ಭಾವಪುಂಜ : ಮಾತೆಂಬುದು ಜ್ಯೋತಿರ್ಲಿಂಗ
ಲಿಂಕ್ ನಕಲಿಸಲಾಗಿದೆ ✓
“..ಮನುಷ್ಯ ಸಂಘಜೀವಿ. ತನ್ನ ಒಂಟಿತನ ಕಳೆಯಲು ದುಃಖ ಮರೆಯಲು ಮಾತಾಡುತ್ತಾ ಇರಬೇಕು. ಮಾತು ನಮ್ಮೊಳಗನ್ನು ಶುದ್ಧಿ ಮಾಡುತ್ತದೆ. ಮೌನದ ಚಿಪ್ಪಿನಲ್ಲಿ ಮಾತನ್ನು ಬಂಧಿಸಿದರೆ ಹೃದಯದ ಭಾರ ಹೆಚ್ಚುತ್ತಾ ಹೋಗುತ್ತದೆ..” ಅಶ್ವಿನಿ ಎಸ್ ಟಿ ಅವರ ಬರಹದಲ್ಲಿ
ಮಾತು ಮಾತು ಮನುಷ್ಯನಿಗೆ ದೇವರು ನೀಡಿರುವ ಉಡುಗೊರೆ. ಮಗುವಿನ ಮೊದಲ ತೊದಲ್ನುಡಿ ಯನ್ನು ಕೇಳಿ ಆನಂದಿಸದೇ ಇರಲಾರೆವು. ತೊದಲ ನುಡಿ ಕಲಿಯುವ ಮುನ್ನವೇ ಗರ್ಭದಲ್ಲೇ ತಾಯಿಯ ಮಾತನ್ನು ಆಲಿಸಿರುತ್ತದೆ. ಹಾಗೇ ಆರಂಭವಾದ ಮಾತು ,ಮನೆಯಲ್ಲೇ ಕೇಳಿದ ನುಡಿಗಳನ್ನಷ್ಟೇ ಅನುಕರಿಸುತ್ತಾ ಶಾಲೆಗೆ ಸೇರಿದ ಮೇಲೆ ಅಲ್ಲಿನ ವಾತಾವರಣದಲ್ಲಿ ಆಡುವ ಮಾತುಗಳನ್ನು ನಿಧಾನಕ್ಕೆ ತಾನೂ ಉಚ್ಛರಿಸತೊಡಗುತ್ತದೆ. ಒಳ್ಳೆಯ ಮಾತುಗಳಿಗಿಂತ ಕೆಟ್ಟ ಮಾತು ಬಲು ಬೇಗ ಕಲಿಯುವ ಮಗು ಅವೆರಡರ ವ್ಯತ್ಯಾಸಗಳನ್ನು ಗುರುತಿಸಿ ನಿಧಾನಕ್ಕೆ ಒಳ್ಳೆಯ ಮಾತುಗಳೆಡೆಗೆ ಹೊರಳುತ್ತದೆ. ಮಾತನ್ನು ಸಮರ್ಥವಾಗಿ ಆಡಲು ಭಾಷೆಯೂ ಸಾಧನ. ಯಾರೊಂದಿಗೂ ಬೆರೆಯದೆ ಕೋಣೆಯ ಕೂಸಾದರೆ ಮಗುವಿನ ಭಾಷಾಜ್ಞಾನ ವೃದ್ಧಿಸುವುದಿಲ್ಲ ಜನರೊಂದಿಗೆ ಹೆಚ್ಚೆಚ್ಚು ಬೆರೆತಷ್ಟು ಶಬ್ದಸಂಪತ್ತು ಬೆಳೆಯುತ್ತಾ ಹೋಗುತ್ತದೆ.
