ರಾಜ್ಯದ ಮೊದಲ ಹಂತದ ಚುನಾವಣೆಗೆ ಕೆಲವೇ ದಿನಗಳು ಇರುವಾಗ ದೇಶದಾದ್ಯಂತ ದೊಡ್ಡದಾಗಿ ಸಂಚಲನ ಮೂಡಿಸಿದ ಪ್ರಜ್ವಲ್ ರೇವಣ್ಣನ ಪೆನ್ ಡ್ರೈವ್ ಪ್ರಕರಣ ಈಗ ದೊಡ್ಡ ತಿರುವು ಪಡೆದುಕೊಳ್ಳಲಿದೆ. ಅಶ್ಲೀಲ ಪೆನ್ ಡ್ರೈವ್ ಪ್ರಕರಣದಲ್ಲಿ ಮುಖ್ಯ ಆರೋಪಿ ಸ್ಥಾನದಲ್ಲಿ ನಿಲ್ಲುವ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿಯಾಗಿರುವ ಬಗ್ಗೆ ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ರಾಜ್ಯ ಮಹಿಳಾ ಆಯೋಗ ಹಾಗೂ ಪ್ರಮುಖ ಜನಪರ ಸಂಘಟನೆಗಳ ಒತ್ತಾಯದ ಮೇಲೆ ಪ್ರಜ್ವಲ್ ರೇವಣ್ಣನನ್ನು ಈ ಕೂಡಲೇ ಬಂಧಿಸಿ ತನಿಖೆಗೊಳಪಡಿಸಬೇಕು. ಅದಕ್ಕಾಗಿ ವಿಶೇಷ ತನಿಖಾ ತಂಡ ನೇಮಿಸಬೇಕು ಎಂಬ ಮನವಿಯ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ತನಿಖಾ ತಂಡವನ್ನು ನೇಮಿಸಿದೆ.
ಅಶ್ಲೀಲ ಪೆನ್ ಡ್ರೈವ್ ನಲ್ಲಿ ಮೇಲ್ನೋಟಕ್ಕೆ ಪ್ರಜ್ವಲ್ ರೇವಣ್ಣ, ಅಸಂಖ್ಯಾತ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಕಂಡುಬಂದಿದ್ದು, ರಾಜ್ಯಾದ್ಯಾಂತ ಈ ಬಗ್ಗೆ ಅತಿ ಹೆಚ್ಚು ಸಂಚಲನ ಉಂಟುಮಾಡಿತ್ತು. ಅಷ್ಟೆ ಅಲ್ಲದೇ ಇತಿಹಾಸದಲ್ಲೆ ಯಾರೂ ಸಹ ಇಷ್ಟು ಕೆಳಮಟ್ಟಕ್ಕೆ ಇಳಿಯದ ಲೈಂಗಿಕ ದೌರ್ಜನ್ಯದ ಪ್ರಕರಣ ಇದಾಗಿರುವಾಗ, ಇದನ್ನು ಸರ್ಕಾರ ಕೂಡ ಗಂಭೀರವಾಗಿ ಪರಿಗಣಿಸಿ ಸಂತ್ರಸ್ತ ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಿಸಬೇಕು ಎಂಬ ಆಗ್ರಹ ಹೆಚ್ಚಾಗಿದೆ.
ಈ ನಡುವೆ ಹಾಲಿ ಸಂಸದ, ಅಶ್ಲೀಲ ಪೆನ್ ಡ್ರೈವ್ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿರುವ ಬಗ್ಗೆ ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಯಾವ ಕ್ಷಣದಲ್ಲಿ ಬೇಕಾದರೂ ಪ್ರಜ್ವಲ್ ರೇವಣ್ಣ ಅರೆಸ್ಟ್ ಆಗಬಹುದಾದ ಹಿನ್ನೆಲೆಯಲ್ಲಿ, ಸರ್ಕಾರ ತನಿಖೆಗೆ ಆದೇಶಿಸುತ್ತಿದ್ದಂತೆ ಪ್ರಜ್ವಲ್ ರೇವಣ್ಣ ರಾಜ್ಯದಿಂದ ಕಾಲ್ಕಿತ್ತಿರುವ ಬಗ್ಗೆ ಪೊಲೀಸ್ ಮೂಲಗಳು ತಿಳಿಸಿವೆ.