'ಸರ್ಕಾರದ ಯೋಜನೆಗಳು ಜನರಿಗೆ ಅನುಕೂಲ ಮಾಡುತ್ತಿವೆಯೋ? ಅಥವಾ ಜನರ ಸಮಾಧಿ ಮಾಡುತ್ತಿವೆಯೋ?'
'ಅಭಿವೃದ್ಧಿ ಹೆಸರಲ್ಲಿ ಜನಸಾಮಾನ್ಯರ ತಲೆದಂಡ'
ಜನ ಸಾಮಾನ್ಯರ ಒಳಿತಿಗಾಗಿ 'ರೈಲ್ವೇ ಏಳು, ಹೈವೇ ಬೀಳು'.. ಯುವ ಬರಹಗಾರ ದರ್ಶನ್ ಕುರುಬಾಸ್ ಬರಹದಲ್ಲಿ
ಇತ್ತೀಚಿನ ದಿನಗಳಲ್ಲಿ ನಗರ ಮತ್ತು ನಗರಗಳ ಸುತ್ತಮುತ್ತ ತಿರುಗಾಡುವಾಗ ಗಮನಿಸಿ ಹಲವಾರು ಹೈವೇ ನಿರ್ಮಾಣದ ಕೆಲಸಗಳು, ಬೈಪಾಸ್ ನಿರ್ಮಾಣ, ಮೇಲು ಸೇತುವೆ ನಿರ್ಮಾಣ, ಕೆಳ ಸೇತುವೆ ನಿರ್ಮಾಣ, ಸುರಂಗ ನಿರ್ಮಾಣ, ಮೆಟ್ರೋ ನಿರ್ಮಾಣದ ಕೆಲಸಗಳು ಕಣ್ಣಿಗೆ ಸಾಕು ಸಾಕೆನಿಸುವಷ್ಟು ಕಾಣಸಿಗುತ್ತವೆ. ಇವುಗಳನ್ನು ಜನರ ಉಪಯೋಗಕ್ಕಾಗಿ ಸರ್ಕಾರಗಳು ಮಾಡುತ್ತಿವೆ ಎಂಬುದು ಜನರಲ್ಲಿನ ಸಾಮಾನ್ಯ ತಿಳುವಳಿಕೆ ಮತ್ತು ದೇಶದ ಅಭಿವೃದ್ಧಿಯನ್ನು ಇವುಗಳ ಆಧಾರದ ಮೇಲೆಯೇ ಅಳೆಯುವುದು ಎನ್ನುವ ಕಲ್ಪನೆಯ ಸಹ ಜನರ ಮನಸ್ಸಿನಲ್ಲಿ ನೆಲೆಮಾಡಿದೆ.
ಈ ಕಾಮಗಾರಿಗಳ ಬಗ್ಗೆ ಒಂದು ಸಂಕ್ಷಿಪ್ತ ನೋಟ :-
ಇಂಡಿಯಾ ಒಕ್ಕೂಟ ಸರ್ಕಾರವು ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲು ಪ್ರತಿ ವರ್ಷ ಇಂತಿಷ್ಟು ಹಣ ಅಂತ ಮೀಸಲಿಡುತ್ತಾ ಬಂದಿದೆ. ಉದಾಹರಣೆಗೆ, 2023-24ನೇ ಸಾಲಿನಲ್ಲಿ 3.01 ಲಕ್ಷ ಕೋಟಿಗಳು, 2024-25ನೇ ಸಾಲಿನಲ್ಲಿ 2.50 ಲಕ್ಷ ಕೋಟಿಗಳು ಮತ್ತು 2025-26ನೇ 2,87,333 ಕೋಟಿಗಳನ್ನು ಮೀಸಲಿಟ್ಟಿದೆ. 2014ರಲ್ಲಿ 91,287 ಕಿಮೀ ರಾಷ್ಟ್ರೀಯ ಹೆದ್ದಾರಿ ಇದ್ದದ್ದು ಈಗ ಪ್ರಸ್ತುತ 2025 ರಲ್ಲಿ 1,46,204 ಕಿಮೀ ಆಗಿದೆ. ಇದನ್ನು ಅಭಿವೃದ್ಧಿ ಅಂತ ಗುರುತಿಸುತ್ತಾರೆ.
