ಕವಯತ್ರಿ ಗೀತಾ ನಾರಾಯಣ್ ಅವರ ಒಂದು ಸುಂದರ ಕವಿತೆ
ಪ್ರಶ್ನೆಯೂ; ಕ್ರೋಧ ವೂ..
ನೆಲಕ್ಕೆ ಕಿವಿಗೊಟ್ಟು ನೋಡಿ
ಎಷ್ಟೊಂದು ಸತ್ಯಗಳು ಪಿಸುಗುಟ್ಟುತ್ತಿವೆ ಧರೆಯ ಗರ್ಭದಲ್ಲಿ..
ಸುಮಗಳ ಹಗುರಾಗಿ ಅಪ್ಪಿಬಿಡಿ
ಹೂಗಣ್ಣೆನಲಿ ಗಂಧವಿದೆ
ಉಸಿರಾಡಿ ಮತ್ತು ಮೆಲ್ಲನೆ
ಮೆದುವಾಗಿ ನೀವೂನು
ಬಯಲ ಮೌನದಲ್ಲಿ ಆಗಸವ ಎದುರಾಗಿ;ಆಗ ಇರುಳಾಗಿರಲಿ
ಚುಕ್ಕಿಗಳ ಎದೆಬೆಳಕು ಬೆಂದ ಅದೆಷ್ಟೋ ಜನ ತಾಯಂದಿರ ಮಮತೆ
ಕಡಲ ತೆರಗಳಿಗೆ ಮೌನವೊಲಿದ ದಿನ
ತಿಂಗಳನು ಅಪ್ಪನಾಗಬಹುದು
ನೆಲದವ್ವ ಜಲದವ್ವರು ನಕ್ಕಾರು
ದಟ್ಟ ವಿಪಿನದೊಳಗೆ ನಿಂತುಬಿಡಿ; ತರುಗಳ ಕಣ್ಣೀರು ನಿಮ್ಮ ನೆತ್ತಿಯ ಒದ್ದೆಯಾಗಿಸಿದರೆ ಹಣ್ಣಾಗಿ
ಮುಖ್ಯ ರಸ್ತೆಯ ಮೇಲೆ
ಉದ್ದ ಕಾರಿನಲ್ಲಿ ಓಡಾಡುವವರ ಕಿಸೆಯಲ್ಲಿ
ಅಹಂಕಾರ ತೊಟ್ಟಿಕ್ಕಿದರೆ
ಪ್ರಶ್ನಿಸಬೇಡಿ! ಸುಮ್ಮನಿರಿ
ಕೀರ್ತಿವಂತರಿಗೆ ಆದಾಯದ ನಶೆಯಲ್ಲಿ ವಿವೇಕ ಕಾಣದು
ಅವಕಾಶ, ಲಾಭಕ್ಕಾಗಿ
ಮಾರಿಕೊಳ್ಳುವ ಯಾರೂ ಇಲ್ಲಿ ಮನುಷ್ಯರಾಗಲಾರರು..
ನದಿ,ಹಕ್ಕಿ,ಸಮೀರದ ಸದ್ದಿಗಿಂತಲೂ
ಕ್ರೋಧವೇ ಮೊದಲಾಗಿದೆ ಕೀರ್ತಿಭ್ರಮೆಯ ಜನಕೆ
ಪ್ರಶ್ನಿಸಬೇಡಿ; ಸತ್ಯವೆಂದರೆ ಅನೇಕರ ಶತ್ರು..