Home ಆರೋಗ್ಯ ಮಕ್ಕಳನ್ನು ಬೆಳೆಸುವುದು ಬಹಳ ಸೂಕ್ಷ್ಮ ಮತ್ತು ಸವಾಲಿನ ಕೆಲಸ

ಮಕ್ಕಳನ್ನು ಬೆಳೆಸುವುದು ಬಹಳ ಸೂಕ್ಷ್ಮ ಮತ್ತು ಸವಾಲಿನ ಕೆಲಸ

0

ಪ್ಲೇಸ್ಕೂಲಿನಲ್ಲಿ ಮಗುವೊಂದು ಹಿಂಸಾಪ್ರವೃತ್ತಿಯಲ್ಲಿ ತೊಡಗುವ ವಿಡಿಯೋ ವೈರಲ್ಲಾಗಿತ್ತು. ಮಕ್ಕಳನ್ನು ಬೆಳೆಸುವುದು ಬಹಳ ಸೂಕ್ಷ್ಮ ಮತ್ತು ಸವಾಲಿನ ಕೆಲಸ. ನಿಮ್ಮ ಮಗುವಿನ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸಿ. ಬೆಳೆಯುವ ಮಗುವಿನ ಮುಂದೆ ನಿಮ್ಮ ಮಾತು,  ವರ್ತನೆ ಬಹಳ ಉನ್ನತ ಮಟ್ಟದಲ್ಲಿರಲಿ – ಮೇಜರ್‌ ಡಾ. ಕುಶ್ವಂತ್‌ ಕೋಳಿಬೈಲ್‌, ಮಕ್ಕಳ ತಜ್ಞರು.

ದೊಡ್ಡವನಾದ ಮೇಲೆ ಏನು ಆಗ್ತೀಯಾ?! ಎಂಬ ಪ್ರಶ್ನೆಗೆ ಕಳೆದ ಮೂರು ತಿಂಗಳಿನಿಂದ ಮಗ ಆದಿತ್ಯಹೃದಯನ ಉತ್ತರ ಅದೇ ಇತ್ತು.. 

“ಪಪ್ಪಾ ನಾನು ಪೋಲಿಸ್ ಆಗ್ತೀನಿ”

ಪೋಲಿಸ್ ಆಗಬೇಕೆಂಬ ಕ್ರೇಝ್ ಬರುವ ಮೊದಲು ಆತ ಜೇಸಿಬಿ ಬಗ್ಗೆ ವಿಪರೀತ ಕ್ರೇಝ್ ಹೊಂದಿದ್ದ! ಅವನ ಆರು ತಿಂಗಳ ಹಿಂದಿನ ಆಯ್ಕೆ ಬಹುಶಃ ಜೆಸಿಬಿ ಡ್ರೈವರ್ ಆಗಬೇಕು ಎಂದಿತ್ತು!

ಪೋಲಿಸ್ ವಿಚಾರವನ್ನು ಆದಿತ್ಯಹೃದಯನ ತಲೆಗೆ ತುಂಬಿದವರು ಯಾರು?  ಮತ್ತು ಆತ ಅದರ ಬಗ್ಗೆ ಏಕೆ ಆಕರ್ಷಿತನಾಗಿದ್ದಾನೆ ಎಂದು ಒಂದೆರಡು ದಿನ ಯೋಚಿಸಿದೆ! ನಂತರ ಜೀವನದ ಜಂಜಾಟದಲ್ಲಿ ನನಗೆ ಆತನ ಪೋಲಿಸ್ ಸ್ಟೋರಿಯ ಹಿನ್ನಲೆಯನ್ನು ಫಾಲೋ ಮಾಡಲು ಆಗಲಿಲ್ಲ! ಕೊಡಗಿನ ಮನೆಗಳಲ್ಲಿ ಕೋವಿ, ಕತ್ತಿ ಮುಂತಾದ ಆಯುಧಗಳನ್ನು ಜೋಡಿಸಿ ಇಡುತ್ತಾರೆ ಮತ್ತು ಬೇಟೆ ಕಥೆಗಳನ್ನು ಹೇಳುವ ಹಿರಿಯರಿರುತ್ತಾರೆ. ಬೆಳೆಯುವ ಮಕ್ಕಳ  ಸೂಕ್ಷ್ಮ ಮನಸ್ಸು ಯಾವುದರಿಂದ ಹೇಗೆ ಪ್ರಭಾವಿತವಾಗುತ್ತದೆಯೆಂದು ಗೊತ್ತಿಲ್ಲ. ಸೇನೆಯಲ್ಲಿದ್ದಾಗ ನನಗೆ ಉಡುಗೊರೆಯಾಗಿ ಬಂದ ಕತ್ತಿ ಗುರಾಣಿಗಳೆಂದರೆ ಆದಿತ್ಯಹೃದಯನಿಗೆ ಮೊದಲಿನಿಂದಲೂ ವಿಶೇಷ ಆಸಕ್ತಿ!