ಮಾತಿನಲ್ಲೂ ಹಲವು ವೈವಿಧ್ಯ. ಮೆಲು ಮಾತು, ಪಿಸುಮಾತು, ನಲ್ನುಡಿ, ಸಾಂತ್ವನದ ಮಾತು, ವ್ಯಂಗ್ಯ ಭರಿತ ಮಾತು,ಚುಚ್ಚು ಮಾತು. ಮಾತಿಂಗೆ ಮಾತು ಬೆಳೆದರೆ ಗೆಳೆತನ ಮಾತಿಗೆ ಮಾತು ಮಥಿಸಿದರೆ ಹಗೆತನ. ಮಾತು ಬೆಳ್ಳಿ ಮೌನ ಬಂಗಾರ ಎನ್ನುವ ಗಾದೆ ಎಲ್ಲಾ ಕಡೆಯಲ್ಲೂ ಉಪಯೋಗಕ್ಕೆ ಬರುವುದಿಲ್ಲ. ಸನ್ನಿವೇಶವನ್ನು ಸಶಕ್ತಗೊಳಿಸಲು ಮಾತು ಪ್ರಾಧಾನ್ಯತೆ ಹೊಂದುತ್ತದೆ. ಪ್ರೇಮಿಗಳ ನಡುವಿನ ಮೆಲು ಮಾತು ಪಿಸುಮಾತು ಶೃಂಗಾರಕ್ಕೆ ನಾಂದಿ ಹಾಡುತ್ತದೆ. ಜಗಳಕ್ಕೆಡೆ ಮಾಡುವಲ್ಲಿ ಕರ್ಕಶಭರಿತ ಮಾತೇ ಮುಂದಾಗಿರುತ್ತದೆ.”ಮಾತು ಮಾತು ಮಸಿದರೆ ಕಾದಾಡದೆ ಮಾಣರು” ಎಂಬ ನಾಣ್ಣುಡಿಯಂತೆ ಅನಾವಶ್ಯಕ ಮಾತುಗಳಿಂದ ವಾದ ಬೆಳೆಸುವ ಬದಲು ಮಾತನ್ನು ಜಾಣ್ಮೆಯಿಂದ ಆಡಿದರೆ ಜಗಳವೇ ಬರುವುದಿಲ್ಲ. ಕೆಲವರ ಮಾತುಗಳು ಮೊನಚಾಗಿ ವ್ಯಂಗ್ಯ ಭರಿತವಾಗಿಯೂ ಇದ್ದಾಗ ವೃಥಾ ವೈಮನಸ್ಸು ಬೆಳೆಯುತ್ತದೆ. ಯಾರೋ ನುಡಿಯುವ ಚುಚ್ಚು ಮಾತು ಸವಾಲಾಗಿ ಸ್ವೀಕರಿಸಿ ಯಶಸ್ಸನ್ನು ಏರಿರುವ ಬಗೆಯನ್ನು ನೋಡಿರುತ್ತೇವೆ. ಅದೇ ಚುಚ್ಚು ಮಾತು ಮನದೊಳಗೆ ಗೂಡು ಕಟ್ಟಿ ಹೊಗೆಯಾಡಿ ವಿಪರೀತಕ್ಕೂ ಎಡೆ ಮಾಡಿಕೊಡುತ್ತದೆ.
ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದೀಪ್ತಿಯಂತಿರಬೇಕು
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು
ನುಡಿಯೊಳಗಾಗಿ ನಡೆಯದಿದ್ದರೆ
ಕೂಡಲಸಂಗಮದೇವನೆಂತೊಲಿವನಯ್ಯಾ
ಬಸವಣ್ಣನವರ ಈ ವಚನದಲ್ಲಿ ಮಾತು ಹೇಗಿರಬೇಕೆಂದು ತಿಳಿಸುತ್ತದೆ. ಸಮಾಜವನ್ನು ಕಟ್ಟಲು ಈ ವಚನ ಸಹಕಾರಿಯಾಗಿದೆ. ಸರ್ವರಲ್ಲಿಯೂ ಸದಾಶಯ ಮೂಡಿಸಬೇಕೆಂಬ ಆಶಯ ಈ ವಚನದಲ್ಲಿ ವ್ಯಕ್ತವಾಗಿದೆ.
