ಕಾರ್ಕಳ: ಮಹಾರಾಷ್ಟ್ರದಲ್ಲಿ ಶಿವಾಜಿ ಪ್ರತಿಮೆ ಉರುಳಿ ಬಿದ್ದ ಪ್ರಕರಣ ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ನಿನ್ನೆ ಮಹಾರಾಷ್ಟ್ರಕ್ಕೆ ಆಗಮಿಸಿದ ಮೋದಿ ಈ ವಿಷಯವಾಗಿ ಮರಾಠಿಗರ ಕ್ಷಮೆ ಕೇಳಿದ್ದಾರೆ. ಸದ್ಯದಲ್ಲೇ ವಿಧಾನಸಭೆ ಚುನಾವಣೆ ಇರುವ ಹಿನ್ನೆಲೆಯಲ್ಲಿ ಮೂರ್ತಿ ಉರುಳಿ ಬಿದ್ದ ಘಟನೆ ಮಹಾರಾಷ್ಟ್ರದಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.
ಉದ್ಧವ್ ಠಾಕ್ರೆ ಬಣದ ಶಿವಸೇನೆ ಹಾಗೂ ಶರದ್ ಪವಾರ್ ಅವರ ಎನ್‌ಸಿಪಿ ಎರಡೂ ಬಿಜೆಪಿ ಹಾಗೂ ಮುಖ್ಯಮಂತ್ರಿ ಶಿಂಧೆಯವರ ಮೇಲೆ ಮುಗಿಬೀಳುತ್ತಿವೆ. ಸ್ಥಳೀಯ ಸರ್ಕಾರ ಡ್ಯಾಮೇಜ್ ಕಂಟ್ರೋಲ್ ಸಲುವಾಗಿ ಈಗಾಗಲೇ ಈ ಕುರಿತು ತನಿಗೆ ಆದೇಶಿಸಿದೆ. ಮತ್ತು ಈ ನಿಟ್ಟಿನಲ್ಲಿ ಒಂದು ಬಂಧನವೂ ಆಗಿದೆ. ಮೂರ್ತಿ ತಯಾರಿಸಲು ವಿನ್ಯಾಸದ ಸಲಹೆ ನೀಡಿದ್ದರೆನ್ನಲಾದ ವ್ಯಕ್ತಿಯೊಬ್ಬರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಆದರೆ ಇದೆಲ್ಲ ಕಣ್ಣೊರೆಸುವ ತಂತ್ರ ಎಂದು ವಿಪಕ್ಷಗಳು ಆಡಳಿತ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ.
ಇತ್ತ ಮೋಇ ನಿನ್ನೆ ಮಹಾರಾಷ್ಟ್ರದಲ್ಲಿ “ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿತ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ, ಮರಾಠಿಗರ ಕ್ಷಮೆ ಕೋರಿದ್ದಾರೆ.
2013ರಲ್ಲಿ ನನ್ನನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಜೆಪಿ ಘೋಷಿಸಿದ ಕೂಡಲೇ ರಾಯಗಢದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಸಮಾಧಿಯ ಮುಂದೆ ಭಕ್ತನಾಗಿ ಕುಳಿತಿದ್ದೆ. ನನ್ನ ರಾಜಕೀಯ ಪ್ರಯಾಣ ಅಲ್ಲಿಂದಲೇ ಆರಂಭವಾಯಿತು” ಎಂದು ಹೇಳಿದ್ದಾರೆ.
ಆದರೆ ಈ ನಡುವೆ ಕರ್ನಾಟಕದಲ್ಲೂ ಇಂತಹದ್ದೇ ಒಂದು ಘಟನೆ ನಡೆದಿದೆ. ಕಾರ್ಕಳದಲ್ಲಿ ತರಾತುರಿಯಲ್ಲಿ ಪರಶುರಾಮನ ಮೂರ್ತಿಯೊಂದನ್ನು ನೆಟ್ಟು ನಂತರ ಅದರ ಸುರಕ್ಷತೆಯ ಕುರಿತು ಅನುಮಾನಗಳು ಮೂಡಿ ಅದನ್ನು ಕಿತ್ತು ತೆಗೆಯಲಾಯಿತು.
ಈಗ ಆ ಮೂರ್ತಿ ಕಂಚಿನದ್ದೇ ಅಲ್ಲ ಎನ್ನುವ ಚರ್ಚೆಗಳೂ ಮುನ್ನೆಲೆಗೆ ಬಂದಿವೆ. ಕಾಂಗ್ರೆಸ್ ಕಾರ್ಯಕರ್ತರು ಸ್ಥಳೀಯವಾಗಿ ಈ ಕುರಿತು ದೊಡ್ಡ ಹೋರಾಟವನ್ನೇ ನಡೆಸಿದ್ದರಾದರೂ, ರಾಜ್ಯಮಟ್ಟದ ನಾಯಕರ ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ಈ ವಿಷಯ ಹೆಚ್ಚು ಬೆಳೆಯದಂತೆ ನೋಡಿಕೊಂಡಿತು.
ಇದೆಲ್ಲದರ ನಡುವೆ ಮೂಡುವ ಪ್ರಶ್ನೆಯೆಂದರೆ ಮಹಾರಾಷ್ಟ್ರದಲ್ಲಿ ಪ್ರತಿಮೆ ತಯಾರಿಕೆಯಲ್ಲಿ ಎಡವಟ್ಟಾದರೆ ದೇಶದ ಪ್ರಧಾನಿಯೇ ಆ ರಾಜ್ಯದ ಕ್ಷಮೆ ಕೇಳುತ್ತಾರೆಂದಾರೆ, ಕಾರ್ಕಳದಲ್ಲಿ ನಡೆದ ಘಟನೆಯಲ್ಲಿ ಆ ಕ್ಷೇತ್ರದ ಶಾಸಕರ ಪಾತ್ರವಿಲ್ಲವೆ? ಅವರು ಈ ಕುರಿತು ಕ್ಷಮೆ ಕೇಳಬೇಕಿಲ್ಲವೆ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.
ಹಾಗೊಂದು ವೇಳೆ ಕ್ಷಮೆ ಕೇಳುವುದಿಲ್ಲವಾದರೆ ರಾಜ್ಯದ ಜನರನ್ನು ಬಿಜೆಪಿ ಅಗ್ಗವಾಗಿ ತೆಗೆದುಕೊಂಡಿದೆ ಎಂದೇ ಅರ್ಥವಲ್ಲವೆ ಎಂದು ಓರ್ವ ಪೀಪಲ್ ಮೀಡಿಯಾ ಓದುಗರು ಪ್ರಶ್ನಿಸಿದ್ದಾರೆ.