ಈಗಿನ ಮಕ್ಕಳ ವೇಗ ನಮ್ಮ ಗ್ರಹಿಕೆಗೆ ಮೀರಿದ್ದು ಎಂದು ಆರು ತಿಂಗಳ ಹಿಂದೆ ನಡೆದ  ಘಟನೆಯೊಂದು ನನಗೆ ಚೆನ್ನಾಗಿ ಪಾಠ ಕಲಿಸಿತು. ಒಬ್ಬ ತಂದೆ ಮತ್ತು ಮಕ್ಕಳ ತಜ್ಞನಾಗಿ ನಾನು  ಬೆಳೆಯುವ ಮಗುವಿಗೆ ಬರಬಹುದಾದ ಎಲ್ಲಾ ಅಪಾಯಗಳ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದೆ. ಬಾಯಿಯೊಳಗೆ ಹಾಕಿ ನುಂಗಬಹುದಾದಂತಹ ಲೋಹದ ವಸ್ತುಗಳನ್ನು ದೂರವಿಡುವುದು, ಕರೆಂಟ್ ಪ್ಲಗ್ ಒಳಗಡೆ ಅವನು ಕೈ ಮತ್ತು ಕಡ್ಡಿ ಹಾಕದಂತೆ ಎಚ್ಚರವಹಿಸುವುದು, ಅಡುಗೆ ಮನೆಯಲ್ಲಿ ಗ್ಯಾಸ್ ಸ್ಟವ್ ಮೇಲಿರುವ ಪಾತ್ರೆಗಳನ್ನು ಮೈ ಮೇಲೆ ಎಳೆದು ಹಾಕಿಕೊಳ್ಳದಂತೆ ನೋಡುವುದು ಇತ್ಯಾದಿ.. ನಾನು ನನ್ನ ವೃತ್ತಿಯಲ್ಲಿ ಎರಡು ಮೂರು ವರ್ಷದ ಮಕ್ಕಳು ಈ ರೀತಿಯ ಅನಾಹುತಗಳನ್ನು  ಮಾಡಿ ಆಸ್ಪತ್ರೆಗೆ ದಾಖಲಾಗಿದ್ದನ್ನು  ಕಣ್ಣಾರೆ ಕಂಡಿದ್ದೆ. ಆದರೆ ಆರು ತಿಂಗಳ ಹಿಂದೆ ಆದಿತ್ಯಹೃದಯ ನನ್ನ ಗ್ರಹಿಕೆಗೆ ಮೀರಿದ ಅನಾಹುತವನ್ನು ಮಾಡಿಬಿಟ್ಟ!

