ಬೆಂಗಳೂರು: ಅಹಮದಾಬಾದ್‌ನಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಸೋಲಿನ ಹಿನ್ನಲೆಯಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನವೆಂಬರ್ 21, ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಪನೌತಿ (ದುರದೃಷ್ಟದ ಸಂಕೇತ) ಎಂದು ಕರೆಯುವ ಮೂಲಕ ವಿಧಾನಸಭಾ ಚುನಾವಣೆಯ ಪ್ರಚಾರ ಇನ್ನಷ್ಟು ಚರ್ಚೆಗೆ ಗ್ರಾಸವಾಗಿದೆ.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ, ಚುನಾವಣಾ ಸೋಲಿನ ಹತಾಶೆಯಿಂದ ರಾಹುಲ್ ಗಾಂಧಿಯವರು ಪ್ರಧಾನಿ ವಿರುದ್ಧ ನಿಂದನೀಯ ಪದಗಳನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದೆ.
“ಪನೌಟಿ… ಪನೌಟಿ… ಅಚ್ಛಾ ಭಲಾ ಹಮಾರೆ ಲಡ್ಕೆ ವಹಾನ್ ವರ್ಲ್ಡ್ ಕಪ್ ಜೀತ್ನೆ ವಾಲೆ ಥೆ, ಪರ್ ಪನೌತಿ ಹರ್ವಾ ದಿಯಾ. ಟಿವಿ ವಾಲೇ ಯೇ ನಹೀಂ ಕಹೆಂಗೆ ಮಗರ್ ಜನತಾ ಜಾನ್‌ತಿ ಹೈ (ನಮ್ಮ ಹುಡುಗರು ವಿಶ್ವಕಪ್ ಗೆಲ್ಲುವವರಿದ್ದರು, ಆದರೆ ಪನೌಟಿಯಿಂದಾಗಿ ಸೋತರು. ಟಿವಿ ಚಾನೆಲ್‌ಗಳು ಇದನ್ನು ಹೇಳುವುದಿಲ್ಲ, ಆದರೆ ಜನರಿಗೆ ಇದು ತಿಳಿದಿದೆ) ”ಎಂದು ಗಾಂಧಿ ರಾಜಸ್ಥಾನದ ಬಲೋತ್ರಾದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಹೇಳಿದ್ದಾರೆ.
ಒಂದು ವಾರದ ಹಿಂದೆ, ಭಾರತದಲ್ಲಿ ಪ್ರತಿಯೊಬ್ಬರ ಬಳಿ ಚೀನಾ ಮೊಬೈಲ್ ಹ್ಯಾಂಡ್‌ಸೆಟ್‌ಗಳು ಮಾತ್ರ ಇವೆ ಎಂದು ರಾಹುಲ್ ಗಾಂಧಿ ಹೇಳಿದಾಗ, ಮೋದಿಯವರು ರಾಹುಲ್‌ರನ್ನು ಮೂರ್ಖೋನ್ ಕಾ ಸರ್ದಾರ್ (ಮೂರ್ಖರ ನಾಯಕ) ಎಂದು ಕರೆದಿದ್ದರು. “ಕಾಂಗ್ರೆಸ್ ನಾಯಕರು ಭಾರತದ ಸಾಧನೆಗಳನ್ನು ಒಪ್ಪಿಕೊಳ್ಳದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದಾರೆ” ಎಂದು ಮಧ್ಯಪ್ರದೇಶದಲ್ಲಿ ಕಾಂಗ್ರೇಸನ್ನು ಟೀಕಿಸಿದ ಮೋದಿ, ಭಾರತವು ಮೊಬೈಲ್ ಉತ್ಪಾದನೆಯಲ್ಲಿ ಕ್ಷಿಪ್ರಗತಿಯಲ್ಲಿ ಸಾಗುತ್ತಿದೆ ಎಂದು ಹೇಳಿದ್ದರು.
