ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಕೊರೋನಾ ಬಂದು ಹೋದಾಗಿನಿಂದ ಜನರಲ್ಲಿ ಆರೋಗ್ಯದ ಕುರಿತು ಕಾಳಜಿ ಹೆಚ್ಚಾಗಿದೆ. ತಾವು ಸೇವಿಸುವ ಆಹಾರದ ವಿಷಯದಲ್ಲೂ ಅವರು ಸಾಕಷ್ಟು ಎಚ್ಚರಿಕೆ ವಹಿಸುತ್ತಿದ್ದಾರೆ. ತಮ್ಮ ತಟ್ಟೆಯಲ್ಲಿರುವ ತಿನಿಸು ಕೇವಲ ಹೊಟ್ಟೆ ತುಂಬಿಸಿದರೆ ಸಾಲದು, ಅದು ಆರೋಗ್ಯಕ್ಕೂ ಒಳ್ಳೆಯದಾಗಿರಬೇಕೆಂದು ಅವರು ಬಯಸುತ್ತಿದ್ದಾರೆ. ಈಗ ಎಲ್ಲೆಡೆ ಕೊಬ್ಬು ರಹಿತ ಆಹಾರಕ್ಕೆ ಬೇಡಿಕೆ ಹೆಚ್ಚುತ್ತಿದೆ.
ಕಳೆದ ಕೆಲವು ವರ್ಷಗಳಿಂದ ಓಟ್ಸ್ ಜನರು ನಡುವೆ ಹೆಚ್ಚು ಪ್ರಚಲಿತದಲ್ಲಿದೆ. ಬೆಳಗಿನ ತಿಂಡಿಗಳಾದ ಇಡ್ಲಿ, ಉಪ್ಪಿಟ್ಟು, ದೋಸೆ, ಇತ್ಯಾದಿಗಳ ಸ್ಥಳದಲ್ಲಿ ಈಗ ಓಟ್ಸ್ ಬಂದು ಕುಳಿತಿದೆ. ಈ ಓಟ್ಸ್ ನಮ್ಮ ದೇಶದ ಬೆಳೆಯಲ್ಲವಾದರೂ ಇದಕ್ಕೆ ಸಾಕಷ್ಟು ಒಳ್ಳೆಯ ಸ್ವಾಗತವೇ ದೊರಕಿದೆ ಇಲ್ಲಿ. ಇದರ ಜನಪ್ರಿಯತೆಗೆ ಅದರ ಪೌಷ್ಟಿಕ ಮೌಲ್ಯ ಹಾಗೂ ಸುಲಭ ತಯಾರಿ ಕೂಡಾ ಕಾರಣ. ಜೊತೆಗೆ ಇದು ಸುಲಭವಾಗಿ ಜೀರ್ಣವಾಗುವುದರ ಜೊತೆಗೆ ಕೊಬ್ಬನ್ನೂ ಕರಗಿಸುತ್ತದೆ ಎನ್ನಲಾಗುತ್ತದೆ. ಮತ್ತು ಆ ಮೂಲಕ ತೂಕ ಇಳಿಸುವುದಕ್ಕೂ ಸಹಾಯ ಮಾಡುತ್ತದೆ. ಇದೆಲ್ಲ ಕಾರಣಗಳಿಂದಲೋ ಏನೋ ಇಂದು ಬಹುತೇಕ ಭಾರತೀಯ ಅಡುಗೆ ಮನೆಗಳಲ್ಲಿ ಇದಕ್ಕೆ ಸ್ಥಳ ದೊರಕಿದೆ.
ಆದರೆ ನಾವು ಭಾರತೀಯರು ಏನನ್ನೇ ತಿಂದರೂ ಅದಕ್ಕೆ ಭಾರತೀಯ ಅಡುಗೆ ಶೈಲಿಯ ರುಚಿ ಬೇಕೆಂದು ಬಯುಸುತ್ತೇವೆ. ನಮಗೆ ನಮ್ಮದೇ ಆದ ಅಭಿರುಚಿಯಿದೆ. ಹಾಗಿದ್ದರೆ ಬನ್ನಿ ಈ ಓಟ್ಸ್ ಬಳಸಿ ಭಾರತದ ಬೆಳಗಿನ ತಿಂಡಿಯಾದ ಇಡ್ಲಿಯನ್ನು ಮಾಡುವುದ ಹೇಗೆಂದು ತಿಳಿಯೋಣ.