ತೋಟದ ನಡುವೆ ಜೀಪು ನಿಲ್ಲಿಸಿ ನಾನು ತಂದೆ ಕಾಫಿಯ ನೀರಾವರಿಯನ್ನು ವೀಕ್ಷಿಸುತ್ತಿದ್ದೆವು. ಪಕ್ಕದ ಸೀಟಲ್ಲಿ ಕೂತಿದ್ದ ಆದಿತ್ಯಹೃದಯ ಡ್ರೈವರ್ ಸೀಟಿನ ಬಳಿ ಹೋಗಿ, ಜೀಪ್ ಕೀ ಆನ್ ಮಾಡಿ ಬಿಟ್ಟ. ಜೀಪು ಆದಿತ್ಯ ಹೃದಯನನ್ನು ಹೊತ್ತುಕೊಂಡು ಮೊದಲ ಗೇರಿನಲ್ಲಿ ಕುಲುಕುತ್ತಾ ಸಾಗಿತ್ತು‌. ತೋಟದ ಒಳಗಿನಿಂದ ಓಡಿ ಬಂದ ನಾನು ಜೀಪಿನೊಳಗೆ ನೆಗೆದು ಕೈಯಿಂದ ಬ್ರೇಕ್ ಒತ್ತಿ ಜೀಪ್ ನಿಲ್ಲಿಸಿದೆ!  ದೃಶ್ಯ ಮಾಧ್ಯಮದ ಪ್ರಭಾವದಿಂದ  ಚಿಕ್ಕ ವಯಸ್ಸಿನ ಮಕ್ಕಳು ತಮ್ಮ ವಯಸ್ಸಿಗೆ ಮೀರಿದ ಅನಾಹುತಗಳನ್ನು ಮಾಡಬಹುದು‌‌ ಮತ್ತು ಅವರು ಮಾಡಬಹುದಾದ ಅನಾಹುತಗಳನ್ನು ಯಾವುದೇ ಕಾರಣಕ್ಕೂ ಅಂಡರ್ ಎಸ್ಟಿಮೇಟ್ ಮಾಡುವಂತಿಲ್ಲ ಎಂಬ ವಿಚಾರ ಅಂದು ಮನದಟ್ಟಾಯಿತು. ಜೊತೆಗೆ  ಅವರ ಚಿಂತನೆ ಮತ್ತು ವರ್ತನೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸದಿದ್ದರೆ ಅವರು ನಾಳೆ ಮಾಡಬಹುದಾದ ಅನಾಹುತಗಳಿಗೆ ನಾವೇ ಕಾರಣರಾಗುತ್ತೇವೆಂದು ನನಗನಿಸಿತು

ಈಗ ಮತ್ತೆ ನಮ್ಮ ಪೋಲಿಸ್ ಸ್ಟೋರಿ ವಿಚಾರಕ್ಕೆ ಬರೋಣ.. ನಿನ್ನೆ ಮುಂಜಾನೆ ಆದಿತ್ಯಹೃದಯನ ಜೊತೆ ಮಾತನಾಡುತ್ತಿದ್ದಾಗ ಆತ ಮತ್ತೆ “ನಾನು ಪೋಲಿಸ್ ಅಗ್ತೀನಿ” ಎಂದು ಹೇಳಿದೆ. ನಾನು ಏಕೆಂದು ಕೇಳಿದಾಗ ಆತನ ಉತ್ತರ ನನ್ನಲ್ಲಿ ಸಣ್ಣ ಮಟ್ಟಿಗಿನ ಅತಂಕವನ್ನು ತಂದಿತು. ತಾನು ಪೋಲಿಸ್ ಆದರೆ  ಕಳ್ಳರನ್ನು ಹಿಡಿದು ಸರಿಯಾಗಿ ಹೊಡೆಯಬಹುದೆಂದು  ಆತ ನಗುತ್ತಾ ಹೇಳಿದ. ನಮ್ಮ ಮನೆಯಲ್ಲಿ ಯಾರೋ ಹಿರಿಯರು  ಅವನಿಗೆ ಪೋಲಿಸ್ ಎಂದರೆ ಕಳ್ಳರನ್ನು ಹಿಡಿದು ಹೊಡೆಯುವುದು ಎಂಬ ವಿಚಾರವನ್ನು   ತಲೆಗೆ ತುಂಬಿದ್ದಾರೆ. ಬಹುಶಃ ಪೋಲಿಸ್ ಆದರೆ ಕಳ್ಳರಿಗೆ ಹೊಡೆಯಬಹುದು ಎಂಬ ವಿಚಾರ ಅವನಲ್ಲಿ ಉತ್ಸಾಹವನ್ನು ತುಂಬಿದೆ! 