ಅದಷ್ಟೇ ಅಲ್ಲದೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ‘ನಮ್ಮ ಮೆಟ್ರೋ’ ನಿರ್ಮಿಸಲು ವ್ಯಹಿಸಿರುವ ಹಣವನ್ನು ನೋಡುವುದಾದರೆ, ಫೇಸ್ ಒಂದರಲ್ಲಿ 42.3 ಕಿಮೀ ಮೆಟ್ರೋ ನಿರ್ಮಿಸಲು 14,133.11 ಕೋಟಿಯಷ್ಟನ್ನು ವೆಚ್ಚಮಾಡಲಾಗಿದೆ, ಫೇಸ್ ಎರಡರಲ್ಲಿ 40,425 ಕೋಟಿಯನ್ನು ವೆಚ್ಚ ಮಾಡಲಾಗಿದೆ, ಫೇಸ್ ಎ & ಬಿ ಯಲ್ಲಿ 15,131 ಕೋಟಿಗಳನ್ನು ವೆಚ್ಚ ಮಾಡಲಾಗಿದೆ, ಫೇಸ್ ಮೂರರಲ್ಲಿ 44.65 ಕಿಮೀ ಮೆಟ್ರೋ ನಿರ್ಮಿಸಲು 15,610 ಕೋಟಿಗಳನ್ನು ವೆಚ್ಚ ಮಾಡಲಾಗಿದೆ. ಫೇಸ್ ಮೂರು ಎ ನಲ್ಲಿ 28,405 ಕೋಟಿಗಳನ್ನು ವೆಚ್ಚ ಮಾಡಲಾಗಿದೆ. ಇದಿಷ್ಟು ಸಾಲದೆಂಬಂತೆ ಬೆಂಗಳೂರಿನ ಬೊಮ್ಮಸಂದ್ರದಿಂದ ಹೊಸೂರಿಗೆ ಮೆಟ್ರೋ ನಿರ್ಮಿಸಲು 6,900 ಕೋಟಿಯ ಯೋಜನೆಯು ಸಹ ರೂಪುಗೊಂಡಿದೆ ಎಂಬ ವರದಿಗಳು ಸಹ ಬಂದಿವೆ. ಬೆಂಗಳೂರು ಸಿಲಿಕಾನ್ ಸಿಟಿ, ಮೆಟ್ರೋ ಪಾಲಿಟಿಯನ್ ಸಿಟಿ ಆಗಿರುವುದರಿಂದ ಈ ಮೆಟ್ರೋ ಯೋಜನೆಯು ನಮ್ಮ ನಾಡಿನ ಹೆಮ್ಮೆಯೆಂಬ ಮಾತುಗಳು ಸಹ ಕೇಳಿ ಬರುತ್ತವೆ.
ಸಾಕು ಸಾಕೆನ್ನುವಷ್ಟು ಹೆದ್ದಾರಿ ನಿರ್ಮಿಸುತ್ತಿರುವ ಕಾರಣ ಜನರ ಒಳಿತಿಗಾಗಿಯಂತು ಅಲ್ಲವೇ ಅಲ್ಲ. ಮಂತ್ರಿಗಳು ಅಧಿಕಾರಿಗಳು ಬಂಡವಾಳಶಾಹಿಗಳು ಜನರನ್ನು ಲೂಟಿ ಮಾಡಲು ಮತ್ತಷ್ಟು ದೋಚಲು ಹಗಲು ದರೋಡೆಯಂತಾಗಿದೆ. ಇದರಲ್ಲಿ ಸರ್ಕಾರದ ಪಾಲು ಸಹ ಇದೆ. ಹೇಗೆಂದರೆ ಸರ್ಕಾರ ಈ ಮೆಟ್ರೋ ಮತ್ತು ಹೆದ್ದಾರಿ ಕಾಮಗಾರಿಗಳನ್ನು ನಿರ್ಮಿಸಲು ಹಣ ಮಂಜೂರು ಮಾಡಿದ ನಂತರ ಈ ಯೋಜನೆಯನ್ನು ಪೂರ್ಣಗೊಳಿಸಲು ಸರ್ಕಾರ ಗುತ್ತಿಗೆದಾರರಿಗೆ ಕೊಡುತ್ತದೆ. ನಂತರ ಬಹುವಾರ್ಷಿಕ ಯೋಜನೆಯಂತಾಗಿ ವರ್ಷಾನುಗಟ್ಟಲೆ ಸಮಯ ತೆಗೆದುಕೊಂಡು ಕಾಮಗಾರಿ ಮುಗಿಸುತ್ತಾರೆ ಕೆಲವೊಂದು ಯೋಜನೆಗಳು ಪೂರ್ಣಗೊಳ್ಳುತ್ತವೆ ಎನ್ನುವ ಭರವಸೆಯೇ ಇರುವುದಿಲ್ಲ. ಹಾಗೂ ಹೀಗೂ ಹೇಗೋ ಮಾಡಿ ಕಾಮಗಾರಿ ಮುಗಿಸಿದರೆ ಮಂತ್ರಿಗಳು ಮತ್ತವರು ಉದ್ಘಾಟನೆ ಮಾಡುತ್ತಾರೆ. ನಂತರ ವಾಹನಗಳ ಸಂಚಾರ, ಸಂಚರಿಸುವ ವಾಹನಗಳು ಸಾಕಷ್ಟು ವಿದೇಶದಿಂದ ಆಮದಾಗಿರುತ್ತದೆ, ನಮ್ಮ ದೇಶದ ಹಣ ವಿದೇಶಕ್ಕೆ, ವಿದೇಶದ ಕಾರು ನಮ್ಮ ದೇಶಕ್ಕೆ. ಸಾಕಷ್ಟು ವಾಹನಗಳು ಇಂಧನದ ಸಹಾಯದಿಂದ ಚಲಿಸುತ್ತವೆ, ಆ ವಾಹನಗಳಿಗೆ ಬಳಸುವ ಇಂಧನವೂ ಸಹ ವಿದೇಶದಿಂದಲೇ ಆಮದು ಮಾಡಿಕೊಳ್ಳಬೇಕು, ಇಂಡಿಯಾದಲ್ಲಿ ಪೆಟ್ರೋಲ್ ದರ 107.46 ರೂಪಾಯಿ ಡೀಸೆಲ್ ದರ 95.70 ರೂಪಾಯಿ ತಲುಪಿದೆ. ಇಷ್ಟಕ್ಕೆ ಮುಗಿಯದೆ ಇಂಧನ ಬಳಸುವ ವಾಹನಗಳಿಂದ ಬೃಹದಾಕಾರದ ಮಾಲಿನ್ಯ ದಟ್ಟಣೆ ಉಂಟಾಗಿ ಪರಿಸರ ಸರಿ ಮಾಡಲಾರದಷ್ಟು ಹಾಳಾಗುತ್ತದೆ. ಮುಂದುವರೆದು ಹೈವೇಯಲ್ಲಿ ವಾಹನಗಳು ಚಲಿಸುತ್ತಿರಬೇಕಾದರೆ ಮುಂದೆ ವಾಹನ ತಟ್ಟನೆ ನಿಲ್ಲಲೇ ಬೇಕು ಕಾರಣ ಅಲ್ಲಿ ಜನರ ಜೇಬಿಗೆ ನೇರವಾಗಿ ಕತ್ತರಿಯಾಕುವ ನವ ವಿಧಾನವಾದ ಟೋಲ್ ಕಾದು ಕುಳಿತಿರುತ್ತದೆ. ಇಷ್ಟಕ್ಕೆ ಮುಗಿದರೆ ವಾಸಿ, ಪೂರ್ಣಗೊಂಡ ಕಾಮಗಾರಿ ಬಹುಪಾಲು ಸಮರ್ಪಕವಾಗಿರುವುದಿಲ್ಲ, ನಮ್ಮ ಇಂಡಿಯಾ ಒಕ್ಕೂಟದಲ್ಲಿ ಕಾಮಗಾರಿ ಪೂರ್ಣಗೊಂಡ ಕೆಲವೇ ತಿಂಗಳುಗಳಲ್ಲಿ ಕುಸಿದಿರುವ, ದುರಸ್ತಿಗೊಂಡಿರುವ, ಹಾಳಾಗಿ ಹೋಗಿರುವ ನಿದರ್ಶನಗಳು ಸಹ ಸಾಕಷ್ಟು ಇವೆ. (ಈ ನಿದರ್ಶನವನ್ನು ಮತ್ತಷ್ಟು ಸಮರ್ಥಿಸಲೆಂಬಂತೆ – 1) ಹೊಸದಾಗಿ ಸಾವಿರ ಕೋಟಿ ಖರ್ಚು ಮಾಡಿ ನಿರ್ಮಿಸಿರುವ ಸಂಸತ್ತು ಮಳೆ ಬಂದರೆ ಸೋರುತ್ತೆ, 2) 2500 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಅಯೋಧ್ಯೆಯ ರಾಮಮಂದಿರ ನಿರ್ಮಾಣವಾದ ಆರೇ ತಿಂಗಳಲ್ಲಿ ಮಳೆಗೆ ಸೋರುತಿದೆ) ಇದಕ್ಕೆ ಪ್ರಮುಖ ಕಾರಣಗಳು ಕಳಪೆ ಗುಣಮಟ್ಟದ ವಸ್ತುಗಳ ಬಳಕೆ, ಕಳಪೆ ವಿನ್ಯಾಸ, ನಿರ್ವಹಣೆಯ ಕೊರತೆ, ಅವೈಜ್ಞಾನಿಕ ಕ್ರಮ ಅನುಸರಿಸುವಿಕೆ, ಅವೈಜ್ಞಾನಿಕವಾಗಿ ಬೆಟ್ಟಗುಡ್ಡಗಳನ್ನು ಹೊಡೆದು ನಾಶ ಮಾಡುವವರು ಮತ್ತು ಮಂತ್ರಿಗಳ ಅಧಿಕಾರಿಗಳ ಬಂಡವಾಳಶಾಹಿಗಳ ಲಾಭಕೋರತನ, ಅದರಲ್ಲೂ ಇಂದಿನ ದಿನಗಳಲ್ಲಿ ಸೃಷ್ಟಿಯಾಗುತ್ತಿರುವ ದಕ್ಷತೆಯ ಕೊರತೆ ಭ್ರಷ್ಟತೆಯ ಹೆಚ್ಚುಗಾರಿಕೆ. ಉದಾಹರಣೆಗೆ, ಲಕ್ನೋ – ಪೂರ್ವಂಚಲ್ ಎಕ್ಸ್ಪ್ರೆಸ್ ವೇ 2022 ರಲ್ಲಿ ಉದ್ಘಾಟನೆಯಾಗಿ ಕೆಲವೇ ತಿಂಗಳಲ್ಲಿ ಅದರ ಕೆಲವು ಭಾಗಗಳು ಕುಸಿದು ಬಿದ್ದವು. ಇಂತಹ ಸಮಸ್ಯೆಗಳನ್ನು ನಿಭಾಯಿಸಲು ‘ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ’ವು ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರ ವಿರುದ್ಧ ಕ್ರಮ ತೆಗೆದುಕೊಂಡಿದೆ. ಕೆಲವೇ ವರ್ಷಗಳಲ್ಲಿ 29ಕ್ಕೂ ಹೆಚ್ಚು ಕಂಪನಿಗಳ ಮೇಲೆ ನಿಷೇಧ ಹೇರಲಾಗಿದೆ ಮತ್ತು ದಂಡ ವಿಧಿಸಲಾಗಿದೆ. ಇವೆಲ್ಲವೂ ನೋಡುವರ ಕಣ್ಣಿಗೆ ನ್ಯಾಯ ಬದುಕಿದೆ ಎಂದು ತೋರಿಸಲಷ್ಟೇ, ಇದೆಲ್ಲವೂ ತೋರಿಕೆಗಾಗಿಯಷ್ಟೇ ಲೂಟಿಕೋರರು ದಿನೇ ದಿನೇ ಹೆಚ್ಚುತಲೆ ಇದ್ದಾರೆ.
ರಸ್ತೆಯಲ್ಲಿ ಚಲಿಸುವಾಗ ಅಪಘಾತಗಳು ಎಗ್ಗು ತಗ್ಗಿಲ್ಲದೆ ಆಗುತ್ತಲೇ ಇವೆ, 2022ನೇ ಸಾಲಿನಲ್ಲಿ ಒಟ್ಟು ನಾಲ್ಕು ಲಕ್ಷದ ಎಂಬತ್ತು ಸಾವಿರದಷ್ಟು ರಸ್ತೆ ಅಪಘಾತಗಳಾಗಿವೆ, ಆ ಅಪಘಾತಗಳಿಂದ 1,72,000 ಜನ ಸಾವನಪ್ಪಿದ್ದಾರೆ, ಪ್ರತಿ ದಿನ 474 ಜನ ರಸ್ತೆ ಅಪಘಾತದಿಂದ ಸಾವನಪ್ಪಿದ್ದಾರೆ. ಈ ವರ್ಷದ ಮೊದಲನೇ ಆರು ತಿಂಗಳಲ್ಲಿ 67 ಸಾವಿರ ರಸ್ತೆ ಅಪಘಾತಗಳಾಗಿವೆ ಅದರಲ್ಲಿ 29 ಸಾವಿರ ಜನ ಸಾವನಪ್ಪಿದ್ದರೆ. ಪ್ರತಿ ಗಂಟೆಗೆ 20 ಜನ ರಸ್ತೆ ಅಪಘಾತದಿಂದಲೇ ಸಾಯುತ್ತಿದ್ದಾರೆ. ಅಪಘಾತದಲ್ಲಿ ಸತ್ತವರಿಗೆ ವಿಮೆ ಬರಬಹುದು ಆದರೆ ನಮ್ಮ ನಾಡಿಗೆ ಮಾನವ ಸಂಪನ್ಮೂಲ ಕಡಿಮೆಯಾಗುತ್ತದೆ ಎಂಬ ಅರಿವು ಇರಬೇಕು. ಸರ್ಕಾರವು ವರ್ಷಾನುಗಟ್ಟಲೆ ಹೈವೇ ನಿರ್ಮಿಸುತ್ತಿರುವುದು ಅದಕ್ಕಾಗಿ ಲಕ್ಷಾನು ಕೋಟಿ ಖರ್ಚು ಮಾಡುವುದು ಜನರ ಅಭಿವೃದ್ಧಿಗಾಗಿಯೂ ಅಥವಾ ಜನರ ತಲೆದಂಡ ಮಾಡಲಿಕ್ಕೋ ಎನ್ನುವ ಪ್ರಶ್ನೆ ಈ ವರದಿಯನ್ನು ನೋಡಿದರೆ ಮೂಡುವುದು ಸಹಜ. ಈ ಇಂಡಿಯಾ ಒಕ್ಕೂಟದಲ್ಲಿ ರಸ್ತೆ ಬದಿಯ ಮೈಲಿ ಕಲ್ಲುಗಳ ಸಂಖ್ಯೆಗಿಂತ ರಸ್ತೆ ಅಪಘಾತದಿಂದ ಸಾವನ್ನಪ್ಪಿದವರ ಸಮಾಧಿ ಕಲ್ಲುಗಳೆ ಹಲವು ಪಟ್ಟು ಹೆಚ್ಚಿವೆ. ಈ ಸಾವುಗಳಿಗೆ ನೇರ ಹೊಣೆ ಇಂಡಿಯಾ ಒಕ್ಕೂಟ ಸರ್ಕಾರ.