ಮುತ್ತಿನ ಹಾರ:ಸಾಗರದ ಆಳದಲ್ಲಿ ರೂಪುಗೊಳ್ಳುವ ಸಾವಧಾನವಾಗಿ ಹರಳುಗಟ್ಟುವ ಮುತ್ತು ತನ್ನ ಸಾಂದ್ರತೆ ಗೆ ಹೆಸರುವಾಸಿ. ಹಾಗೆಯೇ ಮಾತು ವಿಚಾರವಂತಿಕೆಯಿಂದ ಬೆಳೆದು ಗಟ್ಟಿತನದಿಂದೊಡಗೂಡಿ ಅರ್ಥಗರ್ಭಿತವಾಗಿರಬೇಕು. ಅಸಂಬದ್ಧವಾಗಿಯೂ ಅನಾವಶ್ಯಕವಾಗಿಯೂ ಇರಕೂಡದು. ಪದಗಳು ಪೋಣಿಸಿದಂತೆ ತರ್ಕ ವಿಚಾರಗಳಿರಬೇಕು ಎನ್ನುವುದು ಇದರ ಅರ್ಥ.
ಮಾಣಿಕ್ಯದದೀಪ್ತಿ: ಮಾಣಿಕ್ಯವು ಪ್ರಕಾಶಮಾನವಾಗಿ ಹೊಳೆಯುತ್ತಿರುತ್ತದೆ. ಹಾಗೆಯೇ ನಾವು ನುಡಿದ ನುಡಿ ಜ್ಞಾನದ ದೀಪದಂತೆ ತಿಳಿವಿನ ಹೊಳಹು ಸೂಸುತ್ತಿರಬೇಕು.
ಸ್ಫಟಿಕದ ಶಲಾಕೆಯಂತಿರಬೇಕು: ಸ್ಫಟಿಕವು ಶುದ್ಧತೆಯ ಸಂಕೇತ. ಹಾಗೆಯೇ ಸ್ಫುಟವಾದ ಮಾತು,ಸುತ್ತುಬಳಸು ,ವಕ್ರತೆ, ಅನರ್ಥಗಳಿಲ್ಲದೆ ಶಲಾಕೆಯ ಹಾಗೆ ನೇರವಾಗಿ ಕೇಳುಗರ ಎದೆ ಮುಟ್ಟುವಂತಿರಬೇಕು ಎಂಬುದು ಈ ವಚನದ ಆಶಯ.
ಮೃದು ವಚನಗಳೇ ಸಕಲ ತಪಂಗಳೈಯ್ಯ ಎನ್ನುವ ವಚನವೂ ಮಾತಿನ ಹಿರಿಮೆಯನ್ನು ಸಾರುತ್ತದೆ. ಮಾತು ಆಡುವಾಗ ದೇವರು ಕೂಡ ಮೆಚ್ಚಿ ಅಹುದೆನಬೇಕು. ನುಡಿದಂತೆ ನಡೆಯದಿದ್ದರೆ ಕೂಡಲಸಂಗಮದೇವನು ಒಲಿಯುವುದಿಲ್ಲ ಎಂದು ಬಸವಣ್ಣನವರು ಈ ವಚನದಲ್ಲಿ ಹೇಳಿದ್ದಾರೆ.
ಇತ್ತೀಚೆಗೆ ಮಾತನ್ನು ಕಲಿಸುವ training centre ಗಳು ಬಂದಿವೆ. ನಿರೂಪಣೆಗೆ ಒಗ್ಗುವಂತೆ ಮಾತನ್ನು ನಿಧಾನಿಸಿ ಧ್ವನಿಯ ಏರಿಳಿತಗಳನ್ನು ಸಮತಟ್ಟಾಗಿ ನಿರ್ವಹಿಸುವಂತೆ ಹೇಳಿಕೊಡುತ್ತಾರೆ. ರಂಗಭೂಮಿಯ ಮೊದಲ ಪಾಠವೇ ಸಂಭಾಷಣೆ, ವ್ಯಾಕರಣ ಶುದ್ಧವಾದ ಮಾತು ನಂತರವೇ ಬಣ್ಣ ಹಚ್ಚುವುದು.