ನಿನ್ನೆ ಆದಿತ್ಯಹೃದಯನನ್ನು ಕೂರಿಸಿಕೊಂಡು ಪೋಲಿಸ್ ಕೆಲಸ ಕಳ್ಳರನ್ನು ಹೊಡೆಯುವುದಲ್ಲ ಬದಲಿಗೆ ಅವರನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಿ ಕಳ್ಳನನ್ನು ಒಳ್ಳೆಯ ಮನುಷ್ಯನನ್ನಾಗಿ ಪರಿವರ್ತನೆ ಮಾಡುವ ಸಲುವಾಗಿ  ಜೈಲಿಗೆ ಕಳಿಸುವುದು ಎಂದು ತಿಳಿಹೇಳಿದೆ. ನಮ್ಮ ಜಿಲ್ಲಾಸ್ಪತ್ರೆಯಲ್ಲೂ ಡ್ಯೂಟಿಯ ಮೇಲೆ ಪೋಲಿಸರೊಬ್ಬರು ಯುನಿಫಾರ್ಮಿನಲ್ಲಿರುತ್ತಾರೆ.  ಯುನಿಫಾರ್ಮಿನಲ್ಲಿರುವ  ಅವರನ್ನು ಕರೆದು ಪೋಲಿಸ್ ಕೆಲಸವೆಂದರೆ ಕಳ್ಳರಿಗೆ ಹೊಡೆಯುವುದಲ್ಲ, ಬದಲಿಗೆ ಅವರನ್ನು ಒಳ್ಳೆಯ ಮನುಷ್ಯರನ್ನಾಗಿ ಬದಲಾಯಿಸುವುದು ಎಂದು ಅವರ ಬಾಯಲ್ಲಿ ಮಗನಿಗೆ ಹೇಳಿಸಬೇಕೆಂದು ಅವರಿಗೆ ಕರೆ ಮಾಡಿದೆ. ನಿನ್ನೆ ಅವರು ಆಸ್ಪತ್ರೆಯಲ್ಲಿ ಇರಲಿಲ್ಲ‌. ಒಂದು ಕ್ಷಣ ಮಗನನ್ನು ಸೀದಾ ಸರ್ಕಲ್ ಇನ್ಸ್‌ಪೆಕ್ಟರ್  ಅನೂಪ್ ಮಾದಪ್ಪನವರ ಬಳಿ ಕರೆದುಕೊಂಡು ಹೋಗಿ ಅವರ ಬಾಯಿಂದ ಹೇಳಿಸಿದರೆ ಪರಿಣಾಮಕಾರಿಯಾಗಬಹುದೆಂದು ಯೋಚಿಸಿದೆ. ಈ ಪೋಸ್ಟ್ ಓದುತ್ತಿರುವ ಬಹುತೇಕರಿಗೆ ಇದು ಕ್ಷುಲ್ಲಕ ವಿಚಾರವೆಂದು ಅನಿಸಬಹುದು‌. ಆದರೆ ಇನ್ನೊಬ್ಬರ ಮೇಲೆ ಹಿಂಸೆ ಮಾಡುವುದು ನೈತಿಕವಾಗಿ ಸರಿಯಲ್ಲ ಎಂಬ ವಿಚಾರವನ್ನು ಮೂರು ವರ್ಷದ ಮಗುವಿಗೆ ಸ್ಪಷ್ಟಪಡಿಸಲು ನಾನು ನನ್ನ ಒಂದು ಗಂಟೆ ಸಮಯವನ್ನು ಕೊಡಲು ತಯಾರಾಗಿದ್ದೆ. ನಿನ್ನೆ ಸಂಜೆಯ ವೇಳೆಗೆ  ನಾನು ಮಗನಿಗೆ ʼಪೋಲಿಸರು ಕಳ್ಳರನ್ನು ಹಿಡಿದು ಹೊಡೆಯುವುದಿಲ್ಲ ಬದಲಿಗೆ ಅವರನ್ನು ತಿದ್ದುವ ಕೆಲಸ ಮಾಡುತ್ತಾರೆʼ ಎಂದು ಕನ್ವಿನ್ಸ್ ಮಾಡುವಲ್ಲಿ ಯಶಸ್ವಿಯಾದೆ.