ದಿನನಿತ್ಯ ಜೀವನದಲ್ಲಿ ಊಟ ತಿಂಡಿ, ಓಡಾಟ, ಮಾತುಗಾರಿಕೆಯಷ್ಟೇ ಸಾಮಾಜಿಕ ಜಾಲತಾಣವು ಪ್ರಾಮುಖ್ಯತೆ ಪಡೆದಿದೆ, ಒಳ್ಳೆಯದಕ್ಕಾಗಿ ಕೆಟ್ಟದ್ದಕ್ಕಾಗಲಿ ಸಾಮಾಜಿಕ ಜಾಲತಾಣ ಬಲುಪ್ರಸಿದ್ಧಿ. ಹೀಗೆ ನಾನು ಕೂಡ ಹೀಗೆಯೇ ಸಾಮಾಜಿಕ ಜಾಲತಾಣವನ್ನು ಬಳಸುತ್ತಿರಬೇಕಾದರೆ ನನಗೆ ಪರಿಚಿತ ವ್ಯಕ್ತಿಯು 2-3 ದಿನಗಳ ಹಿಂದೆ ಹಾಕಿರುವ ಪೋಸ್ಟ್ ಅನ್ನು ನೋಡಿ ಈ ವ್ಯವಸ್ಥೆಯ ಬಗ್ಗೆ ಅಸಹನೆ ಮೂಡಿತು. ಅದೇನೆಂದರೆ ವಿಶ್ವಮಾನವ ಸಂದೇಶ ಕೊಟ್ಟಂತಹ ಕುವೆಂಪುರವರ ಹುಟ್ಟೂರಾದ ತೀರ್ಥಹಳ್ಳಿಯಿಂದ ಬೆಂಗಳೂರಿಗೆ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸಲು ಒಂದು ಟಿಕೆಟ್ 5000 ರೂಪಾಯಿಗಳನ್ನು ಬರಿಸಬೇಕು. ಕೇವಲ 350 ಕಿಲೋ ಮೀಟರ್ ದೂರ ಪ್ರಯಾಣಿಸಲು ಇಷ್ಟು ದುಬಾರಿ ಹಣ ಪಾವತಿಸಬೇಕೆ? ರಾಜ್ಯ ಮತ್ತು ಒಕ್ಕೂಟ ಸರ್ಕಾರಗಳು ಹೆದ್ದಾರಿ ನಿರ್ಮಿಸುತ್ತೇವೆ ಅಂತ ಸಾವಿರಾರು ಕೋಟಿ ಕಾಮಗಾರಿ ಮಾಡಿ ಅದರಲ್ಲಿ ಶೇಕಡವಾರು ಪ್ರಮಾಣದಲ್ಲಿ ಲೂಟಿ ಮಾಡಿದ್ದು ಸಾಕಲ್ಲದೆ ಖಾಸಗಿಯವರಿಂದಲೂ ಸಹ ಅತಿ ಹೆಚ್ಚು ಪ್ರಮಾಣದಲ್ಲಿ ಜನಸಾಮಾನ್ಯರಿಗೆ ಸುಲಿಗೆಯಾಗುತ್ತಿದೆ, ಇದಕ್ಕೆ ಸರಿಸಾಟಿ ಎಂಬಂತೆ ಸರ್ಕಾರಿ ಸಾರಿಗೆಯ ಟಿಕೆಟ್ ಬೆಲೆಯು ದಿನದಿಂದ ದಿನಕ್ಕೆ ಏರುತ್ತಲೆ ಇದೆ.
