆದೇಶಿಸಿ ಈ ಬುಕ್ಕಿಂಗ್ ಸ್ಕ್ಯಾಮ್ ಷಡ್ಯಂತ್ರವನ್ನು ಬೇಧಿಸ ಬೇಕೆಂಬುದು ರಂಗಕರ್ಮಿಗಳ ಆಗ್ರಹವಾಗಿದೆ.    

‘ನಾಟಕ ಬೆಂಗಳೂರು’ ನಾಟಕೋತ್ಸವಕ್ಕೆ ರವೀಂದ್ರ ಕಲಾಕ್ಷೇತ್ರದ ಡೇಟ್ಸ್ ಗಳನ್ನು ಹೊಂದಿಸಿ ಕೊಡಬೇಕೆಂದೂ ಹಾಗೂ ನಾಟಕೋತ್ಸವದಲ್ಲಿ ಭಾಗವಹಿಸುವ ಪ್ರತಿಯೊಂದು ತಂಡಕ್ಕೂ ಪ್ರಾಯೋಜನೆ ಯೋಜನೆಯಡಿ ಅನುದಾನವನ್ನು ಮಂಜೂರು ಮಾಡುವ ಮೂಲಕ ರಂಗಭೂಮಿಗೆ ಪ್ರೋತ್ಸಾಹ ಕೊಡಬೇಕೆಂದೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು, ಕಾರ್ಯದರ್ಶಿಗಳು ಹಾಗೂ ಸಚಿವರಿಗೆ ವಿನಂತಿ. ಹೀಗೆ ಕಲಾವಿದರಿಗೆ ತೊಂದರೆ ಕೊಡುವುದು ಮುಂದುವರೆದರೆ, ಬುಕ್ಕಿಂಗ್ ಮಾಫಿಯಾ ಜೊತೆಗೆ ಅಧಿಕಾರಿಗಳ ಶಾಮೀಲಾತಿ ನಿಲ್ಲದೇ ಹೋದರೆ, ರಂಗಕರ್ಮಿಗಳೆಲ್ಲಾ ಹೋರಾಟದ ಹಾದಿ ತುಳಿಯುವುದು ಅನಿವಾರ್ಯವಾಗುತ್ತದೆ. ಅಂತಹ ಪರಿಸ್ಥಿತಿ ಬಾರದೇ ಇರಲಿ, ಸಂಸ್ಕೃತಿ ಇಲಾಖೆಯ ಸಚಿವಾಲಯ ಈ ವಿಷಯದ ಬಗ್ಗೆ ಈ ಕೂಡಲೇ ಗಮನಹರಿಸಿ ಕ್ರಮ ಕೈಗೊಳ್ಳಲಿ. ಕಲೆ ಮತ್ತು ಕಲಾವಿದರ ಹಿತರಕ್ಷಣೆಯೇ ಸಂಸ್ಕೃತಿ ಇಲಾಖೆಯ ಕಾಯಕವಾಗಲಿ.

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

ಇದನ್ನೂ ಓದಿ-ಸಂಸ್ಕೃತಿ ಇಲಾಖೆಯ ನಿರ್ದೇಶಕರ ಎತ್ತಂಗಡಿ; ಪೊಲೀಸ್ ಅಧಿಕಾರಿಣಿಗೆ ಸ್ವಾಗತ ಮಾಡಿ

You cannot copy content of this page

Exit mobile version