ಬೇಕಾಗುವ ಸಾಮಾಗ್ರಿಗಳು: ರೋಲ್ಡ್ ಓಟ್ಸ್ ಅಥವಾ ಇನ್‌ಸ್ಟಂಟ್ ಓಟ್ಸ್ – 1 ಕಪ್, ಅಗತ್ಯಕ್ಕೆ ತಕ್ಕಷ್ಟು ಮೊಸರು, ಎಣ್ಣೆ – 1 ಚಮಚ, ಕಡಲೆಬೇಳೆ – 1 ಟೀಸ್ಪೂನ್, ಉದ್ದಿನ ಬೇಳೆ – 1 ಟೀಸ್ಪೂನ್, ಜೀರಿಗೆ – 1 ಟೀಸ್ಪೂನ್, ಸಾಸಿವೆ – 1/2 ಟೀಸ್ಪೂನ್, ಈರುಳ್ಳಿ – 1 (ಕತ್ತರಿಸಿದ್ದು), ಹಸಿರು ಮೆಣಸಿನಕಾಯಿ – 2 (ಕತ್ತರಿಸಿದ್ದು), ಶುಂಠಿ ತುಂಡು – 1 (ಕತ್ತರಿಸಿದ್ದು), ಕ್ಯಾರೆಟ್ – 1 (ಕತ್ತರಿಸಿದ್ದು), ಕರಿಬೇವಿನ ಸೊಪ್ಪು, ಕತ್ತರಿಸಿದ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ನೀರು
ಮೊದಲು ಓಟ್ಸ್ ಅನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ನಂತರ ಅದನ್ನು ಒಂದು ದೊಡ್ಡ ಬಟ್ಟಲಿಗೆ ಸುರುವಿಕೊಳ್ಳಿ. ಅದಕ್ಕೆ ಒಂದಷ್ಟು ರೋಲ್ಡ್ ಓಟ್ಸ್ ಬೆರೆಸಿಡಿ.
ಈಗ ಗ್ಯಾಸ್ ಸ್ಟವ್ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಕಡಲೆಬೇಳೆ, ಉದ್ದಿನಬೇಳೆ ಹಾಕಿ ಹುರಿಯಿರಿ. ನಂತರ ಈರುಳ್ಳಿ, ಹಸಿಮೆಣಸಿನಕಾಯಿ, ಕರಿಬೇವಿನ ಸೊಪ್ಪು ಮತ್ತು ಶುಂಠಿ ಹಾಕಿ ಹುರಿಯಿರಿ. ಸ್ವಲ್ಪ ಹೊತ್ತು ಹುರಿದ ನಂತರ ಒಲೆಯಿಂದ ಇಳಿಸಿಟ್ಟು ತಣ್ಣಗಾಗಲು ಬಿಡಿ.
ತಣ್ಣಗಾದ ನಂತರ ಇವುಗಳನ್ನು ಓಟ್ಸ್ ಹಿಟ್ಟಿಗೆ ಹಾಕಿ ಅದಕ್ಕೆ ತುರಿದ ಕ್ಯಾರೆಟ್, ಕೊತ್ತಂಬರಿ ಸೊಪ್ಪು ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಕಲಸಿ. ನಂತರ ಕಲಕಿದ ಮೊಸರು ಸೇರಿಸಿ ಮತ್ತು ಇಡ್ಲಿ ಮಿಶ್ರಣವನ್ನು ತಯಾರಿಸಿ. ಉಪ್ಪನ್ನು ನೋಡಿ. ಐದು ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ.
ಇಡ್ಲಿ ಸ್ಟ್ಯಾಂಡ್‌ನಲ್ಲಿ ಕಲಸಿಟ್ಟ ಹಿಟ್ಟನ್ನು ಹಾಕಿ ಗ್ಯಾಸ್ ಸ್ಟೌ ಮೇಲೆ ಬೇಯಿಸಿ. ಆದರೆ ಈ ಇಡ್ಲಿಯನ್ನು 15 ನಿಮಿಷಗಳ ಕಾಲ ಕುಕ್ಕರ್ ವಿಷಲ್ ಹಾಕದೆ ಬೇಯಿಸಬೇಕು. ಇಷ್ಟೇ, ದಿಢೀರ್ ಇಡ್ಲಿ ರೆಡಿ.. ನಿಮ್ಮವರೊಂದಿಗೆ ಕುಳಿತು ಇಷ್ಟದ ಚಟ್ನಿ ಜೊತೆ ತಿನ್ನಿ