ಹಾಸನ : ಜಿಲ್ಲೆಯಲ್ಲಿ ರಸ್ತೆ ನಿಯಮಗಳನ್ನು ಉಲ್ಲಂಘಿಸುವ ಪ್ರವೃತ್ತಿ ಹೆಚ್ಚುತ್ತಿರುವುದರಿಂದ ಅಪಘಾತಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದ್ದು, ರಾಜ್ಯ ಮಟ್ಟದಲ್ಲಿ ಹಾಸನ ಜಿಲ್ಲೆ ರಸ್ತೆ ಅಪಘಾತಗಳಲ್ಲಿ 4ನೇ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ನಾಗರಿಕರೂ ಹೆಚ್ಚಿನ ಜಾಗೃತಿ ವಹಿಸಿ ಕಾನೂನು ಪಾಲನೆಗೆ ಮುಂದಾಗಬೇಕು ಎಂದು ಅವರು ಮನವಿ ಮಾಡಿದರು. ಜಿಲ್ಲಾಡಳಿತ ಹಾಗೂ ರಸ್ತೆ ಸುರಕ್ಷತಾ ಸಮಿತಿ ವತಿಯಿಂದ “ರಸ್ತೆ ಸುರಕ್ಷೆ – ಜೀವದ ರಕ್ಷೆ” ಎಂಬ ಧ್ಯೇಯವಾಕ್ಯದೊಂದಿಗೆ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಸ್ತೆ ನಿಯಮಗಳನ್ನು ಪಾಲಿಸುವುದು ಕೇವಲ ಕಾನೂನುಬದ್ಧ ಕರ್ತವ್ಯವಲ್ಲ, ಜೀವ ರಕ್ಷಿಸುವ ಮಹತ್ತರ ಹೊಣೆಗಾರಿಕೆಯಾಗಿದೆ ಎಂದರು. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಅಪಘಾತಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ಹೇಳಿದರು.
ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು, ಅತೀವೇಗದಲ್ಲಿ ವಾಹನ ಚಲಾಯಿಸುವುದು ಹಾಗೂ ಚಾಲನೆಯ ವೇಳೆ ಮೊಬೈಲ್ ಬಳಕೆ ಮಾಡುವುದೇ ಹೆಚ್ಚಿನ ಅಪಘಾತಗಳಿಗೆ ಪ್ರಮುಖ ಕಾರಣಗಳಾಗಿವೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು. ಸಾರ್ವಜನಿಕರು ಜವಾಬ್ದಾರಿಯುತವಾಗಿ ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇದರಿಂದ ಕಾನೂನು ಉಲ್ಲಂಘನೆ ಕಡಿಮೆಯಾಗುವುದರ ಜೊತೆಗೆ ಅಪಘಾತಗಳನ್ನೂ ತಡೆಗಟ್ಟಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ವಾಹನ ಚಾಲಕರು ಸಂಪೂರ್ಣ ಸಹಕಾರ ನೀಡಬೇಕು ಎಂದು ಅವರು ಕರೆ ನೀಡಿದರು.
ರಸ್ತೆ ಹಾಗೂ ವಾಹನಗಳ ಸುರಕ್ಷತೆಯ ಜೊತೆಗೆ ಸಾರ್ವಜನಿಕರು ಮತ್ತು ಪ್ರಯಾಣಿಕರ ಹಿತವನ್ನು ಕಾಪಾಡುವುದು ಅತ್ಯಂತ ಮುಖ್ಯ ಎಂದು ತಿಳಿಸಿದ ಜಿಲ್ಲಾಧಿಕಾರಿ, ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ಕಾರು ಮತ್ತು ಇತರೆ ವಾಹನಗಳಲ್ಲಿ ಸೀಟ್‌ಬೆಲ್ಟ್ ಬಳಕೆ ಅನಿವಾರ್ಯವಾಗಬೇಕು. ವೇಗ ಮಿತಿಯನ್ನು ನಿಯಂತ್ರಣದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು ಎಂದು ಸಲಹೆ ನೀಡಿದರು. ಜಿಲ್ಲೆಯ ಅಪಘಾತಗಳ ಅಂಕಿಅಂಶಗಳನ್ನು ಹಂಚಿಕೊಂಡ ಅವರು, 2024ರಲ್ಲಿ ಜಿಲ್ಲೆಯಲ್ಲಿ 1208 ಅಪಘಾತಗಳು ಸಂಭವಿಸಿ 219 ಜನರು ಮೃತಪಟ್ಟಿದ್ದಾರೆ. 2025ರಲ್ಲಿ 1328 ಅಪಘಾತಗಳು ಸಂಭವಿಸಿ 260 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಅಪಘಾತಗಳಿಂದ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿವೆ, ಮಕ್ಕಳು ಅನಾಥರಾಗುತ್ತಿದ್ದಾರೆ ಮತ್ತು ಪೋಷಕರು ತಮ್ಮ ಮಕ್ಕಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದರು.
ಚಾಲನೆಯ ವೇಳೆ ರಸ್ತೆಯಲ್ಲಿ ಪ್ರಾಣಿಗಳು ಅಡ್ಡ ಬಂದರೂ ಆತುರಪಡದೇ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು. ಕೆಲವರು ಗುಟ್ಕಾ, ತಂಬಾಕು ಉಗಿಯಲು ಕಿಟಕಿಯಿಂದ ತಲೆ ಹೊರ ಹಾಕುವ ಕ್ಷಣದಲ್ಲೇ ಅಪಘಾತಗಳು ಸಂಭವಿಸುತ್ತವೆ. ಆ ಒಂದು ಸೆಕೆಂಡಿನ ಅಜಾಗ್ರತೆಯೇ ಜೀವಹಾನಿಗೆ ಕಾರಣವಾಗಬಹುದು ಎಂದು ಎಚ್ಚರಿಸಿದರು. ಚಾಲಕರಿಗೆ ಅಗತ್ಯ ಮಾಹಿತಿಯನ್ನು ಪೋಸ್ಟರ್‌ಗಳ ಮೂಲಕ ನೀಡಲಾಗುತ್ತಿದ್ದು, ಚಾಲಕರ ಆರೋಗ್ಯದ ಮೇಲೂ ಹೆಚ್ಚಿನ ಒತ್ತು ನೀಡಬೇಕೆಂದು ಹೇಳಿದರು.
ಹೆಣ್ಣು ಮಕ್ಕಳಿಗೂ ವಾಹನ ಚಾಲನೆ ಕಲಿಸುವ ಉದ್ದೇಶದಿಂದ ‘ಸಖಿ ಸಾವಿತ್ರಿ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