ಆದರೆ ಜೀವನದಲ್ಲಿ ಯಾವ ಮಾತನ್ನು ಎಲ್ಲಿ ಆಡಬೇಕು ಎಂಬ ಜಾಣ್ಮೆ ಮರೆತುಬಿಡುತ್ತೇವೆ ಕೆಲವು ಬಾರಿ. ಜ್ಜ್ಞಾನಿಗಳ ಮಾತು ಅನುಭವ ಪೂರ್ಣವಾಗಿರುತ್ತದೆ. ಕತ್ತಲಲ್ಲಿರುವವರಿಗೆ ಬೆಳಕನ್ನಿತ್ತು ಅವರ ಬಾಳು ನಂದನವಾಗುತ್ತದೆ. ಅವರ ಮಾತೇ ಮಂತ್ರದಂತೆ ಕೆಲಸ ಮಾಡುತ್ತದೆ. ಕೆಲವರ ಸಕ್ಕರೆಯ ಮಾತುಗಳು ಆ ಕ್ಷಣ ಕ್ಕೆ ಸವಿಯೆನಿಸಿದರೂ ನಂತರ ಟೊಳ್ಳೆನಿಸುತ್ತವೆ.
ಮನುಷ್ಯ ಸಂಘಜೀವಿ. ತನ್ನ ಒಂಟಿತನ ಕಳೆಯಲು ದುಃಖ ಮರೆಯಲು ಮಾತಾಡುತ್ತಾ ಇರಬೇಕು. ಮಾತು ನಮ್ಮೊಳಗನ್ನು ಶುದ್ಧಿ ಮಾಡುತ್ತದೆ. ಮೌನದ ಚಿಪ್ಪಿನಲ್ಲಿ ಮಾತನ್ನು ಬಂಧಿಸಿದರೆ ಅಲ್ಲಿ ದುಮ್ಮಾನ ಹೆಚ್ಚಾಗಿ ಹೆಪ್ಪುಗಟ್ಟಿ ಹೃದಯದ ಭಾರ ಹೆಚ್ಚುತ್ತಾ ಹೋಗುತ್ತದೆ. ಇದರಿಂದ ನಮ್ಮ ಆರೋಗ್ಯವೂ ಏರುಪೇರಾಗುತ್ತದೆ. ಕನ್ನಡದ ಬಹುತೇಕ ಗಾದೆಗಳು ಮಾತಿಗೆ ಸಂಬಂಧಿಸಿದಂತೆ ಇವೆ. ಮಾತು ಜ್ಯೋತಿರ್ಲಿಂಗದಂತೆ ಪ್ರಜ್ವಲಿಸುತ್ತಾ ಬೆಳಕು ನೀಡಿ ಸನ್ಮಾರ್ಗದಲ್ಲಿ ನಡೆಸಿ ಸನ್ನಡತೆ ಕಲಿಸುತ್ತಾ ಹೋಗಬೇಕು. ಮಾತು ಮುತ್ತಿನ ಹಾರದಂತಿರಬೇಕು. ಸುಂದರ ಮುತ್ತನ್ನು ಆಯ್ದು ತಂದು ಹಾರ ಪೋಣಿಸಿದ ಹಾಗೇ ಮಾತನ್ನು ಹೆಕ್ಕಿ ತೆಗೆದು ಪೋಣಿಸಿ ಸುಂದರ ಕಾವ್ಯದಂತೆ ಸೃಷ್ಟಿಸುವುದು ನಮ್ಮ ಕೈಯಲ್ಲೇ ಇದೆ.
Peepal Media Desk
Peepal Media · ಅಂಕಣ ವಿಭಾಗ