ಈ ವಿಚಾರದ ಕುರಿತು ಬರೆಯಲು ಮುಖ್ಯಕಾರಣ ಪ್ಲೇಸ್ಕೂಲಿನಲ್ಲಿ ಮಗುವೊಂದು ಹಿಂಸಾಪ್ರವೃತ್ತಿಯಲ್ಲಿ ತೊಡಗುವ ವಿಡಿಯೋ ವೈರಲ್ಲಾಗಿತ್ತು. ಅದು ನನಗೆ ಈ ಮೇಲಿನ ಘಟನೆಯನ್ನು ನೆನಪಿಸಿತು. ಮಕ್ಕಳನ್ನು ಬೆಳೆಸುವುದು ಬಹಳ ಸೂಕ್ಷ್ಮ ಮತ್ತು ಸವಾಲಿನ ಕೆಲಸ. ನಿಮ್ಮ ಮಗುವಿನ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸಿ. ಬೆಳೆಯುವ ಮಗುವಿನ ಮುಂದೆ ನಿಮ್ಮ ಮಾತು,  ವರ್ತನೆ ಬಹಳ ಉನ್ನತ ಮಟ್ಟದಲ್ಲಿರಲಿ.

ಕೊನೆಯ ಮಾತು.. In case ಆದಿತ್ಯ ಹೃದಯನಿಗೆ ಕೊನೆಗೂ ಪೋಲಿಸ್ ಆಗಲೇಬೇಕೆಂದರೆ  ಟೈಗರ್ ಅಶೋಕ್ ಕುಮಾರ್ , ಜೇಬರ್ ಸಾರ್ ಮಾದರಿಯಲ್ಲಿ ಹೃದಯವಂತಿಕೆಯಿರುವ ಮತ್ತು ಸಮಾಜಕ್ಕೆ ಆಸ್ತಿಯಾಗುವ ಪೋಲಿಸ್ ಆಗಲಿ! ಅವನು ಸೇನೆಯಲ್ಲಿ ಸೇವೆ ಸಲ್ಲಿಸುವ ನಮ್ಮ ಕುಟುಂಬದ ಪರಂಪರೆ ಮುರಿದನೆಂದು ನಾನು ಮತ್ತು ಅವನ ತಾತ ಬೇಸರಿಸಿಕೊಳ್ಳುವುದಿಲ್ಲ!

ಮೇಜರ್‌ ಡಾ. ಕುಶ್ವಂತ್‌ ಕೋಳಿಬೈಲು

ಮೇಜರ್ ಡಾ. ಕುಶ್ವಂತ್ ಕೋಳಿಬೈಲ್ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಕೊಡಗು ಜಿಲ್ಲಾಸ್ಪತ್ರೆಯಲ್ಲಿ ಪೀಡಿಯಾಟ್ರಿಕ್ಸ್ ವಿಭಾಗದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ʼಕೂರ್ಗ್‌ ರೆಜಿಮೆಂಟ್‌ʼ ಕಥಾ ಸಂಕಲನದ ಮೂಲಕ ಸಾಹಿತ್ಯ ಲೋಕಕ್ಕೆ ಪರಿಚಿತರು. ಅವರ ಎಫ್‌ ಬಿ ಯಿಂದ ಈ ಲೇಖನವನ್ನು ಆರಿಸಿಕೊಳ್ಳಲಾಗಿದೆ.

ಇದನ್ನೂ ಓದಿ- <strong>ಸಕ್ಕರೆ ಮಾರುಕಟ್ಟೆಯ ಭಯಾನಕ ಮುಖ</strong>

You cannot copy content of this page

Exit mobile version