ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ತಪ್ಪಿದ ಕಾರಣಕ್ಕೆ ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರ ಮೇಲೆ ಇನ್ನೂ ಸಹ ಹಗೆ ಇಟ್ಟುಕೊಂಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಕಂಡಕಂಡಲ್ಲಿ ಅವರ ಮೇಲಿನ ಆಕ್ರೋಶ ಹೊರಹಾಕುತ್ತಿದ್ದಾರೆ. ಇಂದೂ ಸಹ ಪಕ್ಷದ ವೇದಿಕೆಯಲ್ಲೇ ಪರೋಕ್ಷವಾಗಿ ವಿಜಯೇಂದ್ರ ವಿರುದ್ಧ ತಿರುಗಿ ನಿಂತ ಪ್ರತಾಪ್ ಸಿಂಹ ಪಕ್ಷದ ವರಿಷ್ಠರಿಗೆ ಪಕ್ಷದೊಳಗಿನ ಆಂತರಿಕ ಕಲಹದ ಬಗ್ಗೆ ಬಹಿರಂಗಪಡಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ನಡೆದ ಆರ್ಎಸ್ಎಸ್ ಹಾಗೂ ಬಿಜೆಪಿ ಸಭೆಯಲ್ಲಿ ವಿಜಯೇಂದ್ರ ಮೇಲೆ ಅಸಮಾಧಾನ ಹೊರಹಾಕಿದ ಪ್ರತಾಪ್ ಸಿಂಹ, ಪಕ್ಷದಲ್ಲಿ ನಡೆಯುತ್ತಿರುವ ಕೆಲ ವಿಚಾರಗಳ ಬಗ್ಗೆ ಪ್ರಶ್ನೆ ಮಾಡಿದರೆ ನಮ್ಮನ್ನೇ ಬೇರೆ ರೀತಿಯಾಗಿ ನೋಡೋದು ಏಕೆ. ಪಕ್ಷ ಮುನ್ನಡೆಸೋರು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯಬೇಕೇ ಹೊರತು, ಹಿತ್ತಾಳೆ ಕಿವಿ ಹೊಂದಿರಬಾರದು ಎಂದು ಪರೋಕ್ಷವಾಗಿ ವಿಜಯೇಂದ್ರ ನಾಯಕತ್ವದ ವಿರುದ್ಧ ಮಾತನಾಡಿದ್ದಾರೆ.
ಹಿಂದುತ್ವ ಸಿದ್ಧಾಂತ ಪರ ಸಮರ್ಥನೆ ಮಾಡಿಕೊಂಡಿದ್ದೇ ತಪ್ಪಾಯ್ತಾ. ಟಿಕೆಟ್ ಕೊಡದಿರುವುದಕ್ಕೆ ಕಾರಣವೇ ಇಲ್ಲ, ಆದರೂ ಟಿಕೆಟ್ ಕೈತಪ್ಪಿಸಲಾಯಿತು. ಪಕ್ಷದ ಕೆಲ ಹಿಂದುತ್ವ ಸಮರ್ಥಕರಿಗೂ ಟಿಕೆಟ್ ಕೊಟ್ಟಿಲ್ಲ. ನಾವ್ಯಾರೂ ಹೊಂದಾಣಿಕೆ ಮಾಡಿಕೊಳ್ಳುವವರಲ್ಲ ಅಂತಾ ಟಿಕೆಟ್ ಕೊಡಲಿಲ್ಲವೇ ಎಂದು ಆಕ್ರೋಶ ಹೊರಹಾಕಿದರು.