ಈ ವರ್ಷಾರಂಭದಲ್ಲಿ ಮೋದಿ ಎಂಬ ಉಪನಾಮದ ಬಗ್ಗೆ ಮಾಡಿದ ಹೇಳಿಕೆಗಾಗಿ ಸೂರತ್ ನ್ಯಾಯಾಲಯವು ಎರಡು ವರ್ಷಗಳ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯತ್ವದಿಂದ ಅಮಾನತುಗೊಳಿಸಿತ್ತು. ಸುಪ್ರೀಂ ಕೋರ್ಟ್ ಈ ಶಿಕ್ಷೆಗೆ ತಡೆ ನೀಡಿ, ರಾಹುಲ್ ಮತ್ತೆ ಸಂಸತ್ ಪ್ರವೇಶಿಸಿದ್ದರು.
ಗಾಂಧಿಯವರ ಈ ಹೇಳಿಕೆಗೆ ಕ್ಷಮೆಕೋರುವಂತೆ ಒತ್ತಾಯಿಸಿರುವ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್, “ರಾಹುಲ್ ಗಾಂಧಿ ನಿಮಗೆ ಏನಾಗಿದೆ? ಸೋಲಿನ ಹತಾಶೆಯಿಂದ ನೀವು ತುಂಬಾ ತೊಂದರೆಗೀಡಾಗಿದ್ದೀರಿ, ನೀವು ದೇಶದ ಪ್ರಧಾನಿ ವಿರುದ್ಧ ನಿಂದನೀಯ ಭಾಷೆ ಬಳಸುತ್ತಿದ್ದೀರಿ. ನಮ್ಮ ಪ್ರಧಾನಿಯವರು ನಮ್ಮ ಆಟಗಾರರನ್ನು ಪ್ರೀತಿಸುತ್ತಾರೆ ಮತ್ತು ಅವರ ನೈತಿಕ ಬಲವನ್ನು ಹೆಚ್ಚಲು ಅವರಿಗೆ ಸಹಾಯ ಮಾಡುತ್ತಿದ್ದಾರೆ. ಏಷ್ಯಾಡ್, ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ನಮ್ಮ ಆಟಗಾರರು ಚೆನ್ನಾಗಿ ಆಡಿದ್ದರು. ಸೋಲು ಮತ್ತು ಗೆಲುವು ಇದ್ದದ್ದೇ. ರಾಹುಲ್ ಗಾಂಧಿ ತಕ್ಷಣ ಕ್ಷಮೆ ಕೇಳಬೇಕು,” ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿಯವರನ್ನು ಸಮರ್ಥಿಸಿರುವ ಕಾಂಗ್ರೆಸ್‌ನ ಕೆಸಿ ವೇಣುಗೋಪಾಲ್ “2 ದಿನಗಳಿಂದ ಅನೇಕರು ಯೋಚಿಸುತ್ತಿರುವುದನ್ನೇ ರಾಹುಲ್ ಜೀ ಹೇಳಿದ್ದಾರೆ! ವಿಶ್ವಕಪ್ ಫೈನಲ್ಸ್ 140 ಕೋಟಿ ಭಾರತೀಯರಿಗೆ ಹೆಮ್ಮೆಯ ಕ್ಷಣವಾಗಿತ್ತು ಮತ್ತು ನಾವೆಲ್ಲರೂ ಈ ಐತಿಹಾಸಿಕ ಸಂದರ್ಭಕ್ಕಾಗಿ ಎದುರು ನೋಡುತ್ತಿದ್ದೆವು, ಆದರೆ ಅವರು ತಮ್ಮ ರಾಜಕೀಯ ಮೈಲೇಜ್‌ಗಾಗಿ ಅದನ್ನು ಹೈಜಾಕ್ ಮಾಡಲು ಹೋಗಿ ಹತಾಶರಾಗಿದ್ದಾರೆ. ರಾಜಕೀಯ ಸರಿ-ತಪ್ಪುಗಳ ಬಗ್ಗೆ ಮಾತನಾಡಲು ಬಿಜೆಪಿ ಕೊನೆಯಲ್ಲಿ ನಿಲ್ಲಬೇಕು. ಪಂಡಿತ್ ನೆಹರೂ, ಇಂದಿರಾಗಾಂಧಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನು