Home ಬ್ರೇಕಿಂಗ್ ಸುದ್ದಿ ಪಠ್ಯ ಪುಸ್ತಕ ವಿವಾದ : ಅನುಮತಿ ಹಿಂಪಡೆದ ಲೇಖಕರ ಪಾಠಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸದಂತೆ ರಾಜ್ಯ ಸರ್ಕಾರ...

ಪಠ್ಯ ಪುಸ್ತಕ ವಿವಾದ : ಅನುಮತಿ ಹಿಂಪಡೆದ ಲೇಖಕರ ಪಾಠಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸದಂತೆ ರಾಜ್ಯ ಸರ್ಕಾರ ಆದೇಶ

0

ಬೆಂಗಳೂರು: ಪಠ್ಯ ಪುಸ್ತಕ ವಿವಾದದಲ್ಲಿ ಅನುಮತಿ ಹಿಂಪಡೆದಿದ್ದ ಲೇಖಕರ ಪಾಠಗಳನ್ನು ಬೋಧನೆ, ಕಲಿಕೆ, ಮತ್ತು ಮೌಲ್ಯಮಾಪನಕ್ಕೆ ಪರಿಗಣಿಸದಂತೆ ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಕೆಲವು ತಿಂಗಳುಗಳ ಹಿಂದೆ ನಡೆದ ಪಠ್ಯಪುಸ್ತಕ ರಚನಾ ಸಮಿತಿಯ ವಿವಾದದ ಹಿನ್ನೆಲೆಯಲ್ಲಿ ಹಲವು ಲೇಖಕರು ಪಠ್ಯ ಪುಸ್ತಕದಲ್ಲಿ ತಮ್ಮ ಲೇಖನ, ಕವಿತೆ, ಬರಹ ಇತ್ಯಾದಿಯನ್ನು ಬಳಸಿಕೊಳ್ಳಲು ನೀಡಿದ್ದ ಅನುಮತಿಯನ್ನು ಹಿಂಪಡೆದಿದ್ದರು. ಇದೇ ಹಿನ್ನಲೆಯಲ್ಲಿ ದೇವನೂರು ಮಹಾದೇವರವರು ಸರ್ಕಾರಕ್ಕೆ, ತಮ್ಮ ಬರಹವನ್ನು ಪಠ್ಯಪುಸ್ತಕದಲ್ಲಿ ಬಳಸದಿರಲು ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಶಿಕ್ಷಣ ಸಚಿವ ಬಿ ಸಿ ನಾಗೇಶ್ ರವರು, ತಮಗೆ ಅಂತಹ ಯಾವುದೇ ಪತ್ರ ಬಂದು ತಲುಪಿಲ್ಲ ಎಂದು ಹೇಳಿಕೆ ನೀಡಿದ್ದರು. ತಮ್ಮ ಈಗ ಸರಕಾರ ಅವರಲ್ಲಿ ಕೆಲವು ಲೇಖಕರ ಪಾಠಗಳನ್ನು ಬಳಸಿಕೊಳ್ಳದಂತೆ ಆದೇಶ ನೀಡಿದೆ.

ಕುವೆಂಪು, ನಾಡಧ್ವಜ ಹೀಗೆ ಹಲವು ವಿಷಯಗಳಲ್ಲಿ ಕಿಡಿಗೇಡಿತನವನ್ನು ತೋರಿಸಿದ್ದ ವ್ಯಕ್ತಿಯನ್ನು ಸರಕಾರ ಪಾಠಪುಸ್ತಕ ಪರಿಶೀಲನೆ ಸಮಿತಿಗೆ ಅಧ್ಯಕ್ಷನಾಗಿ ನೇಮಿಸಿದ ಹಿನ್ನೆಲೆಯಲ್ಲಿ ವಿವಾದ ಉಂಟಾಗಿ ನಾಡಿನ ಪ್ರಜ್ಞಾವಂತರು ಈ ನೇಮಕಾತಿಯ ವಿರುದ್ಧ ಹೋರಾಟ ನಡೆಸಿದ್ದರು. ಹಲವು ಕಣ್ಣೊರೆಸುವ ತಂತ್ರಗಳನ್ನು ನಡೆಸಿದ ಸರಕಾರ ಕೊನೆಗೂ ತನ್ನ ಸ್ಪಷ್ಟ ನಿಲುವನ್ನು ಹೇಳಿರಲಿಲ್ಲ.

ಏನಿದು ಪಠ್ಯಪುಸ್ತಕ ವಿವಾದ ?

