ಜಾತಿ ನಿಂದನೆ, ಕೀಳು ಪದ ಪ್ರಯೋಗ, ಜೀವ ಬೆದರಿಕೆ, ಭ್ರಷ್ಟಾಚಾರದಂತಹ ಕೃತ್ಯಗಳಲ್ಲಿ ನೇರವಾಗಿ ಸಾಕ್ಷ್ಯ ಸಮೇತ ಭಾಗಿಯಾಗಿರುವ ಶಾಸಕ ಮುನಿರತ್ನ ವಿರುದ್ದ ಪೊಲೀಸರು ಸುಮೋಟೋ ಕೇಸ್ ದಾಖಲಿಸಬೇಕು ಎಂದು ಮಾಜಿ ಸಂಸದ ಡಿಕೆ ಸುರೇಶ್ ಒತ್ತಾಯಿಸಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಕೆ ಸುರೇಶ್, ಬಿಜೆಪಿ ಶಾಸಕ ಮುನಿರತ್ನ ಅವರು ದಲಿತ ಸಮುದಾಯಕ್ಕೆ ಕೀಳು ಪದಗಳಿಂದ ಸಂಬೋಧನೆ ಮಾಡಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಮುನಿರತ್ನ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಸುಮೋಟೋ ಕೇಸ್ ದಾಖಲಿಸಬೇಕು. ಎರಡು ಜಾತಿಗಳನ್ನು ಎತ್ತಿಕಟ್ಟುವ ಕೆಲಸ ಆಗಿದೆ ಎಂದರು.
ಶಾಸಕ ಮುನಿರತ್ನ ಚುನಾವಣೆ ಸಂದರ್ಭದಲ್ಲಿ ನಮ್ಮ ಅಭ್ಯರ್ಥಿಗೂ ಬೆದರಿಕೆ ಹಾಕಿದ್ದರು. ಶಾಸಕ ಮುನಿರತ್ನ ಅಧಿಕಾರಿಗಳ ಮೇಲೂ ಧರ್ಪ ಮೆರೆದದ್ದು ನಮ್ಮ ಗಮನಕ್ಕೆ ಬಂದಿದೆ. ಅಧಿಕಾರಿಗಳು ಮುನಿರತ್ನ ಮೇಲೆ ಭಯ ಭೀತರಾಗಿದ್ದಾರೆ. ಕೆಲವು ಅಧಿಕಾರಿಗಳು ನನ್ನ ಬಳಿ ಅಳಲು ತೋಡಿಕೊಂಡಿದ್ದಾರೆ. ಅಧಿಕಾರಿಗಳು ದೂರು ಕೊಟ್ಟರೆ ಸರ್ಕಾರ ಅವರ ರಕ್ಷಣೆಗೆ ಬರಲಿದೆ. ಈ ವಿಚಾರವಾಗಿ ನಾನು ಮುನಿರತ್ನ ವಿರುದ್ದ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ, ಗೃಹ ಸಚಿವರಿಗೆ ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.
ಗುತ್ತಿಗೆದಾರ ಚೆಲುವರಾಜು ಜೊತೆ ಮಾತನಾಡಿದ ಕೀಳು ಪದ ಪ್ರಯೋಗ ಇಡೀ ರಾಜ್ಯವೇ ಗಮನಿಸಿದೆ. ಆದರೆ ಬಿಜೆಪಿ ರಾಜ್ಯ ನಾಯಕರು ಈ ಬಗ್ಗೆ ಎಳ್ಳಷ್ಟೂ ತುಟಿ ಬಿಚ್ಚುತ್ತಿಲ್ಲ. ಬಿಜೆಪಿಯ ಒಬ್ಬೇ ಒಬ್ಬರು ನಾಯಕರು ಇದುವರೆಗೂ ಹೇಳಿಕೆ ನೀಡಿಲ್ಲ. ಬಿಜೆಪಿಯವರಿಗೆ ನೈತಿಕತೆ ಇದ್ದರೆ ಮುನಿರತ್ನ ಅವರನ್ನು ಇಷ್ಟೊತ್ತಿಗಾಗಲೇ ಪಕ್ಷದಿಂದ ವಜಾ ಮಾಡಬೇಕಿತ್ತು ಎಂದು ಆಕ್ರೋಶ ಹೊರಹಾಕಿದ್ದಾರೆ.
ಒಂದು ಕಡೆ ರಾಮನ ಜಪ, ಒಂದು ಕಡೆ ಸಂಸ್ಕೃತಿ ಜಪ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಅದೇ ತಾಯಂದಿರನ್ನು ಮಂಚಕ್ಕೆ ಕರೆಯುವ ಜಪ ಮಾಡುತ್ತಾರೆ. ಇದಕ್ಕಿಂತ ಕೀಳು ಪದಗಳನ್ನು ಯಾರೂ ಉಪಯೋಗಿಸಲು ಸಾಧ್ಯವಿಲ್ಲ. ಕೀಳು ಮನಸ್ಥಿತಿ ಇರುವವರೂ ಸಹ ಇಂತಹ ಪದ ಪ್ರಯೋಗ ಬಳಸಲು ಹಿಂದೇಟು ಹಾಕುವರು. ಆದರೆ ಶಾಸಕ ಮುನಿರತ್ನ ತೀರಾ ಕೀಳು ಮಟ್ಟಕ್ಕೆ ಇಳಿದಿದ್ದಾರೆ ಎಂದು ಹೇಳಿದರು.
80ರ ದಶಕದ ಬಳಿಕ ದಲಿತ ಸಮುದಾಯದ ವಿರುದ್ದ ಯಾರೂ ಇಂಥ ಪದ ಬಳಸುತ್ತಿರಲಿಲ್ಲ. ದಲಿತ ಸಮುದಾಯದ ಮೇಲೆ ಇಂಥ ಪದ ಬಳಕೆ ಮಾಡುವುದು ಎಷ್ಟು ಸರಿ? ಇದಕ್ಕೆ ಬಿಜೆಪಿ ನಾಯಕರು, ಎನ್ಡಿಎ ನಾಯಕರು ಪ್ರತಿಕ್ರಿಯಿಸಬೇಕೆಂದು ಎಂದು ಒತ್ತಾಯಿಸಿದ್ದಾರೆ.