Home ರಾಜ್ಯ ರಾಜ್ಯ ಸಭಾ ಚುನಾವಣೆ: ಬಿಜೆಪಿ ಶಾಸಕನಿಂದ ಅಡ್ಡ ಮತದಾನ?

ರಾಜ್ಯ ಸಭಾ ಚುನಾವಣೆ: ಬಿಜೆಪಿ ಶಾಸಕನಿಂದ ಅಡ್ಡ ಮತದಾನ?

0

ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಅಡ್ಡಮತದಾನ ಮಾಡಿರುವುದಾಗಿ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಪರೋಕ್ಷವಾಗಿ ಹೇಳಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಮತ ಚಲಾಯಿಸಿದ ಬಳಿಕ‌ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಆತ್ಮಸಾಕ್ಷಿಯಂತೆ ಮತ ಚಲಾಯಿಸಿ, ಮತ ಪತ್ರವನ್ನು ಚುನಾವಣಾ ಏಜೆಂಟ್ ಗೆ ತೋರಿಸಿದ್ದೇನೆ ಎಂದರು.

“ಯಾರು ನನ್ನ ಕ್ಷೇತ್ರಕ್ಕೆ ಅನುದಾನ ಕೊಡುವುದಾಗಿ ಭರವಸೆ ನೀಡಿದ್ದಾರೋ, ಅವರಿಗೆ ಮತ ಹಾಕಿದ್ದೇನೆ. ಇದುವರೆಗೆ ಪಕ್ಷ ಹೇಳಿದ ಹಾಗೆ ಕೇಳಿದ್ದೇನೆ. ಆದರೆ, ಈ ಬಾರಿ ನನ್ನ ಕ್ಷೇತ್ರದ ಅಭಿವೃದ್ದಿಗೆ ಅನುದಾನ ಕೊಡುವುದಾಗಿ ಭರವಸೆ ನೀಡಿದವರ ಪರ ಮತ ಚಲಾಯಿಸಿದ್ದೇನೆ ಎಂದು ಅವರು ತಮ್ಮ ಅಡ್ಡ ಮತದಾನವನ್ನು ಸಮರ್ಥಿಸಿಕೊಂಡಿದ್ದಾರೆ.

ಮತದಾನಕ್ಕೆ ತೆರಳುವ ಮುನ್ನ ಮಾತನಾಡಿದ ಸೋಮಶೇಖರ್, “ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಂಬ ಬೇಧಬಾವ ಇಲ್ಲ. ಯಾರು ನನ್ನ ಕ್ಷೇತ್ರಕ್ಕೆ ಅನುದಾನ ಕೊಡುವುದಾಗಿ ಭರವಸೆ ನೀಡಿದ್ದಾರೋ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ಹಾಕುತ್ತೇನೆ. ವಿಪ್ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ನಾವು 45 ಜನರು ಒಬ್ಬ ಅಭ್ಯರ್ಥಿಗೆ ಮತ ಹಾಕಿ ರಾಜ್ಯಸಭೆಗೆ ಕಳಿಸುತ್ತೇವೆ. ಅವರಿಗೆ ಸಂಸದರ ನಿಧಿಯಿಂದ 6 ವರ್ಷದಲ್ಲಿ ಸುಮಾರು 30 ಕೋಟಿ ರೂ ಅನುದಾನ ಬರುತ್ತದೆ. ಆದರೆ, ಅದರಿಂದ ನಮ್ಮ ಕ್ಷೇತ್ರಕ್ಕೆ ಯಾವುದೇ ಲಾಭವಾಗುತ್ತಿಲ್ಲ. ಹಾಗಾಗಿ, ಕ್ಷೇತ್ರದ ಅಭಿವೃದ್ದಿಯ ವಿಷಯದಲ್ಲಿ ಯಾರು ನನ್ನನ್ನು ಅಪ್ರೋಚ್ ಮಾಡುತ್ತಾರೋ ಅವರಿಗೆ ನನ್ನ ಮತ ನೀಡುವುದಾಗಿ ಹೇಳಿದ್ದರು.

ಸೋಮಶೇಖರ್ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸಿದ ಬಗ್ಗೆ ಖಚಿತವಾಗಿ ಹೇಳಿಲ್ಲ. ಆದರೆ, ಅವರ ಹೇಳಿಕೆ ಮತ್ತು ಇತ್ತೀಚಿನ ರಾಜಕೀಯ ಬೆಳವಣಿಗೆ ನೋಡಿದರೆ, ಅವರು ಕಾಂಗ್ರೆಸ್ ಪರ ಮತ ಚಲಾಯಿಸಿದ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸೋಮಶೇಖರ್ ಅವರು ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಆಪ್ತರು. ಇತ್ತೀಚಿಗೆ ಡಿಕೆಶಿ ಜೊತೆ ಕಾಣಿಸಿಕೊಂಡಿದ್ದನ್ನು ಸ್ಮರಿಸಬಹುದು.

You cannot copy content of this page

Exit mobile version