ಹೆದ್ದಾರಿಯಲ್ಲಿ ಜನಸಾಮಾನ್ಯರು ಪ್ರಯಾಣಿಸಲು ಸ್ವಂತ ವಾಹನಗಳು ಬೇಕು ಅದಕ್ಕಾಗಿಯೇ ಲಕ್ಷಾಂತರ ರೂಪಾಯಿ ಬೇಕು. ಇಲ್ಲದಿದ್ದರೆ ಸರ್ಕಾರಿ ಸಾರಿಗೆಯಲ್ಲಿ ಪ್ರಯಾಣಿಸಬೇಕು ಈಗ ಸರ್ಕಾರಿ ಸಾರಿಗೆ ದುಬಾರಿಯಾಗಿದೆ ಮತ್ತು ಕೆಲವು ಕಡೆ ಲಭ್ಯವಿರುವುದಿಲ್ಲ. ಖಾಸಗಿ ಸಾರಿಯಂತೂ ನಿಜಕ್ಕೂ ಗಗನ ಕುಸುಮವೇ ಆಗಿದೆ. ಒಮ್ಮೆ ಯೋಚಿಸಿ ತೀರ್ಥಹಳ್ಳಿಯಿಂದ ಬೆಂಗಳೂರಿಗೆ ಮಾಧ್ಯಮ ವರ್ಗದವರು ಮತ್ತು ಬಡವರು ಪ್ರಯಾಣಿಸಬೇಕಾದರೆ 5000 ವ್ಯಯಿಸಬೇಕೆಂದರೆ ಆತ/ಕೆ ಪ್ರಯಾಣಿಸುವುದು ಎಂಟು ಗಂಟೆಯಾದರೂ, ಆ ಹಣ ಸಂಪಾದನೆಗೆ ಅವರು ಎಷ್ಟು ದಿನ, ಎಷ್ಟು ಕಾಲ ದುಡಿಯಬೇಕು ಈ ದರ ಅನುಕೂಲಸ್ಥರಿಗೆ ಏನೇನು ಸಹ ಅಲ್ಲ.
ಚಲಿಸುವುದು ಮಾನವನ ಮೂಲ ಗುಣ, ಮಾನವನ ಪ್ರಯಾಣಿಸದೆ ಇರಲು ಸಾಧ್ಯವೇ ಇಲ್ಲ ಹಾಗಾಗಿ ಮಾನವರು ಪ್ರಯಾಣಿಸುವುದು ಅವಶ್ಯಕ, ಚಲಿಸಲು ಸಾರಿಗೆ ಸಂಪರ್ಕ ಕಲ್ಪಿಸುವುದು ಮೂಲಭೂತ ಸೌಕರ್ಯವೂ ಸಹ ಆಗಿದೆ. ಪ್ರಾಚೀನ ಕಾಲದಿಂದಲೂ ಮಾನವರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಚಲಿಸಲು ಹಲವಾರು ಪ್ರಯೋಗಗಳನ್ನು ಮಾಡಿದ್ದಾರೆ ಮತ್ತು ಆ ಪ್ರಯೋಗಗಳಲ್ಲಿ ಯಶಸ್ಸನ್ನು ಸಹ ಕಂಡಿದ್ದಾರೆ. ಮಾನವರು ಪ್ರಯಾಣಕ್ಕಾಗಿ ಪಸುಗಳನ್ನು ಬಳಸುತ್ತಿದ್ದ ಕಾಲದಿಂದ ಇಂದು ವಿಮಾನದಲ್ಲಿ ಪ್ರಯಾಣಿಸುವವರೆಗೆ ಯಶಸ್ವಿಯಾಗಿದ್ದಾರೆ. ಚಂದ್ರಯಾನಕ್ಕೆ ಅಣಿಯಾಗಿ ಚಂದ್ರನನ್ನು ತಲುಪಿದ್ದಾಗಿದೆ. ಆದರೆ ಇದಕ್ಕೆ ವಿರುದ್ಧವೆನ್ನುವ ಹಾಗೆ ನಮ್ಮ ಇಂಡಿಯಾ ಒಕ್ಕೂಟದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರಗಳು ಪ್ರಗತಿ ಸಾಧಿಸದೆ ದಿನದಿಂದ ದಿನಕ್ಕೆ ಹಿಂದೆ ಹೋಗುತ್ತಲೆ ಇವೆ. ಸಾಮಾಜಿಕ ವ್ಯವಸ್ಥೆಯಂತು ವಿವರಿಸಲಾಗದಿರುವಷ್ಟು ಅದಗೆಟ್ಟಿದೆ. ಶ್ರೀಮಂತರ ಆಸ್ತಿ ದಿನೇ ದಿನೇ ಬಲಿಯುತ್ತಲೇ ಇದೆ, ಜನರ ಆರ್ಥಿಕ ಸ್ಥಿತಿ ನೆಲಮಟ್ಟದಿಂದ ಪಾತಾಳಕ್ಕೆ ಕುಸಿಯುತ್ತಿದೆ.