ಅತ್ಯಂತ ಕೆಟ್ಟ ನಿಂದನೆಗಳಿಂದ ಅವಮಾನಿಸುತ್ತಿರುವ ಪ್ರಧಾನಿ ಮೋದಿ ಸೇರಿದಂತೆ ಈ ಗೋಡ್ಸೆ ಭಕ್ತರು ಕಟುಸತ್ಯವನ್ನು ಅರಗಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆ” ಎಂದು X ನಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿಯವರನ್ನು “ವಿಷಪೂರಿತ ಹಾವು” ಎಂದು ಹೇಳುವ ಮೂಲಕ ರಾಜಕೀಯ ವಿವಾದವನ್ನು ಹುಟ್ಟುಹಾಕಿದ್ದರು. ಕಳೆದ ವರ್ಷದ ಗುಜರಾತ್ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಖರ್ಗೆಯವರು ಅಹಮದಾಬಾದ್‌ನ ಸಾರ್ವಜನಿಕ ಸಭೆಯಲ್ಲಿ “ ಕಾರ್ಪೋರೇಷನ್ ಚುನಾವಣೆಗಳಲ್ಲಿ, ಎಂಎಲ್ಎ – ಎಂಪಿ ಚುನಾವಣೆಗಳಲ್ಲಿ ನಿಮ್ಮ (ಮೋದಿ) ಮುಖವನ್ನೇ ಎಲ್ಲೆಡೆ ನೋಡುತ್ತಿದ್ದೇವೆ… ನಿಮಗೆ ರಾವಣನಂತೆ 100 ತಲೆಗಳಿವೆಯೇ?” ಎಂದು ಟೀಕಿಸಿದ್ದರು.
ಮಾರ್ಚ್ 2, 2019ರಂದು ನರೇಂದ್ರ ಮೋದಿಯವರು ʼಸ್ಮಾರ್ಟ್ ಇಂಡಿಯಾ ಹಾಕ್‌ಥಾನ್-2019’ರ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಇಂಜಿನೀಯರಿಂಗ್ ವಿದ್ಯಾರ್ಥಿಗಳ ಜೊತೆ ಮಾತನಾಡುತ್ತಾ ರಾಹುಲ್ ಗಾಂಧಿಯವರನ್ನು “40-50 ವರ್ಷ ಪ್ರಾಯದ ಡಿಸ್ಲಕ್ಸಿಯಾ (dyslexia) ಇರುವ ಮಗು” ಎಂದು ಅಮಾನವೀಯವಾದ ಟೀಕಿಯನ್ನು ಮಾಡಿದ್ದರು. ಮಾನಸಿಕ ಆರೋಗ್ಯದ ಸಮಸ್ಯೆಯಾಗಿರುವ ಡಿಸ್ಲೆಕ್ಸಿಯಾವನ್ನು ಸಂವೇದನಾರಹಿತವಾಗಿ ಟೀಕೆಗೆ ಬಳಸಿರುವ ಮೋದಿಯವರ ಹೇಳಿಕೆಗೆ ಮಾನಸಿಕ ತಜ್ಞರು, ಪಕ್ಷಾತೀತವಾಗಿ ರಾಜಕೀಯ ನಾಯಕರು ವಿರೋಧ ವ್ಯಕ್ತಪಡಿಸಿದ್ದರು.
ಡಿಸೆಂಬರ್ 2017 ರ ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್, ಮೋದಿಯವರನ್ನು “ನೀಚ್ ಕಿಸಂ ಕಾ ಆದ್ಮಿ” ಎಂದು ಟೀಕಿಸಿದ ಹಿರಿಯ ಕಾಂಗ್ರೇಸ್ ನಾಯಕ ಮಣಿಶಂಕರ್ ಅಯ್ಯರ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿತ್ತು.