ಕೊಪ್ಪಳ : ನನ್ನ ಜೀವನದಲ್ಲೇ ನಾನು ಕಾಂಗ್ರೆಸ್ಗೆ ಹೋಗಲ್ಲ, ಮುಂದಿನ ಜನ್ಮವಂತಿದ್ದರೆ ಆಗಲೂ ಕಾಂಗ್ರೆಸ್ ಸೇರಲ್ಲ ಎಂದು ಬಿಜೆಪಿ ಉಚ್ಚಾಟಿತ ರೆಬಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸ್ಪಷ್ಟಪಡಿಸಿದರು.ಕೊಪ್ಪಳದ ಪ್ರಸಿದ್ಧ ಗವಿಮಠಕ್ಕೆ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಕಾಂಗ್ರೆಸ್ಗೆ ಹೋಗ್ತೀನಿ ಎಂಬ ಸುಳ್ಳು ಫೋಟೋಗಳನ್ನು ವಿಜಯೇಂದ್ರ ಹರಿಬಿಟ್ಟಿದ್ದಾನೆ. ಅಪ್ಪ-ಮಗಂದು ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ರಾಜಕಾರಣವಿದೆ. ಯಡಿಯೂರಪ್ಪ ಮಾತು ಕೇಳಿ ನನ್ನನ್ನು ಉಚ್ಚಾಟನೆ ಮಾಡಲಾಗಿದೆ ಎಂದು ದೂರಿದರು.
ಎಲ್ಲಾ ಅಪ್ಪ-ಮಗನದ್ದು ಹೊಂದಾಣಿಕೆ ರಾಜಕಾರಣ. ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್ ಅನ್ನು ಸರ್ಕಾರ ಸರಿಯಾಗಿ ತನಿಖೆ ಮಾಡಿ ಕೋರ್ಟ್ನಲ್ಲಿ ಪ್ರಬಲವಾಗಿ ವಾದಿಸಿದರೆ ಯಡಿಯೂರಪ್ಪ ಜೈಲಿಗೆ ಹೋಗುವುದು ಗ್ಯಾರಂಟಿ ಎಂದು ಗುಡುಗಿದರು. ಇನ್ನು ಬಿಜೆಪಿ ಹಿಂದೂಗಳ ಪಕ್ಷವಾಗಿ ಉಳಿದಿಲ್ಲ. ಕಾಂಗ್ರೆಸ್ ಮುಸ್ಲಿಮರ ಪಕ್ಷ. ಯಾವ ಜನ್ಮದಲ್ಲೂ ಕಾಂಗ್ರೆಸ್ಗೆ ಹೋಗಲ್ಲ. ನಕಲಿ ಸಾಮಾಜಿಕ ಜಾಲತಾಣ ಅಕೌಂಟ್ಗಳಿಂದ ವಿಜಯೇಂದ್ರ ಟೀಂ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದೆ. ಅಪ್ಪ-ಮಗನ ಹಗರಣ, ಭ್ರಷ್ಟ ಮುಖ್ಯಮಂತ್ರಿಯಾಗಿದ್ದ ಬಿಎಸ್ವೈ ಕುಟುಂಬದ ವಿರುದ್ಧ ನನ್ನ ಹೋರಾಟ ನಿಲ್ಲಲ್ಲ ಎಂದು ಶಪಥ ಮಾಡಿದರು.