ಇದಕ್ಕೆ ಪರಿಹಾರವೆಂಬತೆ,
ಸರ್ಕಾರ ಒಂದು ಸಂಸ್ಥೆಯಾಗಿದ್ದು, ಜನರಿಂದ ಚುನಾಯಿತರಾದ ಪ್ರತಿನಿಧಿಗಳು ಸರ್ಕಾರ ರಚಿಸಿ ಜನರ ಕಲ್ಯಾಣಕ್ಕಾಗಿ ಶ್ರಮಿಸಬೇಕಾಗಿದ್ದು ಜನಪ್ರತಿನಿಧಿಗಳ ಆದ್ಯ ಕರ್ತವ್ಯ. ಸಾರಿಗೆ ಸಂಪರ್ಕ ಮಾನವ ಕುಲಕ್ಕೆ ಸಲ್ಲಬೇಕಾದ ಮೂಲಭೂತವಾದ ಸೌಕರ್ಯಗಳೊಂದು ಹಾಗಾಗಿ ಕಡಿಮೆ ಖರ್ಚಿನಲ್ಲಿ ಉತ್ತಮ ಸಾರಿಗೆ ವ್ಯವಸ್ಥೆ ಎಂದರೆ ಅದು ರೈಲು ಸಾರಿಗೆ ವ್ಯವಸ್ಥೆ. ಬ್ರಿಟಿಷರು 1853 ರಲ್ಲಿ ಇಂಡಿಯಾಗೆ ರೈಲ್ವೆ ಎಂಬ ಕಲ್ಯಾಣ ಯೋಜನೆಯನ್ನು ಪರಿಚಯಿಸಿದರು. ಇಂಡಿಯಾದಲ್ಲಿ ರೈಲ್ವೆ ಪ್ರಾರಂಭವಾಗಿ 162 ವರ್ಷಗಳಾದರೂ ಸಹ 68 ರಿಂದ 69 ಸಾವಿರ ಕಿಮೀ ಅಷ್ಟೆ ರೈಲು ಮಾರ್ಗವನ್ನು ಹೊಂದಿದೆ. ಒಂದು ಕಿಲೋಮೀಟರ್ ರೈಲು ಹಳಿ ನಿರ್ಮಿಸಲು ಎಂಟರಿಂದ ಹತ್ತು ಕೋಟಿ ವೆಚ್ಚವಾಗಬಹುದು. ರೈಲಿನಲ್ಲಿ ಒಮ್ಮೆಲೆಗೆ 1200- 1800 ರಷ್ಟು ಪ್ರಯಾಣಿಕರು ಪ್ರಯಾಣಿಸಬಹುದು. ಅದೇ 1200-1800 ಪ್ರಯಾಣಿಕರು ಬೈಕ್ ಕಾರು ಬಸ್ಸುಗಳಲ್ಲಿ ಪ್ರಯಾಣಿಸಬೇಕಾದರೆ ಆ ವಾಹನಗಳಿಗೆ ತಗಲುವ ವೆಚ್ಚ, ವಾಹನಗಳಿಗೆ ಬಳಸುವ ಇಂಧನದ ವೆಚ್ಚ, ಇವುಗಳನ್ನು ಹೊಂದಲು ಭರಿಸಬೇಕಾದ ಒಟ್ಟು ವೆಚ್ಚ, ಇವುಗಳನ್ನು ಪ್ರತಿ ತಿಂಗಳು ನಿಭಾಯಿಸಲು ತಗಲುವ ವೆಚ್ಚ,,,, ಸಾಕು ಸಾಕೆನೀಸುತ್ತವೆ. ಸರ್ಕಾರಿ ಬಸ್ಸುಗಳಲ್ಲಾಗಲಿ ಖಾಸಗಿ ಐಷಾರಾಮಿ ಬಸ್ಸುಗಳಲ್ಲಾಗಲಿ ಇನ್ನಿತರ ಯಾವುದೇ ಬಸ್ಸುಗಳಲ್ಲಾಗಲಿ ಒಮ್ಮೆಲೆಗೆ 50 ರಿಂದ 60 ಪ್ರಯಾಣಿಕರು ಪ್ರಯಾಣಿಸಬಹುದಷ್ಟೆ. ರೈಲ್ವೆ ನಿರ್ಮಾಣಕ್ಕೆ, ರೈಲು ನಿರ್ವಹಣೆಗೆ ದುಬಾರಿ ವೆಚ್ಚ ಭರಿಸುವ ಅಗತ್ಯವಿಲ್ಲ. ರೈಲು ವಿದ್ಯುತ್ ಚಾಲಿತ ಹಾಗಾಗಿ ಮಾಲಿನ್ಯದ ಸಮಸ್ಯೆ ಇಲ್ಲ (ಕೆಲವು ರೈಲುಗಳು ಕೆಲವು ಕಡೆ ಚಲಿಸುವುದಕ್ಕೆ ಕಲ್ಲಿದ್ದಲನ್ನು ಬಳಸುತ್ತಾರೆ) ಟೋಲ್ ಎಂಬ ಲೂಟಿ ಇರುವುದಿಲ್ಲ, ಪದೇ ಪದೇ ಸಾರ್ವಜನಿಕರ ಜೇಬಿಗೆ ಮೇಂಟೆನೆನ್ಸ್ ಚಾರ್ಜ್ ಎಂದು ಕತ್ತರಿ ಬೀಳುವುದಿಲ್ಲ, ದೂರ ಪ್ರಯಾಣಿಸಲು ಸಹ ರೈಲಿನಲ್ಲಿ ಅನುಕೂಲಕರವಾದ ವ್ಯವಸ್ಥೆ ಇದೆ. ದೂರ ಪ್ರಯಾಣಕ್ಕೆ ಎಕ್ಸ್ಪ್ರೆಸ್ ರೈಲುಗಳು ಮತ್ತು ನಗರಗಳಲ್ಲಿ ಪ್ರಯಾಣಿಸುವುದಕ್ಕೆ ಸಬ್ ಅರ್ಬನ್ ರೈಲು ಯೋಜನೆ ಉತ್ತಮವಾದದ್ದು. ಇದು ನಿಜವಾದ ಕಲ್ಯಾಣ ಯೋಜನೆಯಾಗಿದೆ.
