ಹಾಸನ: ಅರಸೀಕೆರೆ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಾಯ ಕೇಳಿಬಂದಿರುವ ಬಗ್ಗೆ ಈ ವಿಷಯದಲ್ಲಿ ತಮ್ಮ ವೈಯಕ್ತಿಕ ತೀರ್ಮಾನವೇನೂ ಇಲ್ಲ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಗೂ ಎಚ್.ಡಿ. ಕುಮಾರಸ್ವಾಮಿ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ತಿಳಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಇಂದು ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಜ.24ರಂದು ಹಾಸನದಲ್ಲಿ ಜೆಡಿಎಸ್ ಪಕ್ಷದ ಬೃಹತ್ ಕಾರ್ಯಕರ್ತರ ಸಮಾವೇಶವನ್ನು ಆಯೋಜಿಸಲಾಗಿದೆ. ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಸಮಾವೇಶ ನಡೆಸಲಾಗುತ್ತಿದೆ ಎಂದು ಹೇಳಿದರು. ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸುರೇಶ್‌ಬಾಬು ಸೇರಿದಂತೆ ಜೆಡಿಎಸ್‌ನ ಎಲ್ಲಾ ಹಾಲಿ ಹಾಗೂ ಮಾಜಿ ಶಾಸಕರು ಭಾಗವಹಿಸಲಿದ್ದಾರೆ. ಈ ಸಮಾವೇಶಕ್ಕೆ ಸುಮಾರು ಒಂದೂವರೆ ಇಂದ ಎರಡುವರೆ ಲಕ್ಷ ಜನ ಸೇರುವ ನಿರೀಕ್ಷೆಯಿದೆ ಎಂದರು.
ಸಮಾವೇಶದ ಸ್ಥಳದ ಕುರಿತು ಮಾತನಾಡಿದ ಅವರು, ಕೆಐಎಡಿಬಿಗೆ ಅಗತ್ಯ ಶುಲ್ಕವನ್ನು ಈಗಾಗಲೇ ಪಾವತಿಸಲಾಗಿದೆ. ಜಿಲ್ಲಾಡಳಿತ ಹಾಗೂ ಕೆಐಎಡಿಬಿ ಯಾವ ಸ್ಥಳವನ್ನು ಸೂಚಿಸುತ್ತವೆಯೋ ಅಲ್ಲಿ ಸಮಾವೇಶ ನಡೆಸಲಾಗುವುದು. ಐದು ಲಕ್ಷ ರೂ. ಶುಲ್ಕ ಕೇಳಲಾಗಿದ್ದು, ಅದರಲ್ಲಿ ಒಂದು ಲಕ್ಷ ರೂ. ಮುಂಗಡವಾಗಿ ಪಾವತಿಸಲಾಗಿದೆ. ಕೆಐಎಡಿಬಿಯವರು ಸೂಚಿಸುವ ಸ್ಥಳದಲ್ಲಿಯೇ ಸಮಾವೇಶ ನಡೆಸಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅರಸೀಕೆರೆ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಾಯ ಕೇಳಿಬಂದಿರುವ ಕುರಿತು ಪ್ರತಿಕ್ರಿಯಿಸಿದ ಎಚ್.ಡಿ. ರೇವಣ್ಣ, ಈ ವಿಷಯದಲ್ಲಿ ತಮ್ಮ ವೈಯಕ್ತಿಕ ತೀರ್ಮಾನವೇನೂ ಇಲ್ಲ. ಎಚ್.ಡಿ. ದೇವೇಗೌಡರು ಹಾಗೂ ಎಚ್.ಡಿ. ಕುಮಾರಸ್ವಾಮಿ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ ಎಂದು ಹೇಳಿದರು.
ರಾಷ್ಟ್ರೀಯ ಅಧ್ಯಕ್ಷರು ಮತ್ತು ರಾಜ್ಯಾಧ್ಯಕ್ಷರು ಯಾವ ಕ್ಷೇತ್ರದಿಂದ ಸ್ಪರ್ಧಿಸು ಎಂದು ಹೇಳುತ್ತಾರೋ, ಅದೇ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದರು. ಅರಸೀಕೆರೆ ಕ್ಷೇತ್ರದ ಮುಖಂಡರು ತಮ್ಮನ್ನು ಭೇಟಿಯಾಗಿ ಸ್ಪರ್ಧಿಸುವಂತೆ ಒತ್ತಾಯಿಸಿದ್ದಾರೆ. ಆದರೆ ಈಗಲೇ ಯಾವ ಕ್ಷೇತ್ರದಿಂದ ನಿಲ್ಲುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ. ಹೊಳೆನರಸೀಪುರ ಕ್ಷೇತ್ರದ ಜನತೆ ಆರು ಬಾರಿ ತಮ್ಮನ್ನು ಗೆಲ್ಲಿಸಿದ್ದು, ತಮಗೆ ಮಾತ್ರವಲ್ಲದೆ ಪ್ರಜ್ವಲ್ ಹಾಗೂ ಸೂರಜ್ ಅವರಿಗೆ ಸಹ ಶಕ್ತಿ ಹಾಗೂ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.
ಜಿಲ್ಲೆಯನ್ನು ರಾಜ್ಯದಲ್ಲಿ ಮೊದಲ ಸ್ಥಾನಕ್ಕೆ ತೆಗೆದುಕೊಂಡು ಹೋಗುವುದು ನಮ್ಮ ಗುರಿಯಾಗಿದೆ. ನಾವು ಪಕ್ಷವನ್ನು ಬೆಳೆಸುತ್ತೇವೆ, ಆದರೆ ರಾಷ್ಟ್ರೀಯ ಪಕ್ಷಗಳು ನಾವು ಬೆಳೆಸಿದ ನಾಯಕರನ್ನು ಕರೆದುಕೊಂಡು ಹೋಗಿ ಚುನಾವಣೆಗೆ ನಿಲ್ಲಿಸುತ್ತವೆ ಎಂದು ಪರೋಕ್ಷವಾಗಿ ಗೃಹಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ವಿರುದ್ಧ ಕಿಡಿಕಾರಿದರು. ಸುದ್ದಿಗೋಷ್ಠಿಯಲ್ಲಿ ಶಾಸಕ ಹೆಚ್.ಪಿ. ಸ್ವರೂಪ್, ಜೆಡಿಎಸ್ ಮುಖಂಡ ಹೊನ್ನವಳ್ಳಿ ಸತೀಶ್, ಬಿದರಿಕೆರೆ ಜಯರಾಂ ಇತರರು ಉಪಸ್ಥಿತರಿದರು.
