ವಿರೋಧ ಪಕ್ಷ ಬಿಜೆಪಿಯ ಗುಂಪು ರಾಜಕೀಯದ ಜಗಳ ತಾರಕಕ್ಕೇರಿದೆ. ಇತ್ತ ಬಿಜೆಪಿಯ ಒಂದು ಬಣ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಕುರ್ಚಿಯಿಂದ ಕೆಳಗಿಳಿಸಲು ಸರ್ಕಸ್ ಮಾಡುತ್ತಿದ್ದರೆ, ಅತ್ತ ಇನ್ನೊಂದು ಬಣ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರ ಕುರ್ಚಿಯ ಕಾಲು ಕತ್ತರಿಸಲು ತಮ್ಮ ಆಯುಧ ಹರಿತಗೊಳಿಸುತ್ತಿದ್ದಾರೆ.
ಈ ನಿಟ್ಟನಿಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಕೆ.ಎಸ್.ಈಶ್ವರಪ್ಪ, ಯತ್ನಾಳ್ ಪ್ರತ್ಯೇಕ ಸಭೆಗಳನ್ನು ನಡೆಸಿ ಕಮಲ ಪಾಳಯದ ನೆಮ್ಮದಿಗೆ ಬಿಸಿನೀರು ಸುರಿಯುತ್ತಿದ್ದಾರೆ.
ಇದೆಲ್ಲದರ ನಡುವೆ ಈಶ್ವರಪ್ಪ ಅವರ ಮನೆಯಲ್ಲಿ ನಡೆದ ಚರ್ಚೆಯ ಕುರಿತು ಸುದ್ದಿಗಳು ಹರಿದಾಡುತ್ತಿವೆ. ಇದೀಗ ವದಂತಿಗಳಿಗೆಲ್ಲ ತೆರೆ ಎಳೆಯಲೆಂಬಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮೊನ್ನೆ ಈಶ್ವರಪ್ಪ ಮನೆಯಲ್ಲಿ ನಡೆದ ರಹಸ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳ ಬಗ್ಗೆ ಸ್ವತಃ ಮಾತನಾಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ಏರ್ಪಡಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ “ಮಾತನಾಡಿದ ರಮೇಶ್ ಜಾರಕಿಹೊಳಿ, “ಕೆ.ಎಸ್.ಈಶ್ವರಪ್ಪ ಮನೆಯಲ್ಲಿ ಚರ್ಚೆಯಾದ ವಿಷಯಗಳನ್ನು ರಾಜುಗೌಡ ಬಹಿರಂಗ ಮಾಡಿದರೆ, ಆತನಿಗೆ ವಿಜಯೇಂದ್ರನೇ ಹೊಡೆಯುತ್ತಾನೆ” ಎಂದು ಏಕವಚನದಲ್ಲಿ ಕಿಡಿಕಾರಿದ್ದಾರೆ.
ಈಶ್ವರಪ್ಪ ಅವರ ಮನೆಯಲ್ಲಿ ಮೀಸಲಾತಿ ಕುರಿತು ಬಸನಗೌಡ ಪಾಟೀಲ್ ಯತ್ನಾಳ್ ಚರ್ಚೆ ಮಾಡುತ್ತಿದ್ದರು. ಇದು ಸೌಹಾರ್ದತೆಯ ಸಭೆ. ಆದರೆ ರಾಜುಗೌಡ ಮಾಧ್ಯಮದ ಮುಂದೆ ಹೇಳಿರುವ ವಿಷಯವೇ ಬೇರೆ. ರಾಯಣ್ಣ, ಚನ್ನಮ್ಮ ಬ್ರಿಗೇಡ್ ಇದ್ಯಾವುದರ ಬಗ್ಗೆಯೂ ಚರ್ಚೆಯಾಗಿಲ್ಲ. ಬಿಜೆಪಿ ಪಕ್ಷವನ್ನು ಶುದ್ಧೀಕರಣ ಮಾಡುವ ನಿಟ್ಟಿನಲ್ಲಿ ಸಭೆ ನಡೆಸಿದ್ದೇವೆ ಎಂದು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹಕ್ಕಿದೆ. ಹೀಗಿರುವಾಗ ನಮಗೆ ಅನಗತ್ಯವಾಗಿ ಭಿನ್ನಮತೀಯ ಎನ್ನುವ ಹೆಸರು ನೀಡಬೇಡಿ. ಪಕ್ಷದ ಶುದ್ಧೀಕರಣಕ್ಕಾಗಿ ನಾವು ಚರ್ಚೆ ನಡೆಸಿದ್ದೇವೆ. ನಾವು ಏನೇ ಮಾಡಿದರೂ ಪಕ್ಷದ ಚೌಕಟ್ಟಿನಲ್ಲಿ ಮಾಡುತ್ತೇವೆ ಎಂದು ಸಮರ್ಥಿಸಿಕೊಂಡರು.