ರೈಲ್ವೆ ಸಾರಿಗೆ ವ್ಯವಸ್ಥೆ ಇಂಡಿಯಾ ಒಕ್ಕೂಟ ಸರ್ಕಾರದ ಅಡಿಯಲ್ಲಿ ಬರುವುದರಿಂದ ಎಲ್ಲಾರು ಸೇರಿ ಇಂಡಿಯಾ ಒಕ್ಕೂಟ ಸರಕಾರದ ಮೇಲೆ ಒತ್ತಡ ಎರೋಣ ರೈಲು ಸಾರಿಗೆ ಅಭಿವೃದ್ಧಿಪಡಿಸಬೇಕೆಂದು. ಒಂದು ಕಿಲೋಮೀಟರ್ ಮೆಟ್ರೋ ನಿರ್ಮಿಸಲು ತಗಲುವ ವೆಚ್ಚ 250ರಿಂದ 300 ಕೋಟಿ ರೂಪಾಯಿಗಳು ಅದರಲ್ಲೆ ಅಂಡರ್ ಗ್ರೌಂಡ್ ಮೆಟ್ರೋ ನಿರ್ಮಿಸಲು 550 ರಿಂದ 600 ಕೋಟಿ ಖರ್ಚಾಗುತ್ತದೆ. ಆದರೆ ಒಂದು ಕಿಲೋಮೀಟರ್ ರೈಲು ಸಾರಿಗೆ ನಿರ್ಮಿಸಲು ಅಂದಾಜು 10 ಕೋಟಿ ವೆಚ್ಚವಾಗಬಹುದು, ಒಂದು ಕಿಲೋಮೀಟರ್ ಮೆಟ್ರೋ ನಿರ್ಮಿಸುವ ಬದಲಿಗೆ 30 ರಿಂದ 60 ಕಿಲೋಮೀಟರ್ ರೈಲು ಸಾರಿಗೆಯನ್ನು ಅಭಿವೃದ್ಧಿಪಡಿಸಬಹುದು. ರೈಲು ಸಾರಿಗೆ ನಿರ್ಮಾಣ ದುಬಾರಿ ಅಲ್ಲಾ, ಸರ್ಕಾರದ ಬೊಕ್ಕಸಕ್ಕೆ ನಷ್ಟವು ಆಗುವುದಿಲ್ಲ. ಈಗ ಮೆಟ್ರೋ ಟಿಕೆಟ್ ದರ ಏರಿಕೆಯಾಗಿದೆ ಆದರೆ ಸಬ್ ಅರ್ಬನ್ ರೈಲು ಟಿಕೆಟ್ ದರ ತುಂಬ ಕಡಿಮೆ ಇರುತ್ತದೆ ಹಾಗಾಗಿ ರೈಲು ಪ್ರಯಾಣ ಅನುಕೂಲಕರ ಯೋಜನೆಯಾಗಿದೆ. ಕಡಿಮೆ ಖರ್ಚಿನಲ್ಲಿ ಈ ಕಲ್ಯಾಣ ಯೋಜನೆಯಾದರೆ, ಮಿಕ್ಕ ಹಣವನ್ನು ಇನ್ನಿತರ ಕಲ್ಯಾಣ ಯೋಜನೆಗಳಿಗೆ ಬಳಸುವುದರಿಂದ ನಾಡಿನ ಸರ್ವ ಅಭಿವೃದ್ಧಿಯು ಸಾಧ್ಯವಾಗಿ ಸಮಾಜದಲ್ಲಿರುವ ಎಲ್ಲಾ ರೀತಿಯ ಅಸಮಾನತೆ ಅಳಿದು, ಸಮ ಸಮಾಜ ನಿರ್ಮಾಣವಾಗುತ್ತದೆ. ಆ ನಿಟ್ಟಿನಲ್ಲಿ ರೈಲು ಸಾರಿಗೆ ಅಭಿವೃದ್ಧಿಪಡಿಸುವುದು ಸಹ ಉತ್ತಮ ಯೋಜನೆ. ನಾನು ಈ ಲೇಖನವನ್ನು ಬರೆದಿದ್ದು ಸಹ ತಿರುವನಂತಪುರಂನಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿರಬೇಕಾದರೇನೆ.