ಚಿತ್ತಗಾಂಗ್ ನಲ್ಲಿ (ಹಿಂದಿನ ಅವಿಭಜಿತ ಭಾರತದ ಭಾಗ) ಮಧ್ಯಮ-ವರ್ಗದ ಕುಟುಂಬದಲ್ಲಿ ಜನಿಸಿದ ಪ್ರೀತಿಲತಾ ವಡ್ಡೆದಾರ್ ಅವರು ತಮ್ಮ ಶೈಕ್ಷಣಿಕ ಪ್ರಯತ್ನಗಳಲ್ಲಿ ಉತ್ತಮ ಸಾಧನೆ ಮಾಡಿದ ಮಹಿಳೆ. ಈಕೆ ಹಲವಾರು ಪ್ರಶಸ್ತಿಗಳು ಮತ್ತು ವಿದ್ಯಾರ್ಥಿವೇತನಗಳನ್ನು ಗಳಿಸಿದ್ದರು. ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರಿಂದ, ಈಕೆಯ ಶೈಕ್ಷಣಿಕ ಆಸಕ್ತಿಗಳು ಕಮ್ಮಿಯಾದವು. ತಮ್ಮ ವಿದ್ಯಾರ್ಥಿ ದಿನಗಳಲ್ಲಿ, ಮಹಿಳಾ ನೇತೃತ್ವದ ಅರೆ-ಕ್ರಾಂತಿಕಾರಿ ಗುಂಪುಗಳ ಭಾಗವಾಗಿದ್ದರು. ಮುಂದೆ, ದೀಪಾಲಿ ಸಂಘ ಎಂಬ ಕ್ರಾಂತಿಕಾರಿ ಗುಂಪಿನ ಸದಸ್ಯತ್ವ ಪಡೆದರು. (ಇದೊಂದು, ಲೀಲಾ ನಾಗ್ ಸ್ಥಾಪಿಸಿದ ಬಂಡಾಯ ಸಂಘಟನೆ – ಇಲ್ಲಿ ಮಹಿಳೆಯರಿಗೆ ಯುದ್ಧ ತರಬೇತಿ, ಕಾನೂನು ಶಿಕ್ಷಣ ನೀಡಲಾಗುತ್ತಿತ್ತು)
ಪ್ರೀತಿಲತಾ ಅವರು ಕಲ್ಕತ್ತಾದ ಬೆಥೂನ್ ಕಾಲೇಜಿನಲ್ಲಿ ಅಧ್ಯಯನ ಮಾಡುವಾಗ ಕಲ್ಪನಾ ದತ್ತಾ ಮತ್ತು ನಳಿನಿ ಪಾಲ್ ರಂತಹ ಕ್ರಾಂತಿಕಾರಿಗಳನ್ನು ಭೇಟಿಯಾದರು. ಅವರು ಸೂರ್ಯ ಸೇನ್ ರವರ ನೇತೃತ್ವದಡಿಯಲ್ಲಿ ಕೆಲಸ ಮಾಡಿದರು (ಭಾರತದ ಪ್ರಭಾವಿ ಸ್ವಾತಂತ್ರ್ಯ ನಾಯಕ). ಸೂರ್ಯ ಸೇನ್ ಚಿತ್ತಗಾಂಗ್ ನಲ್ಲಿ ದಾಳಿಯನ್ನು ಯೋಜಿಸಿದ್ದರು. ಪಹರ್ತಾಲಿ ಯುರೋಪಿಯನ್ ಕ್ಲಬ್ (ಇದು ಬ್ರಿಟಿಷ್ ಪ್ರಾಬಲ್ಯವನ್ನು ಸಂಕೇತಿಸುತ್ತದೆ) ಮೇಲಿನ ದಾಳಿಗಾಗಿ ಅವರು ಸುಮಾರು 40 ಕ್ರಾಂತಿಕಾರಿಗಳ ಗುಂಪನ್ನು ಕಟ್ಟಿದ್ದರು. ಪ್ರೀತಿಲತಾ, ಈ ಕ್ರಾಂತಿಕಾರಿಗಳೊಂದಿಗೆ ದಾಳಿಯನ್ನು ಮುನ್ನಡೆಸಿದರು. ಈ ಧಾಳಿಯ ನ೦ತರ ಭೀಕರ ಗುಂಡಿನ ಕಾಳಗ ನಡೆಯಿತು. ಆಕೆಯ ಕಾಲಿಗೆ ಗುಂಡು ತಗುಲಿತು. ತಾನು ಬಂಧನಕ್ಕೆ ಒಳಗಾಗುತ್ತಿದ್ದೇನೆ ಎಂಬ ಸುದ್ದಿ ಬಗ್ಗೆ ತಿಳಿದುಕೊಂಡ ಪ್ರೀತಿಲತಾ, ತಮ್ಮ ಜೇಬಿನಲ್ಲಿದ ಸೈನೈಡ್ ಕ್ಯಾಪ್ಸುಲ್ ಅನ್ನು ಸೇವಿಸಿ ತಾಯಿನಾಡಿಗಾಗಿ ಜೀವವನ್ನು ತ್ಯಾಗ ಮಾಡಿದರು. ಚಿತ್ತಗಾಂಗ್ ನ ವೀರಮಹಿಳೆ ಎನಿಸಿಕೊಂಡರು.
ರಾಷ್ಟ್ರಕ್ಕಾಗಿ ಹೋರಾಡಿ ವೀರಮರಣವನ್ನಪ್ಪುವಾಗ, ಪ್ರೀತಿಲತಾರಿಗೆ ಕೇವಲ 21 ವರ್ಷ.