ಸರ್ಕಾರವು ನೇಮಿಸಿದ್ದ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯು ಮಾಡಿದ ಬದಲಾವಣೆಯ ಪ್ರಕಾರ, ರಾಷ್ಟ್ರ ಕವಿ ಕುವೆಂಪು, ಬಸವಣ್ಣನವರ ಬರಹಗಳನ್ನು ತಿರುಚಲಾಗಿತ್ತು ಮತ್ತು ನಾಡಗೀತೆಗೆ ಅವಮಾನ ಮಾಡಲಾಗಿತ್ತು. ಜೊತೆಗೆ ಭಗತ್ ಸಿಂಗ್, ನಾರಾಯಣಗುರು, ಪೆರಿಯಾರ್ ಸೇರಿದಂತೆ, ಹಲವು ಪಠ್ಯಗಳನ್ನು ಪಠ್ಯಪುಸ್ತಕದಿಂದ ಕೈ ಬಿಡಲಾಗಿತ್ತು. ಈ ಮೂಲಕ ನಾಡು ಕಟ್ಟುವಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಹಲವಾರು ಸಾಮಾಜಿಕ ಕ್ರಾಂತಿಕಾರರ, ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಎಸಗಲಾಗಿತ್ತು. ಈ ಹಿನ್ನಲೆಯಲ್ಲಿ ರಾಜ್ಯದ ಹಲವಾರು ಗಣ್ಯರು, ಸಾಹಿತಿಗಳು, ಲೇಖಕರು, ಶಿಕ್ಷಣ ತಜ್ಞರು, ಲಿಂಗಾಯತ, ಒಕ್ಕಲಿಗ ಸಮಾಜ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ, ಹಲವಾರು ಸಂಘಸಂಸ್ಥೆಗಳು, ತೀವ್ರ ಹೋರಾಟ ಮಾಡಿದ್ದವು.

ರಾಜ್ಯದ ಜನರ ಒತ್ತಡಕ್ಕೆ ಮಣಿದ ಸರ್ಕಾರ, ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯಲ್ಲಿನ ಕೆಲವು ತಪ್ಪುಗಳನ್ನು ಪರೋಕ್ಷವಾಗಿ ಒಪ್ಪಿಕೊಂಡು, ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯನ್ನು ವಿಸರ್ಜಿಸಿತ್ತು. ಆದರೆ, ಇಷ್ಟೆಲ್ಲಾ ಲೋಪದೋಷಗಳ ನಡುವೆಯೂ ಪಠ್ಯಪುಸ್ತಕ ಪರಿಷ್ಕರಣೆಗೆ ನೇರವಾಗಿ ಮಣೆ ಹಾಕಿತ್ತು.

ಪ್ರಸ್ತುತ 10ನೇ ತರಗತಿಯ ಪ್ರಥಮ ಭಾಷೆ ಕನ್ನಡ ಪುಸ್ತಕದ ದೇವನೂರು ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ (ಗದ್ಯ), 10ನೇ ತರಗತಿಯ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕದಲ್ಲಿನ ‘ಭಗತ್ ಸಿಂಗ್’ (ಪೂರಕ ಗದ್ಯ) ಡಾ. ಜಿ. ರಾಮಕೃಷ್ಣ, 9ನೇ ತರಗತಿಯ ತೃತೀಯ ಭಾಷೆ ಕನ್ನಡ ಪುಸ್ತಕದ ‘ಅಮ್ಮನಾಗುವುದೆಂದರೆ’ (ಪೂರಕ ಪದ್ಯ) ರೂಪ ಹಾಸನ, 10ನೇ ತರಗತಿಯ ಕನ್ನಡ ತೃತೀಯ ಭಾಷೆಯ ಪುಸ್ತಕದ ‘ಹೀಗೊಂದು ಟಾಪ್ ಪ್ರಯಾಣ’ (ಪೂರಕ ಗದ್ಯ) ಈರಪ್ಪ ಎಂ. ಕಂಬಳಿ, 10ನೇ ತರಗತಿಯ ತೃತೀಯ ಭಾಷೆ ಪುಸ್ತಕದ ‘ಕಟ್ಟತೇವ ನಾವು’ (ಪದ್ಯ) ಸತೀಶ್ ಕುಲಕರ್ಣಿ, 10ನೇ ತರಗತಿಯ ದ್ವೀತಿಯ ಭಾಷೆ ಕನ್ನಡ ಪುಸ್ತಕದ ‘ಏಣಿ’ (ಪದ್ಯ) ಸುಕನ್ಯಾ ಮಾರುತಿ, ಮತ್ತು ಆರನೇ ತರಗತಿಯ ಪ್ರಥಮ ಭಾಷೆ ಕನ್ನಡ ಪುಸ್ತಕದ ಡಾ. ರಾಜ್ಕುಮಾರ್ (ಗದ್ಯ) ದೊಡ್ಡ ಹುಲ್ಲೂರು ರುಕ್ಕೋಜಿ ರಾವ್ ಇವರ ಪಾಠಗಳನ್ನು ಬಳಸದಂತೆ ಇಲಾಖೆ ಆದೇಶ ಹೊರಡಿಸಿದೆ

You cannot copy content of this page

Exit mobile version